ಮನೆಯಲ್ಲೇ ಕುಳಿತು ವೋಟರ್ ಐಡಿ ಮಾಡಿಸಬಹುದು!
– ವೋಟರ್ ಐಡಿ ಇಲ್ಲದೆಯೂ ಮತದಾನ ಮಾಡಿ!
– ಹೇಗೆ ನೋಂದಣಿ ಮಾಡುವುದು? ಮಾ.25 ಕೊನೆಯ ದಿನ
NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ಇನ್ನೊಂದು ತಿಂಗಳ ಒಳಗೆ ಮಹಾ ಚುನಾವಣಾ ಸಮರ ಆರಂಭವಾಗಲಿದೆ. ಭಾರತೀಯ ನಾಗರಿಕರಾಗಿದ್ದು ಅರ್ಹ ವಯಸ್ಸು ದಾಟಿದವರು ಮುಂದಿನ ಮತದಾನಕ್ಕೆ ಅರ್ಹರು. ಆದರೆ, ಅರ್ಹತೆ ಇದ್ದ ಹೊರತಾಗಿಯೂ ಹಲವಾರು ಮಂದಿ ವೋಟರ್ ಐಡಿ ಪಡೆದುಕೊಂಡಿರುವುದಿಲ್ಲ. ಅದಕ್ಕೆ ನಾನಾ ಕಾರಣಗಳಿರುತ್ತವೆ. ನೀವು ಇಂಥವರ ಸಾಲಿನಲ್ಲಿದ್ದರೆ ತಕ್ಷಣವೇ ನೋಂದಾಯಿಸಿ, ನಿಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ಸಿದ್ಧರಾಗಿ. ಮನೆಯಲ್ಲಿಯೇ ಕುಳಿತು ವೋಟರ್ ಐಡಿಯನ್ನು ಪಡೆದುಕೊಳ್ಳುವ ಸದವಕಾಶ ನಿಮಗಿದೆ. ಆದರೆ, ನೆನಪಿಟ್ಟುಕೊಳ್ಳಿ ಇದಕ್ಕೆ ನಿಮಗಿರುವುದು ಕೇವಲ ಎರಡು ದಿನಗಳು ಮಾತ್ರ. ಯಾಕೆಂದರೆ ಮಾರ್ಚ್ 25 ಕೊನೆಯ ದಿನ.
ಚುನಾವಣಾ ವೇಳಾಪಟ್ಟಿ ಪ್ರಕಟಗೊಳಿಸುವ ವೇಳೆಯಲ್ಲಿಯೇ ಚುನಾವಣಾ ಆಯೋಗ ಮತದಾನದ ಹಕ್ಕಿಗಾಗಿ ನೋಂದಣಿ ಮಾಡಿಕೊಳ್ಳುವಂತೆ ನಾಗರಿಕರನ್ನು ಕೋರಿದೆ. ಅಂತೆಯೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನದ 10 ದಿನಕ್ಕೂ ಮೊದಲು ನಾಗರಿಕರು ತಮ್ಮ ನೋಂದಣಿ ಅಥವಾ ತಿದ್ದುಪಡಿಯನ್ನು ಮಾಡಲು ಸಾಧ್ಯವಿದೆ. ಹೀಗಾಗಿ ಏಪ್ರಿಲ್ 26 ರಂದು ಮತದಾನ ನಡೆಯುವ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳ ಮತದಾರರಿಗೆ ಮಾರ್ಚ್ 25 ಕೊನೆಯ ದಿನವಾಗಿದೆ. ಉತ್ತರ ಕರ್ನಾಟಕ ವ್ಯಾಪ್ತಿಯ 14 ಕ್ಷೇತ್ರಗಳಲ್ಲಿ ಮತದಾರರಿಗೆ ಪಟ್ಟಿಗೆ ಸೇರ್ಪಡೆಗೊಳ್ಳಲು ಕೊನೆಯ ದಿನಾಂಕ ಏಪ್ರಿಲ್ 9. ಯಾಕೆಂದರೆ ಅವರೆಲ್ಲರಿಗೂ ಮತದಾನ ದಿನ ಮೇ 7.
ಹೇಗೆ ನೋಂದಣಿ ಮಾಡುವುದು?
