ಗೋಪಾಲಕೃಷ್ಣ ಬೇಳೂರು ಹುಟ್ಟುಹಬ್ಬದ ಸಂಭ್ರಮ!
– ಸಾಗರ ಕ್ಷೇತ್ರ ಸೇರಿ ರಾಜ್ಯದ ಹಲವೆಡೆ ಅಭಿಮಾನಿಗಳ ಆಚರಣೆ
– ಬೇಳೂರು ನಡೆದು ಬಂದ ಕಲ್ಲು ಮುಳ್ಳಿನ ಹಾದಿ!
– ಸಾಗರ ಕ್ಷೇತ್ರಕ್ಕೆ ಅನುದಾನ, ಅಭಿವೃದ್ಧಿ ಪರ್ವ ಶುರು
NAMMUR EXPRESS NEWS
ಸಾಗರ: ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರಾಗಿರುವ, ಶಿವಮೊಗ್ಗ ರಾಜಕಾರಣದ ಸ್ಮಾರ್ಟ್ ಅಂಡ್ ಸ್ಟೈಲಿಶ್ ಶಾಸಕರೆಂದು ಗುರುತಿಸಿಕೊಂಡಿರುವ ಜನಸೇವೆಯ ಮೂಲಕ ಇಡೀ ಕ್ಷೇತ್ರದ ಮನೆ ಮಾತಾಗಿರುವ ಸ್ನೇಹಮಯಿ ರಾಜಕಾರಣಿ ಗೋಪಾಲಕೃಷ್ಣ ಬೇಳೂರು ಅವರಿಗೆ ಇದೀಗ ಹುಟ್ಟುಹಬ್ಬದ ಸಂಭ್ರಮ. ತಮ್ಮ ತವರು ಸಾಗರದಲ್ಲಿ ಅವರ ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಸಾಗರ, ಹೊಸನಗರದ ಹಳ್ಳಿ ಹಳ್ಳಿಯಲ್ಲೂ ಬ್ಯಾನರ್ ಹಾಕಿ ಶುಭಾಶಯ ಕೋರಲಾಗಿದೆ.
ಅಭಿಮಾನಿಗಳೇ ಶಾಸಕರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದು, ರಾಜಕೀಯ ಪ್ರವೇಶಿಸಿ ಎದುರಾದ ಅನೇಕ ಕಷ್ಟಗಳನ್ನು ಎದುರಿಸಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ನಾಯಕ ಬೇಳೂರು ಗೋಪಾಲಕೃಷ್ಣ. ತಮ್ಮ ಹುಟ್ಟು ಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ತಮ್ಮ ಹುಟ್ಟು ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಳ್ಳಲು ವಿನಂತಿಸಿಕೊಂಡಿರುವುದು ನಿಜವಾದ ನಾಯಕನಿಗಿರುವ ಚಿಂತನೆ ಕೂಡ ಹೌದು. ತಮ್ಮ ಹತ್ತು ಹಲವು ಚಿಂತನೆ ಅಭಿವೃದ್ಧಿ ಕಾರ್ಯಗಳೊಂದಿಗೆ ಸೇವೆ ಮುಂದುವರಿಸಿದ್ದಾರೆ.
ಮನೆಗೆ ಬಂದವರಿಗೆ ಹಾಗೆ ಕಳುಹಿಸಲ್ಲ!
ಅಧಿಕಾರ ಇರಲಿ ಬಿಡಲಿ ಕಾರ್ಯಕರ್ತರ ಕಷ್ಟ ಸುಖಗಳನ್ನು ಆಲಿಸುತ್ತಾ ಅವರ ನೋವಿನ ಸಂದರ್ಭದಲ್ಲಿ ಜೊತೆಯಲ್ಲಿ ನಿಂತು ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಿದ ಬೇಳೂರು ಅವ್ರನ್ನು ಜನ ಕೈ ಹಿಡಿದಿದ್ದಾರೆ. ತಮ್ಮ ಮನೆಯ ಬಾಗಿಲಿಗೆ ತಮ್ಮನ್ನು ಭೇಟಿ ಮಾಡುವ ಸಲುವಾಗಿ ಬರುವಂತಹ ನಾಯಕರಿಂದ ಹಿಡಿದು ಕಾರ್ಯಕರ್ತರಿಗೂ ಸಹ ಪ್ರತ್ಯೇಕವಾದ ಕೊಠಡಿಯಲ್ಲಿ ಅವರೊಂದಿಗೆ ಮಾತನಾಡಿ ಅವರಿಗೆ ಬೇಕಾದಂತಹ ಸಹಾಯವನ್ನು ಮಾಡುವ ಮತ್ತು ಸಹಾಯವನ್ನು ಮಾಡಿಸುವ ಗುಣ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ.
ಕ್ಷೇತ್ರದ ಯಾವುದೇ ಮನೆಯಲ್ಲಿ ಶುಭ ಸಮಾರಂಭವಾಗಲಿ ಅಥವಾ ದುಃಖದ ಸಂದರ್ಭಗಳಾಗಲಿ ಅವರ ನೆರವಿಗೆ ನಿಂತು ವಿಶ್ವಾಸವನ್ನು ತುಂಬಿ ಕಾರ್ಯಕರ್ತರ ಪಾಲಿಗೆ ಕೈಗೆ ಸಿಗುವ ನಾಯಕರಾಗಿದ್ದಾರೆ. ಜಾತ್ಯತೀತವಾದ ಮನನೊಭಾವದವರಾದ ಜಿಕೆಬಿ ಅವರ ಬಳಿ ಸ್ನೇಹ ವಿಶ್ವಾಸಕ್ಕೆ ಜಾತಿ ಮತ ಧರ್ಮಗಳ ತಾರತಮ್ಯವಿಲ್ಲದೆ ಎಲ್ಲಾ ಧರ್ಮದವರು ಎಲ್ಲಾ ಜಾತಿಯವರು ಇವರ ಜೊತೆಗೆ ಇರುತ್ತಿದ್ದರು ಈ ಕಾರಣದಿಂದಾಗಿಯೇ ಇವರ ಮನೆಯ ಮುಂದೆ ಜಾತ್ರೆಯ ರೀತಿಯಲ್ಲಿ ಜನ ಸೇರುತ್ತಾರೆ. ಬಡವ, ಶ್ರೀಮಂತ, ಜಾತಿ ಧರ್ಮ, ವಯಸ್ಸು ಅಥವಾ ಯಾವುದೇ ಅಂತರ ಇಲ್ಲದೆ ಎಲ್ಲರ ಜತೆ ಇರುವ ವ್ಯಕ್ತಿ.
ಸಣ್ಣ ಹಂತದಿಂದ ದೊಡ್ಡದಾಗಿ ಬೆಳೆದ ನಾಯಕ
ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಗೋಪಾಲಕೃಷ್ಣ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೇಳೂರು ಎಂಬ ಪುಟ್ಟ ಗ್ರಾಮದಲ್ಲಿ ಕೃಷಿ ಕಾಯಕ ಮಾಡುತ್ತಿದ್ದ ಕೆರೆಯಪ್ಪ ಮತ್ತು ಮೈಯಮ್ಮ ದಂಪತಿಗಳಿಗೆ ನಾಲ್ಕನೇ ಸುಪುತ್ರನಾಗಿ ಜನಿಸಿದರು. ಗೋಪಾಲಕೃಷ್ಣರು ರಂಜಿತಾ ಅವರ ಜತೆ ದಾಂಪತ್ಯ ಜೀವನ ಶುರು ಮಾಡಿ ಮೇಘ ಹಾಗೂ ವಿನಯ್ ಎಂಬ ಇಬ್ಬರು ಮಕ್ಕಳೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.
ಬಂಗಾರಪ್ಪ ಅವರ ಮೆಚ್ಚಿನ ಶಿಷ್ಯ!
ಕಿರಿ ವಯಸ್ಸಿನಲ್ಲಿ ಸಂಘಟನೆಯಲ್ಲಿ ವಿಭಿನ್ನ ಚಾಪು ಮೂಡಿಸಿದ್ದರು. ಆ ಸಮಯದ ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರವರು ಸಮಾಜವಾದಿ ಚಿಂತನೆ, ಆದರ್ಶ ಹೋರಾಟಗಳು ಬೇಳೂರಿಗೆ ಸಂಘಟನೆ ಹೋರಾಟಗಳಿಗೆ ಮಾರ್ಗದರ್ಶಿ ಮತ್ತು ಪ್ರೇರಣೆಯಾಗಿದ್ದವು.
ಕಲ್ಲು ಮುಳ್ಳಿನ ಹಾದಿ: ಕಷ್ಟದಲ್ಲಿ ಜನರ ಕೈ ಬಿಡಲಿಲ್ಲ!
ಮೊದಲೇ ವಿದ್ಯಾರ್ಥಿ ಸಂಘಟನೆ, ಚಳುವಳಿಯಲ್ಲಿ ಪಾಲ್ಗೊಂಡಿದ್ದ ಬೇಳೂರು 2003ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಗೆದ್ದು ಶಾಸಕರಾಗಿ ಆಯ್ಕೆಯಾದರು. ವಿಭಿನ್ನ ಆಲೋಚನೆಗಳು, ಸಂಘಟನಾ ಚತುರತೆ, ದೃಢ ನಿಲುವುಗಳಿಂದಲೇ 2008ರಲ್ಲಿ ಮತ್ತೊಮ್ಮೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕ್ಷೇತ್ರದಲ್ಲಿ ಸೈ ಏನಿಸಿಕೊಂಡರು. ನಂತರದ 2013ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು.2018 ತಾನಿದ್ದ ಪಕ್ಷ ಅವರಿಗೆ ಸೀಟು ನೀಡದೆ ಅವರು ಅಧಿಕಾರ ಇಲ್ಲದಾಯಿತು. ಆದರೂ ಕ್ಷೇತ್ರ ಬಿಟ್ಟು ಹೋಗದೆ ಮಹಮಾರಿ ಕರೋನಂತಹ ಸಮಯದಲ್ಲಿ ತನ್ನ ಕೈಲಾದಷ್ಟು ಮಟ್ಟಿಗೆ ಕ್ಷೇತ್ರದ ಜನತೆಗೆ ಸಹಾಯ ಮಾಡಿದ್ದು ಮರೆಯಲು ಸಾಧ್ಯವೇ ಇಲ್ಲ. ಕೊನೆಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಹರತಾಳು ಹಾಲಪ್ಪನವರ ವಿರುದ್ಧ ಗೆದ್ದು ಇದೀಗ ಕ್ಯಾಬಿನೆಟ್ ದರ್ಜೆಯ ಕರ್ನಾಟಕ ಸರ್ಕಾರದ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ಹ್ಯಾಪಿ ಬರ್ತ್ ಡೇ…
ಬೇಳೂರು ಗೋಪಾಲ ಕೃಷ್ಣ