ತೀರ್ಥಹಳ್ಳಿಯ ಎಲ್ಲೆಡೆ ಶಾಂತಿಯುತ ಮತದಾನ!
– ಘಟಾನುಘಟಿ ನಾಯಕರಿಂದ ಮತದಾನ: ಬಿಸಿಲ ನಡುವೆ ಉತ್ತಮ ಪ್ರತಿಕ್ರಿಯೆ
– ಮತಗಟ್ಟೆಗಳಿಗೆ ಭೇಟಿ ನೀಡಿದ ಆರಗ, ಕಿಮ್ಮನೆ, ಆರ್. ಎಂ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಮುಂಜಾನೆಯಿಂದಲೇ ಮತದಾನ ಬಿರುಸಾಗಿ ನಡೆಯಿತು. ಮಧ್ಯಾಹ್ನ ಬಿಸಿಲು ಹಾಗು ಸಂಜೆ ಮಳೆಯ ಆತಂಕದ ಹಿನ್ನೆಲೆಯಲ್ಲಿ ಮತದಾರರು ಬೆಳಗ್ಗೆಯೇ ಮತ ಹಾಕಲು ಧಾವಿಸಿದರು. ತೀರ್ಥಹಳ್ಳಿ ತಾಲೂಕಿನ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ತಾಲೂಕಿನ ಘಟಾನುಘಟಿ ನಾಯಕರಾದ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಡಾ.ಆರ್ ಎಂ ಮಂಜುನಾಥ್ ಗೌಡ ಮತದಾನ ಮಾಡಿದರು.
ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ಶಾಲೆಯಲ್ಲಿ ಆರ್ ಎಂ ಮಂಜುನಾಥ್ ಗೌಡ ಮತದಾನ ಮಾಡಿ ಈ ಬಾರಿ ಗೀತಾ ಶಿವರಾಜಕುಮಾರ್ ಅವರಿಗೆ ಗೆಲುವು,ಎಲ್ಲರೂ ತಪ್ಪದೆ ಮತ ಚಲಾಯಿಸಿ ಎಂದರು.
ಇನ್ನು ಶಾಸಕ ಆರಗ ಜ್ಞಾನೇಂದ್ರ ಅವರು ಗುಡ್ಡೆಕೊಪ್ಪ ಸರ್ಕಾರಿ ಶಾಲೆಗೆ ಕುಟುಂಬಸ್ಥರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಎಲ್ಲಾರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ಆಚರಿಸೋಣ ಎಂದರು. ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಸೊಪ್ಪುಗುಡ್ಡೆಯಲ್ಲಿ ಮತದಾನ ಮಾಡಿದರು.
ಎಲ್ಲಾ ಬೂತಲ್ಲೂ ಸ್ನೇಹ ಮಯ ರಾಜಕಾರಣ!
ತೀರ್ಥಹಳ್ಳಿ ತಾಲೂಕಿನ ಎಲ್ಲಾ ಬೂತಲ್ಲೂ ಸ್ನೇಹ ಮಯವಾಗಿ ಮತದಾನ ನಡೆಯಿತು. ಬಿಸಿಲಿನ ತಾಪ ಹೆಚ್ಚಾದ ಕಾರಣ ಎರಡೂ ಪಕ್ಷದವರು ವಿವಿಧ ಪಾನೀಯ, ಊಟದ ವ್ಯವಸ್ಥೆಯನ್ನು ಪಕ್ಷಬೇಧ ಬಿಟ್ಟು ಮಾಡಿದರು.