ಎಪ್ರಿಲ್ – ಜೂನ್ ತನಕ ರಾಜ್ಯದ ಹಲವಡೆ ತಾಪಮಾನ ಏರಿಕೆ ಸಂಭವ..!
– ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ
NAMMUR EXPRESS NEWS
ಮಂಗಳೂರು: ಈ ವರ್ಷದ ಬೇಸಿಗೆಯಲ್ಲಿ ಎಪ್ರಿಲ್ನಿಂದ ಜೂನ್ ತನಕ ರಾಜ್ಯದ ಹಲವಡೆ ತಾಪಮಾನ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ರಾಜ್ಯದ ಹಲವೆಡೆ ಎ.2 ರಿಂದ 14 ದಿನಗಳ ಕಾಲ ಬಿಸಿಗಾಳಿ ಸಾಧ್ಯತೆಗಳಿದ್ದು, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಾದ ಚಿತ್ರದುರ್ಗ ಗದಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆ ಗಳಲ್ಲಿ ಬಿಸಿಗಾಳಿ ಕಾಣಿಸಿಕೊಳ್ಳಲಿದೆ. ಬಿಸಿಗಾಳಿ ಸಂದರ್ಭಗಳಲ್ಲಿ ಅತ್ಯಧಿಕ ತಾಪಮಾನವು ವೃದ್ಧರು, ಮಕ್ಕಳು ಹಾಗೂ ಆನಾರೋಗ್ಯಪೀಡಿತರ ಮೇಲೆ ಪರಿಣಾಮ ಬೀರಲಿದ್ದು, ಮುಖ್ಯವಾಗಿ ಶಾಖದೊತ್ತಡ, ನಿರ್ಜಲೀಕರಣ ಆಯಾಸ ಕಂಡು ಬರಲಿದೆ. ಮೂಲ ಸೌಕರ್ಯಗಳಾದ ವಿದ್ಯುತ್ ಸರಬರಾಜು ಮತ್ತು ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ.
ಈ ಸವಾಲುಗಳನ್ನು ಎದುರಿಸಲು ಅಧಿಕಾರಿಗಳು ಪೂರ್ವಭಾವಿ ಕ್ರಮ ಕೈಗೊಳ್ಳುವುದು ಅಗತ್ಯ. ಬಿಸಿಗಾಳಿ ಪರಿಣಾಮಗಳನ್ನು ನಿವಾರಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ. ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಮತ್ತು ಬಿಸಿಗಾಳಿಯ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಇಂತಹ ಪ್ರಯತ್ನ ಅತ್ಯಗತ್ಯ ಎಂದು ಇಲಾಖೆ ಸಲಹೆ ನೀಡಿದೆ.
ಗರಿಷ್ಠ ತಾಪಮಾನ : 2024ರ ಎಪ್ರಿಲ್ ತಿಂಗಳಲ್ಲಿ ಗರಿಷ್ಠ ತಾಪಮಾನ ರಾಜ್ಯದ ಹಲವೆಡೆ ವಾಡಿಕೆಗಿಂತ ಅಧಿಕವಾಗಿರುವ ಮತ್ತು ಕನಿಷ್ಠ ತಾಪಮಾನವು ಅಧಿಕವಾಗುವ ಸಾಧ್ಯತೆ ಇದೆ.
ಮಳೆ ಮುನ್ಸೂಚನೆ : ರಾಜ್ಯದ ಉತ್ತರ ಒಳನಾಡಿನ ಜಿಲ್ಲೆ ಗಳಲ್ಲಿ ವಾಡಿಕೆಗಿಂತಾ ಅಧಿಕ ಮಳೆಯಾಗುವ ಸಾಧ್ಯತೆಗಳಿದ್ದು, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆ ಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.