ಮತದಾರರ ಪಟ್ಟಿಯಲ್ಲಿ ತಮ್ಮ ನೋಂದಾಯಿಸಿಕೊಳ್ಳಲು ಫಾರ್ಮ್ 6 ಅನ್ನು ಭರ್ತಿ ಮಾಡಬೇಕಾಗುತ್ತದೆ. ಒಂದು ವೇಳೆ ತಿದ್ದುಪಡಿಗಳನ್ನು ಮಾಡಲು ಬಯಸುವವರು ಫಾರ್ಮ್ 8 ಅನ್ನು ಭರ್ತಿ ಮಾಡಬೇಕು. ಫಾರ್ಮ್ಗಳನ್ನು ಆನ್ಲೈನ್ನಲ್ಲಿ (https://voters.eci.gov.in/) ಮನೆಯಲ್ಲಿಯೇ ಕುಳಿತು ಭರ್ತಿ ಮಾಡಬಹುದು. ಅಥವಾ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಗೆ ನೇರವಾಗಿ ಸಲ್ಲಿಸಬಹುದು. ಅವುಗಳನ್ನು ಅಂಚೆ ಮೂಲಕವೂ ಕಳುಹಿಸಬಹುದು. ಆದರೆ, ಕೊನೇ ದಿನಾಂಕಗಳು ಬಾಕಿ ಇರುವಾಗ ಅಂಚೆ ಮೂಲಕ ಕಳುಹಿಸದೇ ಇರುವುದು ಸೂಕ್ತ. ವಿಳಾಸ ಬದಲಾವಣೆಯ ಸಂದರ್ಭದಲ್ಲಿ, ಅರ್ಜಿದಾರರು ಫಾರ್ಮ್ 8 ಎ ಅನ್ನು ಭರ್ತಿ ಮಾಡಬೇಕಾಗುತ್ತದೆ. ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಲು ಫಾರ್ಮ್ 7 ಅನ್ನು ಭರ್ತಿ ಮಾಡಬೇಕಾಗುತ್ತದೆ.
ವೋಟರ್ ಐಡಿ ಇಲ್ಲದೆಯೂ ಮತದಾನ ಮಾಡಿ!
ಒಂದು ವೇಳೆ ನೀವು ನೋಂದಣಿ ಮಾಡಿಕೊಂಡಿದ್ದರೂ ವೋಟರ್ ಐಡಿ ನಿಮ್ಮ ಕೈ ತಲುಪದೇ ಹೋದರೂ ಮತದಾನ ಮಾಡಬಹುದು. ಆದರೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾದ 12 ಸರ್ಕಾರಿ-ದೃಢೀಕೃತ ಗುರುತಿನ ಪುರಾವೆಗಳಲ್ಲಿ ಯಾವುದನ್ನಾದರೂ ಒಂದನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಖಚಿತಪಡಿಸಿಕೊಂಡರೆ ಸಾಕು. ನೀವು ಆ ಪಟ್ಟಿಯ ಸ್ಕ್ರೀನ್ಶಾಟ್ ಅನ್ನು ತೆಗೆದುಕೊಳ್ಳಬಹುದು ಮತ್ತು ಮತದಾನಕ್ಕೂ ಮೊದಲು ಪರಿಶೀಲನೆ ಕೌಂಟರ್ನಲ್ಲಿ ಅದನ್ನು ತೋರಿಸಬಹುದು. ಆದರೆ, ಪ್ರಿಂಟೌಟ್ ತೆಗೆದುಕೊಳ್ಳುವುದನ್ನು ಮಾನ್ಯ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ. ಮತದಾರರ ಪಟ್ಟಿಯಲ್ಲಿನ ನಿಮ್ಮ ವಿವರಗಳನ್ನು ವೇಗವಾಗಿ ಹುಡುಕಲು ಸ್ಕ್ರೀನ್ಶಾಟ್ ಚುನಾವಣಾ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.
ಮತದಾರ ವೋಟರ್ ಐಡಿಯನ್ನು ಹೊಂದಿಲ್ಲದಿದ್ದರೆ, ಅಧಿಕೃತ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬೇಕಾಗುತ್ತದೆ. ಆದಾಗ್ಯೂ ನಾಗರಿಕರು E-EPIC ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಮತ ಚಲಾಯಿಸಲು ತೆರಳುವ ಮುನ್ನ ಪ್ರತಿಯೊಬ್ಬ ನಾಗರಿಕ ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಬೇಕು. ಅದು ವೆಬ್ಸೈಟ್ ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್ನಲ್ಲಿ ಮುಕ್ತವಾಗಿ ಲಭ್ಯವಿದೆ. . ಎಪಿಕ್ ಕಾರ್ಡ್ ಹೊಂದಿದ ತಕ್ಷಣ ಪಟ್ಟಿಯಲ್ಲಿ ಹೆಸರಿದ್ದೇ ಇರುತ್ತದೆ ಎಂದು ಖಾತರಿಯಾಗಿ ಹೇಳುವುದಕ್ಕೆ ಸಾಧ್ಯವಿಲ್ಲ.
