Categories
Uncategorized ಚಿಕ್ಕಮಗಳೂರು ಚುನಾವಣಾ ಸುದ್ದಿ ತೀರ್ಥಹಳ್ಳಿ ಮಲ್ನಾಡ್ ಮಾಹಿತಿ ವಿಶೇಷ ಸುದ್ದಿ ಶಿವಮೊಗ್ಗ ಶೃಂಗೇರಿ

ಜಿಎಸ್‌ಟಿ ಇಳಿಕೆ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

ಜಿಎಸ್‌ಟಿ ಇಳಿಕೆ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

* ಸಿ ಟಿ ರವಿ ಸೇರಿದಂತೆ ಕಾರ್ಯಕರ್ತರಿಂದ ಸಿಹಿಹಂಚಿ ಸಂಭ್ರಮಾಚರಣೆ
* ಜನತೆಯ ತೆರಿಗೆ ಹೊರೆ ಇಳಿಸಿದ ಪ್ರಧಾನಿಗೆ ಧನ್ಯವಾದ – ಮಣಿಕಂಠನ್ ಕಂದಸ್ವಾಮಿ

NAMMMUR EXPRESS NEWS
ಚಿಕ್ಕಮಗಳೂರು: ಜಿಎಸ್‌ಟಿ ಇಳಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಿಸಿ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ರಾಜ್ಯದ ಕಾಂಗ್ರೆಸ್ ಸರ್ಕಾರ ತೆರಿಗೆ ಹೊರೆ ಹೆಚ್ಚಿಸಿ ಪಾಪ ಕಟ್ಟಿಕೊಂಡಿದ್ದು, ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಕೆ ಮೂಲಕ ಪುಣ್ಯ ಕಟ್ಟಿಕೊಳ್ಳುತ್ತಿದೆ,’ಜನನದಿಂದ ಮರಣದ ತನಕ ರಾಜ್ಯದಲ್ಲಿ ತೆರಿಗೆ ಇದೆ. ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದರೆ ಹೆಚ್ಚು ದರವಿದೆ,ಪ್ರಧಾನಿ ನರೇಂದ್ರ ಮೋದಿ ಅವರ ಹಾದಿಯಲ್ಲಿ ಕನಿಷ್ಠ ಎರಡು ಹೆಜ್ಜೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಟ್ಟರೆ ರಾಜ್ಯ ಜನರಿಗೆ ಒಳಿತಾಗಲಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಯೋಚಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ‘ದೇಶದ ಜನರಿಗೆ ಹಬ್ಬದ ವಾತಾವರಣವನ್ನು ನರೇಂದ್ರ ಮೋದಿ ಸರ್ಕಾರ ಮಾಡಿಕೊಟ್ಟಿದೆ’ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕನಕರಾಜ್, ನಗರ ಘಟಕ ಅಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ ಕೋಟ್ಯಾನ್‌, ಮುಖಂಡರಾದ ಕೋಟೆ ರಂಗನಾಥ್, ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾ‌ರ್, ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್‌, ನಗರಸಭೆ ಸದಸ್ಯರಾದ ಕವಿತಾ ಶೇಖ‌ರ್, ಮಧುಕುಮಾ‌ರ್, ಮುಖಂಡರುಗಳದ ಪುಟ್ಟಸ್ವಾಮಿ, ಎಚ್‌.ಕೆ. ಕೇಶವಮೂರ್ತಿ, ಕೌಶಿಕ್, ದಿನೇಶ್, ಬೆನಡಿಕ್ಟ್ ಜೇಮ್ಸ್, ಪ್ರದೀಪ್ ಹಾಜರಿದ್ದರು.

* ಜನತೆಯ ತೆರಿಗೆ ಹೊರೆ ಇಳಿಸಿದ ಪ್ರಧಾನಿಗೆ ಧನ್ಯವಾದಗಳು.

ನವರಾತ್ರಿಗೆ ದೇಶದ ಜನತೆಗೆ ಎರಡು ಮಾದರಿಯ ಜಿಎಸ್ ಟಿ ಮೂಲಕ ಉಡುಗೊರೆ ನೀಡಿದ ಮೋದಿಗೆ ಹಾಗೂ ನಿರ್ಮಲ ಸೀತರಾಮನ್ ರವರಿಗೆ ಧನ್ಯವಾದಗಳು ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು .
ಅವಕಾಶವಾದಗೆಲ್ಲ ದೇಶ ಜನತೆಗೆ ಅನುಕೂಲಕರ ಅಂಶಗಳನ್ನು ಒದಗಿಸುವ ಮೋದಿಯವರ ಚಿಂತನೆಯು ದೇಶದ ಮತ್ತು ದೇಶವಾಸಿಗಳ ಅಭಿವೃದ್ಧಿಯನ್ನು ಪ್ರಗತಿಯತ್ತ ಕೊಂಡೊಯ್ಯತ್ತಿದೆ. ಎರಡು ಮಾದರಿ ಜಿ ಎಸ್ ಟಿ ಇಂದಾಗಿ ದಿನನಿತ್ಯದ ವಸ್ತುಗಳಾದ ತುಪ್ಪ, ಪನೀರ್, ಬೆಣ್ಣೆ, ನಮ್ಕೀನ್, ಜಾಮ್, ಕೆಚಪ್, ಡ್ರೈ ಫ್ರೂಟ್ಸ್, ಕಾಫಿ ಜೊತೆಗೆ ಐಸ್ ಕ್ರೀಮ್ ನಂತಹ ವಸ್ತುಗಳು ಕಡಿಮೆ ತೆರಿಗೆಗೆ ಒಳಪಡಲಿವೆ. ಈ ಮೊದಲು ಇವುಗಳ ಮೇಲೆ 12% ರಿಂದ 18% ಜಿಎಸ್ಟಿ ಇತ್ತು, ಈಗ ಅದನ್ನು 5% ಪಟ್ಟಿಗೆ ಸೇರಿಸಲಾಗಿದೆ .
ಆರೋಗ್ಯ ಕ್ಷೇತ್ರದಲ್ಲೂ ಜಿಎಸ್‌ಟಿ ಕಡಿತವಾಗಲಿದ್ದು, ಹೆಲ್ತ್ ಇನ್ಶ್ಯುರೆನ್ಸ್ ಹಾಗೂ 33 ಜೀವರಕ್ಷಕ ಮೆಡಿಸಿನ್‌ಗಳ ದರವೂ ಕಡಿಮೆ ಆಗಲಿದೆ. ಇದರಿಂದಾಗಿ ಜನಸಾಮಾನ್ಯರು ಕೂಡ ಹೆಲ್ತ್ ಇನ್ಶುರೆನ್ಸ್ ಗಳನ್ನು ಹೊಂದಲು ಸಹಾಯವಾಗುತ್ತದೆ. ಜೊತೆಗೆ ಗ್ಲುಕೋಮೀಟರ್‌ಗಳು, ರೋಗನಿರ್ಣಯ ಕಿಟ್‌ಗಳು ಮತ್ತು ಹೆಚ್ಚಿನ ಔಷಧಿಗಳ ಮೇಲೆ ಕೇವಲ 5% ಜಿಎಸ್‌ಟಿ ವಿಧಿಸಲಾಗುವುದು. ಈ ಹಿಂದೆ ಈ ವಸ್ತುಗಳು 12% ಅಥವಾ 18% ಸ್ಲ್ಯಾಬ್‌ನಲ್ಲಿದ್ದವು ಇದು ದೇಶದ ಜನತೆಗೆ ಆರೋಗ್ಯ ಚೇತರಿಕೆಗೆ ಹೆಚ್ಚು ಸಹಾಯವಾಗಲಿದೆ .
ಒಟ್ಟಾರೆ ಜನತೆಯು ಅಗತ್ಯ ವಸ್ತುಗಳ ಖರೀದಿ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಪ್ರಯತ್ನಕ್ಕೆ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರಿಗೆ ವಿಶೇಷ ಧನ್ಯವಾದಗಳು ಎಂದರು.

