Categories
ಕರಾವಳಿ ರಾಜ್ಯ ಹವಾಮಾನ ಸುದ್ದಿ

ರಾಜ್ಯಾದ್ಯಂತ 5 ದಿನ ಬಿರುಗಾಳಿ ಮಳೆ!

ರಾಜ್ಯಾದ್ಯಂತ 5 ದಿನ ಬಿರುಗಾಳಿ ಮಳೆ!
– ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ
– ಎಲ್ಲೆಲ್ಲಿ ಎಷ್ಟು ಮಳೆ? ಜನರಿಗೆ ಎಚ್ಚರಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಗುಡುಗು-ಮಿಂಚಿನ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣ, ಮೇ 14 ರಿಂದ ಮಳೆಯ ಸಿಂಚನ ಆಗಲಿದೆ. ಇಂದಿನಿಂದ ಮುಂದಿನ ಐದು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಎಚ್ಚರಿಕೆ ರವಾನಿಸಿದೆ.

ಹವಾಮಾನ ತಜ್ಞರ ಪ್ರಕಾರ, ಈ ಸುಳಿಗಾಳಿಯ ಪ್ರಭಾವದಿಂದಾಗಿ ಮುಂದಿನ 48 ಗಂಟೆಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತ ಉಂಟಾಗುವ ನಿರೀಕ್ಷೆಯಿದೆ. ಈ ವ್ಯವಸ್ಥೆಯು ತೇವಾಂಶ ಭರಿತ ಮಾರುತಗಳನ್ನು ಭೂಭಾಗದತ್ತ ತಳ್ಳುವುದರಿಂದ, ಕರ್ನಾಟಕದ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಹವಾಮಾನ ಸಂಪೂರ್ಣವಾಗಿ ಬದಲಾಗಲಿದ್ದು, 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡು: ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 14ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಇದೇ ಅವಧಿಯಲ್ಲಿ ದಕ್ಷಿಣ ಒಳನಾಡಿನ ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿಯೂ ನಿರಂತರವಾಗಿ ಗುಡುಗು ಸಹಿತ ಮಳೆಯಾಗಲಿದ್ದು, ತಾಪಮಾನದಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ.

ಉತ್ತರ ಒಳನಾಡು: ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಹಾವೇರಿ, ಗದಗ, ಧಾರವಾಡ ಮತ್ತು ಬೆಳಗಾವಿ ಭಾಗಗಳಲ್ಲಿ ಹವಾಮಾನ ವೈಪರೀತ್ಯದ ಪ್ರಭಾವ ಹೆಚ್ಚಿರಲಿದ್ದು, ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇದರ ಜೊತೆಗೆ, ಮೇ 14 ರಂದು ಕಲಬುರಗಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ಹಾಗೂ ಸುತ್ತಮುತ್ತ: ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಿರಲಿದೆ. ಆರಂಭಿಕ ದಿನಗಳಲ್ಲಿ ಈ ಭಾಗಗಳಲ್ಲಿ ಬಹುತೇಕ ಮೋಡಕವಿದ ವಾತಾವರಣ ಮುಂದುವರೆಯಲಿದ್ದು, ಮೇ 14 ರಿಂದ ಸಾಧಾರಣ ಮಳೆಯ ಸಿಂಚನವಾಗುವ ನಿರೀಕ್ಷೆಯಿದೆ.

Categories
ಬೆಂಗಳೂರು ಮಲ್ನಾಡ್ ರಾಜ್ಯ ಹವಾಮಾನ ಸುದ್ದಿ

ಮೇ 9ರವರೆಗೆ ಮಳೆ ಸಾಧ್ಯತೆ..!

ಮೇ 9ರವರೆಗೆ ಮಳೆ ಸಾಧ್ಯತೆ..!
– ರಾಜ್ಯದಲ್ಲಿ ಹೆಚ್ಚಿದ ತಾಪಮಾನ: ಸುಡು ಬಿಸಿಲು
– ಗುಡುಗು ಮಿಂಚು ಸಮೇತ ಮಳೆ ಎಚ್ಚರಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ರಾಜ್ಯಾದ್ಯಂತ ತಾಪಮಾನ ಹೆಚ್ಚಳವಾಗಿರುವ ಬೆನ್ನಲ್ಲೇ ಮಳೆಯ ಸಾಧ್ಯತೆ ಕೂಡ ಹೆಚ್ಚಾಗಲಿದೆ. ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮೇ ಮೊದಲ ವಾರದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಅಧಿಕವಾಗಲಿದ್ದು, ಮತ್ತೆ ಕೆಲವೆಡೆ ಮಳೆಯೊಂದಿಗೆ ಗಾಳಿ ಮಿಂಚು ಕೂಡ ಎದುರಾಗುವ ಲಕ್ಷಣಗಳಿವೆ. ಈ ಹಿನ್ನೆಲೆಯಲ್ಲಿ ರೈತರು ಮತ್ತು ಸಾರ್ವಜನಿಕರು ಜಾಗೃತರಾಗಿರಬೇಕೆಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

ಇನ್ನು ಉತ್ತರ ಕರ್ನಾಟಕದಲ್ಲಿ ಮೊದಲ ಎರಡು ದಿನ ಮಳೆಯ ಪ್ರಮಾಣ ಕಡಿಮೆ ಇದ್ದು, ಬಿಸಿಲಿನ ತೀವ್ರತೆ ಎಂದಿನಂತೆ ಮುಂದುವರಿಯುತ್ತದೆ ಎನ್ನುವ ಮಾಹಿತಿ ಲಭಿಸಿದೆ. ಮೇ 5ರ ಮಂಗಳವಾರದ ನಂತರ ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದೊಂದಿಗೆ ಮಳೆ ಚಟುವಟಿಕೆ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ಪರಿಣಾಮವಾಗಿ ಬಿಸಿಲಿನ ತೀವ್ರತೆ ಕಡಿಮೆಗೊಳ್ಳಲಿದೆ. ಒಟ್ಟಾರೆ ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಮಳೆಯ ಜೊತೆಗೆ ಒಣಹವೆ ಮಿಶ್ರಿತವಾಗಲಿದ್ದು, ಗುಡುಗು ಮತ್ತು ಮಿಂಚಿನ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.

