ಮಂಗಳೂರಿಗೆ ಏ.14ರಂದು ಮೋದಿ ಆಗಮನ
– ನಗರದ ಹೃದಯಭಾಗದಲ್ಲಿ ಸಂಜೆ 5ರಿಂದ ರೋಡ್ಶೋ
– ಕೂಳೂರಿನ ಬೃಹತ್ ಸಮಾವೇಶ ಕೊನೆಯ ಕ್ಷಣದಲ್ಲಿ ರದ್ದು
NAMMUR EXPRESS NEWS
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಮಂಗಳೂರಿಗೆ ಆಗಮಿಸುವುದು ಖಚಿತಗೊಂಡಿದ್ದು, ಅವರು ಆ ದಿನ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ಶೋ ಮಾಡಲಿದ್ದಾರೆ. ಆದರೆ, ಈ ಮೊದಲು ಕೂಳೂರಿನ ಗೋಲ್ಡ್ಪಿಂಚ್ ಮೈದಾನದಲ್ಲಿ ನಿಗದಿಯಾಗಿದ್ದ ಬೃಹತ್ ಸಮಾವೇಶ ತಾಂತ್ರಿಕ ಕಾರಣಗಳಿಂದಾಗಿ ರದ್ದುಗೊಂಡಿದೆ. ದಕ್ಷಿಣ ಕನ್ನಡದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪ್ರಧಾನಿ ಮೋದಿ ಅವರ ರೋಡ್ ಶೋ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ, ಮೋದಿ ಅವರು ಏ.14ರಂದು ಸಂಜೆ 5 ಗಂಟೆಗೆ ನಗರದ ನಾರಾಯಣ ಗುರು ಸರ್ಕಲ್ನಿಂದ ಲಾಲ್ಬಾಗ್, ಪಿವಿಎಸ್ ವೃತ್ತದ ಮೂಲಕ ನವಭಾರತ ಸರ್ಕಲ್ ಮಾರ್ಗವಾಗಿ ಹಂಪನಕಟ್ಟೆವರೆಗೆ ರೋಡ್ ಶೋ ನಡೆಸಲಿದ್ದಾರೆ. ಅಂದು ಸಂಜೆ 5ಕ್ಕೆ ಮೋದಿ ಅವರು ನಾರಾಯಣ ಗುರು ಸರ್ಕಲ್ನಲ್ಲಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ತೆರೆದ ವಾಹನದಲ್ಲಿ ರೋಡ್ ಶೋ ಆರಂಭಿಸಲಿದ್ದಾರೆ ಎಂದು ಕುಂಪಲ ತಿಳಿಸಿದ್ದಾರೆ.
ಅದರಂತೆ ಎರಡೂವರೆ ಕಿಮೀ. ದೂರಕ್ಕೆ ರೋಡ್ಶೋ ನಡೆಸುವಂತೆ ನಾವು ಬಿಜೆಪಿ ಸಮಿತಿಗೆ ಅಹವಾಲು ಕಳುಹಿಸಲಾಗಿದೆ. ಇನ್ನು ಎಸ್ಜಿಪಿ ಭದ್ರತಾ ವಿಭಾಗವು ಈ ರಸ್ತೆಗಳಲ್ಲಿನ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಎಷ್ಟು ದೂರದವರೆಗೆ ರೋಡ್ ಶೋ ನಡೆಸಬಹುದೆಂಬುದರ ಬಗ್ಗೆ ನಿರ್ಧರಿಸಲಿದ್ದಾರೆ. ಇನ್ನು ಲಾಲ್ಬಾಗ್, ಬಳ್ಳಾಲ್ಬಾಗ್ ರಸ್ತೆಯಲ್ಲಿ ರೋಡ್ಶೋ ಮಾಡಿದರೆ ಅತಿಹೆಚ್ಚು ಸಂಖ್ಯೆಯಲ್ಲಿ ಜನರನ್ನು ರಸ್ತೆಯ ಎರಡೂ ಬದಿಗಳಲ್ಲಿ ಸೇರಿಸುವುದಕ್ಕೆ ಅವಕಾಶ ದೊರೆಯಲಿದ್ದು, ಬಿಜೆಪಿ ಕೂಡ ದೊಡ್ಡ ಮಟ್ಟದಲ್ಲಿ ಜನಸ್ತೋಮವನ್ನು ಸೇರಿಸುವುದಕ್ಕೆ ಪ್ಲ್ಯಾನ್ ಮಾಡಿದೆ. ಆ ಮೂಲಕ ಮಂಗಳೂರು ನಗರದ ಹೃದಯ ಭಾಗದಲ್ಲಿ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಈ ರೀತಿಯ ರೋಡ್ಶೋ ಮಾಡಲಿದ್ದಾರೆ.
ಇದಕ್ಕೂ ಮೊದಲು ಮಂಗಳೂರು ನಗರದ ಹೊರ ವಲಯದಲ್ಲಿರುವ ಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಬಹಿರಂಗ ಸಭೆಯಲ್ಲಿ ಮೋದಿ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕೆ ಬೇಕಾದಷ್ಟು ಪೂರ್ವ ತಯಾರಿ ಕೂಡ ನಡೆಸಲಾಗಿದ್ದು, ಬುಧವಾರ ಚಪ್ಪರ ಪೂಜೆಯನ್ನು ಕೂಡ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣಗಳಿಂದ ಸಮಾವೇಶ ರದ್ದುಗೊಂಡಿದ್ದು, ಮೋದಿ ಅವರು ಕೇವಲ ರೋ ಶೋ ಮಾತ್ರ ಮಾಡಲಿದ್ದಾರೆ.