– ಹೆಸರು ನೋಂದಾಯಿಸಲು ಹೀಗೆ ಮಾಡಿ
ಗೂಗಲ್ ಪ್ಲೇಸ್ಟೋರ್/ ಆ್ಯಪಲ್ ಫೋನ್ ಐಒಎಸ್ನಿಂದ ಭಾರತದ ಚುನಾವಣಾ ಆಯೋಗ ನೀಡುವ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಮುಖ ಪುಟದಲ್ಲಿ, ಸುಲಭವಾಗಿ ಗೋಚರಿಸುವ ‘ಮತದಾರರ ನೋಂದಣಿ’ ಆಯ್ಕೆಯನ್ನು ಮಾಡಿ ಮತ್ತು ‘ಹೊಸ ಮತದಾರರ ನೋಂದಣಿ (ಫಾರ್ಮ್ 6) ಎಂದು ಹೇಳುವ ಪಟ್ಟಿಯಿಂದ ಎರಡನೇ ಆಯ್ಕೆಯನ್ನು ಆರಿಸಿ. ಅಗತ್ಯ ಮಾಹಿತಿಗಳನ್ನು ತುಂಬಿಸಿ ನೋಂದಣಿ ಮಾಡಿ.
– ಫಾರ್ಮ್ 6 ತುಂಬುವುದು ಹೇಗೆ?
*ಒಮ್ಮೆ ನೀವು ಹೊಸ ನೋಂದಣಿ ಆಯ್ಕೆ ಆರಿಸಿದಾಗ ವೈಯಕ್ತಿಕ ಡಿಜಿಟಲ್ ಸಹಾಯಕ ‘ವೋಟರ್ ಮಿತ್ರ’ ಜತೆ ಸಂವಹನ ನಡೆಸಲು ಕೇಳುತ್ತದೆ. ಅದು ನಿಮಗೆ ಮಾರ್ಗದರ್ಶನ ನೀಡುತ್ತದೆ.
*ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕು. ಬಳಿಕ , ‘ಹೌದು, ಮೊದಲ ಬಾರಿಗೆ ಅರ್ಜಿ ಸಲ್ಲಿಸುವುದು ಎಂಬ ಆಯ್ಕೆಯನ್ನು ‘ ಕ್ಲಿಕ್ ಮಾಡಬೇಕು.
*ರಾಜ್ಯ, ವಿಧಾನಸಭಾ ಕ್ಷೇತ್ರ, ಹುಟ್ಟಿದ ದಿನಾಂಕ ಮತ್ತು ಸಂಬಂಧಿತ ಜನನ ಪುರಾವೆ ದಾಖಲೆಯಂತಹ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
*ಪುಟದ ಕೆಳಭಾಗದಲ್ಲಿ, ನೀವು ಲಗತ್ತಿಸಿದ ‘ವಯಸ್ಸಿನ ಘೋಷಣೆ ಫಾರ್ಮ್’ ಅನ್ನು ಡೌನ್ಲೋಡ್ ಮಾಡಬೇಕು.
*ನಿಮ್ಮ ಲಿಂಗ, ಹೆಸರು ಮತ್ತು ಇತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಚಿತ್ರವನ್ನು ಅಪ್ಲೋಡ್ ಮಾಡಬೇಕು.
*ನಿಮ್ಮೊಂದಿಗೆ ವಾಸಿಸುವ ಕುಟುಂಬ ಸದಸ್ಯರ ವಿವರಗಳನ್ನು ನಮೂದಿಸಬೇಕು.
*ಮುಂದಿನ ಹಂತದಲ್ಲಿ, ನಿಮ್ಮ ವಿಳಾಸ ಮತ್ತು ಗ್ರಾಮ, ಅಂಚೆ ಕಚೇರಿ, ಪಿನ್ ಕೋಡ್ ವಿವರಗಳು, ನಿಮ್ಮ ಜಿಲ್ಲೆ, ಕ್ಷೇತ್ರವನ್ನು ನಮೂದಿಸಬೇಕು. ಈ ಹಂತವನ್ನು ಪೂರ್ಣಗೊಳಿಸಲು ವಿಳಾಸ ದಾಖಲೆಯನ್ನು ನೀಡಬೇಕು.
*ಅಂತಿಮ ಹಂತದಲ್ಲಿ ಹೇಳಿಕೆಯನ್ನು ಒಪ್ಪಿಕೊಂಡು ಕ್ಲಿಕ್ ಮಾಡಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣ.