ವರ್ಷದ ಮೊದಲ ಮಳೆ!
ಕಾಫಿ ನಾಡಲ್ಲಿ ತಂಪೆರೆದ ಮಳೆ… ತಂಪಾಯಿತು ಇಳೆ
– ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣನ ಹರ್ಷ
– ಚಿಕ್ಕಮಗಳೂರಲ್ಲಿ ಭರ್ಜರಿ ಮಳೆ: 3 ಜಿಲ್ಲೆಗಳಿಗೆ ಅಲರ್ಟ್
NAMMUR EXPRESS NEWS
ಚಿಕ್ಕಮಗಳೂರು: ಕಾದ ಕಾವಲಿಯಂತಾಗಿದ್ದ ಭೂಮಿಗೆ ಮಳೆಯು ತಂಪೆರೆಯುತ್ತಿದೆ. ಕಾಫಿನಾಡು ಚಿಕ್ಕಮಗಳೂರಲ್ಲಿ ಗುರುವಾರ ವರ್ಷದ ಮೊದಲ ಭರ್ಜರಿ ಮಳೆ ಸುರಿದಿದೆ. ಸುಮಾರು ಒಂದೇ ಗಂಟೆ ಕಾಲ ಸುರಿದ ಮಳೆಗೆ ಹಳ್ಳಿಗರು, ಬೆಳೆಗಾರರು ಸಂತಸಗೊಂಡಿದ್ದಾರೆ. ಚಿಕ್ಕಮಗಳೂರಿನ ಮುತ್ತೋಡಿ ತಪ್ಪಲಿನ ಜಾಗರ ಹೋಬಳಿಯ ಕೊಳಗಾವೆ ಗ್ರಾಮದಲ್ಲಿ ಭಾರೀ ಮಳೆಯಾಗಿದೆ. ಕೊಳಗಾಮೆ ಜತೆಗೆ ಮೇಲಿನಹುಲುವತ್ತಿ ಭಾಗದ ಸುತ್ತಮುತ್ತ 38.5 ಮಿ.ಮೀ ಮಳೆ ಸುರಿದಿದೆ. ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಇನ್ನೂ ಕೊಡಗಿನ ವಿರಾಜಪೇಟೆ ತಾಲೂಕಿನ ಕಾಕೋಟುಪರಂಬುನಲ್ಲಿ 3.5 ಮಿ.ಮೀ ಮಳೆಯಾಗಿದೆ.
ದಕ್ಷಿಣ ಒಳನಾಡಲ್ಲಿ ಮಳೆಯ ಸಿಂಚನ
ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ರಾಮನಗರ, ಬೆಂಗಳೂರು ನಗರ ಮತ್ತು ಮಲೆನಾಡಿನ ಹಾಸನ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಒಳನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ತಾಪಮಾನವು ದುಪ್ಪಟ್ಟಾಗಲಿದೆ. ಶಾಖದ ತರಂಗ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿ.ಸೆ ಹೆಚ್ಚಾಗಲಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ.