Categories
ಅಪಘಾತ ಇತರೆ ಸುದ್ದಿ ಚಿಕ್ಕಮಗಳೂರು ಸಾಗರ

8 ವರ್ಷದ ಬಾಲಕನ ಬಲಿ ಪಡೆದ ಕಡಜ ಹುಳುಗಳು! – ಆಲ್ದೂರಲ್ಲಿ ವಸತಿ ಶಾಲೆಯಲ್ಲೇ ನೇಣು ಬಿಗಿದುಕೊಂಡ ವಿದ್ಯಾರ್ಥಿ! – ಚಿಕ್ಕಮಗಳೂರು: ಕುದುರೆಮುಖ ಆಫ್ ರೋಡ್: ಸರ್ಕಾರ ಕಡಿವಾಣ

ಸಾಗರ: ಸಾಗರ ತಾಲೂಕು ಹೆಗ್ಗೋಡು ಬಳಿಯ ಅತ್ತಿಸರ ಗ್ರಾಮದಲ್ಲಿ ಕಡಜ ಹುಳುಗಳು ಕಡಿದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಮನೆಯ ಹಿಂದಿನ ಬಾಳೆಗಿಡದಲ್ಲಿದ್ದ ಕಡಜದ ಹುಳುವಿನ ಗೂಡಿನಿಂದಾಗಿ ವೆಂಕಟೇಶ್ ಹಾಗೂ ಅವರ ಮಗ ನಿಶ್ಚಿತ್ ಮೇಲೆ ಕಡಜ ಹುಳುಗಳು ದಾಳಿ ಮಾಡಿದ್ದವು. ಕುಟುಂಬದವರು ತಕ್ಷಣವೇ ಬಾಲಕ ಹಾಗೂ ತಂದೆಯನ್ನು ಹೆಗ್ಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಆಲ್ದೂರಲ್ಲಿ ವಸತಿ ಶಾಲೆಯಲ್ಲೇ ನೇಣು ಬಿಗಿದುಕೊಂಡ ವಿದ್ಯಾರ್ಥಿ!

ಆಲ್ದೂರು: 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರು-ಆವುತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.
ವಸತಿ ಶಾಲೆಯಲ್ಲಿ ನಿಶದ್ (14) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ. ಚಿಕ್ಕಮಗಳೂರು ನಗರದ ಕಲ್ಯಾಣ ನಗರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು ನೇಣು ಹಾಕಿಕೊಂಡಿದ್ದ
ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಟ್ಟೆ ಒಣಗಿಸಲು ಕಟ್ಟಿದ್ದ ದಾರದಿಂದ ನೇಣು ಹಾಕಿಕೊಂಡಿದ್ದ ವಿದ್ಯಾರ್ಥಿ ಇತರೆ ವಿದ್ಯಾರ್ಥಿಗಳು ರಕ್ಷಿಸಿದ್ದಾರೆ. ಗಂಭೀರಗೊಂಡ ಬಾಲಕನನ್ನ ಶಿವಮೊಗ್ಗದ ಆಸ್ಪತ್ರೆಗೆ ಗ್ಲುಕೋಸ್, ವೆಂಟಿಲೇಟರ್ ಮೂಲಕವೇ ಬಾಲಕನ ರವಾನೆ ಮಾಡಲಾಗಿದೆ.

•ಚಿಕ್ಕಮಗಳೂರು: ಕುದುರೆಮುಖ ಆಫ್ ರೋಡ್: ಸರ್ಕಾರ ಕಡಿವಾಣ

ಚಿಕ್ಕಮಗಳೂರು: ಬೆಂಗಳೂರು ಮೂಲದ ಸಾಹಸ ಹವ್ಯಾಸಿಗಳ ಗುಂಪೊಂದು ಕುದುರೆಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ‘ಆಫ್ ರೋಡ್ ಅಡ್ವೆಂಚರ್ ಡ್ರೈವ್’ ಎನ್ನುವ ಸಾಹಸಯಾತ್ರೆಗೆ ರಾಜ್ಯ ಸರ್ಕಾರವು ಕಡಿವಾಣ ಹಾಕಿದೆ. ಸಾಹಸಯಾತ್ರೆಯ ಸಂದರ್ಭದಲ್ಲಿ ಗ್ರಾಮೀಣ ರಸ್ತೆಗಳು ಹಾನಿಗೊಳಗಾದರೆ ಅಥವಾ ನದಿ, ತೊರೆ ಸೇರಿದಂತೆ ಜಲಮೂಲಗಳು ಕಲುಷಿತಗೊಂಡರೆ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು ಎಚ್ಚರಿಕೆಯನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಶ್ವರ ಖಂಡ್ರೆ ಅವರು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ, ಯಾವುದೇ ಕಾರಣಕ್ಕೂ ಸಾಹಸ ಚಟುವಟಿಕೆಯಿಂದ ಪರಿಸರಕ್ಕೆ ಧಕ್ಕೆಯುಂಟಾಗದಂತೆ, ಇದಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಂತೆ ಲಿಖಿತ ರೂಪದ ನಿರ್ದೇಶನವನ್ನು ನೀಡಿದ್ದು, ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿರುವ ನದಿಗಳು, ತೊರೆಗಳು ಮತ್ತು ನಾಲೆಗಳಿಗೆ ಆಫ್ ರೋಡ್ ವಾಹನಗಳು ಪ್ರವೇಶಿಸದಂತೆ ತಡೆಯಬೇಕೆಂದು ಉಲ್ಲೇಖಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ದೊಡ್ಡ ಗಾತ್ರದ ಟೈರ್ ಗಳನ್ನು ಹೊಂದಿರುವ ವಾಹನಗಳು ಮಳೆಯಿಂದಾಗಿ ಮೆದುಕೊಂಡಿರುವಂತಹ ಮಣ್ಣಿನ ರಸ್ತೆಗಳ ಮೇಲೆ ಅತಿ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಚಲಿಸುವುದರಿಂದ ರಸ್ತೆಗಳಿಗೆ ಹಾನಿಯುಂಟಾಗುವುದರ ಜೊತೆಗೆ, ಮಣ್ಣಿನ ಸವೆತವೂ ಅಧಿಕಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ನಡೆದಿದ್ದ ಆಫ್ ರೋಡಿಂಗ್ ಗಳ ವಿರುದ್ಧ ಅರಣ್ಯ ಇಲಾಖೆಯು ಕಠಿಣ ಕ್ರಮವನ್ನು ಕೈಗೊಂಡು, 40ಕ್ಕೂ ಹೆಚ್ಚಿನ ವಾಹನಗಳನ್ನು ಜಪ್ತಿ ಮಾಡಿತ್ತು ಎನ್ನಲಾಗಿದೆ.

Categories
ಮಲ್ನಾಡ್ ರಾಜ್ಯ ಶಿವಮೊಗ್ಗ ಸಾಗರ

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರ ಪಂಚೆ: ಚಿಕಿತ್ಸೆ ಫಲಿಸದೇ 2 ವರ್ಷದ ಮಗು ಸಾವು

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರ ಪಂಚೆ: ಚಿಕಿತ್ಸೆ ಫಲಿಸದೇ 2 ವರ್ಷದ ಮಗು ಸಾವು
– ಆಟವಾಡುತ್ತಿದ್ದ ಕಂದಮ್ಮನ ಪಾಲಿಗೆ ಕಂಟಕವಾದ ಹಾವು
– ಪುಟ್ಟ ಜೀವ ಬಲಿ ಪಡೆದ ಘೋರ ದುರಂತ

ಸಾಗರ: ಮನೆಯ ಅಂಗಳದಲ್ಲಿ ನಿಶ್ಚಿಂತೆಯಿಂದ ಆಟವಾಡುತ್ತಿದ್ದ ಎರಡು ವರ್ಷದ ಹಸುಗೂಸಿಗೆ ಹಾವೊಂದು ಕಚ್ಚಿ, ಮಗು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಸಾಗರ ಪಟ್ಟಣದ ಎಸ್.ಎನ್. ನಗರದಲ್ಲಿ ನಡೆದಿದೆ. ನಗರದ ಎಸ್‌ಎನ್ ನಗರದ ನಿವಾಸಿಗಳಾದ ಅಕ್ಷತಾ ಮತ್ತು ಗಣೇಶ್ ದಂಪತಿಯ ಪುತ್ರ ಭವಿನ್ (2 ವರ್ಷ) ಮೃತಪಟ್ಟ ದುರ್ದೈವಿ. ಅಕ್ಷತಾ ಅವರು ಮಗುವಿನೊಂದಿಗೆ ಸಾಗರದಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಇಂದು ಮಗು ಮನೆಯ ಮುಂಭಾಗದ ಅಂಗಳದಲ್ಲಿ ಆಟವಾಡುತ್ತಿದ್ದಾಗ ಹಠಾತ್ತನೆ ಹಾವು ಕಚ್ಚಿದೆ.