Categories
ಚುನಾವಣಾ ಸುದ್ದಿ

ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು

ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು
– ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು
– ಕಳೆದ ಕೆಲವು ತಿಂಗಳುಗಳಿಂದ ಪದೇ ಪದೇ ಆರೋಗ್ಯ ಸಮಸ್ಯೆ

NAMMUR EXPRESS NEWS
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ (ಬಿಜೆಪಿ) ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿರುವ ಹಿನ್ನೆಲೆಯಲ್ಲಿ ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳು ತಮ್ಮ 97ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಡ್ವಾಣಿ, ಕಳೆದ ಕೆಲವು ತಿಂಗಳುಗಳಿಂದ ಪದೇ ಪದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಜುಲೈ ನಂತರ ಅವರ ನಾಲ್ಕನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದೆ. ಅವರು ಈ ಹಿಂದೆ ಅಪೋಲೋ ಆಸ್ಪತ್ರೆ ಮತ್ತು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಎರಡರಲ್ಲೂ ಚಿಕಿತ್ಸೆ ಪಡೆದಿದ್ದರು. ಬಿಜೆಪಿ ವಕ್ತಾರ ಕೆ ಕೃಷ್ಣ ಸಾಗರ್ ರಾವ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ, ಅಡ್ವಾಣಿ ಅವರನ್ನು “ನಮ್ಮ ಎತ್ತರದ ನಾಯಕ” ಎಂದು ಕರೆದಿದ್ದಾರೆ. ಎಲ್.ಕೆ. ಅಡ್ವಾಣಿ ಅವರು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಅವರು ಉತ್ತಮ, ಆರೋಗ್ಯಕರ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಎಕ್ಸ್​​​​ನಲ್ಲಿ ಬರೆದುಕೊಂಡಿದ್ದಾರೆ.

ನವೆಂಬರ್ 8, 1927 ರಂದು ಕರಾಚಿಯಲ್ಲಿ ಜನಿಸಿದ ಶ್ರೀ ಅಡ್ವಾಣಿ ಅವರು 1942 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಗೆ ಸೇರಿದರು.ಬಿಜೆಪಿಯ ಪ್ರಮುಖ ವಾಸ್ತುಶಿಲ್ಪಿ ಎಂದು ಕೂಡ ಕರೆಯಾಗುತ್ತದೆ. ಸುದೀರ್ಘ ಸೇವೆ ಸಲ್ಲಿಸಿದ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು, ಗೃಹ ಸಚಿವರಾಗಿ ಮತ್ತು ನಂತರ 1999 ಮತ್ತು 2004ರಲ್ಲಿ ಉಪಪ್ರಧಾನಿಯಾಗಿ ಕೂಡ ಕೆಲಸ ಮಾಡಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ, ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀಡಿದರು.

Categories
ಚುನಾವಣಾ ಸುದ್ದಿ

ಹಾಸನದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಜನ ಸಾಗರ!

ಹಾಸನದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಜನ ಸಾಗರ!
– ಸಿಎಂ, ಡಿಕೆಶಿ ಭಾಷಣಕ್ಕೆ ಜನರ ಶಿಳ್ಳೆ: ಹಾಸನದ ಹಲವೆಡೆ ಟ್ರಾಫಿಕ್ ಜಾಮ್ ಜಾಮ್
– ಸಿಎಂ ಬದಲು ವಿಚಾರ: ಸಿದ್ದರಾಮಯ್ಯ ಹೇಳಿದ್ದೇನು..?

NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮೂರೂ ಉಪಚುನಾವಣೆಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾದ ಹಾಸನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದು ಸಾವಿರಾರು ಜನ ಸೇರಿದ್ದು, ಇಡೀ ಹಾಸನದಲ್ಲಿ ಎಲ್ಲೆಲ್ಲಿ ನೋಡಿದರೂ ಜನ ಸಾಗರವೇ ಕಂಡು ಬಂದಿತು.
ಮುಖ್ಯಮಂತ್ರಿಯ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಾಸನ ಉಸ್ತುವಾರಿ ಸಚಿವ ರಾಜಣ್ಣ ಸೇರಿದಂತೆ ಅನೇಕ ಸಚಿವರು, ಹಿರಿಯ ಕಾಂಗ್ರೆಸ್ ನಾಯಕರು ಸಮಾವೇಶದಲ್ಲಿ ಭಾಗವಹಿಸಿದ್ದರು.

– ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಷಣೆ

ಹಾಸನ : ನಮ್ಮ ಸರ್ಕಾರದ ಐದು ಗ್ಯಾರಂಟಿಗಳನ್ನು ಪಡೆದಿರುವುದಕ್ಕೆ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ಪರಮ ಜನದ್ರೋಹಿಗಳು. ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಹಾಸನದಲ್ಲಿ ನಡೆದ ಬೃಹತ್ ಜನಕಲ್ಯಾಣೋತ್ಸವ ಸಮಾವೇಶವದಲ್ಲಿ ಮಾತನಾಡುತ್ತಾ, “ಡಾ.ರಾಜ್ ಅವರು ಅಭಿಮಾನಿ ದೇವರು ಎಂದು ಹೇಳುತ್ತಿದ್ದರು. ನಮಗೆ ಮತದಾರರ ಬಂಧುಗಳೇ ದೇವರು,” ಎನ್ನುತ್ತಾ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ʼಆಶೀರ್ವದಿಸಿದ್ದಕ್ಕೆʼ ಧನ್ಯವಾದ ಅರ್ಪಿಸಿದರು. ಹಾಸನದ ಮಹಾನ್ ನಾಯಕರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣದಲ್ಲಿ , ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗನನ್ನು ಶಿಗ್ಗಾಂವಿಯಲ್ಲಿ ಜನ ಸೋಲಿಸಿ ನಮಗೆ ಆಶೀರ್ವದಿಸಿದ್ದಾರೆ ಮುಖ್ಯಮಂತ್ರಿ ಹೇಳಿದ್ದಾರೆ. “ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವಷ್ಟು ಬಹುಮತ ಈ ರಾಜ್ಯದ ಜನರೆ ಯಾವತ್ತೂ ಕೊಟ್ಟಿಲ್ಲ. ಒಮ್ಮೆ ಕಾಂಗ್ರೆಸ್ ಬೆಂಬಲದಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲದಲ್ಲಿ ಮುಖ್ಯಮಂತ್ರಿ ಆದರು. ಬಳಿಕ ಎರಡೂ ಪಕ್ಷಗಳಿಗೆ ವಂಚಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸುಭದ್ರ ಸರ್ಕಾರ ಕೊಟ್ಟಿದೆ. ಮಾತ್ರವಲ್ಲ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 2013 ರಲ್ಲಿ ಕೊಟ್ಟ ಮಾತಿನಂತೆ ಹಲವಾರು ಭಾಗ್ಯಗಳನ್ನು ಜಾರಿ ಮಾಡಿದೆವು‌. ಈ ಬಾರಿ ಐದಕ್ಕೆ ಐದೂ ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನೂ ಈಡೇರಿಸುತ್ತಿದ್ದೇವೆ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ. “ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಪ್ರಧಾನಿ ಮೋದಿ ಅವರ ಸರ್ಕಾರ ನಾವು ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಕೊಡಲಿಲ್ಲ. ಇಂಥಾ ಜನದ್ರೋಹಿ ಸರ್ಕಾರ ಬಿಜೆಪಿಯದ್ದು. ನಾವು ಐದು ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಈ ಐದು ಗ್ಯಾರಂಟಿಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ದೊಡ್ಡ ಜನದ್ರೋಹಿಗಳು. ಕೇಂದ್ರದಲ್ಲಿ ಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ಮೇಕೆದಾಟು ವಿಚಾರದಲ್ಲಿ ಮೌನ ಆಗಿರುವುದು ಏಕೆ? ಬೆಂಗಳೂರಿನ ಜನತೆಗೆ ನೀರು ಬೇಕಾಗಿದೆ. ಕೊಡಿಸಲಿ,” ಎಂದು ಸವಾಲು ಹಾಕಿದರು. ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ. ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಆಮೇಲೆ ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿದರು,” ಎಂದು ಟೀಕಿಸಿದರು.

ಹಾಸನ ಮತ್ತೆ ಕಾಂಗ್ರೆಸ್ ತೆಕ್ಕೆಗೆ

“ಕಾಂಗ್ರೆಸ್ ಸರ್ಕಾರ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾಧ್ಯ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿಗಳಿಸಲಿದೆ. ಇದು ಶತಸಿದ್ದ ಎಂದರು. ಹಾಸನದಲ್ಲಿ ಈ ಮಟ್ಟದ ದೊಡ್ಡ ಜನ ಕಲ್ಯಾಣ ಕಾಂಗ್ರೆಸ್ ಸಮಾವೇಶ ಹಿಂದೆಂದೂ ಆಗಿರಲಿಲ್ಲ. ಇದರಲ್ಲಿ ಸ್ವಾಭಿಮಾನಿ ಒಕ್ಕೂಟಗಳು, ಕಾಂಗ್ರೆಸ್ಸೇತರ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಶ್ರಮಿಸಿದ್ದಾರೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಿಎಂ ಬದಲು ವಿಚಾರ: ಸಿದ್ದರಾಮಯ್ಯ ಹೇಳಿದ್ದೇನು?

ಕೆ.ಆರ್.ಪೇಟೆಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಒಪ್ಪಂದವಾಗಿಲ್ಲ. ಆದರೆ ನಾವು ಹೈಕಮಾಂಡ್ ನಿರ್ಧಾರಕ್ಕೆ (ಭವಿಷ್ಯದಲ್ಲಿ) ಬದ್ಧರಾಗುತ್ತೇವೆ ಎಂದು ಅವರು ಸುದ್ದಿಗಾರರಿಗೆ ಉತ್ತರಿಸಿದರು. ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಮ್ಮ ಸಿಎಂ ನಿರ್ಧಾರವೇ ಅಂತಿಮ, ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಹೇಳಿದ್ದರು.

