ಕರಾವಳಿ ಟಾಪ್ ನ್ಯೂಸ್
ಶಿರ್ವದ ಮದ್ರಸದಿಂದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ!
– ಕೆಎಸ್ಆರ್ಟಿಸಿ ಬಸ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
– ಬೈಕ್ ಅಪಘಾತದಲ್ಲಿ ಮೆಡಿಕಲ್ ವಿದ್ಯಾರ್ಥಿ ಸಾವು
NAMMUR EXPRESS NEWS
ಉಡುಪಿ ಜಿಲ್ಲೆಯ ಶಿರ್ವದ ಫೈಝಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ಮಂಗಳವಾರ ಮಧ್ಯಾಹ್ನದಿಂದ ಕಾಣೆಯಾಗಿರುವುದಾಗಿ ವರದಿಯಾಗಿದೆ. ವಿದ್ಯಾರ್ಥಿಗಳನ್ನು ಬಿಹಾರ ಮೂಲದ ತಬಾರಕ್, ಜಂಶೀದ್, ತಂಝೀರ್ ಆಲಮ್, ಶಾಹಿಲ್ ಎಂದು ಗುರುತಿಸಲಾಗಿದೆ. ಈ ಮಕ್ಕಳಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಮದ್ರಸ ಶಿಕ್ಷಣ ಕಲಿಯುತ್ತಿದ್ದ ನಾಲ್ವರು ಮೇ 14ರಂದು ಮಧ್ಯಾಹ್ನದ ವೇಳೆ ಮದ್ರಸದಿಂದ ಹೊರಗಡೆ ಹೋದವರು ಈವರೆಗೂ ವಾಪಾಸ್ ಬರದೆ ನಾಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳು ಊರಿಗೆ ಹೋಗಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ನಾಲ್ವರು ಕಾಣೆಯಾಗಿರುವ ಬಗ್ಗೆ ಫೈಝಲ್ ಇಸ್ಲಾಂ ಎಜ್ಯುಕೇಷನ್ ಟ್ರಸ್ಟ್ನ ಫರ್ವೇಝ್ ಸಲೀಂ ಅವರು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಕೆಎಸ್ಆರ್ಟಿಸಿ ಬಸ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು!
ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಗರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ(23) ಎಂದು ಗುರುತಿಸಲಾಗಿದೆ. ಮೋಕ್ಷಿತ್ ಅವರು ಪುರುಷರಕಟ್ಟೆಯಲ್ಲಿರುವ ಬಿಂದು ಫ್ಯಾಕ್ಟರಿಯಲ್ಲಿ ಸಿಫಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪುರುಷರಕಟ್ಟೆಯಲ್ಲಿ ರೂಮ್ ಮಾಡಿಕೊಂಡು ನೆಲೆಸಿದ್ದ ಮೋಕ್ಷಿತ್ ಅವರು ಸರ್ವೀಸ್ಗೆ ಇಟ್ಟಿದ್ದ ತಮ್ಮ ಬೈಕ್ ಅನ್ನು ವಾಪಾಸ್ ತರುತ್ತಿದ್ದ ವೇಳೆ ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
ಕಾಸರಗೋಡು: ಬೈಕ್ ಅಪಘಾತದಲ್ಲಿ ಮೆಡಿಕಲ್ ವಿದ್ಯಾರ್ಥಿ ಸಾವು
ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ಕಾಸರಗೋಡಿನ ಚಟ್ಟಂಚಾಲ್ ಎಂಬಲ್ಲಿ ನಡೆದಿದೆ. ಚಟ್ಟಂಚಾಲ್ ಸಬ್ ಟ್ರೆಜರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ತೆಕ್ಕಿಲ್ ಬೆಂಡಿಚ್ಚಾಲ್ ನಿವಾಸಿ ಮುಹಮ್ಮದ್ ತಸ್ಲೀಮ್(20) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ತಸ್ಲೀಮ್ ಅವರು ಮಂಗಳೂರಿನ ಕಾಲೇಜುವೊಂದರಲ್ಲಿ ವೈದ್ಯ ಪದವಿ ಓದುತ್ತಿದ್ದರು. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.