ಮಗು ಜೋರಾಗಿ ಅಳತೊಡಗಿದ್ದನ್ನು ಕೇಳಿಸಿಕೊಂಡ ಕುಟುಂಬಸ್ಥರು ತಕ್ಷಣ ಹೊರಬಂದು ನೋಡಿದಾಗ ಹಾವು ಕಚ್ಚಿರುವುದು ಬೆಳಕಿಗೆ ಬಂದಿದೆ. ತೀವ್ರ ಆತಂಕಕ್ಕೊಳಗಾದ ಪೋಷಕರು ಕೂಡಲೇ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದರು.ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ವಿಷದ ತೀವ್ರತೆ ಹೆಚ್ಚಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.

ಕಣ್ಣೆದುರೇ ಆಟವಾಡುತ್ತಿದ್ದ ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ. ಈ ಕುರಿತು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Categories
ಶಿವಮೊಗ್ಗ ಸಾಗರ

ಶಿಕಾರಿಪುರ: ಮಹಿಳೆಯರ ಸೇವೆ ನೆನೆದ ಗಣ್ಯರು!

ಶಿಕಾರಿಪುರ: ಮಹಿಳೆಯರ ಸೇವೆ ನೆನೆದ ಗಣ್ಯರು!
– ಶಿಕಾರಿಪುರದ ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆಯಲ್ಲಿ ಮಹಿಳಾ ದಿನಾಚರಣೆ, ಸರಸ್ವತಿ ಪೂಜೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿಕಾರಿಪುರ: ಸ್ತ್ರೀ ಎಂಬುದು ಸಮಾಜದ ಬಹುದೊಡ್ಡ ಶಕ್ತಿಯಾಗಿದ್ದು, ಈ ಶಕ್ತಿಯಿಂದ ಸಮಾ ಜದ ಹಾಗೂ ಕುಟುಂಬದ ಏಳಿಗೆ ಸಾಧ್ಯ ಎಂದು ಪ್ರಾಚಾರ್ಯರಾದ ವಿಶ್ವನಾಥ ಪಿ ಹೇಳಿದ್ದಾರೆ. ಶಿಕಾರಿಪುರ ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣವು ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ಹಕ್ಕುಗಳನ್ನು ನೀಡಿ, ಪುರುಷರಂತೆಯೇ ಸಮಾನ ಅವಕಾಶಗಳನ್ನು ಪಡೆಯುವಂತೆ ಮಾಡುವುದಾಗಿದೆ. ಇದು ಆತ್ಮವಿಶ್ವಾಸ ಮೂಡಿಸುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು, ಮತ್ತು ಆರೋಗ್ಯ ಹಾಗೂ ಭದ್ರತೆಯನ್ನು ಖಚಿತಪಡಿಸುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಶಿಕ್ಷಕಿ ರೇಷ್ಮಾ ಬಾನುಸ್ತ್ರೀ ಕೇವಲ ಒಂದು ಹೆಸರಲ್ಲ, ಅದೊಂದು ಅದಮ್ಯ ಶಕ್ತಿ, ಪ್ರೀತಿ, ತ್ಯಾಗ ಮತ್ತು ಧೈರ್ಯದ ಸಂಕೇತ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪಾರ್ವತಮ್ಮ ಪತಿ, ತಂದೆ ಅಥವಾ ಸಹೋದರರ ಬೆಂಬಲವು ಮಹಿಳೆಯರ ಕನಸುಗಳನ್ನು ನನಸಾಗಿಸಲು ನೆರವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರಶೇಖರ್ ಅವರ ಮಹಿಳಾ ಸಾಧಕಿಯರ ಪರಿಚಯ ಮಾಡಿಕೊಟ್ಟರು. ಉಪಸ್ಥಿತರಿದ್ದ ಪ್ರಶಾಂತ ಕುಬಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಶಿಕ್ಷಕಿಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಕು . ಚಿರಂಜೀವಿ ಪ್ರಾರ್ಥಿಸಿ, ಶಿಕ್ಷಕರಾದ ಎಂ.ಜಿ. ಚಂದನ ಸ್ವಾಗತಿಸಿ, ಪರಮೇಶ್ ನಾಯಕ್ ವಂದಿಸಿ, ನಿಂಗಪ್ಪ.ಡಿ ಕಾರ್ಯಕ್ರಮ ನಿರೂಪಿಸಿದರು.

ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆಯಲ್ಲಿ ಸರಸ್ವತಿ ಪೂಜೆ

ಶಿಕಾರಿಪುರ:ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನರಲ್ಲಿ ತಾಳ್ಮೆ, ಸಹನೆ ತುಂಬಾ ಮಹತ್ವವಾಗಿದ್ದು, ಪರಿಶ್ರಮ ಪಟ್ಟು ಅಭ್ಯಾಸ ಮಾಡಬೇಕು. ಪಡೆಯುವ ಅಂಕದ ಕುರಿತು ಅತಿಯಾದ ಚಿಂತನೆ ಅವಶ್ಯಕತೆ ಇರುವುದಿಲ್ಲ ಎಂದು ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ . ಶಿವಕುಮಾರ್ ಹೇಳಿದ್ದಾರೆ. ನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರಸ್ವತಿ ಪೂಜೆ ಮತ್ತು ಹತ್ತನೇ ಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರವೀಂದ್ರ ಕೆ.ಸಿ, ಶಾಲಾ ಪ್ರಾಚಾರ್ಯರಾದ ವಿಶ್ವನಾಥ. ಪಿ ಉದ್ಘಾಟನೆ ಮಾಡಿದರು. ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಮಾತನಾಡಿದರು. ರೇಷ್ಮಾ ಬಾನು ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರಾದ ಹಾಲಸ್ವಾಮಿ,ಎಂ ಕೆ ಚಂದನ್ , ಚಂದ್ರಶೇಖರ್, ಮಂಜುಳಾ ಪಾಟೀಲ್, ಲಲಿತಾ, ರೇಖಾ, ಚಂದ್ರಮತಿ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು ಚೇತನಾ ಎಂ.ಎಸ್ ಮತ್ತು ತಂಡದವರು ಪ್ರಾರ್ಥಿಸಿ,ಕು ಪ್ರಣತಿ.ವಿ. ಸ್ವಾಗತಿಸಿ,ಕು.ವರ್ಷಿಣಿ.ಕೆ.ಆರ್ ವಂದಿಸಿ.ಕು . ಹೇಮಶ್ರೀ ಯು.ಪಿ ಕಾರ್ಯಕ್ರಮ ನಿರೂಪಿಸಿದರು.

Categories
ಕೊಪ್ಪ ಮಲ್ನಾಡ್ ಶಿವಮೊಗ್ಗ ಸಾಗರ

ಕಾಫಿ ನಾಡಲ್ಲಿ ಕಾಡಾನೆ ತಡೆಗೆ ಸರ್ಕಾರದ ಆದೇಶ!