ಗುರುವಾರದ ರ್ಯಾಲಿಯನ್ನು ಸಿದ್ದರಾಮಯ್ಯನವರ ಬೆಂಬಲಿಗರು ಶೋಷಿತ ಸಮುದಾಯಗಳ ಒಕ್ಕೂಟದ ಅಡಿಯಲ್ಲಿ ಮೊದಲು ಯೋಜಿಸಲಾಗಿತ್ತು. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಂಕ್ಷಿಪ್ತ ರೂಪವಾದ ಅಹಿಂದ ಸಂಘಟನೆ ಸಿದ್ದರಾಮಯ್ಯ ಅವರ್ನು ಬೆಂಬಲಿಸಲು ಈ ಸಮಾವೇಶ ಆಯೋಜಿಸಲಾಗಿತ್ತು. ಇದಕ್ಕೆ ‘ಸ್ವಾಭಿಮಾನಿ ಸಮಾವೇಶ’ ಎಂದು ಹೆಸರಿಡಲಾಗಿತ್ತು ಆದರೆ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರೊಬ್ಬರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅನಾಮಧೇಯ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಸ್ವಾಭಿಮಾನಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ಆಶ್ರಯದಲ್ಲಿ ಸಮಾವೇಶ ನಡೆಯಲಿದೆ ಎಂದು ಹೇಳಿದ ಶಿವಕುಮಾರ್ ಅದನ್ನು ಕಾಂಗ್ರೆಸ್ ಪಕ್ಷದ ಸಮಾವೇಶವನ್ನಾಗಿ ಪರಿವರ್ತಿಸಿ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಎಂದು ಮರುನಾಮಕರಣ ಮಾಡಿದರು, ಇದು ಸಿದ್ದರಾಮಯ್ಯ ಬೆಂಬಲಿಗರಿಗೆ ಇಷ್ಟವಾಗಿಲ್ಲ. ಶೋಷಿತ ಸಮುದಾಯಗಳ ಒಕ್ಕೂಟವು ಜನವರಿಯಲ್ಲಿ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ, ಬಹುಶಃ ಬೆಳಗಾವಿಯಲ್ಲಿ ವಿಶೇಷ ಸಮಾವೇಶವನ್ನು ಯೋಜಿಸುತ್ತಿದೆ. ಹಾಸನ ಸಮಾವೇಶದಲ್ಲಿ ಹಲವು ಒಕ್ಕೂಟ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಕಡಿಮೆಯಿದೆ, ಇದು ತಮ್ಮ ನಾಯಕತ್ವದ ಸ್ಥಾನಮಾನಕ್ಕೆ ಧಕ್ಕೆ ತರಲಿದೆ ಎಂದು ಭಾವಿಸಿದ್ದಾರೆ ಎಂದು ಒಕ್ಕೂಟದ ಸಂಚಾಲಕರಾದ ಕುರುಬ ಮುಖಂಡ ರಾಮಚಂದ್ರಪ್ಪ, ಡಿಎಸ್‌ಎಸ್‌ ಮುಖಂಡ ಮಾವಳ್ಳಿ ಶಂಕರ್‌ ತಿಳಿಸಿದ್ದಾರೆ.

ಈ ಹಿಂದೆ ಅಹಿಂದ ಸಮಾವೇಶ ನಂತರ ಹಿಂದುಳಿದ ವರ್ಗದ ಸಮಾವೇಶವಾಯಿತು. ಸ್ವಾಭಿಮಾನಿ ಸಮಾವೇಶ ಈಗ ಕಾಂಗ್ರೆಸ್ ಸಮಾವೇಶ ಎಂದು ಬದಲಾಗಿದೆ ಎಂದು ನಾಯಕರೊಬ್ಬರು ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಶಿವಕುಮಾರ್ ಬೆಂಬಲಿಗರು ಸಮಾವೇಶವನ್ನು ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾಭಿಮಾನಿ ಮೈತ್ರಿಕೂಟ ಕಾಂಗ್ರೆಸ್ ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲಿದೆ ಎಂದು ಸಿಎಂ ಹೇಳಿಕೆ ನೀಡಿದ್ದು, ಒಕ್ಕಲಿಗರು ಹಳೆ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡು ಜನರನ್ನು ಸಜ್ಜುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರೆ ಸಂತೋಷವಾಗುತ್ತದೆ, ಆದರೆ ಕಾಂಗ್ರೆಸ್ ಸಮಾವೇಶವನ್ನು ಮುನ್ನಡೆಸುತ್ತದೆ ಎಂದು ಶಿವಕುಮಾರ್ ಹೇಳಿದರು.

Categories
ಚುನಾವಣಾ ಸುದ್ದಿ

ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚು ತ್ತಿರುವ ಜ್ಞಾನೇಂದ್ರ

ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚು ತ್ತಿರುವ ಜ್ಞಾನೇಂದ್ರ
– ಬಸವರಾಜ ಬೊಮ್ಮಾಯಿ, ಆರಗ ಅವಧಿಯಲ್ಲಿ ವಕ್ಫ್ ಅತೀ ಹೆಚ್ಚು ಅನುದಾನ, ತೀರ್ಥಹಳ್ಳಿಯಲ್ಲಿ ಹಲವು ಕಡೆ ಭೂಮಿ ಮಂಜೂರು
– ಶಾಸಕ ಆಗರ ಜ್ಞಾನೇಂದ್ರ ವಿರುದ್ಧ ತುಪ್ಪದಮನೆ ವಿನಾಯಕ ಪತ್ರಿಕಾ ಹೇಳಿಕೆ

