ನದಿಯಲ್ಲಿ ತಾಯಿ, 1 ವರ್ಷದ ಮಗುವಿನ ಮೃತದೇಹ ಪತ್ತೆ!
– ಆತ್ಮಹತ್ಯೆ ಶಂಕೆ: ವಾರದ ಹಿಂದೆಯಷ್ಟೇ ಆಶ್ರಮದವೊಂದರಲ್ಲಿ ಮಗುವಿನ ಹುಟ್ಟುಹಬ್ಬ ಸಂಭ್ರಮಿಸಿದ್ದರು.!
NAMMUR EXPRESS NEWS
ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ನೇತ್ರಾವತಿ ನದಿಗೆ ಮಗುವಿನೊಂದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶುಕ್ರವಾರ ನಡೆದಿದೆ. ಹುಡುಕಾಟದ ಬಳಿಕ ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಅಡ್ಯಾರ್ ನಿವಾಸಿಯಾಗಿರುವ ನಾಗರಾಜ್ ಎಂಬವರ ಪತ್ನಿ ಚೈತ್ರಾ( 30) ಎಂದು ಗುರುತಿಸಲಾಗಿದೆ. ಚೈತ್ರ ಅವರು ತನ್ನ ಒಂದು ವರ್ಷದ ಮಗು ದಿಯಾಂಶ್ ಜತೆ ಮಧ್ಯಾಹ್ನ ಸೇತುವೆಯ ಬಳಿಗೆ ಆಟೊ ರಿಕ್ಷಾದಲ್ಲಿ ಬಂದಿದ್ದಎನ್ನಲಾಗಿದೆ. ಬಳಿಕ ನಡೆದುಕೊಂಡು ಬಂದು ಹರೇಕಳ ಕಡವಿನಬಳಿ ಬಂದಿದ್ದರು ಎನ್ನಲಾಗಿದೆ. ನದಿಯ ಸಮೀಪ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಗಮನಿಸಿದ್ದರು. ಆದರೆ ಮಧ್ಯಾಹ್ನ ಬಳಿಕ ಆಕೆಯ ಮನೆಯವರು ಬಂದು ವಿಚಾರಿಸಿದ್ದು, ಆ ಬಳಿಕ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ತಿಳಿದಿತ್ತು.
ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ರಾತ್ರಿ 8.30 ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ತಾಯಿ ಮಗುವಿನ ಶವ ಪತ್ತೆಯಾಗಿದೆ. ಮಹಿಳೆಯು ಮಗುವಿನೊಂದಿಗೆ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.
ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿದ್ದರು!
ದಿಯಾಂಶ್ ಒಂದು ವರ್ಷದ ಹುಟ್ಟುಹಬ್ಬವನ್ನು ದೇರಳೆಕಟ್ಟೆಯ ಆಶ್ರಮವೊಂದರಲ್ಲಿ ವಾರದ ಹಿಂದೆಯಷ್ಟೇ ಆಚರಿಸಿದ್ದರೆಂಬ ಮಾಹಿತಿಯಿದೆ. ಆದರ್ಶಯುತವಾಗಿ ಮಗುವಿನ ಹುಟ್ಟುಹಬ್ಬ ಸಂಭ್ರಮಿಸಿ ಇಂದು ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿರುವುದರ ಕುರಿತು ಸಾರ್ವಜನಿಕ ವಲಯದಲ್ಲಿ ಸಂಶಯಗಳು ವ್ಯಕ್ತವಾಗಿದೆ. ಚೈತ್ರ ಪತಿ ನಾಗರಾಜ್ ದಿನಗೂಲಿ ನೌಕರರಾಗಿದ್ದು, ಪತ್ನಿ ಮಗುವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು ಎಂದು ಅವರ ಕುಟುಂಬವನ್ನು ಹತ್ತಿರದಿಂದ ಬಲ್ಲವರು ತಿಳಿಸಿದ್ದಾರೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.