ಕಾಫಿ ನಾಡಲ್ಲಿ ಕಾಡಾನೆ ತಡೆಗೆ ಸರ್ಕಾರದ ಆದೇಶ!
– ಶೃಂಗೇರಿ-ಕೊಪ್ಪ ಆನೆ ಕಾರ್ಯಪಡೆ ರಚನೆಗೆ ಅಸ್ತು
– ರಾಜೇಗೌಡ ಅವರ ಪ್ರಯತ್ನಕ್ಕೆ ಸಂದ ಫಲ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಕಾಫಿ ನಾಡಿನಲ್ಲಿ ಕಾಡಾನೆ ಸೇರಿದಂತೆ ಇತರ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿದ್ದು, ಕಾಡಾನೆ ದಾಳಿಯಿಂದಾಗಿ ಮಲೆನಾಡು ಭಾಗದಲ್ಲಿ ಹಲವಾರು ಜನ ಕಾರ್ಮಿಕರು,ರೈತರು ಸಾವನ್ನಪ್ಪಿದ್ದು, ಫಸಲು ಕೈಗೆ ಬರುವಂತಹ ಸಮಯದಲ್ಲಿ ಬೆಳೆ ಹಾನಿಯಾಗಿ ರೈತರಿಗೆ ಅಪಾರ ಪ್ರಮಾಣದ ನಷ್ಟ ಸಹ ಉಂಟಾಗಿದೆ.

ಶಾಸಕರಾದ ಟಿ.ಡಿ.ರಾಜೇಗೌಡ ಅವರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಸಫಲರಾಗಿದ್ದು, ಮಾನವ ಮತ್ತು ಕಾಡಾನೆ ನಡುವಿನ ಸಂಘರ್ಷವನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಶೃಂಗೇರಿ-ಕೊಪ್ಪ ಆನೆ ಕಾರ್ಯಪಡೆ ಕಾರ್ಯಗತಗೊಳಿಸಲು ಸಿದ್ಧತೆಯನ್ನು ನಡೆಸಲಾಗಿದೆ.

ಏನಿದು ಆನೆ ಕಾರ್ಯಪಡೆ?

ಆನೆ ಕಾರ್ಯಪಡೆಯು ಅನುಷ್ಠಾನಗೊಳ್ಳುವುದರಿಂದ ಹೆಚ್ಚು ಜನ ಅರಣ್ಯ ಸಿಬ್ಬಂದಿಗಳು, ಹೆಚ್ಚಿನ ಸಲಕರಣೆಗಳು ಮತ್ತು ಹೆಚ್ಚಿನ ಸಂಪನ್ಮೂಲ ಲಭ್ಯವಾಗುತ್ತದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಕಾಡಾನೆಯ ಹಾವಳಿ ನಿಯಂತ್ರಣಗೊಳ್ಳಲಿದೆ ಎನ್ನಲಾಗಿದೆ.

ಎಲ್ಲಿಂದ ಎಲ್ಲಿಗೆ?

ಇನ್ನು ಕೊಪ್ಪ ವಿಭಾಗದ ಚಿಕ್ಕ ಅಗ್ರಹಾರ ವಲಯದ ವ್ಯಾಪ್ತಿಯಲ್ಲಿ ಸಾರ್ಯಾದಿಂದ ಕರ್ಕೂಟ ಪ್ರದೇಶದವರೆಗೆ 2.8 ಕಿಲೋಮೀಟರ್ ದೂರದವರೆಗೆ ವಿನ್ಯಾಸ ರೈಲ್ವೆ ಬ್ಯಾರಿಕೆಡ್ ನಿರ್ಮಾಣಕ್ಕಾಗಿ 4.69.40.000, ಬೆಳ್ಳಂಗಿಯಿಂದ ಕೊಳೆಹಳ್ಳದವರೆಗೆ 2.23 ಕಿಲೋಮೀಟರ್ ದೂರದವರೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 4.31.70.000 ರೂಪಾಯಿ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಿದ್ದು ಒಟ್ಟು 7.61 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೆಡ್ ನಿರ್ಮಿಸಲು 12 ಕೋಟಿ 78 ಲಕ್ಷ ರೂಪಾಯಿ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.

• ಭದ್ರಾವತಿ: ನದಿಯಲ್ಲಿ ಕಾಣಿಸಿಕೊಂಡ ಮೊಸಳೆ

ಭದ್ರಾವತಿ: ನದಿಯೊಳಗೆ ಮೊಸಳೆಯೊಂದು ಪ್ರತ್ಯಕ್ಷಗೊಂಡ ಘಟನೆ ನಡೆದಿದೆ. ಹೊಳೆಹೊನ್ನೂರಿನ ಭದ್ರಾ ನದಿಯಲ್ಲಿ ಇದು ಕಾಣಿಸಿಕೊಂಡಿದ್ದು, ವಾಹನಗಳಲ್ಲಿ ಸಂಚರಿಸುತ್ತಿದ್ದ ಜನರು ಸೇತುವೆಯ ಮೇಲ್ಭಾಗದಿಂದ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಪ್ರತ್ಯಕ್ಷ ದರ್ಶಿಗಳು ಅದರ ವೀಡಿಯೊ ತೆಗೆದಿರುವುದರಿಂದ ಈ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.‌ ಸ್ಥಳೀಯರು ಹೆಚ್ಚಿನ ಪ್ರಮಾಣದಲ್ಲಿ ಈ ನದಿಗೆ ಬಟ್ಟೆ ಒಗೆಯಲು ಹೋಗುವುದರಿಂದ ಅಲ್ಲಿಗೆ ತೆರಳುವ ಜನರು ಎಚ್ಚರಿಕೆಯಿಂದ ಇರಬೇಕೆಂದು ಹೇಳಲಾಗಿದೆ.

•ಸಾಗರ: ಹಲ್ಲಿನಲ್ಲಿ ಅಡಗಿದೆ ಸಾವಿನ ಅಸಲಿ ಕಥೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸಾಗರ: 2025 ರ ನವೆಂಬರ್ ತಿಂಗಳಿನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಹೊಸ ತಿರುವೊಂದು ಇದೀಗ ದೊರೆತಿದೆ. ತ್ಯಾಗರ್ತಿ ಗ್ರಾಮದ ರವಿ ಎನ್ನುವ ಹೆಸರಿನ ವ್ಯಕ್ತಿಯೊಬ್ಬರು ಕಟ್ಟಿಗೆಗೆಂದು ಅರಣ್ಯ ಪ್ರದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ತಲೆಬುರುಡೆಯನ್ನು ಕಂಡು ಬೆಚ್ಚಿ ಬಿದ್ದಿದ್ದರು. ತಕ್ಷಣ ರವಿಯವರು ಸ್ಥಳೀಯ ಪೊಲೀಸರು ಹಾಗೂ ಆನಂದಪುರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಮಾಹಿತಿ ಲಭಿಸುತ್ತಿದ್ದಂತೆ ಪಿಎಸ್ಐ ಪ್ರವೀಣ್ ಹಾಗೂ ಎಸ್ ಪಿ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ತಂಡವು ಪರಿಶೀಲನೆಯನ್ನು ನಡೆಸಿತ್ತು.

ತಲೆಬುರುಡೆಯನ್ನು ಹೊರತುಪಡಿಸಿ ಮೂಳೆ ರೀತಿಯ ಯಾವುದೇ ಅವಶೇಷಗಳು ಕಂಡುಬಾರದೆ, ಕೇವಲ ವ್ಯಕ್ತಿ ಧರಿಸಿದ್ದ ಎಂದು ಊಹಿಸಬಹುದಾದ ಬಟ್ಟೆಗಳು ಮಾತ್ರ ಸಿಕ್ಕಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಪೊಲೀಸರಿಗೆ 2024ರ ಜುಲೈ ತಿಂಗಳಿನಲ್ಲಿ ತ್ಯಾಗರ್ತಿ ಗ್ರಾಮದ ಬಸವರಾಜ್ ಎನ್ನುವ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಕುರಿತು ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ವ್ಯಕ್ತಿ ಇವರೇ ಇರಬಹುದೇ ಎನ್ನುವ ಅನುಮಾನ ಇದರಿಂದಾಗಿ ಬಲವಾಗತೊಡಗಿತು.