Categories
ರಾಜ್ಯ ಹವಾಮಾನ ಸುದ್ದಿ

ಮೇ 25ರಂದು ಮುಂಗಾರಿನ ಆಗಮನ..!

ಮೇ 25ರಂದು ಮುಂಗಾರಿನ ಆಗಮನ..!
– ಈ ವರ್ಷ ಭಾರೀ ಮಳೆ ನಿರೀಕ್ಷೆ: ವರದಿ ಏನು..?
– ಮೇ ಮೊದಲ ವಾರದಲ್ಲೇ ಮಳೆ ಸಾಧ್ಯತೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೇರಳ: ಕಳೆದ ವರ್ಷದಂತೆ ಈ ಬಾರಿಯೂ ಮುಂಗಾರು ಮಳೆ ಅವಧಿಗೂ ಮೊದಲೇ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನೈರುತ್ಯ ಮುಂಗಾರು ಮಾರುತಗಳು ಕೇರಳ ಕರಾವಳಿಗೆ ಜೂನ್ ಒಂದಕ್ಕೆ ಆಗಮಿಸುವುದು ವಾಡಿಕೆ. ಆದರೆ, ಈ ಬಾರಿ ಮೇ ತಿಂಗಳ ಅಂತ್ಯದಲ್ಲಿ ಅಂದರೆ 25ನೇ ತಾರೀಖಿನ ಸುಮಾರಿಗೆ ಇದರ ಆಗಮನವಾಗುವ ನಿರೀಕ್ಷೆ ಇದೆ ಎಂದು ವಿದೇಶಿ ಹವಾಮಾನ ಮುನ್ಸೂಚನಾ ಸಂಸ್ಥೆಗಳು ವರದಿ ಮಾಡಿವೆ.

ಪ್ರಬಲ ಮುಂಗಾರು ಮಾರುತಗಳು ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ರೂಪುಗೊಳ್ಳುವುದರಿಂದ ಕೇರಳ ರಾಜ್ಯ ಮತ್ತು ತಮಿಳುನಾಡಿನ ದಕ್ಷಿಣ ಭಾಗಗಳಿಗೆ ಹೆಚ್ಚಿನ ತೇವಾಂಶ ಉಂಟಾಗಲಿದೆ ಎನ್ನುವ ಮಾಹಿತಿ ಲಭಿಸಿದೆ.‌ ಇದರ ಪರಿಣಾಮವಾಗಿ ಮುಂಗಾರಿನ ಕೇರಳ ಪ್ರವೇಶ ಮೇ 25ರ ವೇಳೆಗಾಗಲೇ ನಡೆಯುವ ಅವಕಾಶವಿದೆ ಎಂದು ಇಸಿಎಂಡಬ್ಲ್ಯೂಎಫ್ ಹವಾಮಾನ ಮುನ್ಸೂಚನೆ ವರದಿಯನ್ನು ಪ್ರಕಟಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಎಲ್ ನಿನೊ ಅಥವಾ ಸೂಪರ್ ಎಲ್ ನಿನೊ ಪ್ರಭಾವದಿಂದಾಗಿ ಈ ವರ್ಷ ಮುಂಗಾರಿನ ಅವಧಿಯಲ್ಲಿ ಶೇಕಡ 92ರಷ್ಟು ಸರಾಸರಿ ಮಳೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಸಹ ಅಭಿಪ್ರಾಯ ವ್ಯಕ್ತಪಡಿಸಿದೆ.

ಏಪ್ರಿಲ್ 13ರ ಮುನ್ನೋಟದ ಪ್ರಕಾರ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ಎಲ್ ನಿನೊ ಶೇಕಡ 61ರಷ್ಟು ಎದುರಾಗುವ ಸಾಧ್ಯತೆಗಳಿವೆ. ಕಳೆದ ವರ್ಷ ಅಂದರೆ 2025ರಲ್ಲಿ ಕೂಡ ಇದೇ ತೆರನಾಗಿ ಮುಂಗಾರು ಮಾರುತಗಳ ಆಗಮನದ ಕುರಿತು ಮುನ್ಸೂಚನಾ ವರದಿ ಪ್ರಕಟವಾಗಿತ್ತು. ಆದರೆ, ಹೇಳಿದ್ದಕ್ಕಿಂತ ಇನ್ನೂ ಮುಂಚಿತವಾಗಿಯೇ ಆಗಮನವಾಯಿತು. ಈ ವರ್ಷವೂ ಕೂಡ ಅದೇ ರೀತಿಯಾಗುವ ಸಾಧ್ಯತೆ ಇದೆ ಎಂದು ಮೌಸಮ್ ತಕ್ ನ ಸಂಸ್ಥಾಪಕರು ಹಾಗೂ ಹೆಸರಾಂತ ಹವಾಮಾನ ತಜ್ಞರಾದ ದೇವೇಂದ್ರ ತ್ರಿಪಾಠಿಯವರು ತಿಳಿಸಿದ್ದಾರೆ.

Categories
ರಾಜ್ಯ ಶಿವಮೊಗ್ಗ ಹವಾಮಾನ ಸುದ್ದಿ

ಇನ್ನು ಐದು ದಿನ ಮಳೆ ಸಾಧ್ಯತೆ..!

