238 ಬಾರಿ ಸೋತರೂ ಮತ್ತೆ ಸ್ಪರ್ಧೆ
– ಲಿಮ್ಕಾ ದಾಖಲೆ ಬರೆದ ಎಲೆಕ್ಷನ್ ಕಿಂಗ್ ಪದ್ಮರಾಜನ್
NAMMUR EXPRESS NEWS
ಮೆಟ್ಟೂರು: ಒಂದಲ್ಲ ಎರಡಲ್ಲ ಬರೋಬ್ಬರಿ 238 ಬಾರಿ ಚುನಾವಣೆಯಲ್ಲಿ ಸೋಲು ಕಂಡಿರುವ 65 ವಯಸ್ಸಿನ ವ್ಯಕ್ತಿ ಮರಳಿ ಧರ್ಮಪುರಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಸ್ಪರ್ಧೆಗೆ ಸಜ್ಜಾಗಿದ್ದಾರೆ. ತಮಿಳು ನಾಡಿನ ಮೆಟ್ಟೂರು ನಿವಾಸಿ ಕೆ ಪದ್ಮ ರಾಜನ್ (65) ಸಣ್ಣದೊಂದು ಪಂಚರ್ ಅಂಗಡಿ ಇಟ್ಟುಕೊಂಡಿದ್ದು, 1988 ರಿಂದ ಚುನಾವಣೆಗಳಲ್ಲಿ ವಿವಿಧ ಚಿಹ್ನೆಗಳ ಮೂಲಕ ಸ್ಪರ್ಧಿಸಿ ಸೋಲುವ ಮೂಲಕವೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ.
ರಾಷ್ಟ್ರಪತಿಯಿಂದ ಹಿಡಿದು ಪಂಚಾಯಿತಿ ಚುನಾವಣೆವರೆಗೂ ಸ್ಪರ್ಧಿಸಿರುವ ಇವರು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ನಾಮಪತ್ರ ಸಲ್ಲಿಸಿ ಸೋಲಿನ ಸರಮಾಲೆ ಹಾಕಿಕೊಂಡಿದ್ದು, ಎಲೆಕ್ಷನ್ ಕಿಂಗ್ ಎಂದು ಜನಪ್ರಿಯತೆ ಗಳಿಸಿದ್ದಾರೆ. ಗೆಲುವು ಮುಖ್ಯವಲ್ಲ, ನನ್ನ ವಿರುದ್ಧದ ಅಭ್ಯರ್ಥಿ ಯಾರೆಂದು ತಲೆಕೆಡಿಸಿ ಕೊಳ್ಳುವುದಿಲ್ಲ. ಫಲಿತಾಂಶದ ವೇಳೆ ಸೋಲು ಘೋಷಣೆಯಾದಾಗ ಸಂತಸವಾಗುತ್ತದೆ. ಸಾಮಾನ್ಯ ಜನರು ಸಹ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜಾಗೃತಿ ಮೂಡಿಸಿ ಮಾದರಿಯಾಗಲು ಬಯಸುತ್ತೇನೆ ಎಂದು ಪದ್ಮರಾಜನ್ ಹೇಳಿದ್ದಾರೆ.
ಲಕ್ಷಾಂತರ ರೂ. ಠೇವಣಿ ನಷ್ಟ ಕಳೆದ ಬಾರಿ 25 ಸಾವಿರ ರೂ. ಠೇವಣಿ ಕಳೆದುಕೊಂಡಿದ್ದ ಪದ್ಮರಾಜ್ 35 ವರ್ಷಗಳಲ್ಲಿ ವಿವಿಧ ಚುನಾವಣೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಚುನಾವಣೆಯಲ್ಲಿ ಶೇ.16 ಮತ ಪಡೆದರೆ ಮಾತ್ರ ಠೇವಣೆ ಮರಳಿ ಪಡೆಯಬಹುದು. ಚುನಾವಣೆಗೆ ನಾಮಪತ್ರ ಸಲ್ಲಿಸೋದು, ಸೋಲೋದು, ಠೇವಣಿ ಕಳೆದುಕೊಳ್ಳುವುದು ಪದ್ಮರಾಜ್ಗೆ ಸಾಮಾನ್ಯವಾಗಿದೆ.