ಈ ಹಿನ್ನೆಲೆಯಲ್ಲಿ ಪರಿಶೀಲನೆಯ ಸಮಯದಲ್ಲಿ ಪೊಲೀಸರಿಗೆ ದೊರೆತಿದ್ದ ಬಟ್ಟೆಗಳನ್ನು ಬಸವರಾಜ್ ಅವರ ಕುಟುಂಬಸ್ಥರಿಗೆ ತೋರಿಸಿದಾಗ, ಅವರ ಪತ್ನಿ ಮತ್ತು ಮಗಳು ಆ ಬಟ್ಟೆಗಳು ತಮ್ಮ ಕುಟುಂಬದ ಸದಸ್ಯರದ್ದೇ ಎಂದು ದೃಢಪಡಿಸಿದ್ದರು ಎನ್ನಲಾಗಿದೆ. ಕೇವಲ ತಲೆಬುರುಡೆ ದೊರೆತಿದ್ದ ಕಾರಣ ವ್ಯಕ್ತಿಯ ಗುರುತಿಗಾಗಿ ವೈಜ್ಞಾನಿಕ ಪರೀಕ್ಷೆಯನ್ನು ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಯಿತು.‌ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮೂಲಕ ಎಸ್ಎಸ್ಎಲ್ ದಾವಣಗೆರೆ ಮತ್ತು ಹುಬ್ಬಳ್ಳಿಗೆ ಕಳುಹಿಸಲಾಗಿತ್ತು.‌

ವೈಜ್ಞಾನಿಕ ಪರೀಕ್ಷೆಯ ಸಂದರ್ಭದಲ್ಲಿ ತಲೆಬುರುಡೆಯೊಳಗಿದ್ದ ಒಂದೇ ಒಂದು ಹಲ್ಲು ಪ್ರಮುಖ ಸಾಕ್ಷಿಯಾಗಿ ದೊರೆತು, ಅದರ ಆಧಾರದ ಮೇಲೆ ಬಸವರಾಜ್ ಅವರ ಮಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆ ನಡೆಸಲಾಯಿತು. ಇದೀಗ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಅದು ಬಸವರಾಜ್ ಅವರ ತಲೆಬುರುಡೆಯೇ ಎನ್ನುವುದು ಧೃಡಪಟ್ಟಿದೆ. ತನಿಖೆಯ ಸಂದರ್ಭದಲ್ಲಿ ಬಂದ ಮಾಹಿತಿಯ ಪ್ರಕಾರ ಬಸವರಾಜ್ ತೀವ್ರ ಮದ್ಯವ್ಯಸನಿಯಾಗಿದ್ದು, ಕುಟುಂಬದಲ್ಲಿ ಕಲಹಗಳು ನಡೆಯುತ್ತಿದ್ದುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಸಾಗರ

ಕಾಡು ಪ್ರಾಣಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು!

ಕಾಡು ಪ್ರಾಣಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು!
– ಮಗ ಅಪಘಾತಕ್ಕೆ ಬಲಿ, ಮಗನ ಹೆಣ ನೋಡಿ ತಂದೆಯೂ ಆತ್ಮಹತ್ಯೆ!
– ತೀರ್ಥಹಳ್ಳಿ – ಹೊಸ ನಗರ ಗಡಿಯಲ್ಲಿ ನಡೆದ ದುರಂತ ಘಟನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸ ನಗರ: ಹೊಸ ನಗರ ತಾಲೂಕಿನ ಯಡೂರು ಸಮೀಪದ ಕುಂಬ್ರಿ ಗದ್ದೆಯಲ್ಲಿ ಭಾನುವಾರ ರಾತ್ರಿ ಕಾಡು ಪ್ರಾಣಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಘಟನೆ ಪರಿಣಾಮ ಯುವಕನೊಬ್ಬ ಮೃತಪಟ್ಟ ದುರಂತ ಸಂಭವಿಸಿದೆ. ಮಗನ ಶವ ನೋಡಿದ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೋಟೆಲ್ ಅಲ್ಲಿ ಕೆಲಸ ಮಾಡಿಕೊಂಡಿದ್ದ ವರದರಾಜ ಎಂಬ ಯುವಕ ಭಾನುವಾರ ತಡ ರಾತ್ರಿ ತೀರ್ಥಹಳ್ಳಿಯಿಂದ ಕೆಲಸ ಮನೆಗೆ ತೆರಳುವ ವೇಳೆ ಕೌರಿ ಕಾನುಗೋಡು ಸಮೀಪ ಕಾಡು ಪ್ರಾಣಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಯಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿ ಪ್ರಾಣ ಬಿಟ್ಟಿದ್ದು ಮಗನ ನೋಡಲು ಬಂದ ತಂದೆ ಮಂಜಪ್ಪ ನಾಯ್ಕ್ ಮಗನ ಶವವನ್ನು ನೋಡಿ ಮನೆಗೆ ಹೋಗಿ ತಾನು ಕೂಡ ಮಂಗನ ಕಾಯಲೆ ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಡ ಕುಟುಂಬದ ವಿವಾಹಿತನಾಗಿರುವ ವರದ ರಾಜ ಪತ್ನಿ ಹಾಗೂ 2 ವರ್ಷದ ಹೆಣ್ಣು ಮಗುವನ್ನು ಅಗಲಿರುತ್ತಾರೆ ಎಂದು ತಿಳಿದು ಬಂದಿದೆ. ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮೃತರು ಶಿರಸಿ ಮೂಲದವರಾಗಿದ್ದು, ಮೃತರ ಊರಿಗೆ ತೆಗೆದುಕೊಂಡು ಹೋಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Categories
ಕೃಷಿ ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ನಮ್ಮೂರ್ ಪ್ರಾಬ್ಲಮ್ ಮಲ್ನಾಡ್ ಮಾಹಿತಿ ಸುದ್ದಿ ಶಿವಮೊಗ್ಗ ಶೃಂಗೇರಿ ಸಾಗರ

ಮಳೆ, ತಂಡಿಯೇ ಅಡಿಕೆಗೆ ಎಲೆಚುಕ್ಕಿ ರೋಗಕ್ಕೆ ಕಾರಣ!

ಮಳೆ, ತಂಡಿಯೇ ಅಡಿಕೆಗೆ ಎಲೆಚುಕ್ಕಿ ರೋಗಕ್ಕೆ ಕಾರಣ!

– ದೇವಂಗಿಯಲ್ಲಿ ಯಶಸ್ವಿಯಾದ ರೈತ ಜಾಗೃತಿ ಕಾರ್ಯಕ್ರಮ
– ತೋಟಕಾರಿಕೆ ಇಲಾಖೆ, ಕುಪ್ಪಳಿ ಕುವೆಂಪು ತೋಟಗಾರಿಕೆ ಉತ್ಪದನಾ ಕಂಪನಿ ಲಿಮಿಟೆಡ್ ಸಹಯೋಗದಲ್ಲಿ ಕಾರ್ಯಗಾರ
– ವಾತಾವರಣದ ಏರುಪೇರಿನಿಂದ ಅಡಿಕೆಗೆ ರೋಗ ಹೆಚ್ಚಳ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ/ದೇವಂಗಿ: ಕ್ರಮಬದ್ಧ ಬೇಸಾಯದಿಂದ ಎಲೆಚುಕ್ಕಿ ರೋಗ ನಿಯಂತ್ರಿಸಬಹುದು. ಅತಿಯಾದ ನೀರಿನಿಂದಲೂ ಸಮಸ್ಯೆ ಉಲ್ಬಣ ಆಗಬಹುದು ಎಂಬ ಎಚ್ಚರಿಕೆಯನ್ನು ಕೃಷಿ ಅಧಿಕಾರಿಗಳು ನೀಡಿದ್ದಾರೆ. ಅಚ್ಚರಿ ಎಂದರೆ ನದಿ, ಕೆರೆ, ತೊರೆ ಮುಂತಾದ ನೀರಿನ ಮೂಲವಿರುವ ತೋಟಗಳಲ್ಲಿ ಹೆಚ್ಚಾಗಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಹೌದು. ರೈತರಿಗೆ ಅನೇಕ ಮಾರ್ಗಗಳನ್ನು ಅಧಿಕಾರಿಗಳು ನೀಡಿದ್ದಾರೆ.