ಇನ್ನು ಐದು ದಿನ ಮಳೆ ಸಾಧ್ಯತೆ..!
– ರಾಜ್ಯದಲ್ಲಿ ಹೆಚ್ಚಾದ ಬಿಸಿಲಿನ ತೀವ್ರತೆ
– ಮಲೆನಾಡು, ಕರಾವಳಿ ಸೇರಿ ಎಲ್ಲೆಡೆ ಮಳೆ ಅಲರ್ಟ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಏ.24ರವರೆಗೆ ಐದು ದಿನಗಳ ಕಾಲ ಭಾರೀ ಮಳೆ ಆಗಲಿದೆ. ಈಗಾಗಲೇ ಒಂದು ವಾರದಿಂದ ಎಲ್ಲಾ ಕಡೆ ಮಳೆ ಆಗುತ್ತಿದೆ. ಉತ್ತರ ಒಳ ನಾಡಿನ ಭಾಗಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ,ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಮಳೆ ಆಗಲಿದೆ.

ದಕ್ಷಿಣ ಒಳನಾಡಿನ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಇನ್ನು ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು ಗುಡುಗು ಮತ್ತು ಮಳೆಯ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆಯು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ.‌

Categories
ಕರಾವಳಿ ಮಾಹಿತಿ ಸುದ್ದಿ ರಾಜ್ಯ ಹವಾಮಾನ ಸುದ್ದಿ

ಅಯ್ಯೋ…ಹೆಚ್ಚಾಗಲಿದೆ ಭಾರೀ ಬಿಸಿಲು!

ಅಯ್ಯೋ…ಹೆಚ್ಚಾಗಲಿದೆ ಭಾರೀ ಬಿಸಿಲು!
– ರಾಜ್ಯದಲ್ಲಿ ಉಷ್ಣ ಅಲೆ ತೀವ್ರ: ಆರೋಗ್ಯ ಇಲಾಖೆಯ ಎಚ್ಚರಿಕೆ
– 2 ದಿನಗಳಲ್ಲಿ ಭಾರೀ ಬಿಸಿಲು ಮತ್ತಷ್ಟು ಉಲ್ಬಣ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಭಾರೀ ಬಿಸಿಲು ಜನರನ್ನು ಕಾಡುತ್ತಿದೆ. ಮನೆಯಿಂದ ಹೊರ ಹೋಗಲು ಕೂಡ ಜನರಿಗೆ ಕಷ್ಟವಾಗುತ್ತಿದೆ. ಬೇಸಿಗೆಯ ತಾಪಮಾನ ದಿನ ಕಳೆದಂತೆ ಅಧಿಕಗೊಳ್ಳುತ್ತಿದ್ದು, ಕರ್ನಾಟಕದಲ್ಲಿ ಉಷ್ಣ ಅಲೆ ತೀವ್ರಗೊಂಡಿದೆ ಎನ್ನುವ ವರದಿ ಬಂದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಳವಾಗಲಿದ್ದು, ಮುಂದಿನ ಎರಡು ದಿನಗಳಲ್ಲಿ ಅದು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಭಾಗಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಷ್ಣ ಅಲೆ ತೀವ್ರವಾಗಿದ್ದು, 37 ಡಿಗ್ರಿ ಸೆಲ್ಸಿಯಸ್ ನಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಕಲ್ಯಾಣ ಕರ್ನಾಟಕದ ಭಾಗಗಳಾದ ಕಲಬುರ್ಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹಿಟ್ ವೇವ್ ಅಲರ್ಟ್ ಅನ್ನು ಘೋಷಿಸಲಾಗಿದೆ. ಹವಾಮಾನ ಇಲಾಖೆಯು ತಿಳಿಸಿದಂತೆ ಕರಾವಳಿ ಭಾಗದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೂ ಕೂಡ, ಬಿಸಿಲಿನ ತೀವ್ರತೆ ಮಾತ್ರ ಕಡಿಮೆಯಾಗುವ ಲಕ್ಷಣಗಳು ಇಲ್ಲ ಎನ್ನುವುದಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಬಳ್ಳಾರಿ, ರಾಯಚೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇನ್ನು ದಕ್ಷಿಣ ಒಳನಾಡಾದ ಮೈಸೂರು, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭಿಸಿದೆ.

ಜನ ಏನೇನು ಮಾಡಬೇಕು..?

ಆರೋಗ್ಯ ಇಲಾಖೆಯು ಕೂಡ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದ್ದು, ಬೆಳಿಗ್ಗೆ 10:00ಗಂಟೆಯಿಂದ ಸಂಜೆ 5:00ಗಂಟೆಯವರೆಗೆ ಅನವಶ್ಯಕವಾಗಿ ಹೊರಗಡೆ ತಿರುಗಾಡುವುದನ್ನು ನಿಯಂತ್ರಿಸಬೇಕು, ಮಧ್ಯಾಹ್ನ 12:೦೦ಗಂಟೆಯಿಂದ ಸಂಜೆ 4:೦0ಗಂಟೆಯವರೆಗೆ ನೇರವಾಗಿ ಸೂರ್ಯನ ಬೆಳಕು ಬೀಳುವ ಪ್ರದೇಶದಿಂದ ದೂರವಿರಬೇಕು, ಆದಷ್ಟು ನೀರು, ಎಳನೀರು, ಮಜ್ಜಿಗೆ ಹಣ್ಣಿನ ರಸವನ್ನು ಕುಡಿಯುವುದು ಉತ್ತಮ. ತಿಳಿ ಬಣ್ಣದ ಮತ್ತು ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಧರಿಸುವುದು, ಅನಿವಾರ್ಯವಾಗಿ ಹೊರಗಡೆ ಹೋಗುವ ಸಂದರ್ಭ ಒದಗಿಬಂದಲ್ಲಿ ಛತ್ರಿ ಅಥವಾ ಟೋಪಿಯನ್ನು ಬಳಸುವುದು ಒಳ್ಳೆಯದು. ಕಾಫಿ,ಟೀ ಮತ್ತು ಹೆಚ್ಚು ಸಕ್ಕರೆಯನ್ನು ಬಳಸಿದ ಪಾನೀಯಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಒಳಿತೆಂದು ತಿಳಿಸಿದೆ.

