ಈ ವಾರ ಪೂರ್ತಿ ಭಾರೀ ಮಳೆ!?
– ಎಲ್ಲೆಲ್ಲಿ ಮಳೆ?: ಹವಾಮಾನ ಇಲಾಖೆ ಮುನ್ಸೂಚನೆ
– ಮಳೆ ನಡುವೆಯೂ ಹಲವೆಡೆ ತಾಪಮಾನ ಏರಿಕೆ
NAMMUR EXPRESS NEWS
ಬೆಂಗಳೂರು: ಮುಂದಿನ ಒಂದು ವಾರಗಳ ಕಾಲ ಮಳೆ ಅಬ್ಬರವು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಏಪ್ರಿಲ್ 22ರಂದು ಒಂದು ಅಥವಾ ಎರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ಮುಂದಿನ 5 ದಿನಗಳು ಗರಿಷ್ಟ ಉಷ್ಣಾಂಶದಲ್ಲಿ ಕ್ರಮೇಣ 2-3 ಡಿ.ಸೆ ಏರಿಕೆಯಾಗುವ ಸಾಧ್ಯತೆಯಿದೆ
ಎಲ್ಲೆಲ್ಲಿ ಹೆಚ್ಚು ಮಳೆ?
ಏ.22ರಂದು ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಗದಗನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿ ದಕ್ಷಿಣಒಳನಾಡಿನ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಇನ್ನು ರಾಜಧಾನಿ ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 36 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
23ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. 24ರಂದು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. 25ರಿಂದ 27ರವರೆಗೆ ಮಳೆಯು ತಗ್ಗಲಿದ್ದು, ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ.
ತಾಪಮಾನದ ಮುನ್ಸೂಚನೆ
ಏಪ್ರಿಲ್ 22 ರಿಂದ 25ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯಾದ್ಯಂತ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