ಗುರುವಾರ ದೇವಂಗಿ ಮಾನಪ್ಪ ಸಭಾ ಭವನದಲ್ಲಿ ತೋಟಕಾರಿಕೆ ಇಲಾಖೆ, ಕುಪ್ಪಳಿ ಕುವೆಂಪು ತೋಟಗಾರಿಕೆ ಉತ್ಪದನಾ ಕಂಪನಿ ಲಿಮಿಟೆಡ್ ಸಹಯೋಗದಲ್ಲಿ ಆಯೋಜಿಸಿದ್ದ “ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದ ನಿಯಂತ್ರಣ” ವಿಚಾರ ಸಂಕೀರ್ಣ ಉದ್ಘಾಟಿಸಿದ ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ. ಗಂಗಾಧರ ನಾಯ್ಕ ಈ ಮಾಹಿತಿ ನೀಡಿದ್ದಾರೆ. ಮುಂದುವರಿದು ಮಾತನಾಡಿದ ಅವರು, ತೇವಾಂಶ ಹೆಚ್ಚಿರುವುದು ಮತ್ತು ಮುಂಜಾನೆಯ ಇಬ್ಬನಿ ಸಹಿತ ವಾತಾವರಣದಲ್ಲಿ ಈ ರೋಗ ಅತಿ ಹೆಚ್ಚಿನ ವೇಗದಲ್ಲಿ ಹರಡುತ್ತದೆ. ಇದನ್ನು ತಡೆಗಟ್ಟಲು ರೈತರು ಅಡಿಕೆ ಮರದ ಬುಡವನ್ನು ತಜ್ಞರು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಬುಡವನ್ನು ಬಿಡಿಸಿ ಗೊಬ್ಬರವನ್ನು ನೀಡಬೇಕು. ನೀಡಿದ ಗೊಬ್ಬರ ವ್ಯರ್ಥವಾಗದಂತೆ ಹೆಚ್ಚೆಂದರೆ ಒಂದು ಮರಕ್ಕೆ 25 ಲೀಟರ್ ನೀರು ಮಾತ್ರ ದೊರಕುವಂತೆ ಮಾಡಬೇಕು ಹಾಗಾದಾಗ ಗಿಡವು ಗೊಬ್ಬರವನ್ನು ಸರಿಯಾದ ಪ್ರಮಾಣದಲ್ಲಿ ಪಡೆದುಕೊಂಡು ಚೆನ್ನಾಗಿ ಬೆಳೆಯುತ್ತದೆ ಮತ್ತು ರೋಗಗಳು ಕಡಿಮೆಯಾಗುತ್ತದೆ ಎಂದು ಹೇಳಿದರು.

ಎಲೆಚುಕ್ಕಿ ರೋಗ ನಿಸಂಶಯವಾಗಿ ವಾತಾವರಣದ ಏರುಪೇರಿನಿಂದ ವ್ಯಾಪಕವಾಗಿ ಹರಡಿದೆ. ವಾತಾವರಣದ ನಿಯಂತ್ರಣ ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ವ್ಯಾಪಕ ಸಂಶೋಧನೆ ಬಳಿಕ ಇದರ ರೋಗ ಲಕ್ಷಣಗಳು ಮತ್ತು ಅದರ ಬೆಳವಣಿಗೆ ಹಂತಗಳನ್ನು ಗುರುತಿಸಲಾಗಿದೆ. ವ್ಯರ್ಥವಾಗಿ ಉಳಿದ ಸಿಂಗಾರ, ಅಡಿಕೆ, ಹಾಳೆ, ಸೋಗೆ ಮುಂತಾದವನ್ನು ಸುಡುವ ಮೂಲಕವೂ ರೋಗವನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು. ರಾಸಾಯನಿಕ ಗೊಬ್ಬರದ ಜೊತೆಗೆ ಸರಿಯಾದ ಪ್ರಮಾಣದ ಕೊಟ್ಟಿಗೆ ಗೊಬ್ಬರ ನೀಡುವುದು ಮರದ ದೃಢತೆ ಹೆಚ್ಚಿಸಿ ರೋಗ ನಿರೋಧಕ ಶಕ್ತಿ ಬೆಳೆಸುತ್ತದೆ ಎಂದು ಅವರು ವಿವರಿಸಿದರು. ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು ಸೋಮಶೇಖರ್ ಕೆ. ಮಾತನಾಡಿ, ಶೇಕಡಾ 80 ರಷ್ಟು ಅಡಿಕೆ ಈ ಭಾಗದಲ್ಲಿ ಮುಖ್ಯ ಬೆಳೆಯಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಗುಂಬೆ ಹೋಬಳಿಯಲ್ಲಿ ಶೇಕಡಾ 80, ಮತ್ತೂರು ಶೇಕಡಾ 60 ರಷ್ಟು ಬೆಳೆಗೆ ಹಾನಿಯಾಗಿದೆ. ಎಲೆಚುಕ್ಕಿ ಹಾನಿಯ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಾಸಾಯನಿಕ ಗೊಬ್ಬರದ ಜೊತೆ ಈ ಬಾರಿ ಜೈವಿಕ ಗೊಬ್ಬರ ವಿತರಿಸಿದ್ದೇವೆ ಎಂದು ತಿಳಿಸಿದರು.

ಶಾಸಕ ಆರಗ ಜ್ಞಾನೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಮಟ್ಟದಲ್ಲಿ ಎಲೆಚುಕ್ಕಿ ರೋಗದ ಕುರಿತು ಸಂಶೋಧನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದ್ದು ಸಕರಾತ್ಮಕ ಸ್ಪಂದನೆ ದೊರೆಯುತ್ತಿದೆ ಎಂದರು. ಕುಪ್ಪಳಿ ಕುವೆಂಪು ತೋಟಗಾರಿಕೆ ಉತ್ಪದನಾ ಕಂಪನಿ ಲಿಮಿಟೆಡ್ ಅಧ್ಯಕ್ಷ ಹೊಳೆಕೊಪ್ಪ ಎಚ್.ಎಂ.ರವೀಂದ್ರ, ಶೇಡ್ಗಾರ್ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಗ್ರಾ.ಪಂ. ಸದಸ್ಯರಾದ ಮಹೇಶ್, ಅಶೋಕ್, ಸರೋಜ, ಎಫ್ಪಿಓ ನಿರ್ದೇಶಕರಾದ ಉಮೇಶ್, ಪೂರ್ಣೇಶ್ ಎಚ್.ಎಂ, ಜಯರಾಂ ಕೆ.ಆರ್. ಪ್ರಮುಖರಾದ ಡಿ.ಎಂ.ಮನುದೇವ್, ಸೀಬಿನಕೆರೆ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ರವಿರಾಜ್ ಶೆಟ್ಟಿ ಮತ್ತಿತರರು ಇದ್ದರು.

Categories
ಕರಾವಳಿ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಶೃಂಗೇರಿ ಸಾಗರ

ಅಡಿಕೆ ಕಥೆ ಮುಗಿಯಿತಾ..?..ಮುಂದೇನು..?

ಅಡಿಕೆ ಕಥೆ ಮುಗಿಯಿತಾ..?..ಮುಂದೇನು..?
– ಭಾರತದಲ್ಲಿ ಪಾನ್ ಮಸಾಲಾ ಬ್ಯಾನ್‌ ಸಾಧ್ಯತೆ
– ಇತ್ತ ಅಡಿಕೆಗೆ ರೋಗ ಹಿನ್ನೆಲೆ ಅಡಿಕೆ ಮರಗಳ ಸಾವು