NAMMUR EXPRESS NEWS
ಶಾಸಕ ಆರಗ ಜ್ಞಾನೇಂದ್ರರ ರಾಜಕೀಯ ಕಾರಣಗಳಿಗಾಗಿ ಹಿಂದೂ ಮುಸ್ಲಿಮರ ನಡುವೆ ಕಂದಕ ಉಂಟು ಮಾಡುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಅನೇಕ ಬಾರಿ ಮುಸ್ಲಿಮರ ಪರವಾಗಿ ನಿಂತಿರುವ ಅವರು ಈಗ ವಕ್ಫ್ ವಿಚಾರದಲ್ಲಿ ಇಡೀ ಮುಸ್ಲಿಂ ಜನಾಂಗವನ್ನು ತಪ್ಪಿತಸ್ಥರು ಎನ್ನುವಂತೆ ನೋಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷ ತುಪ್ಪದಮನೆ ವಿನಾಯಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾಸ್ತವವಾಗಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹಾಗೂ ಆರಗ ಜ್ಞಾನೇಂದ್ರ ಗೃಹಮಂತ್ರಿಯಾಗಿದ್ದಾಗಲೇ ವಕ್ಫ್ ಮಂಡಳಿಯಲ್ಲಿ ಅತಿ ಹೆಚ್ಚಿನ ಅನುದಾನ ನೀಡಲಾಗಿದೆ ಅಲ್ಲದೇ ಸಂಬಂಧಿಸಿದ ಆಸ್ತಿಯನ್ನು ಕೂಡ ವಶಪಡಿಸಿಕೊಳ್ಳಲು ಸೂಚನೆಯನ್ನು ನೀಡಲಾಗಿದ್ದು ಇದೀಗ ಬಹಿರಂಗಗೊಂಡಿದೆ. ಜ್ಞಾನೇಂದ್ರರವರೇ ಶಾಸಕರಾಗಿದ್ದ ಅವಧಿಯಲ್ಲಿ ಮುಸ್ಲಿಂ ಸಮುದಾಯದ ಖಬರಸ್ತಾನ ಮತ್ತು ವಕ್ಫ್ ಬೋರ್ಡಿಗೆ ಅಗ್ರಹಾರ ಹೋಬಳಿಯ ಅಗಳಬಾಗಿಲಿನಲ್ಲಿ 4 ಎಕರೆ, ಆಗುಂಬೆ ಹೋಬಳಿಯ ಹೊಸೂರಿನಲ್ಲಿ 1 ಎಕರೆ, ಮಂಡಗದ್ದೆ ಹೋಬಳಿಯ ಕಣಗಲಕೊಪ್ಪದಲ್ಲಿ 2 ಎಕರೆ, ಮಂಡಗದ್ದೆ ಹೋಬಳಿಯ ತೂದೂರಿನಲ್ಲಿ 2 ಎಕರೆ ಮಂಜೂರಾಗಿದೆ. ಆದರೆ ಈಗ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ರೈತರು ಆಸ್ತಿಗಳನ್ನು ವಕ್ಫ್ ಬೋರ್ಡಿನ ವಶಕ್ಕೆ ನೀಡಲು ಹೊರಟಿದೆ ಎನ್ನಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ತಾಲ್ಲೂಕಿನ ಅನೇಕ ಖಬರಸ್ಥಾನ ಮತ್ತು ವಕ್ಫ್ ಬೋರ್ಡಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯುತ್ತಿದ್ದು, ಆನಂತರ ಅವುಗಳ ಬಗ್ಗೆ ಪ್ರಶ್ನೆ ಮಾಡುತ್ತೇನೆ. ಕಾಂಗ್ರೇಸ್ ಪಕ್ಷ ಯಾವಾಗಲೂ ಎಲ್ಲಾ ವರ್ಗದ ಧರ್ಮದ, ಬಡವರ, ಹಿಂದುಳಿದ ರೈತರ ಪರವಾಗಿ ಇದೆ ಹೊರತು ಯಾವುದೇ ಒಂದು ಧರ್ಮದ ಪರ ಇಲ್ಲವೆಂದು ನೆನಪಿಸುತ್ತಿದ್ದೇನೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಮುಸ್ಲಿಂರನ್ನು ವಿರೋಧಿಸಿದಂತೆ ನಾಟಕ ಮಾಡಿ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ನಾಯಕಿಯಾದ ಜೀನತ್ ಗೌಸರ್‌ರವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಆಗ ಅಧಿಕಾರಕ್ಕಾಗಿ ಮುಸ್ಲಿಮರು ಬೇಕಾಯಿತೇ? ಮತ್ತೊಂದು ಸಂದರ್ಭದಲ್ಲಿ ನನ್ನ ಗೆಳೆಯರು ಆಗಿರುವ ರಹಮತ್ ಉಲ್ಲಾ ಅಸಾದಿಯವರನ್ನು ಬಿಜೆಪಿಯಿಂದ ಅಧ್ಯಕ್ಷರನ್ನಾಗಿ ಮಾಡುತ್ತೀರಿ. ನಿಮಗೆ ಅವಶ್ಯಕತೆ ಇದ್ದಾಗ ಮುಸ್ಲಿಮರು ಹಿಂದುಗಳಾಗುತ್ತಾರೆಯೇ? ತೀರ್ಥಹಳ್ಳಿ ತಾಲೂಕಿನಲ್ಲಿ ಯುವಕರಿಗೆ ಸುಳ್ಳು ಹೇಳಿ ನೀವು ರಾಜಕೀಯದಲ್ಲಿ ಜಯ ಗಳಿಸಿದ್ದೀರಿ. ಸತ್ಯವನ್ನು ಜನರಿಗೆ ತಿಳಿ ಹೇಳುವುದರಲ್ಲಿ ನಮ್ಮ ನಾಯಕರುಗಳು ವಿಫಲರಾಗಿದ್ದಾರೆ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್‌ರ ಮಧ್ಯೆ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಶಾಂತಿ ಕದಡುವ ಕೆಲಸ ತಮಗೆ ಶೋಭೆ ತರುತ್ತದೆಯೇ? ನಿಮ್ಮನ್ನು ಟೀಕಿಸುತ್ತಿಲ್ಲ ಹಾಗೆಯೇ ಮುಸ್ಲಿಮರನ್ನು ವಿರೋಧಿಸುತ್ತಿಲ್ಲ. ಇದಲ್ಲದೇ ಅಧಿಕಾರ ಹಿಡಿಯಬೇಕು ಎಂಬ ಒಂದೇ ಕಾರಣಕ್ಕಾಗಿ ಬಿಜೆಪಿ ಅಪ್ಪಟ ಹಿಂದುಗಳ ಪಕ್ಷ ಎನ್ನುವುದು ಜ್ಞಾನೇಂದ್ರ ಅವರಿಗೆ ನೆನಪಿರಲಿಲ್ಲವೇ ಎಂದು ಪ್ರಶ್ನಿಸಿರುವ ವಿನಾಯಕ್ ಆರಗ ಜ್ಞಾನೇಂದ್ರರ ಈ ಮುಖವಾಡ ರಾಜಕಾರಣದ ವಿರುದ್ಧ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ತಾಲ್ಲೂಕು ಕಚೇರಿ ಎದುರು ಸತ್ಯಾಗ್ರಹ ಹೂಡುವುದಾಗಿ ಎಚ್ಚರಿಸಿದ್ದಾರೆ.

Categories
ಚುನಾವಣಾ ಸುದ್ದಿ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ‘ಶೋಕಾಸ್’ ನೋಟಿಸ್..!!

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ‘ಶೋಕಾಸ್’ ನೋಟಿಸ್..!!
– ಪದೇ ಪದೇ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್
– ನೋಟೀಸ್ ಬೆನ್ನಲ್ಲೇ ದೆಹಲಿಗೆ ತೆರಳಿದ ಯತ್ನಾಳ್

NAMMUR EXPRESS NEWS
ಬೆಂಗಳೂರು: ಬಿಜೆಪಿಯಲ್ಲಿನ ಒಳಜಗಳ,ಬಣಬಡಿದಾಟ ತಾರಕಕ್ಕೇರುತ್ತಿದ್ದಂತೆ ಕೇಂದ್ರ ಹೈಕಮಾಂಡ್ ಎಂಟ್ರೀ ಕೊಟ್ಟಿದೆ. ಪದೇ ಪದೇ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ಶೋಕಾಸ್ ನೋಟೀಸ್ ನೀಡಲಾಗಿದೆ. ಬಿಜೆಪಿ ಹೈಕಮಾಂಡ್‌ ಬಿ ವೈ ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದಾಗಿನಿಂದಲೂ ಸಹ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಬಳಿಕ ಯತ್ನಾಳ್ ಹಾಗೂ ಬಿ ವೈ ವಿಜಯೇಂದ್ರ ಬಣಗಳ ನಡುವಿನ ಬಣ ಬಡಿದಾಟ ಮತ್ತಷ್ಟು ತೀವ್ರವಾಗಿತ್ತು. ಇದೀಗ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ನಿಲುವು ಹೊಂದಿದ್ದ ಹಿನ್ನೆಲೆಯಲ್ಲಿ ವಿಜಯಪುರ ಬಿಜೆಪಿ ಶಾಸಕ ಯತ್ನಾಳ್ ಗೆ ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿಯು ಶೋಕಾಶ್ ನೋಟಿಸ್ ಜಾರಿ ಮಾಡಿದೆ. ಶಾಸಕ ಯತ್ನಾಳ್‌ರ ಈ ನಡೆಯ ವಿರುದ್ಧ ಬಿಜೆಪಿಯ ಹಲವು ಶಾಸಕರು, ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹಿರಿಯ ನಾಯಕ ಡಿ.ವಿ ಸದಾನಂದಗೌಡ ಕೇಂದ್ರ ಹೈಕಮಾಂಡ್ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದರು. ನೋಟೀಸ್ ನೀಡಿದ ಬೆನ್ನಲ್ಲೇ ಯತ್ನಾಳ್ ದೆಹಲಿಗೆ ತೆರಳಿದ್ದು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ‌.

Categories
ಚುನಾವಣಾ ಸುದ್ದಿ

ಚನ್ನಪಟ್ಟಣದಲ್ಲಿ ಕಿಮ್ಮನೆ ಕಮಾಲ್: ಹೇಳಿದ್ದು ನಿಜವಾಯ್ತು!

ಚನ್ನಪಟ್ಟಣದಲ್ಲಿ ಕಿಮ್ಮನೆ ಕಮಾಲ್: ಹೇಳಿದ್ದು ನಿಜವಾಯ್ತು!
– ಸಚಿವರು, ಮುಖಂಡರ ಜತೆ ಪ್ರಚಾರ ಮಾಡಿದ್ದ ಕಿಮ್ಮನೆ

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಈ ಬಾರಿ ತಮ್ಮ ತಂಡದೊಂದಿಗೆ ವಿಶೇಷ ಪ್ರಚಾರ ಮಾಡಿದ್ದರು. ಸಚಿವರು, ಶಾಸಕರ ಜತೆ ತೆರಳಿ ಮನೆ ಮನೆ ಪ್ರಚಾರ ಮಾಡಿದ್ದರು. ಜತೆಗೆ ಮಾಧ್ಯಮಗಳ ಜತೆ ಮಾತನಾಡಿ ಈ ಚುನಾವಣೆಯಲ್ಲಿ ಯೋಗೇಶ್ವರ್ ಅವರು 25 ಸಾವಿರ ಲೀಡ್ ಪಡೆಯಲಿದ್ದಾರೆ ಎಂದಿದ್ದರು. ಇದೀಗ ಯೋಗೇಶ್ವರ್ ಅವರು 25, 357 ಮತಗಳ ಅಂತರದಿಂದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಅಧಿಕಾರ: ತೀರ್ಥಹಳ್ಳಿಯಲ್ಲಿ ವಿಜಯೋತ್ಸವ
– ಪಟಾಕಿ ಹೊಡೆದು ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

ಮಹಾರಾಷ್ಟ್ರದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಐತಿಹಾಸಿಕ ದಿಗ್ವಿಜಯ ದಾಖಲಿಸಿದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು. ಬಿಜೆಪಿ ಅಧ್ಯಕ್ಷರಾದ ಹೆದ್ದೂರು ನವೀನ್, ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಕುಕ್ಕೆ ಪ್ರಶಾಂತ್, ಯುವ ಘಟಕದ ತಾಲೂಕು ಅಧ್ಯಕ್ಷರಾದ ಸಂತೋಷ್ ದೇವಾಡಿಗ, ಪ್ರಮುಖರಾದ ಪೂರ್ಣೇಶ್ ಪೂಜಾರಿ, ಪ್ರಸನ್ನ ಅಂದಗೆರೆ, ಸಂತೋಷ್ ಬಾಳೆಬೈಲು ಇತರರು ಇದ್ದರು.

 

Categories
ಚುನಾವಣಾ ಸುದ್ದಿ

ಈಗ ಚನ್ನ ಪಟ್ಟಣ ರಾಜಕೀಯ ಕುತೂಹಲ!

ಈಗ ಚನ್ನ ಪಟ್ಟಣ ರಾಜಕೀಯ ಕುತೂಹಲ!
– ನಿಖಿಲ್ ಕಣಕ್ಕೋ… ಯೋಗೇಶ್ವರ್ ಕಣಕ್ಕೋ..?
– ಬೊಮ್ಮಾಯಿ ಪುತ್ರನಿಗೆ ಶಿಗ್ಗಾವಿ ಬಿಜೆಪಿ ಟಿಕೆಟ್‌
– ಬಂಗಾರು ಹನುಮಂತುಗೆ ಸಂಡೂರು ಟಿಕೆಟ್
– ಇನ್ನು ಚನ್ನಪಟ್ಟಣ ಮೈತ್ರಿ ಟಿಕೆಟ್ ಘೋಷಣೆ ಇಲ್ಲ

NAMMUR EXPRESS NEWS
ಬೆಂಗಳೂರು: ರಾಜ್ಯದ ಮೂರು ಸ್ಥಾನಗಳಿಗೆ ನಡೆಯುವ ಉಪ ಚುನಾವಣೆ ಪೈಕಿ ಬಿಜೆಪಿ ಹೈಕಮಾಂಡ್ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇದೀಗ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಟಿಕೆಟ್ ಘೋಷಿಸಲಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರದಿಂದ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಇನ್ನು ಕೂಡ ಟಿಕೆಟ್ ಘೋಷಣೆ ಮಾಡಿಲ್ಲ. ನ.13ರಂದು ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ

Categories
ಚುನಾವಣಾ ಸುದ್ದಿ

ಸರ್ಕಾರಿ ನೌಕರರ ಸಂಘದ ಚುನಾವಣೆಗೆ ರಂಗು!

ಸರ್ಕಾರಿ ನೌಕರರ ಸಂಘದ ಚುನಾವಣೆಗೆ ರಂಗು!

* ಮತದಾರರ ಪಟ್ಟಿಯನ್ನೇ ಪ್ರಕಟಿಸದೇ ಚುನಾವಣೆ?
* ಪುನಃ ಮತದಾರರ ಪಟ್ಟಿ ತಯಾರಿಸಲು ಒತ್ತಾಯ!