ಅರೋಗ್ಯ ಬಗ್ಗೆ ಎಚ್ಚರ ಎಚ್ಚರ

ಅತಿ ಹೆಚ್ಚು ಸಕ್ಕರೆಯನ್ನು ಬಳಸಿದ ಪಾನೀಯಗಳನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಕೊರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಸಾರ್ವಜನಿಕರು ಬೇಸಿಗೆ ಸಂದರ್ಭದಲ್ಲಿ ತಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ನಿಗಾ ವಹಿಸಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Categories
ಕರಾವಳಿ ಬೆಂಗಳೂರು ಮಲ್ನಾಡ್ ಮಾಹಿತಿ ಸುದ್ದಿ ರಾಜ್ಯ ಹವಾಮಾನ ಸುದ್ದಿ

ಮಳೆ ಕಡಿಮೆ.. ಬಿಸಿಲಿನ ತಾಪ ಹೆಚ್ಚು!

ಮಳೆ ಕಡಿಮೆ.. ಬಿಸಿಲಿನ ತಾಪ ಹೆಚ್ಚು!
– ಈ ವರ್ಷ ಭಾರತಕ್ಕೆ ‘ಎಲ್ ನಿನೋ’ ಭೀತಿ
– ಕೃಷಿ ಕ್ಷೇತ್ರಕ್ಕೆ ಭಾರೀ ತೊಂದರೆ ಸಾಧ್ಯತೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ/ ಬೆಂಗಳೂರು: ಈ ವರ್ಷ ಇದೀಗ ಭಾರೀ ಬಿಸಿಲು ಜನ ಮನೆಯಿಂದ ಹೊರಗಡೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ತೀವ್ರ ತಾಪಮಾನ, ಮಳೆ ಕೊರತೆ ಮುನ್ಸೂಚನೆ ಕಾಣುತ್ತಿದೆ. ಈ ವರ್ಷ ಪೆಸಿಫಿಕ್ ಸಾಗರದಲ್ಲಿ ‘ಎಲ್ ನಿನೋ’ ಎಫೆಕ್ಟ್ ನಿಂದಾಗಿ ಭಾರತದ ನೈಋತ್ಯ ಮಾನ್ಸೂನ್ ಮೇಲೆ ನೇರ ಪರಿಣಾಮ ಬೀರಲಿದೆ. ಈ ಬಾರಿ ದೇಶದಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಮಳೆ ಕೊರತೆಯ ಜೊತೆಗೆ, ದೇಶದಾದ್ಯಂತ ವಾಡಿಕೆಗಿಂತ ಅಧಿಕ ತಾಪಮಾನ ಕಂಡುಬರುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ವರ್ಷ ಭಾರತದಲ್ಲಿ ನೈಋತ್ಯ ಮಾನ್ಸೂನ್ ಮೇಲೆ ‘ಎಲ್ ನಿನೊ’ ಪ್ರಭಾವ ಸಾಧ್ಯತೆ ಇದ್ದು ಅಧಿಕ ತಾಪಮಾನ ಮತ್ತು ಮಳೆ ಕೊರತೆ ಮುನ್ಸೂಚನೆ ಕಾಣುತ್ತಿದೆ.

ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಗಿಂತ ಶೇ. 92 ಅಥವಾ ಅದಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜು ಮಾಡಲಾಗಿದೆ. ದೇಶವು ಅಧಿಕ ತಾಪಮಾನ ಮತ್ತು ಮಳೆ ಕೊರತೆಯನ್ನು ಎದುರಿಸಬೇಕಾಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಮಳೆ ಕೊರತೆ:ಭಾರತದ ವಾರ್ಷಿಕ ಮಳೆಯ ಶೇ. 75 ರಷ್ಟು ಪೂರೈಸುವ ನೈಋತ್ಯ ಮಾನ್ಸೂನ್ ಈಬಾರಿ ಎಲ್ ನಿನೋ ಪ್ರಭಾವದಿಂದಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಗಿಂತ ಶೇ. 92 ಅಥವಾ ಅದಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ಎಲ್ ನಿನೊ ಪ್ರಭಾವ: ಪ್ರಸ್ತುತ ಪೆಸಿಫಿಕ್ ಸಾಗರದಲ್ಲಿ ‘ಲಾ ನಿನಾ’ ಸ್ಥಿತಿ ಇದ್ದರೂ, ಜುಲೈ ವೇಳೆಗೆ ಅದು ‘ಎಲ್ ನಿನೋ ‘ ಆಗಿ ಬದಲಾಗುವ ಸಾಧ್ಯತೆ ಇದೆ. ಈ ಬದಲಾವಣೆಯು ಮುಂಗಾರು ಮಳೆಯ ಮೇಲೆ ನೇರ ಪರಿಣಾಮ ಬೀರಲಿದ್ದು, ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮಳೆ ಗಣನೀಯವಾಗಿ ಕಡಿಮೆಯಾಗಬಹುದು.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಬೆಳೆಗಳಿಗೆ ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ದೀರ್ಘಕಾಲದ ಶುಷ್ಕ ಹವಾಮಾನ ಕಂಡುಬಂದರೆ ಕೃಷಿ ಚಟುವಟಿಕೆಗಳಿಗೆ ಭಾರಿ ಹೊಡೆತ ಬೀಳಲಿದೆ. ವಾಯುವ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದ್ದರೂ, ಮಧ್ಯ ಭಾರತದ ಪ್ರಮುಖ ಕೃಷಿ ಪ್ರದೇಶಗಳಲ್ಲಿ ತೀವ್ರ ಮಳೆ ಕೊರತೆ ಮತ್ತು ಬರಗಾಲದಂತಹ ಪರಿಸ್ಥಿತಿ ಉಂಟಾಗುವ ಅಪಾಯವಿದೆ. ಮಳೆ ಕೊರತೆಯನ್ನು ಎದುರಿಸಲು ಕಡಿಮೆ ನೀರು ಬಳಸುವ ಮತ್ತು ಹವಾಮಾನ ವೈಪರೀತ್ಯಕ್ಕೆ ತಡೆದುಕೊಳ್ಳುವ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ ನೀಡಲಾಗಿದೆ. ಅಲ್ಲದೆ, ನೀರಿನ ಸಮರ್ಪಕ ನಿರ್ವಹಣೆ ಮತ್ತು ವಿದ್ಯುತ್ ನಿರ್ವಹಣೆಗೆ ಸರ್ಕಾರಗಳು ಸಜ್ಜಾಗಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಿಂದೂ ಮಹಾಸಾಗರದ ದ್ವಿಗುಣ ಪ್ರಭಾವವು ಸಕಾರಾತ್ಮಕವಾಗಿದ್ದರೆ ಎಲ್ ನಿನೊ ಪರಿಣಾಮ ಸ್ವಲ್ಪ ಮಟ್ಟಿಗೆ ತಗ್ಗಬಹುದು ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.