ಮಲೆನಾಡು/ ಕರಾವಳಿ: ವಿಶ್ವ ಅರೋಗ್ಯ ಸಂಸ್ಥೆ ಇತ್ತೀಚಿನ ಅಧ್ಯಯನದ ಪ್ರಕಾರ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಕಣಗಳು ಪತ್ತೆಯಾದ ಕಾರಣ ಅಡಿಕೆ ನಿಷೇಧ ಮಾಡುವ ಬಗ್ಗೆ ಅನುಮಾನ ಹೆಚ್ಚಿದೆ. ಇದರಿಂದ ಬೆಳಗಾರರ ಬದುಕು ತೂಗುಕತ್ತಿಯಲ್ಲಿ ನಿಂತಿದೆ.
ಅಧ್ಯಯನವಾಗಿ ನಿಷೇಧ ಹೇರದೆ ಇದ್ದರೆ ರೈತರು ಸೇಫ್. ಇಲ್ಲವಾದಲ್ಲಿ ರೈತರ ಬದುಕು ಬೀದಿಗೆ ಬೀಳಲಿದೆ. ಈ ಬಗ್ಗೆ ಅಡಿಕೆ ಸಂಶೋಧನಾ ಕೇಂದ್ರಗಳು, ಜನ ನಾಯಕರು ಗಮನಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದ 10 ವರ್ಷದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ ಮರ ಸಂಪೂರ್ಣ ಹೋಗುತ್ತಿದೆ. ಇನ್ನು ಮರ ಇದ್ದರು ಫಸಲು ಇಲ್ಲವಾಗಿದೆ. ಎಲೆಚುಕ್ಕಿ, ಹಳದಿ, ಕೊಳೆ ರೋಗಕ್ಕೆ ತುತ್ತಾಗಿ ರೈತರು ಲಕ್ಷ ಲಕ್ಷ ಹಣ ಸಾಲ ಮಾಡಿ ಅಡಿಕೆ ತೋಟ ಮಾಡಿದ್ದು ಈಗ ಪ್ರಯೋಜನಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ದೇಶದ ಆಸ್ತಿ ಎನ್ನುವ ರಾಜಕಾರಣಿಗಳು ಪರ್ಯಾಯ ಮಾರ್ಗದ ಬಗ್ಗೆ ಚಿಂತನೆ ಮಾಡಬೇಕಿದೆ.

2026ರ ಏಪ್ರಿಲ್ ಒಳಗೆ ಭಾರತದಲ್ಲಿ ಪಾನ್ ಮಸಾಲಾ ಬ್ಯಾನ್‌?

ಕೇಂದ್ರ ಸರ್ಕಾರ ಏಪ್ರಿಲ್ 2026ರ ಒಳಗೆ ಇಡೀ ದೇಶಾದ್ಯಂತ ಸಿಗರೇಟ್ ಮತ್ತು ಪಾನ್ ಮಸಾಲಾವನ್ನು ನಿಷೇಧಿಸಲು ಪ್ಲಾನ್ ಮಾಡಿದೆ ಎನ್ನಲಾಗಿದೆ. ಈಗಾಗಲೇ ಒಡಿಶಾದಲ್ಲಿ ಇವುಗಳನ್ನು ನಿಷೇಧಿಸಲಾಗಿದ್ದು, ಇದೇ ಮಾದರಿಯನ್ನು ಇಡೀ ಭಾರತದಲ್ಲಿ ಜಾರಿಗೆ ತರಬಹುದು ಎನ್ನಲಾಗುತ್ತಿದೆ. ಇದು ಜಾರಿಯಾದರೆ ಕ್ಯಾನ್ಸರ್ ಮುಕ್ತ ಭಾರತದ ಕನಸಿಗೆ ದೊಡ್ಡ ಬಲ ಸಿಗಲಿದೆ. ಆದರೆ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಕಣಗಳು ಇಲ್ಲ ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿದರೆ ಅಡಿಕೆ ರೈತರು ಬಚಾವ್ ಅಗಲಿದ್ದಾರೆ. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ರೋಗಕ್ಕೆ ಮದ್ದು ಕಂಡು ಹಿಡಿಯದ ಸರ್ಕಾರ!?

10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತದೆ. ಬಹುತೇಕ 80% ರೈತರು ಅಡಿಕೆ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೆ ಅಲ್ಲಿನ ವಹಿವಾಟು ಕೂಡ ಅಡಿಕೆ ಮೇಲೆ ಡಿಪೆಂಡ್ ಆಗಿದೆ. ಆದರೆ ಒಂದು ಕಡೆ ಅಡಿಕೆ ಬ್ಯಾನ್ ಸುದ್ದಿ ಮತ್ತೊಂದು ಕಡೆ ಅಡಿಕೆಗೆ ರೋಗ ವಹಿವಾಟು ಮೇಲೆ ಕರಿ ನೆರಳು ಬೀರಿದೆ.

Categories
ಜಿಲ್ಲಾ ವಾರ್ತೆ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಸಾಗರ

ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ

ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ

ಐಷಾರಾಮಿ ಕಾರು ವೇಗಕ್ಕೆ ಮಹಿಳೆ ಬಲಿ!
– ಮೇಗರವಳ್ಳಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ ಕಾರು

– ಸಾಗರ: ಕಾಗೋಡು ತಿಮ್ಮಪ್ಪ ಕುಸಿದು ಬಿದ್ದು ಅಸ್ವಸ್ಥ: ಚೇತರಿಕೆ
– ತೀರ್ಥಹಳ್ಳಿ: ಅನಾಥಾಶ್ರಮದ ಹೆಸರಿನಲ್ಲಿ ಕಳ್ಳತನ..!?
– ಭದ್ರಾವತಿ: ತಹಶೀಲ್ದಾರ್ ವಿರುದ್ಧ ಡೇಟ್ ನೋಟ್ ಬರೆದು ನದಿಗೆ ಹಾರಿದ ಸಿಬ್ಬಂದಿ!?
– ಶಿವಮೊಗ್ಗ: ಜ್ಯೋತಿಷಿ ಜತೆ ಲವ್: ಓರ್ವನ ಕೊಲೆ ಮಾಡಿದ ಜೋಡಿ ಹಕ್ಕಿ!?

ತೀರ್ಥಹಳ್ಳಿ: ಆಗುಂಬೆಯಿಂದ ಶಿವಮೊಗ್ಗ ರಸ್ತೆ ಇದೀಗ ಸಾವಿನ ರಸ್ತೆಯಾಗಿ ಪರಿಣಮಿಸುತ್ತಿದೆ. ಈಗಾಗಲೇ ಒಂದು ತಿಂಗಳಲ್ಲಿ 5ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಇದೀಗ ರಸ್ತೆ ಬದಿ ನಿಂತಿದ್ದ ಕಾರಿಗೆ ಬಿಎಂಡಬ್ಲ್ಯೂಕಾರು ಡಿಕ್ಕಿಯಾದ ಪರಿಣಾಮ ಕಾರಿನೊಳಗಿದ್ದ ಮಹಿಳೆ ಮೃತಪಟ್ಟ ಘಟನೆ ಮೇಗರವಳ್ಳಿಯಲ್ಲಿ ನಡೆದಿದೆ. ಮೇಗರವಳ್ಳಿಯ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಅರ್ಚಕರಾದ ಅಶೋಕ ಜೋಗಿ ಮತ್ತು ಅವರ ಪತ್ನಿ ಮಲ್ಲಿಕಾ ಅಶೋಕ್ ಜೋಗಿ ಮಂಗಳವಾರ ಬೆಳಿಗ್ಗೆ ತೀವ್ರವಾಗಿ ಗಾಯಗೊಂಡಿದ್ದರು. ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತಿ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ತೀವ್ರವಾಗಿ ತಲೆಗೆ ಗಾಯಗೊಂಡಿದ್ದ ಪತ್ನಿ ಮಲ್ಲಿಕಾ ಜೋಗಿ (42) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಗರ: ಕಾಗೋಡು ತಿಮ್ಮಪ್ಪ ಕುಸಿದು ಬಿದ್ದು ಅಸ್ವಸ್ಥ: ಚೇತರಿಕೆ

ಸಾಗರ: ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಮತ್ತು ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಶ್ರೀಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದ ಸಂದರ್ಭದಲ್ಲಿ, ಹಠಾತ್ತಾನೆ ಕುಸಿದು ಬಿದ್ದು ಅಸ್ವಸ್ಥರಾದ ಘಟನೆ ನಡೆದಿದೆ. ತಕ್ಷಣ ಅವರನ್ನು ಆಟೋ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಇದೀಗ ಚೇತರಿಕೆಯಲ್ಲಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಅನಾಥಾಶ್ರಮದ ಹೆಸರಿನಲ್ಲಿ ಕಳ್ಳತನ..!

