24.8 ಕೋಟಿ ಜನ ಬಡತನದಿಂದ ಹೊರಕ್ಕೆ.!
– ನೀತಿ ಆಯೋಗದ ವರದಿ
– ಬಡತನದ ಪ್ರಮಾಣವನ್ನು ಶೇ.1ಕ್ಕೆ ಇಳಿಸುವುದು ಕೇಂದ್ರ ಸರ್ಕಾರದ ಗುರಿ
NAMMUR EXPRESS NEWS
ನವದೆಹಲಿ: ದೇಶದಲ್ಲಿ 2013-14ರಿಂದ 2022-23ರ ನಡುವಿನ ಅವಧಿಯಲ್ಲಿ 24.8 ಕೋಟಿ ಜನರು ಬಹು ಆಯಾಮಗಳ ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ಹೇಳಿದೆ. ರಾಷ್ಟ್ರೀಯ ಬಹುಆಯಾಮಗಳ ಬಡತನ ಸೂಚ್ಯಂಕ (ಎಂಪಿಐ) ಆಧಾರಿತ ವರದಿ ಪ್ರಕಾರ ದೇಶದಲ್ಲಿ 2013-14ರಲ್ಲಿ ಶೇ 29.17ರಷ್ಟಿದ್ದ ಬಡತನ ಪ್ರಮಾಣವು 2022-23ರಲ್ಲಿ ಶೇ 11.28ರಷ್ಟು ಇಳಿಕೆ ಯಾಗಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಬಡವರ ಸಂಖ್ಯೆಯು ತೀವ್ರಗತಿಯಲ್ಲಿ ಕಡಿಮೆಯಾಗಿದೆ ಎಂದು ವಿವರಿಸಿದೆ. ಇದು ನಮ್ಮ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.
ಪ್ರತಿಯೊಬ್ಬ ಭಾರತೀಯ ಪ್ರಜೆಯ ಭವಿಷ್ಯವನ್ನು ಉತ್ತಮಪಡಿಸಲು ಕೇಂದ್ರ ಸರ್ಕಾರದಿಂದ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಉತ್ತರಪ್ರದೇಶದಲ್ಲಿ ಅತಿಹೆಚ್ಚು ಅಂದರೆ 5.94 ಕೋಟಿ, ಬಿಹಾರದಲ್ಲಿ 3.77 ಕೋಟಿ ಮತ್ತು ಮಧ್ಯಪ್ರದೇಶದಲ್ಲಿ 2.30 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದೆ. ಬಹು ಆಯಾಮಗಳ ಬಡತನದ ಪ್ರಮಾಣವನ್ನು ಶೇ 1ಕ್ಕೆ ಇಳಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ. ದೇಶದಲ್ಲಿ ಈ ಅವಧಿಯಲ್ಲಿ ಕೃಷಿ ಕ್ಷೇತ್ರದ ಉತ್ತಮ ಪ್ರಗತಿ ಕಂಡಿದೆ ಎಂದು ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ತಿಳಿಸಿದ್ದಾರೆ.