Categories
ಮಾಹಿತಿ ಸುದ್ದಿ ರಾಜ್ಯ ಹವಾಮಾನ ಸುದ್ದಿ

ಬಿಸಿಲು ಬಿಸಿಲು: ಆರೋಗ್ಯ ಹುಷಾರ್..!

ಬಿಸಿಲು ಬಿಸಿಲು: ಆರೋಗ್ಯ ಹುಷಾರ್..!
– ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆಯ ವರದಿ
– ಏನೇನು ಮಾಡಬೇಕು…? ಏನೇನು ಮಾಡಬಾರದು..?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಏಪ್ರಿಲ್ 29ರಿಂದ ಮೇ 12ರ ವರೆಗೆ ಬಿಸಿಲಿನ ಶಾಖದ ತೀವ್ರತೆ ಹೆಚ್ಚಳಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ವರದಿ ನೀಡಿದ್ದು, ಮನುಷ್ಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳುವಂತೆ ತಜ್ಞರು ಕೂಡ ತಿಳಿಸಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ನಿಂದ 55 ಡಿಗ್ರಿ ಸೆಲ್ಸಿಯಸ್ ಗೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಅಂತಹ ಸಮಯದಲ್ಲಿ ಹೊರಗಡೆ ಹೋಗುವುದನ್ನು ನಿಷೇಧಿಸಿ, ಅದರಲ್ಲೂ ಮುಖ್ಯವಾಗಿ ತೆರೆದ ಪ್ರದೇಶಗಳಲ್ಲಿ ಸಂಚಾರ ನಡೆಸುವುದು ಉತ್ತಮವಲ್ಲ. ಇಂತಹ ಸಮಯದಲ್ಲಿ ಉಸಿರಾಟದ ತೊಂದರೆ ಅಥವಾ ಅಸ್ವಸ್ಥತೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ಶುದ್ಧ ಗಾಳಿಗಾಗಿ ಕೊಠಡಿಗಳ ಬಾಗಿಲನ್ನು ತೆರೆದಿಡಿ ಮತ್ತು ಇಂತಹ ಸಮಯದಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿ, ಏಕೆಂದರೆ ಬಿಸಿಲಿನ ಶಾಖಕ್ಕೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.

ಬೆಂಕಿ ಬಗ್ಗೆ ಎಚ್ಚರ ಎಚ್ಚರ

ಲಿಂಬೆಹಣ್ಣಿನ ಶರಬತ್, ಮೊಸರು, ಮಜ್ಜಿಗೆಯಂತಹ ತಂಪು ಪಾನೀಯಗಳನ್ನು ಆಗಾಗ ಕುಡಿಯುತ್ತಿರಿ, ಇದರೊಂದಿಗೆ ವೀಳ್ಯದೆಲೆಯ ರಸವನ್ನು ಬಳಸುವುದು ಕೂಡ ಉತ್ತಮ. ಕಾರಿನಲ್ಲಿ ಗ್ಯಾಸ್ ಉತ್ಪನ್ನಗಳು,ಲೈಟರ್ ಗಳು, ಕಾರ್ಬೋನೇಟೆಡ್ ಪಾನೀಯಗಳು, ಸುಗಂಧ ದ್ರವ್ಯಗಳು ಮತ್ತು ಬ್ಯಾಟರಿಗಳನ್ನು ಬೇಸಿಗೆಯ ಸಮಯದಲ್ಲಿ ಇಟ್ಟುಕೊಳ್ಳಬೇಡಿ ಮತ್ತು ಬಂಕ್ ಗಳಲ್ಲಿ ಟ್ಯಾಂಕ್ ಒಳಗಡೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪೂರ್ತಿಯಾಗಿ ತುಂಬಬೇಡಿ. ವಾಹನಗಳಲ್ಲಿ ಸಂಚರಿಸುವಾಗ ಕಿಟಕಿಗಳನ್ನು ತೆರೆದಿಡಿ, ವಾಹನದಲ್ಲಿ ಕೂಡ ಇಂಧನದ ಟ್ಯಾಂಕ್ ಅನ್ನು ಕೂಡ ಸಂಪೂರ್ಣವಾಗಿ ತುಂಬಿಸಬೇಡಿ, ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಸಂಜೆಯ ಹೊತ್ತಿಗೆ ತುಂಬಿಸಿಕೊಳ್ಳುವುದು ಒಳ್ಳೆಯದು, ಬೆಳಗ್ಗಿನ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸಿ. ವಾಹನದ ಟಯರ್ ಗಳಲ್ಲೂ ಅತಿಯಾಗಿ ಗಾಳಿಯನ್ನು ತುಂಬಿಸಬೇಡಿ.