ತೀರ್ಥಹಳ್ಳಿ: ಅನಾಥಾಶ್ರಮ ನಡೆಸುತ್ತಿರುವುದಾಗಿ ನಂಬಿಸಿ, ಕೆಲವು ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆದಿರುವ ಕುರಿತು ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣಸವಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭದ್ರಾವತಿ: ತಹಶೀಲ್ದಾರ್ ವಿರುದ್ಧ ಡೇಟ್ ನೋಟ್ ಬರೆದು ನದಿಗೆ ಹಾರಿದ ಸಿಬ್ಬಂದಿ!?

ಭದ್ರಾವತಿ:ಭದ್ರಾವತಿ ತಾಲ್ಲೂಕು ಕಚೇರಿಯ ತಹಶೀಲ್ದಾರ್ ಪರಸಪ್ಪ ವಿರುದ್ಧ ಮಾನಸಿಕ ಕಿರುಕುಳ ಆರೋಪಿಸಿ, ಡೆತ್ ನೋಟ್ ಬರೆದಿಟ್ಟು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ನದಿಗೆ ಹಾರಿದ್ದ ಘಟನೆ ಭದ್ರಾವತಿ ತಾಲ್ಲೂಕಿನಲ್ಲಿ ಆತಂಕ ಮೂಡಿಸಿದೆ. ಅದೃಷ್ಟವಶಾತ್, ಸ್ಥಳೀಯ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಆ ವ್ಯಕ್ತಿಯ ಜೀವ ಉಳಿಯಿತು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ನಿವಾಸಿ ಆರ್.ಜಿ. ಅಭಿಷೇಕ್ (ಪುತ್ರ: ಆರ್.ಎಂ. ಗಂಗಾಧರಪ್ಪ) ಭದ್ರಾವತಿ ತಹಶೀಲ್ದಾರ್ ಅವರಿಂದ ನಿರಂತರ ಮಾನಸಿಕ ಒತ್ತಡ ಹಾಗೂ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಹೇಳಿಕೊಂಡು, ಡೆತ್ ನೋಟ್ ಬರೆದು ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸಿದ್ದಾಗಿ ತಿಳಿದುಬಂದಿದೆ. ಚನ್ನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಶಿವಮೊಗ್ಗ: ಜ್ಯೋತಿಷಿ ಜತೆ ಲವ್: ಓರ್ವನ ಕೊಲೆ ಮಾಡಿದ ಜೋಡಿ ಹಕ್ಕಿ!?

ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಚಾಕು ಇರಿತ ಹಾಗೂ ಕೊಲೆ ಪ್ರಕರಣದ ಹಿನ್ನೆಲೆ ಇದೀಗ ಬಹಿರಂಗವಾಗಿದ್ದು, ಶಿವಮೊಗ್ಗದ ಜ್ಯೋತಿಷಿ ಕಮಲಾಕರ ಭಟ್ ಹಾಗೂ ವಿವಾಹಿತ ಮಹಿಳೆ ಸುಚಿತ್ರಾ ನಡುವಿನ ಅನೈತಿಕ ಸಂಬಂಧದ ಆರೋಪ ಈ ಹಲ್ಲೆಗೆ ಕಾರಣ ಎನ್ನಲಾಗಿದೆ.
ಸಿದ್ದಾಪುರದ ಮಹೇಶ್ ನಾಯ್ ಅವರ ಪತ್ನಿ ಸುಚಿತ್ರಾ ಸುಮಾರು ಆರು ತಿಂಗಳ ಹಿಂದೆ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆ ಬಿಟ್ಟು ತೆರಳಿದ್ದು, ನಂತರ ಶಿವಮೊಗ್ಗದಲ್ಲಿ ಕಮಲಾಕರ ಭಟ್ ಅವರೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯವನ್ನು ಸುಚಿತ್ರಾಳ ಮಗಳು ರಹಸ್ಯವಾಗಿ ತಂದೆಗೆ ಮೊಬೈಲ್ ಸಂದೇಶದ ಮೂಲಕ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.
ಮಗಳು ಕಳುಹಿಸಿದ್ದ ಸಂದೇಶದಲ್ಲಿ ತಾಯಿಯಿಂದ ಹಿಂಸೆ ನಡೆಯುತ್ತಿದೆ ಹಾಗೂ ಅಲ್ಲಿನ ಪರಿಸ್ಥಿತಿ ಅಸುರಕ್ಷಿತವಾಗಿದೆ ಎಂದು ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ. ಈ ಬೆಳವಣಿಗೆಯ ನಂತರ ಮಗಳು ತಂದೆಯ ಮನೆಗೆ ಮರಳಿದ್ದಾಳೆ. ಈ ವಿಚಾರದಿಂದ ಆಕ್ರೋಶಗೊಂಡ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಹಾಗೂ ಇನ್ನಿತರ ಆರೋಪಿಗಳು ಸೇರಿ ರಾತ್ರಿ ವೇಳೆ ಮಹೇಶ್ ನಾಯ್ಕ ನಿವಾಸಕ್ಕೆ ನುಗ್ಗಿ ಚಾಕು ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಲ್ಲಿ ಮಹೇಶ್ ನಾಯ್ಕ್ ಗುರಿಯಾಗಿದ್ದು, ಅವರನ್ನು ರಕ್ಷಿಸಲು ಮುಂದಾದ ಅವರ ಸಹೋದರ ವಸಂತ್ ನಾಯ್ಕ ಮೇಲೆ ಬರ್ಬರವಾಗಿ ಇರಿತ ನಡೆದಿದ್ದು, ವಸಂತ್ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ನೆರೆಯ ಕುಮಾರ್ ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು, ಮಹಿಳೆ ಸುಚಿತ್ರಾ, ಆಕೆಯ ತಂದೆ ಲೋಕನಾಥ್, ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Categories
robbery ಅಪರಾಧ ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಶೃಂಗೇರಿ ಸಾಗರ ಹೊಸನಗರ

ಹೆಲ್ಮೆಟ್ ಕಳ್ಳರಿದ್ದಾರೆ ಎಚ್ಚರ…! ಎಚ್ಚರ…! ಎಚ್ಚರ…!

ಹೆಲ್ಮೆಟ್ ಕಳ್ಳರಿದ್ದಾರೆ ಎಚ್ಚರ…! ಎಚ್ಚರ…! ಎಚ್ಚರ…!
* ಬೈಕ್ ಕೂಡ ಸುರಕ್ಷಿತ ಅಲ್ಲ,..ಮಲೆನಾಡ ಹಲವೆಡೆ ಕಳ್ಳತನ
* ಪಾರ್ಕಿಂಗ್ ಗೆ ಹೆದರುವ ಪರಿಸ್ಥಿತಿ.. ಸಿಸಿಟಿವಿ ಇಲ್ಲ!

 

NAMMUR EXPRESS NEWS
ಮಲೆನಾಡು: ಇತ್ತೀಚೆಗೆ ಹೆಲ್ಮೆಟ್ ಕಳ್ಳತನದ ಪ್ರಕರಣಗಳು ಅಲ್ಲಲ್ಲಿ ಕೇಳಿ ಬರುತ್ತಿವೆ, ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇನ್ನು ಅನೇಕ ಪಟ್ಟಣಗಳಲ್ಲಿ ನಿಲ್ಲಿಸಿದ ಬೈಕ್ ಕೂಡ ಮಂಗ ಮಾಯವಾಗುತ್ತಿದೆ.
ಅನೇಕ ಪ್ರಕರಣದಲ್ಲಿ ಪಾರ್ಕಿಂಗ್ ಜಾಗದಲ್ಲಿ ಬೈಕ್ ಸುರಕ್ಷಿತವಾಗಿದ್ದರೂ, ಹೆಲ್ಮೆಟ್ ಮಾತ್ರ ಕಳ್ಳತನ ಆಗುತ್ತಿದೆ.

ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಕೊಪ್ಪ, ಶೃಂಗೇರಿ ಸೇರಿ ಅನೇಕ ಪಟ್ಟಣಗಳಲ್ಲಿ ಈ ರೀತಿಯ ದೂರು ಕೇಳಿ ಬಂದಿದೆ.
ಬಸ್ ನಿಲ್ದಾಣ, ಮಾರುಕಟ್ಟೆ, ಸರ್ಕಾರಿ ಕಚೇರಿ ಹಾಗೂ ವ್ಯಾಪಾರ ಬೀದಿಗಳಲ್ಲಿ ಪಾರ್ಕ್ ಮಾಡಲಾದ ಬೈಕ್‌ಗಳಿಂದ ಕೆಲವೇ ನಿಮಿಷಗಳಲ್ಲಿ ಹೆಲ್ಮೆಟ್‌ಗಳು ಕಳ್ಳತನವಾಗುತ್ತಿರುವುದು ಕಂಡುಬಂದಿದೆ.
“ಪಾರ್ಕಿಂಗ್‌ನಲ್ಲಿ ಬೈಕ್ ಹಾಗು ಹೆಲ್ಮೆಟ್ ಕಾಪಾಡೋದು ಕಷ್ಟ!” ಎಂದು ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಲ್ಮೆಟ್ ಕಳ್ಳತನದ ಹಾವಳಿ ಹೆಚ್ಚುತ್ತಿರುವುದರಿಂದ, ಪ್ರತೀ ಬಾರಿ ಹೊಸ ಹೆಲ್ಮೆಟ್ ಖರೀದಿಸಲು ಜನ ಸಾವಿರಾರು ರೂ ಹಣ ವ್ಯಯ ಮಾಡಬೇಕಿದೆ. ಒಂದು ಕಡೆ ಸಾರಿಗೆ ಇಲಾಖೆ ಮತ್ತು ಪೊಲೀಸರು ಹೆಲ್ಮೆಟ್ ಧರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದರೆ, ಮತ್ತೊಂದು ಕಡೆ ಹೆಲ್ಮೆಟ್ ಕಳ್ಳರು ಸಾರ್ವಜನಿಕರನ್ನು ಕಂಗೆಡಿಸುತ್ತಿದ್ದಾರೆ. ಪ್ರಮುಖ ಪಟ್ಟಣದ ಪ್ರಮುಖ ಪಾರ್ಕಿಂಗ್ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಬೇಕು. ಪೊಲೀಸರು ಕಳ್ಳತನ ನಿಯಂತ್ರಣಕ್ಕೆ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂಬ ಅಗ್ರಹ ಸಾರ್ವಜನಿಕರಲ್ಲಿ ಆಗ್ರಹ ಕೇಳಿ ಬರುತ್ತಿದೆ.
ಹೆಲ್ಮೆಟ್ ಕಳ್ಳರ ಹಾವಳಿ ಹೆಚ್ಚಾಗಿರುವ ಕಾರಣ, ಪಾರ್ಕಿಂಗ್ ಜಾಗಗಳು ಜನರಿಗೆ ಸುರಕ್ಷಿತ ಸ್ಥಳವಲ್ಲ ಎಂಬ ಭೀತಿ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Categories
Uncategorized ಅಪಘಾತ ಅಪರಾಧ ಮಲ್ನಾಡ್ ಶಿವಮೊಗ್ಗ ಸಾಗರ

ಮಲ್ನಾಡ್ ಟಾಪ್ 3 ನ್ಯೂಸ್

ಮಲ್ನಾಡ್ ಟಾಪ್ 3 ನ್ಯೂಸ್

ಶಿವಮೊಗ್ಗ : ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು, ತಾಯಿ ನೇಣಿಗೆ ಶರಣು..!!
– ಶಿವಮೊಗ್ಗ : ಮನೆಯಲ್ಲಿಯೇ ಮಹಿಳೆಯ ಭೀಕರ ಹತ್ಯೆ!
– ಸಾಗರ: ಮಿನಿ ಬಸ್ ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿ..!!

NAMMUR EXPRESS NEWS
ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಕ್ವಾಟ್ರಸ್‌ನಲ್ಲಿ ನಡೆದ ದಾರುಣ ಘಟನೆ ಮಲೆನಾಡನ್ನು ಬೆಚ್ಚಿಬೀಳಿಸುವಂತಿದೆ. ಸ್ವಂತ ತಾಯಿಯೇ ತನ್ನ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆರನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿ ಪೂರ್ವಿಕಾಳ(12) ತಲೆಗೆ ತಾಯಿ ಶೃತಿ (38) ಮಚ್ಚಿನಿಂದ ಹೊಡೆದು ಕೊಲೆಮಾಡಿದ್ದಾರೆ. ಬಳಿಕ ಮಗಳ ಶವವನ್ನು ಪ್ಯಾನ್ ಕೆಳಗೆ ಎಳೆದು ತಂದು ಅದೇ ಶವದ ಮೇಲೆ ನಿಂತು ಪ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂಬುದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಘಟನೆಯ ಸಮಯದಲ್ಲಿ ಗಂಡ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್ ಕರ್ತವ್ಯದಲ್ಲಿದ್ದು, ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ವಿಷಯ ತಿಳಿದುಬಂದಿದೆ. ಈ ಘಟನೆ ಮೆಗ್ಗಾನ್ ಕ್ವಾಟ್ರಸ್ ಮಾತ್ರವಲ್ಲ, ಸಂಪೂರ್ಣ ಶಿವಮೊಗ್ಗದ ಹೃದಯವನ್ನು ನಡುಗಿಸಿದೆ. ಬದುಕಿನ ಒತ್ತಡ, ಮಾನಸಿಕ ನೋವು ಹೇಗೆ ಜೀವಗಳನ್ನು ಕಸಿದುಕೊಳ್ಳುತ್ತದೆ ಎಂಬುದಕ್ಕೆ ಇದು ಕರುಣಾಜನಕ ಸಾಕ್ಷಿಯಾಗಿದೆ.

– ಶಿವಮೊಗ್ಗ : ಮನೆಯಲ್ಲಿಯೇ ಮಹಿಳೆಯ ಭೀಕರ ಹತ್ಯೆ!

ಶಿವಮೊಗ್ಗ : ತಾಲೂಕು ಕುಂಸಿಯಲ್ಲಿ ಹಿರಿಯ ವಯಸ್ಸಿನ ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಘಟನೆಯಲ್ಲಿ 65 ವರ್ಷದ ವೃದ್ಧೆ ಬಸಮ್ಮ ಎಂಬವರನ್ನ ಇರಿದು ಹತ್ಯೆ ಮಾಡಲಾಗಿದೆ. ಕುನ್ಸಿಯ ರಥಬೀದಿಯಲ್ಲಿನ ಮನೆಯಲ್ಲಿ ಘಟನೆ ನಡೆದಿದೆ. ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಗುರುವಾರ ಇವರ ಪುತ್ರ ಮನೆಗೆ ಬಂದ ಸಂದರ್ಭದಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದೆ.

– ಸಾಗರ: ಮಿನಿ ಬಸ್ ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿ..!!

ಸಾಗರ: ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕು, ಆನಂದಪುರ ಬಳಿ ಇರುವ ಗುತ್ಯಮ್ಮ ದೇವಸ್ಥಾನದ ಮುಂಭಾಗ ಹೊಂದಿದ್ದ ಮಿನಿ ಬಸ್ ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿಯಾದ ಬಗ್ಗೆ ವರದಿಯಾಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಹೆಚ್ಚು ಪೆಟ್ಟಾಗಿಲ್ಲ. ಮಿನಿ ಬಸ್ ಡಿಕ್ಕಿ
ತರೀಕೆರೆಯಿಂದ ಸಿಗಂದೂರು ಪ್ರವಾಸಕ್ಕೆ ತೆರಳುತ್ತಿದ್ದ ಮಿನಿ ಬಸ್, ಶಿವಮೊಗ್ಗದಿಂದ ಸಾಗರ ಹೋಗುತ್ತಿದ್ದ ಗಜಾನನ ಸಾರಿಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ನ ಮುಂಭಾಗ ಜಖಂಗೊಡಿದೆ. ಘಟನೆಯಲ್ಲಿ ಯಾರಿಗೂ ಹೆಚ್ಚು ಪೆಟ್ಟಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಬಚಾವ್ ಆಗಿದ್ದಾರೆ.