ಶಿವಮೊಗ್ಗ ಕ್ಷೇತ್ರದಲ್ಲಿ ಕಣದಲ್ಲಿ ಯಾರು ಯಾರು?
– ಮಲೆನಾಡಲ್ಲಿ ಅಂತಿಮ ಹಂತದ ಚುನಾವಣೆ ಕಸರತ್ತು
– ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ಜಿಲ್ಲೆಗೆ ಹೊರಟ ಮತದಾರರು
– ಶಿವಮೊಗ್ಗ ಚುನಾವಣೆ ಕಣದಲ್ಲಿ 19 ಕೋಟಿ ಅಕ್ರಮ ಪತ್ತೆ!
NAMMUR EXPRESS NEWS
ಶಿವಮೊಗ್ಗ/ಬೆಂಗಳೂರು: ರಾಜ್ಯದ ಹೈವೋಲ್ಟ್ ಕ್ಷೇತ್ರ ಶಿವಮೊಗ್ಗದಲ್ಲಿ ಚುನಾವಣೆ ಕಾವು ಜೋರಾಗಿದೆ. ಬಿಜೆಪಿಯ ಹಾಲಿ ಸಂಸದ ಬಿ.ವೈ ರಾಘವೇಂದ್ರ, ಕಾಂಗ್ರೆಸ್ನ ಗೀತಾ ಶಿವರಾಜ್ಕುಮಾರ್ ಹಾಗೂ ಬಿಜೆಪಿಯಿಂದ ಬಂಡೆದ್ದು ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ ಕಣದಲ್ಲಿ ಉಳಿದಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯ ಗೆಲುವಿನ ನಾಗಾಲೋಟಕ್ಕೆ ತೊಡಕಾಗಬಹುದು. ಒಟ್ಟು 24 ಮಂದಿ ಕಣದಲ್ಲಿದ್ದಾರೆ.
ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ಜಿಲ್ಲೆಗೆ ಹೊರಟ ಮತದಾರರು
ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಮೇ 7 ನಡೆಯಲಿದ್ದು, ಬೆಂಗಳೂರಿನಲ್ಲಿರುವ ವಿವಿಧ ಜಿಲ್ಲೆಯವರು ಇದಕ್ಕಾಗಿ ಊರಿಗೆ ಹೊರಟಿದ್ದಾರೆ. ಹೀಗಾಗಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಮತಗಟ್ಟೆಗೆ ತಲುಪಿದ ಅಧಿಕಾರಿಗಳು!
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಸಕಲ ರೀತಿಯಲ್ಲಿ ಸಿದ್ದತೆ ಕೈಗೊಂಡಿದ್ದು, ಮತಗಟ್ಟೆ ಅಧಿಕಾರಿಗಳು ತಮ್ಮ ತಂಡದೊಂದಿಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದು, ಲೋಕಸಭಾ ಚುನಾವಣೆ ನಿಮಿತ್ತ ಸಾರ್ವಜನಿಕರು ಸ್ವಂತ ಊರುಗಳಿಗೆ ತೆರಳಲು ಮೆಜೆಸ್ಟಿಕ್/ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ.
ಎಲ್ಲೆಲ್ಲಿ ಚುನಾವಣೆ?
ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳು ಹರಡಿಕೊಂಡಿವೆ. ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಾಪುರ, ಕಲಬುರಗಿ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶವಿದೆ.
19 ಕೋಟಿ ಅಕ್ರಮ ಪತ್ತೆ!
ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಲ್ಲಿವರೆಗೂ 19,07,47,952 ರೂಪಾಯಿ ಮೌಲ್ಯದ ಚಿನ್ನ, ನಗದು , ಅಮೂಲ್ಯ ವಸ್ತುಗಳನ್ನ ಜಪ್ತು ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ ಗಳು ಹಾಗೂ ಅಕ್ರಮ ಅನಧಿಕೃತ ಸಾಗಾಣಿಕೆಯ ವಿರುದ್ಧ ಚುನಾವಣಾ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಮೊತ್ತದ ನಗದು, ಚಿನ್ನಾಭರಣಗಳನ್ನ ಜಪ್ತಿ ಮಾಡಲಾಗಿದೆ.