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ರಂಗು ಬಂದಿದೆ. ಹಾಲಿ ಅಧ್ಯಕ್ಷ ಷಡಾಕ್ಷರಿ ಗುಂಪಿನ ವಿರುದ್ಧ ಇದೀಗ ಮತ್ತೊಂದು ತಂಡ ಸಜ್ಜಾಗಿದೆ. ಪ್ರಜಾಸತ್ತಾತ್ಮಕ ನೌಕರರ ವೇದಿಕೆ ಹೆಸರಿನಲ್ಲಿ ಸ್ಪರ್ಧೆಗೆ ಇಳಿಯಲಿದೆ.
ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತರಾಮ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಸಂಘದ ಮಾಜಿ ಗೌರವಾಧ್ಯಕ್ಷ ಆರ್. ಶಿವರುದ್ರಯ್ಯ,ಪ್ರಾಥಮಿಕ ಶಿಕ್ಷಕರ ಸಂಘದ ನಾಗೇಶ್, ಚಂದ್ರಶೇಖ‌ರ್ ನುಗ್ಗಲಿ, ಪಿಯು ಶಿಕ್ಷಕರ ಸಂಘದ ನಿಂಗೇಗೌಡ, ಹೈಸ್ಕೂಲ್ ಶಿಕ್ಷಕರ ಸಂಘದ ಮಂಜುನಾಥ್ ಸೇರಿ ಹತ್ತಕ್ಕೂ ಹೆಚ್ಚು ಇಲಾಖೆಗಳ ನೌಕರರ ಸಂಘಗಳ ಪದಾಧಿಕಾರಿಗಳು ಒಂದಾಗಿದ್ದಾರೆ. ಮತದಾರರ ಪಟ್ಟಿಯನ್ನೇ ಪ್ರಕಟಿಸದೇ ಚುನಾವಣೆಗೆ ಮುಂದಾದ ಬಗ್ಗೆ ಗುಲ್ಬರ್ಗಾ ಹೈಕೋರ್ಟ್ ಪೀಠದಲ್ಲಿ ಹೊರ ಬಂದಿರುವ ತೀರ್ಪು ಇದೀಗ ಮಹತ್ವ ಪಡೆದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟ ಅರ್ಹರು ಸಹ ಚುನಾವಣೆಗೆ ಸ್ಪರ್ಧಿಸಬಹುದೆಂದು ತೀರ್ಪು ನೀಡಲಾಗಿದೆ.

ಪುನಃ ಮತದಾರರ ಪಟ್ಟಿ ತಯಾರಿಸಲು ಒತ್ತಾಯ!

ಕಂದಾಯ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಅವರನ್ನು ಅಧ್ಯಕ್ಷ ಸ್ಥಾನಕ್ಕೂ, ಮಾಜಿ ಗೌರವಾಧ್ಯಕ್ಷ ಆರ್. ಶಿವರುದ್ರಯ್ಯ ಅವರನ್ನು ಖಜಾಂಚಿ ಸ್ಥಾನಕ್ಕೂ ಅಭ್ಯರ್ಥಿಗಳಾಗಿ ಘೋಷಣೆ ಮಾಡಿದೆ. ಚುನಾವಣೆಗೆ ಇನ್ನೂ ಎರಡೂವರೆ ತಿಂಗಳು ಇರುವಾಗಲೇ ಘೋಷಣೆ ಮಾಡಿ ಹಾಲಿ ತಂಡಕ್ಕೆ ಸಡ್ಡು ಹೊಡೆದಿದ್ದಾರೆ. ಮತದಾರರ ಪಟ್ಟಿ ಇನ್ನೂ ಜಿಲ್ಲಾ ಘಟಕಗಳಿಗೆ ತಲುಪಿಲ್ಲ, ಕರಡು ಪಟ್ಟಿಯನ್ನು ಪ್ರಕಟಿಸಲಿಲ್ಲ, ಆದ್ದರಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಆಗಿಲ್ಲ. ನಮ್ಮಂತಹ ಅನೇಕ ಅರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಆಡಳಿತಾಧಿಕಾರಿ ನೇತೃತ್ವದಲ್ಲಿ ಮತ್ತೆ ಹೊಸದಾಗಿ ಮತದಾರರ ಪಟ್ಟಿ ತಯಾರಿಸಿ, ಚುನಾವಣಾ ಪ್ರಕ್ರಿಯೆ ನಡೆಸಬೇಕೆಂದು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

Categories
ಕರಾವಳಿ ಚುನಾವಣಾ ಸುದ್ದಿ ರಾಜಕೀಯ ರಾಜ್ಯ

ಲೋಕಸಭೆಗೆ ಕೋಟಾ: ವಿಧಾನ ಪರಿಷತ್‌ ಸ್ಥಾನಕ್ಕೆ ಯಾರು?

ಲೋಕಸಭೆಗೆ ಕೋಟಾ: ವಿಧಾನ ಪರಿಷತ್‌ ಸ್ಥಾನಕ್ಕೆ ಯಾರು?

– ಕರಾವಳಿಯಲ್ಲಿ ಮತ್ತೊಂದು ಚುನಾವಣೆ
– ಕಟೀಲ್ ಅವರಿಗೆ ಸಿಗುತ್ತಾ ಟಿಕೆಟ್?

NAMMUR EXPRES NEWS
ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಇದೀಗ ವಿಧಾನ ಪರಿಷತ್‌ನ ಅವರ ಸ್ಥಾನ ತೆರವಾಗಲಿದೆ. ಹೀಗಾಗಿ, ಇದೀಗ ಮತ್ತೊಂದು ಚುನಾವಣೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯು ಸಜ್ಜಾಗಬೇಕಿದೆ.

