ತೀರ್ಥಹಳ್ಳಿಯ ದೊಡ್ಡ ಸರ್ಕಾರಿ ಕಟ್ಟಡ ಉದ್ಘಾಟನೆಗೆ ಸಿದ್ಧ!
– 3 ಅಂತಸ್ತಿನ ತಾಲೂಕು ಪಂಚಾಯತ್ ನೂತನ ಕಟ್ಟಡ
– ಮಾ.4 ಸೋಮವಾರ ಉದ್ಘಾಟನೆ: ಏನಿದು ವಿಶೇಷ?
– ಎಸಿಸಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯಿಂದ ಉತ್ತಮ ಕಾಮಗಾರಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅತೀ ದೊಡ್ಡ ಸರ್ಕಾರಿ ಕಟ್ಟಡ ನೂತನ ತಾಲೂಕು ಪಂಚಾಯತ್ ಮಾ.4ರ ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಮಾ.4ಕ್ಕೆ ಸೋಮವಾರದಂದು ಮಧ್ಯಾಹ್ನ 3:00ಕ್ಕೆ ಗ್ರಾಮೀಣಾಭಿವೃದ್ಧಿ ಭವನ(ತಾಲ್ಲೂಕು ಪಂಚಾಯತ್ ಕಟ್ಟಡ ) ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿದೆ. ಶಾಸಕರಾದ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮೀಣಾ ಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಗ್ರಾಮೀಣಾಭಿವೃದ್ಧಿ ಭವನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಈಗಾಗಲೇ ಅಂತಿಮ ಸಿದ್ಧತೆ ನಡೆದಿದೆ. ತೀರ್ಥಹಳ್ಳಿಯ ಪ್ರಸಿದ್ಧ ಗುತ್ತಿಗೆ ಸಂಸ್ಥೆ ಎಸಿಸಿ ಕನ್ಸ್ಟ್ರಕ್ಷನ್ಸ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಈ ಕಾಮಗಾರಿ ಮಾಡಿದೆ. ಮೂರು ಅಂತಸ್ತಿನ ಈ ಕಟ್ಟಡದ ಮೇಲೆ ದೊಡ್ಡ ಗಡಿಯಾರ ಇರಲಿದ್ದು, ಗಂಟೆಗೊಮ್ಮೆ ಹೊಡೆದುಕೊಳ್ಳಲಿದೆ.
ಏನೇನಿದೆ ಈ ಕಟ್ಟಡದಲ್ಲಿ…?
ರಾಜ್ಯದಲ್ಲೇ ಮಾದರಿಯಂತಿರುವ ಹಾಗೂ ತೀರ್ಥಹಳ್ಳಿಯ ಹೆಗ್ಗುರುತು ಆಗಲಿರುವ ಈ ಗ್ರಾಮೀಣಾಭಿವೃದ್ಧಿ ಭವನದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ, ತಾಲೂಕು ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅಕ್ಷರ ದಾಸೋಹ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಹಾಗೂ ಕೈಗಾರಿಕಾ ಇಲಾಖೆ ಒಂದೇ ಸೂರಿನಡಿ ಸೇವೆ ಸಲ್ಲಿಸಲಿವೆ.