ಹಾವು, ಚೇಳು ಬಗ್ಗೆ ಗಮನ ಇರಲಿ

ಬೇಸಿಗೆಯ ಧಗೆಗೆ ಹಾವು, ಚೇಳುಗಳಂತಹ ವಿಷಪೂರಿತ ಜೀವಿಗಳು ತಂಪು ಸ್ಥಳಗಳಲ್ಲಿ ಸಂಚರಿಸುತ್ತಿರಬಹುದು, ಮನೆಯ ಸುತ್ತಮುತ್ತ, ಗದ್ದೆ ತೋಟಗಳಲ್ಲಿ ಓಡಾಡುವಾಗ ಎಚ್ಚರಿಕೆವಹಿಸಿ. ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ದ್ರವಾಹಾರವನ್ನು ಸೇವಿಸುತ್ತೀರಿ. ಗ್ಯಾಸ್ ಸಿಲಿಂಡರ್ ಅನ್ನು ಬಿಸಿಲಿನಲ್ಲಿ ಇಡುವ ಅಭ್ಯಾಸ ಒಳ್ಳೆಯದಲ್ಲ.‌ ವಿದ್ಯುತ್ ಮೀಟರ್ ಮೇಲೆ ಹೆಚ್ಚಿನ ಹೊರೆ ಹಾಕಬೇಡಿ. ಅಗತ್ಯವಿರುವ ಕೊಠಡಿಗಳಲ್ಲಿ ಮಾತ್ರ ಎಸಿಯನ್ನು ಬಳಸಿ. ಅಂದರೆ ಹೊರಗಡೆ ಉಷ್ಣತೆ 45 ಡಿಗ್ರಿ ಸೆಲ್ಸಿಯಸ್ ನಿಂದ 47 ಡಿಗ್ರಿ ಸೆಲ್ಸಿಯಸ್ ನಷ್ಟು ಇದ್ದರೆ, ಮನೆಯೊಳಗಡೆ ಎಸಿಯ ಪ್ರಮಾಣವನ್ನು 24 ಡಿಗ್ರಿ ಸೆಲ್ಸಿಯಸ್ ನಿಂದ 25 ಡಿಗ್ರಿ ಸೆಲ್ಸಿಯಸ್ ನಷ್ಟು ಮಾತ್ರ ಇರಿಸಿ. ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ 30 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ. ಬೆಳಿಗ್ಗೆ 10:೦೦ಗಂಟೆಯಿಂದ ಮಧ್ಯಾಹ್ನ 3:00ಗಂಟೆಯ ನಡುವಿನ ಸೂರ್ಯನ ಬೆಳಕು ನೇರವಾಗಿ ದೇಹದ ಮೇಲೆ ಬೀಳುವುದನ್ನು ತಪ್ಪಿಸಿ ಎಂದು ತಿಳಿಸಲಾಗಿದೆ.

Categories
ಕರಾವಳಿ ದಕ್ಷಿಣ ಕನ್ನಡ ಮಂಗಳೂರು ಹವಾಮಾನ ಸುದ್ದಿ

ಕರಾವಳಿಯಲ್ಲಿ ಬಿಸಿಲ ಧಕ್ಕೆ: ‘ಹೀಟ್ ಸ್ಟ್ರೋಕ್’ ಭೀತಿ, ಆರೋಗ್ಯ ಇಲಾಖೆ ಫುಲ್ ಅಲರ್ಟ್!

ಕರಾವಳಿಯಲ್ಲಿ ಬಿಸಿಲ ಧಕ್ಕೆ: ‘ಹೀಟ್ ಸ್ಟ್ರೋಕ್’ ಭೀತಿ, ಆರೋಗ್ಯ ಇಲಾಖೆ ಫುಲ್ ಅಲರ್ಟ್!

– ಜಾಗ್ರತೆ! ಕರಾವಳಿಯಲ್ಲಿ ಹೆಚ್ಚುತ್ತಿದೆ ಬಿಸಿಲಿನ ತಾಪ; ಹೀಟ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳುವುದು ಹೇಗೆ?
– ಸುಡುವ ಬಿಸಿಲಿಗೆ ಬೆಚ್ಚಿಬಿದ್ದ ಮಂಗಳೂರು: ಆರೋಗ್ಯ ಇಲಾಖೆಯ ಹೊಸ ಮಾರ್ಗಸೂಚಿಗಳೇನು?
– ಬಿಸಿಲಿನಿಂದ ಅಸ್ವಸ್ಥರಾದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ದಿನೇ ದಿನೇ ಸೂರ್ಯನ ಪ್ರಖರತೆ ಹೆಚ್ಚುತ್ತಿದ್ದು, ತಾಪಮಾನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಸುಡುವ ಬಿಸಿಲಿನಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದು, ಇದೀಗ ‘ಹೀಟ್ ಸ್ಟ್ರೋಕ್’ (ಬಿಸಿಲಿನ ಧಕ್ಕೆ) ಆತಂಕ ಎದುರಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಆರೋಗ್ಯ ಇಲಾಖೆಯು ಕಡಲ ನಗರಿಯ ಜನರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ವೆನ್ಲಾಕ್‌ನಲ್ಲಿ ವಿಶೇಷ ವಾರ್ಡ್ ಸಿದ್ಧ
ಬಿಸಿಲಿನ ತಾಪದಿಂದ ಅಸ್ವಸ್ಥರಾಗುವವರಿಗೆ ತುರ್ತು ಚಿಕಿತ್ಸೆ ನೀಡಲು ಸನ್ನದ್ಧವಾಗಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 4 ವಿಶೇಷ ಬೆಡ್‌ಗಳನ್ನು ಮೀಸಲಿಡಲಾಗಿದೆ. ಅಲ್ಲದೆ, ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ತಲಾ 2 ಬೆಡ್‌ಗಳನ್ನು ಹೀಟ್ ಸ್ಟ್ರೋಕ್ ಚಿಕಿತ್ಸೆಗಾಗಿ ಸಿದ್ಧಪಡಿಸಿ ಇಡಲಾಗಿದೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿಗಳು:
ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಮುಖ್ಯವಾಗಿ ಈ ಕೆಳಗಿನ ಸೂಚನೆಗಳನ್ನು ಪಾಲಿಸಲು ಕೋರಲಾಗಿದೆ:

ಮಧ್ಯಾಹ್ನ ಸಂಚಾರಕ್ಕೆ ಬ್ರೇಕ್: ಅತೀ ಹೆಚ್ಚು ತಾಪಮಾನವಿರುವ ಮಧ್ಯಾಹ್ನದ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಅಲೆಯದಂತೆ ಸೂಚಿಸಲಾಗಿದೆ.

