ಶಾಲೆಗೆ ಬಂದರು ರೋಬೋಟ್ ಟೀಚರ್!
– ದೇಶದ ಮೊದಲ ರೋಬೊ ಶಿಕ್ಷಕಿ ಎಲ್ಲರ ಆಕರ್ಷಣೆ
– ಕೇರಳದ ಶಾಲೆಯಲ್ಲಿ ದೇಶದ ಮೊದಲ ಪ್ರಯೋಗ
NAMMUR EXPRESS NEWS
ತಿರುವನಂತಪುರಂ: ಇತ್ತೀಚೆಗಷ್ಟೇ ಭಾರತದ ಸುದ್ದಿ ವಾಹಿನಿಗಳಿಗೆ ರೋಬೋ ನಿರೂಪಕಿಯರು ಎಂಟ್ರಿಕೊಟ್ಟಿದ್ದರು. ಇದೀಗ ದೇಶದ ಮೊದಲ ಎಐ (ಕೃತಕ ಬುದ್ಧಿಮತ್ತೆ) ಶಿಕ್ಷಕಿ ಕೇರಳದ ತಿರುವನಂತಪುರಂ ಶಾಲೆಗೆ ಕಾಲಿಟ್ಟಿದ್ದಾರೆ. ಮೇಕರ್ಲ್ಯಾಬ್ ಎಜುಟೆಕ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಐಆರ್ಐಎಸ್ (ಐರಿಸ್), ಕೇರಳದ ಪ್ರಪ್ರಥಮ, ಅಷ್ಟೇ ಏಕೆ ಇಡೀ ದೇಶದ ಮೊದಲ ಮಾನವರೂಪಿ (ಹೂಮನಾಯ್ಸ್) ರೋಬೋ ಶಿಕ್ಷಕಿ ಎಂಬ ದಾಖಲೆ ಬರೆದಿದೆ.
ಬಹುಭಾಷಾ ಶಿಕ್ಷಕಿ:
ಫೆಬ್ರವರಿಯಲ್ಲಿ ಅನಾವರಣಗೊಳಿಸಲಾದ ಐರಿಸ್ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇನ್ಸ್ಟಾಗ್ರಾಮ್ನಲ್ಲಿ ಮೇಕರ್ಲ್ಯಾಬ್ ಹಂಚಿಕೊಂಡಿರುವ ವಿಡಿಯೋ, ಈ ಬಹುಭಾಷಾ ಎಐ ಶಿಕ್ಷಕಿಯ ಸಾಮರ್ಥ್ಯಗಳನ್ನು ಪ್ರಸ್ತುತಪಡಿಸುತ್ತದೆ. ನಾನಾ ವಿಷಯಗಳ ಬಗ್ಗೆ ಕೇಳುವ ತುಂಬಾ ಸಂಕೀರ್ಣವಾದ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ವೈಯಕ್ತಿಕ ಧ್ವನಿ ನೆರವನ್ನು ಒದಗಿಸುವ ಇದು ಪರಸ್ಪರ ಸಂವಹನದ ಕಲಿಕಾ ಅನುಭವವನ್ನು ಕೂಡ ಕೊಡುತ್ತದೆ. ತರಗತಿಯಲ್ಲಿ ಓಡಾಟದ ಅನುಕೂಲಕ್ಕಾಗಿ ಐರಿಸ್ಗೆ ಚಕ್ರವನ್ನೂ ಅಳವಡಿಸಲಾಗಿದೆ.
ಜಾಲತಾಣದಲ್ಲಿ ವೈರಲ್!:
ಐರಿಸ್ ಎಐ ಶಿಕ್ಷಕಿಯ ಸಾಮರ್ಥ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೃತಕ ಬುದ್ಧಿಮತ್ತೆ ಕಾಲದಲ್ಲಿ ಕೇರಳಕ್ಕೆ ಕಾಲಿಟ್ಟಿರುವ ಹೊಸ ಟೀಚರ್ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವುದು ನಿಶ್ಚಿತ ಅಂತ ಶಿಕ್ಷಣ ತಜ್ಞರು ಭವಿಷ್ಯ ನುಡಿದಿದ್ದಾರೆ. ಸಾಕ್ಷರತೆಯಲ್ಲಿ ಮುಂದಿರುವ ಕೇರಳಕ್ಕೆ ಇಂಥದ್ದೊಂದು ತಂತ್ರಜ್ಞಾನ ಬೇಕಿತ್ತೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಹೆಮ್ಮೆಯ ಶಾಲೆ :
ಕಡುವಾಯಿಲ್ ಥಂಗಲ್ ನಡೆಸುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆ ಈ ಆವಿಷ್ಕಾರಕ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಸಂಸ್ಥೆಯಾಗಿದೆ. ಐರಿಸ್, ಅಟಲ್ ಟಿಂಕರಿಂಗ್ ಯೋಜನೆಯ ಭಾಗವಾಗಿದೆ. ನೀತಿ ಆಯೋಗ 2021ರಲ್ಲಿ ಆರಂಭಿಸಿದ ಈ ಉಪಕ್ರಮವು ಶಾಲೆಗಳಲ್ಲಿ ಪತ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇತ್ತೀಚಿನ ಸೃಷ್ಟಿಯಾದ ಎಐ ಟೀಚರ್ ರೋಬೋ ಐರಿಸ್ ಅನ್ನು ಅನಾವರಣಗೊಳಿಸಿದ್ದು ಹೆಮ್ಮೆ ಮೂಡಿಸಿದೆ ಎಂದು ಮೇಕರ್ಲ್ಯಾಬ್ ಎಜುಟೆಕ್ ಹೇಳಿದೆ. ಅದು ಶಿಕ್ಷಣ ಕ್ಷೇತ್ರದ ನಮಗೆ ಗೊತ್ತಿರುವ ಕಲಿಕೆಯ ವಲಯವನ್ನು ಮರುವ್ಯಾಖ್ಯಾನಿಸಲು ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ. ಈ ಬೆಳವಣಿಗೆಯು ಕೇರಳದ ಶಿಕ್ಷಣ ರಂಗದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ತರಗತಿ ಕೋಣೆಗಳಲ್ಲಿ ಅದು ಬೋಧಕರಿಗೆ ಬೆಂಬಲದ ಪಾತ್ರವನ್ನು ನಿರ್ವಹಿಸಲಿದೆ.