ರಾಜ್ಯಕ್ಕೆ ಎಂಟ್ರಿಯಾದ ವರುಣ!
– ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
– ಬೆಂಗಳೂರಲ್ಲಿ ಒಂದು ವಾರದಿಂದ ಮಳೆ
– ಒಂದು ವಾರದಿಂದ ಭಾರೀ ಗಾಳಿ, ಮಳೆ: ವಿಮಾನ ಹಾರಾಟಕ್ಕೂ ಸಮಸ್ಯೆ
NAMMUR EXPRESS NEWS
ಬೆಂಗಳೂರು: ಕಾದ ಕಾವಲಿಯಂತಾಗಿದ್ದ ಕರುನಾಡಿಗೆ ವರುಣದೇವನ ಆಗಮನವಾಗಿದೆ. ಕಳೆದೊಂದು ವಾರದಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಬೆಂಗಳೂರು, ಮಲೆನಾಡು, ಕರಾವಳಿ ಸೇರಿ ರಾಜ್ಯದ ಹಲವೆಡೆ ಮಳೆ ಸೂಚನೆ ಕಂಡು ಬಂದಿದೆ. ಮಲೆನಾಡಿನ ಹಲವೆಡೆ ಮಳೆಯಾಗಿದ್ದು, ಮಲೆನಾಡಿನ ರೈತರ ಮೊಗದಲ್ಲಿ ಹರ್ಷ ಮೂಡಿದೆ. ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ 9 ದಿನಗಳ ಕಾಲ ಮಳೆ ಬರುವ ಮುನ್ಸೂಚನೆ ಕೂಡ ಇದೆ. ಮೇ 12ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ.
ಚಾಮರಾಜನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆ ಆಗಿದೆ. ಕೆಲವೇ ದಿನದಲ್ಲಿ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಬೀಳಲಿದೆ. ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮ ನಗರ, ಶಿವಮೊಗ್ಗ, ವಿಜಯನಗರ, ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಸ್ವಲ್ಪ ಮಳೆ ಬರಲಿದೆ. ಮೇ 11ರಂದು ಈ ಜಿಲ್ಲೆಗಳಲ್ಲದೇ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾ ಗಲಿದೆ. ಮುಂದಿನ ಒಂದು ವಾರ ಪ್ರತಿದಿನ ಸಂಜೆಯ ಹೊತ್ತಿಗೆ ಮಳೆ ಬರುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಮಾನ ಹಾರಾಟಕ್ಕೆ ಅಡಚಣೆಯಾದ ಮಳೆ!
ರಾಜಧಾನಿ ಬೆಂಗಳೂರಲ್ಲಿ ಗುರುವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗೆ ಗಮನಾರ್ಹ ಅಡಚಣೆ ಉಂಟಾಗಿತ್ತು. ಭಾರಿ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ರಾತ್ರಿ 9.35 ರಿಂದ ರಾತ್ರಿ 10.29 ರವರೆಗೆ ವಿಮಾನ ನಿಲ್ದಾಣವು ಇಳಿಯಲು ಸೂಕ್ತವಲ್ಲ, ಅಂತರರಾಷ್ಟ್ರೀಯ ಪ್ರಯಾಣಿಕರ ಮತ್ತು ಸರಕು ವಿಮಾನಗಳು ಸೇರಿದಂತೆ ಹಲವಾರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಒಟ್ಟು ಹದಿಮೂರು ದೇಶೀಯ ವಿಮಾನಗಳು, ಮೂರು ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಮತ್ತು ಒಂದು ಅಂತರರಾಷ್ಟ್ರೀಯ ಸರಕು ವಿಮಾನವನ್ನು ಚೆನ್ನೈಗೆ ಮರುನಿರ್ದೇಶಿಸಲಾಗಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ವಕ್ತಾರರು ತಿಳಿಸಿದ್ದಾರೆ.
ಚೆನ್ನೈಗೆ ತಿರುಗಿಸಿದ ದೇಶೀಯ ವಿಮಾನಗಳಲ್ಲಿ ಇಂಡಿಗೊದಿಂದ ನಾಲ್ಕು, ಏರ್ ಇಂಡಿಯಾ ಎಕ್ಸ್ಪ್ರೆಸ್ನಿಂದ ನಾಲ್ಕು, ವಿಸ್ತಾರಾದಿಂದ ಒಂದು, ಅಕಾಸಾ ಏರ್ನಿಂದ ಒಂದು, ಏರ್ ಇಂಡಿಯಾದಿಂದ ಒಂದು ಮತ್ತು ಸ್ಟಾರ್ ಏರ್ ನಿಂದ ಒಂದು ವಿಮಾನವಿತ್ತು. ಇದಲ್ಲದೆ, ಸಿಂಗಾಪುರದಿಂದ ಒಂದು ಸಿಂಗಾಪುರ್ ಏರ್ಲೈನ್ಸ್ ವಿಮಾನ, ಅಬುಧಾಬಿಯಿಂದ ಒಂದು ಎತಿಹಾದ್ ವಿಮಾನ ಮತ್ತು ಆಮ್ಸ್ಟರ್ಡ್ಯಾಮ್ನಿಂದ ಒಂದು ಕೆಎಲ್ಎಂ ವಿಮಾನವನ್ನು ಮೂರು ಅಂತರರಾಷ್ಟ್ರೀಯ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಮೇ 6 ರಂದು ಸುರಿದ ಭಾರಿ ಮಳೆಯಿಂದಾಗಿ ಚೆನ್ನೈಗೆ ಏಳು ಮತ್ತು ಕೊಯಮತ್ತೂರಿಗೆ ಒಂದು ಸೇರಿದಂತೆ ಎಂಟು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.