ಹೆಚ್ಚಿನ ನೀರು ಸೇವನೆ: ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ನೀರು, ಎಳನೀರು ಅಥವಾ ಮಜ್ಜಿಗೆಯನ್ನು ಸೇವಿಸಬೇಕು.

ರಕ್ಷಣಾ ಕವಚ: ಅನಿವಾರ್ಯವಾಗಿ ಹೊರಹೋಗುವವರು ಛತ್ರಿ, ಟೋಪಿ ಅಥವಾ ಸನ್ ಗ್ಲಾಸ್‌ಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.

Categories
ಹವಾಮಾನ ಸುದ್ದಿ

ಬಂಗಾಳಕೊಲ್ಲಿ ವಾಯುಭಾರ ಕುಸಿತ: ಭಾರೀ ಮಳೆ!

ಬಂಗಾಳಕೊಲ್ಲಿ ವಾಯುಭಾರ ಕುಸಿತ: ಭಾರೀ ಮಳೆ!
– 2 ದಿನ ಭಾರೀ ಮಳೆ ಅಲರ್ಟ್: ಗುಡುಗು ಮಿಂಚು ಸಾಧ್ಯತೆ
– ಕೃಷಿ ಚಟುವಟಿಕೆಗೆ ಭಾರೀ ಹಾನಿ: ಜನ ಜೀವನ ಅಸ್ತವ್ಯಸ್ತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಹವಾಮಾನ ವೈಪರಿತ್ಯದ ಪರಿಣಾಮ ಕರ್ನಾಟಕದ 14 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆ, ಗಾಳಿ ಹಾಗೂ ಗುಡುಗು ಮಿಂಚಿನ ಮುನ್ಸೂಚನೆ ನೀಡಲಾಗಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯ ಪರಿಣಾಮವಾಗಿ ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಹವಾಮಾನ ವೈಪರಿತ್ಯದ ಕಾರಣ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಪ್ರತ್ಯಾವರ್ತ ಮಾರುತಗಳು ರಾಜ್ಯದ ವಾತಾವರಣದಲ್ಲಿ ಅಸ್ಥಿರತೆ ಉಂಟುಮಾಡಿವೆ. ಇದರ ಪರಿಣಾಮವಾಗಿ ವಾಯುಭಾರ ಕುಸಿತ ನಿರ್ಮಾಣವಾಗಿ ಮಳೆಯ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗಿದೆ. ಇದರ ಜೊತೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹಗುರ ಮಳೆಯ ಅನುಭವವಾಗಿದೆ. ಶಿವಮೊಗ್ಗ ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮೈಸೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ನಿರೀಕ್ಷೆಯಿದೆ.

ಮಾರ್ಚ್ 31ರ ಮುನ್ಸೂಚನೆ: ಮಾರ್ಚ್ 31ರಂದು ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚು ಇರಬಹುದು. ಕೃಷಿ ಮೇಲೆ ಪರಿಣಾಮ ಈ ಮಳೆಯು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರೈತರು ಬೆಳೆ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ಭಾರೀ ಗುಡುಗು ಮಿಂಚು ಸಾಧ್ಯತೆ!

ಗುಡುಗು-ಮಿಂಚು ಸಂಭವಿಸುವ ಸಾಧ್ಯತೆ ಇರುವುದರಿಂದ ಹೊರಗಡೆ ಹೆಚ್ಚು ಸಮಯ ಉಳಿಯಬೇಡಿ. ಮರಗಳ ಕೆಳಗೆ ನಿಲ್ಲಬೇಡಿ. ವಿದ್ಯುತ್ ಸಾಧನಗಳಿಂದ ದೂರವಿರಿ. ಒಣಹವಾಮಾನ ಇರುವ ಪ್ರದೇಶಗಳು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಒಣಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಲ್ಲಿ ಮಿಶ್ರ ಹವಾಮಾನ ಕಾಣಿಸಿಕೊಳ್ಳಲಿದೆ. ಬಂಗಾಳಕೊಲ್ಲಿಯ ಹವಾಮಾನ ಬದಲಾವಣೆ ರಾಜ್ಯದ ಹಲವೆಡೆ ಮಳೆಯ ವಾತಾವರಣವನ್ನು ಉಂಟುಮಾಡಿದ್ದು, ಮುಂದಿನ ಎರಡು ದಿನಗಳು ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

Categories
ಹವಾಮಾನ ಸುದ್ದಿ

ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ..!!

ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ..!!
– ಏಪ್ರಿಲ್-ಮೇ ತಿಂಗಳಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆ
– ಜೂನ್‌ನಲ್ಲಿ ಚುರುಕುಗೊಳ್ಳಲಿದೆ ಮಾನ್ಸೂನ್‌!

