ವ್ಯಕ್ತಿಯ ಶ್ವಾಸಕೋಶದಲ್ಲಿತ್ತು ಜಿರಳೆ!
– 4 ಸೆಂ.ಮೀ. ಉದ್ದ ಜಿರಳೆ ಹೊರತೆಗೆದ ಕೇರಳದ ವೈದ್ಯರು!
– ಜಿರಳೆ ತೆಗೆಯಲು 8 ಗಂಟೆ ಆಪರೇಷನ್.. ಏನಿದು ಕೇಸ್?
NAMMUR EXPRESS NEWS
ಕೊಚ್ಚಿ: ಕೇರಳದಲ್ಲಿ ವ್ಯಕ್ತಿಯೋರ್ವನ ಶ್ವಾಸಕೋಶದಲ್ಲಿದ್ದ 4 ಸೆಂಟಿ ಮೀಟರ್ ಉದ್ದದ ಜಿರಳೆಯನ್ನು ಹೊರತೆಗೆದ ವೈದ್ಯರು ರೋಗಿಯ ಜೀವ ಉಳಿಸಿದ್ದಾರೆ. ಕೊಚ್ಚಿಯ ಅಮೃತಾ ಆಸ್ಪತ್ರೆಯ ವೈದ್ಯರು ರೋಗಿಯ ಶ್ವಾಸಕೋಶ ಸೇರಿದ್ದ ಜಿರಳೆಯನ್ನು ಹೊರತೆಗೆಯಲು ಶತತ 8 ಗಂಟೆಗಳ ಕಾಲ ಶ್ರಮಿಸಿದ್ದಾರೆ. ಕೇರಳದ 55 ವರ್ಷದ ವ್ಯಕ್ತಿಯೊಬ್ಬರಿಗೆ ಉಸಿರಾಡುವಾಗ ಉಸಿರು ಕಟ್ಟಿದಂತಹ ಅನುಭವವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಪರೀಕ್ಷಿಸಿಕೊಂಡಿದ್ದಾರೆ. ಡಾ ಟಿಂಕು ಜೋಸೆಫ್ ಅವರ ನೇತೃತ್ವದ ಶ್ವಾಸಕೋಶ ತಜ್ಞರು ಈ 55 ವರ್ಷದ ವ್ಯಕ್ತಿಗೆ ಎಕ್ಸರೇ ಹಾಗೂ ಸ್ಕ್ಯಾನಿಂಗ್ ಮಾಡಿದ ವೇಳೆ ಅವರ ಶ್ವಾಸಕೋಶದಲ್ಲಿ ಜಿರಳೆ ಇರುವುದು ಕಾಣಿಸಿದೆ.
ನಂತರ ಜಿರಳೆ ಹೊರಬರುವುದಕ್ಕಾಗಿ ಚಿಕಿತ್ಸೆ ನೀಡಲು ಆರಂಭಿಸಿದಾಗ ಜಿರಳೆ ಅಲ್ಲಿಯೇ ವಿಭಜನೆಯಾಗಿದ್ದು, ಇದು ರೋಗಿಯ ಆರೋಗ್ಯವನ್ನು ಮತ್ತಷ್ಟು ಕೆಡಿಸಿತ್ತು. ಪರಿಣಾಮ ಚಿಕಿತ್ಸೆ ಮತ್ತಷ್ಟು ಕಠಿಣವಾದರೂ ಛಲ ಬಿಡದ ವೈದ್ಯರು ಸತತ ಎಂಟು ಗಂಟೆಗಳ ಕಾಲ ನಿರಂತರ ಪ್ರಯತ್ನ ಮಾಡಿ ವ್ಯಕ್ತಿಯ ಶ್ವಾಸಕೋಶದಲ್ಲಿದ್ದ ಜಿರಳೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಈ ರೋಗಿಗೆ ಈ ಹಿಂದೆಯೂ ಉಸಿರಾಟದ ಸಮಸ್ಯೆ ಇದಿದ್ದರಿಂದ ಶಸ್ತ್ರಚಿಕಿತ್ಸೆ ಸಂಪೂರ್ಣ ಸಂಕೀರ್ಣವಾಗಿತ್ತು.
ಆಸ್ಪತ್ರೆಯ ಚಿಕಿತ್ಸೆ ವೇಳೆ ಜಿರಳೆ ಸೇರಿತ್ತು!
ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಈ ರೋಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಕುತ್ತಿಗೆ ಮೂಲಕ ಉಸಿರಾಟದ ಕೊಳವೆಯೊಂದನ್ನು ಅವರಿಗೆ ಅಳವಡಿಸಲಾಗಿತ್ತು. ಅದರ ಮೂಲಕ ಈ ಜಿರಳೆ ಅವರ ಶ್ವಾಸಕೊಶವನ್ನು ಪ್ರವೇಶಿಸಿತ್ತು ಎಂದು ವೈದ್ಯರು ಹೇಳಿದ್ದಾರೆ. ಪ್ರಸ್ತುತ ಈ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.