ಕೋಟ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಒಳಗೊಂಡಿರುವ ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರಕ್ಕೆ 2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯು ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬ ಅಭ್ಯರ್ಥಿಯನ್ನಷ್ಟೇ ಕಣಕ್ಕೆ ಇಳಿಸಿ ಎರಡೂ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಪರಿಷತ್‌ನಲ್ಲಿ ಈ ಕ್ಷೇತ್ರದಿಂದ ಭದ್ರಪಡಿಸಿಕೊಂಡಿತ್ತು. ಅದರಂತೆ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರು ಆಯ್ಕೆಯಾಗಿದ್ದರೆ, ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಅವರು ಆಯ್ಕೆಯಾಗಿದ್ದರು. ಎಲ್ಲ ಕ್ಷೇತ್ರಗಳಂತೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಪರಿಷತ್‌ ಸದಸ್ಯರ ಅವಧಿಯು 6 ವರ್ಷಗಳಾಗಿವೆ. ಹೀಗಿರುವಾಗ, ಶ್ರೀನಿವಾಸ ಪೂಜಾರಿ ಅವರ ಪರಿಷತ್‌ ಅವಧಿ ಇನ್ನು ಕೂಡ ಮೂರುವರೆ ವರ್ಷ ಬಾಕಿಯಿದೆ.
ಸ್ಥಳೀಯ ಸಂಸ್ಥೆಗಳ ಪರಿಷತ್‌ನ ಈ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಸದಸ್ಯರು ಈ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರು. ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆ ಇನ್ನೂ ನಡೆಯದೆ ಬಾಕಿಯಿದೆ. ಶೀಘ್ರದಲ್ಲೇ ಪಂಚಾಯತ್‌ ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ.

ವಿಧಾನ ಪರಿಷತ್‌ ಉಪ ಚುನಾವಣೆಗೂ ಮೊದಲೇ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆದರೆ ಮತದಾರರ ಸಂಖ್ಯೆ ಹೆಚ್ಚಲಿದೆ. ಇಲ್ಲದಿದ್ದರೆ ಈಗಿರುವ ಇತರೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹತೆ ಪಡೆಯಲಿದ್ದಾರೆ.

ಒಂದುವೇಳೆ, ಕೋಟ ಅವರಿಂದ ತೆರವಾಗುವ ಪರಿಷತ್‌ ಸ್ಥಾನಕ್ಕೆ ಚುನಾವಣೆ ಘೋಷಣೆಯಾದರೆ, ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇನ್ನು ಬಿಜೆಪಿಯಲ್ಲಿ ಈ ಕ್ಷೇತ್ರದ ಮೇಲೆ ಘಟಾನುಘಟಿ ನಾಯಕರೇ ಕಣ್ಣಿಟ್ಟಿದ್ದಾರೆ. ಮಾಜಿ ಸಂಸದರಾದ ನಳಿನ್‌ ಕುಮಾರ್‌ ಕಟೀಲು ಅವರು ಈ ಕ್ಷೇತ್ರದಿಂದ ಟಿಕೆಟ್‌ ಪಡೆಯುವ ಮೂಲಕ ಪರಿಷತ್‌ ಪ್ರವೇಶಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅದೇರೀತಿ, ಕಳೆದ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಇತ್ತೀಚಿನ ಚುನಾವಣೆಗಳಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿಯ ಅನೇಕ ನಾಯಕರು ಕೂಡ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಈಗಾಗಲೇ ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸದ್ಯ ಬಿಜೆಪಿ ವಶದಲ್ಲಿರುವ ಈ ಕರಾವಳಿ ಭಾಗದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಮುಂದಿನ ದಿನಗಳಲ್ಲಿ ಯಾರು ಚಿಂತಕರ ಚಾವಡಿಯಾಗಿರುವ ವಿಧಾನ ಪರಿಷತ್‌ ಪ್ರವೇಶಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Categories
ಚುನಾವಣಾ ಸುದ್ದಿ ರಾಜಕೀಯ ರಾಷ್ಟ್ರೀಯ ವಾರ್ತೆ

ಮೋದಿ ಪದಗ್ರಹಣಕ್ಕೆ ದೇಶದ ಕಾತುರ!

ಮೋದಿ ಪದಗ್ರಹಣಕ್ಕೆ ದೇಶದ ಕಾತುರ!

– ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ: ಭಾರೀ ಪೊಲೀಸ್‌ ಬಂದೋಬಸ್ತ್

NAMMUR EXPRESS NEWS
ನವದೆಹಲಿ: ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಲುವಾಗಿ ಭಾರೀ ಭದ್ರತೆ ಕಲ್ಪಿಸಲು ಸಿದ್ಧತೆ ನಡೆದಿದೆ.

ರಾಷ್ಟ್ರಪತಿ ಭವನದ ಸುತ್ತ ಅರೆಸೇನಾ ಪಡೆ ಸಿಬ್ಬಂದಿ, ಎನ್‌ಎಸ್‌ಜಿ ಕಮಾಂಡೋಗಳು, ಡ್ರೋನ್ ಗಳು ಮತ್ತು ಸೈಪರ್‌ಗಳ ಬಹು ಹಂತದ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ಕ್ (ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ) ರಾಷ್ಟ್ರಗಳ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.

ಪ್ರಮಾಣ ವಚನದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಅವರ ಹೋಟೆಲ್‌ಗಳಿಂದ ರಾಷ್ಟ್ರಪತಿ ಭವನಕ್ಕೆ ತೆರಳಲು ಮತ್ತು ಹಿಂತಿರುಗಲು ನಿಗದಿತ ಮಾರ್ಗವನ್ನು ಸೂಚಿಸಲಾಗುತ್ತದೆ.

ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್ ಮತ್ತು ಸೆಶೆಲ್ಸ್‌ನ ಉನ್ನತ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ನಗರದ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‌ಗಳಲ್ಲಿ ಈಗಾಗಲೇ ಭದ್ರತೆ ಕೈಗೊಳ್ಳಲಾಗಿದೆ. ರಾಷ್ಟ್ರಪತಿ ಭವನದ ಆವರಣದ ಒಳಗೆ ಮತ್ತು ಹೊರಗೆ ಮೂರು ಹಂತದ ಭದ್ರತೆಯನ್ನು ಹೊಂದಿರುತ್ತದೆ. ದೆಹಲಿ ಪೊಲೀಸ್‌ ಸಿಬ್ಬಂದಿಯನ್ನು ಹೊರ ಆವರಣದಲ್ಲಿ ನಿಯೋಜಿಸಲಾಗುವುದು ಮತ್ತು ಅರೆಸೇನಾ ಸಿಬ್ಬಂದಿಯನ್ನು ಭವನದ ಆಂತರಿಕ ಭದ್ರತೆಗೆ ನಿಯೋಜಿಸಲಾಗಿದೆ. ದೆಹಲಿ ಸಶಸ್ತ್ರ ಪೊಲೀಸ್‌ (ಡಿಎಪಿ) ಜವಾನರು ಸೇರಿದಂತೆ ಸುಮಾರು 2500 ಪೊಲೀಸ್‌ ಸಿಬ್ಬಂದಿಯನ್ನು ಸ್ಥಳದ ಸುತ್ತಲೂ ನಿಯೋಜಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.