NAMMUR EXPRESS NEWS
ಹವಾಮಾನ ವೈಪರಿತ್ಯ ಹಿನ್ನೆಲೆ ರಾಜ್ಯದಲ್ಲಿ ಬೇಸಿಗೆ ಆರಂಭದಲ್ಲೇ ವರುಣನ ಅಬ್ಬರ ಜೋರಾಗಿದೆ. ಈಗಾಗಲೇ ಪೂರ್ವ ಮುಂಗಾರು ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದು, ಮಲೆನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳೆದ ವರ್ಷದಂತೆಯೇ 2025ರಲ್ಲಿಯೂ ಮುಂಗಾರು ಮಳೆ ಕೈಹಿಡಿಯಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯೂ ವಾಡಿಕೆಗಿಂತ ಅಧಿಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 2024ರಲ್ಲಿ ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಅಬ್ಬರಿಸಿ ರೈತನ ಕೈ ಹಿಡಿದಿತ್ತು. ಈ ವರ್ಷವೂ ಉತ್ತಮ ಮಳೆಯಾಗಲಿ ಎಂದು ರೈತರು ಎದುರು ನೋಡುತ್ತಿದ್ದು. ಹವಮಾನ ಇಲಾಖೆ ಗುಡ್‌ನ್ಯೂಸ್‌ ನೀಡಿದೆ.
ಈಗಿರುವ ಬಿರು ಬಿಸಿಲನ್ನು ನೋಡಿ, ರಾಜ್ಯದ ಜನತೆ ಈ ವರ್ಷ ಮಳೆಯೂ ಇಲ್ಲ ಬೆಳೆಯುವ ಇಲ್ಲ, ಸಿಕ್ಕಾಪಟ್ಟೆ ಬಿಸಿಲು ಇದೆ ಅಂತ ಚಿಂತಿಸುವಂತೆ ಮಾಡಿತ್ತು. ಆದ್ರೆ ಅವಧಿಗೂ ಮುನ್ನವೇ ಈ ವರ್ಷ ಮುಂಗಾರು ರಾಜ್ಯಕ್ಕೆ ಪ್ರವೇಶ ಮಾಡಿತ್ತು, ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಕೂಡ ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದು ಸಿಹಿ ಸುದ್ದಿ ನೀಡಿದೆ. ಈ ವರ್ಷದ ಮಾನ್ಸೂನ್‌ನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದ್ದು, ಏಪ್ರಿಲ್-ಮೇ ತಿಂಗಳಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

ಪೂರ್ವ ಮುಂಗಾರಿನಲ್ಲಿ ಉತ್ತರ ಕರ್ನಾಟಕ ಸೇರಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ಆದರೆ, ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಾನ್ಸೂನ್ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದ್ದು, ಕೃಷಿ ಚಟುವಟಿಕೆಗಳೂ ಚುರುಕುಗೊಳ್ಳಲಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸೆಪ್ಟೆಂಬರ್ ನಂತರದ ಹಿಂಗಾರಿನಲ್ಲೂ ಈ ವರ್ಷ ವಾಡಿಕೆಯ ಮಳೆ ನಿರೀಕ್ಷಿಸಬಹುದು. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗಲಿದೆ. ಉಳಿದ ಇತರ ಜಿಲ್ಲೆಗಳಲ್ಲಿ ಸಾಮಾನ್ಯ ತಾಪಮಾನ ಇರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ರಾಜ್ಯದಲ್ಲಿನ ಪ್ರಮುಖ 14 ಜಲಾಶಯಗಳಲ್ಲಿ ಪ್ರಸ್ತುತ ಒಟ್ಟು 422.11 ಟಿ.ಎಂ.ಸಿ ನೀರಿನ ಸಂಗ್ರಹಣೆಯಿದ್ದು, ಕಳೆದ ಸಾಲಿನ ಇದೇ ಸಮಯದಲ್ಲಿ 280.02 ಟಿಎಂಸಿ ನೀರಿನ ಸಂಗ್ರಹಣೆ ಇತ್ತು. ಇನ್ನು ಜಲಾಶಯಗಳಿಂದ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆಲವೊಂದು ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಇರುವ ಬಗ್ಗೆಯೂ ಅತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚು ತಾಪಮಾನ ಇರುವ ಕಾರಣ ನೀರಿನ ನಷ್ಟಕ್ಕೆ ಕಾರಣವಾಗುತ್ತಾ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡುಗಡೆಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಮಾರ್ಚ್‌ ಮೂರನೇ ವಾರದಿಂದ ಮಳೆ ಆರಂಭವಾಗಿದೆ. ಪ್ರಮುಖವಾಗಿ ಮಂಗಳೂರು, ಶಿವಮೊಗ್ಗ, ಹೊಸಪೇಟೆ, ಕೊಪ್ಪಳದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿದೆ. ಈ ಜಿಲ್ಲೆಗಳಿಂದ ಮಾರ್ಚ್‌ ಬಳಿಕ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಬಿಸಿಲಿಗೆ ಬಳಲಿ ಬೆಂಡಾಗಿದ್ದ ಜನತೆಗೆ ಈ ಮಳೆ ಮೈಮನ ತಂಪಾಗಿಸಿದೆ. ಇನ್ನೂ ಮಂಗಳೂರು, ಶಿವಮೊಗ್ಗ, ಹೊಸಪೇಟೆ ಸೇರಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯ ಸಿಂಚನವಾಗಿದೆ. ರಾಜ್ಯದಲ್ಲಿ ತಾಪಮಾನ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವ ನಡುವೆ ಅಲ್ಲಲ್ಲಿ ಮಳೆಯಾಗುತ್ತಿರುವುದು ಕೊಂಚ ನಿರಾಳ ಮೂಡಿಸಿದೆ.

ಒಟ್ಟಿನಲ್ಲಿ ಈ ವರ್ಷವೂ ವಾಡಿಕೆಗಿಂತ ಅಧಿಕ ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಕೆಲವೆಡೆ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಕೂಡ ಬಿರುಸುಗೊಂಡಿವೆ. ಜಲಾಶಯದಲ್ಲೂ ಕೂಡ ಕಳೆದ ಬಾರಿಗಿಂತ ಹೆಚ್ಚು ನೀರು ಸಂಗ್ರಹವಾಗಿದ್ದು, ಕುಡಿಯುವ ನೀರಿಗೆ ಸಮಸ್ಯೆಯಾಗುವುದು ಕೊಂಚ ಕಡಿಮೆಯೇ.. ಉತ್ತಮ ಮಳೆ ನಿರೀಕ್ಷೆಯಲ್ಲಿರುವ ಜನರಿಗೆ ಈ ಬಾರಿಯ ವರುಣ ಖುಷಿ ನೀಡುತ್ತಾನಾ ಕಾದು ನೋಡಬೇಕಿದೆ.