ಕರೋನಾ ಬದುಕು ಬದಲಿಸಿತು!
– ಕೆಲಸದಿಂದ ತೆಗೆದ ಕಾರಣಕ್ಕೆ ವಿಡಿಯೋ ಮಾಡಿ ಜೀವನ ಕಳೆದ ಮಿಷನ್ ಆಪರೇಟರ್
– ಈಗ ಜಗತ್ತಿನ ಪ್ರಸಿದ್ಧ ವ್ಯಕ್ತಿ: ನೂರಾರು ಕೋಟಿ ಒಡೆಯ!
– ಬದುಕು ಹೀಗೆ..ಒಂದು ಸಣ್ಣ ಅವಕಾಶ ಬೇಕಷ್ಟೆ..!
2020 ಜಗತ್ತಿನಲ್ಲಿ ಕರೋನಾ ರಾಕ್ಷಸನ ದಾಳಿಯಿಂದ ಲಕ್ಷಾಂತರ ಸಾವು ನೋವುಗಳಾದವು. ಬಹಳಷ್ಟು ಕೋಟಿ ಕೋಟಿ ಜನ ಕೆಲಸ ಕಳೆದುಕೊಂಡರು; ಹಸಿವಿನಿಂದ ಬಳಲಿದರು. ಬಹಳಷ್ಟು ಜನರ ಬದುಕು ಮೂರಾಬಟ್ಟೆಯಾಯಿತು.ಒಂದೊತ್ತು ಊಟಕ್ಕೂ ಪರದಾಟವಾಯಿತು. ಇಡೀ ವಿಶ್ವ ಪ್ರಯೋಗ ಶಾಲೆಯಾಯಿತು. ಆದರೆ ಕರೊನಾ ಜಗತ್ತಿಗೆ ಹೊಸ ಪಾಠ ನೀಡಿತ್ತು…!
ಸಾವಿರಾರು ಜನರ ಬಲಿ ತೆಗೆದುಕೊಂಡ ಕರೋನಾ ಸಾವಿರಾರು ಜನರಿಗೆ ಬದುಕನ್ನು ಕಲಿಸಿತು. ಹೌದು. ಇದೇ ಸಮಯದಲ್ಲಿ ಇಟಲಿಯ ಟುರಿನ್ ನಗರದ ಒಂದು ಖಾಸಗಿ ತಯಾರಕ ಕಂಪನಿಯಲ್ಲಿ C.N.C ಮಷಿನ್ ಆಪರೇಟರಾಗಿ ಕೆಲಸ ಮಾಡ್ತಿದ್ದ ಒಬ್ಬನನ್ನು ಮಾಲೀಕರು ಕೆಲಸದಿಂದ ತೆಗೆದು ಹಾಕಿದರು. ಅದು ಕೋವಿಡ್ ಕಾಲವಾಗಿದ್ದರಿಂದ ಇವರಿಗೆ ಬೇರೆ ಎಲ್ಲೂ ಕೆಲಸ ಸಿಗಲಿಲ್ಲ. ಆದರೆ ಆತ ಸುಮ್ಮನೆ ಕೂರಲಿಲ್ಲ.
ತನಗೆ ಗೊತ್ತಿದ್ದ ಇಟಲಿ ಭಾಷೆಯಲ್ಲಿ ಒಂದಿಷ್ಟು ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಹರಿಯಬಿಟ್ಟನು. ಅದು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ನಂತರ ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ಅಲ್ಲಿ ಬೇರೆಯವರು ಮಾಡಿದ ವಿಡಿಯೋಗಳನ್ನು ತೆಗೆದುಕೊಂಡು ಅದರಲ್ಲಿ ಸಂಕೀರ್ಣವಾಗಿ ಮಾಡಿದ್ದ ಲೈಫ್ ಹ್ಯಾಕ್ ಗಳನ್ನು ಸುಲಭವಾಗಿ ಮಾಡಿ ಅಣುಕಿಸಲು ಪ್ರಾರಂಭಿಸಿದನು. ಆ ವಿಡಿಯೋಗಳಲ್ಲಿ ಚಾರ್ಲಿ ಚಾಪ್ಲಿನ್ ಮತ್ತು ಮಿಸ್ಟರ್ ಬೀನ್ ರೀತಿ ಒಂದು ಪದವು ಮಾತನಾಡದೆ ವಿಶಿಷ್ಠ ಮ್ಯಾನರಿಸಮ್ನಲ್ಲಿ ಅಣುಕಿಸಿ ಜನಪ್ರಿಯತೆ ಗಳಿಸಲು ಪ್ರಾರಂಭಿಸಿತು. ಆಗ ಈ ಜಗತ್ತಿಗೇ ಹೊಸ ಕ್ರಿಯೇಟಿವ್ ವ್ಯಕ್ತಿಯೊಬ್ಬನ ಪರಿಚಯವಾಯಿತು ಅವರೇ ಖಬನೆ ಲ್ಯಾಮ್… ಮುಂದೆ ಅವರ ಹೆಸರು ಖಬಿ ಲ್ಯಾಮ್ ಎಂದು ಬದಲಿಸಿಕೊಂಡು ಖ್ಯಾತಿ ಗಳಿಸಿದ್ದಾರೆ.
ಅತೀ ಹೆಚ್ಚು ಜನಪ್ರಿಯತೆ
ಖಬಿ ಲ್ಯಾಮ್ ಆಫ್ರಿಕಾದ ಸೇನಗಲ್ ನಲ್ಲಿ 9 ಮಾರ್ಚ್ 2000ರಲ್ಲಿ ಜನಿಸಿದರು. ಖಬಿ ಒಂದು ವರ್ಷವಾಗಿದ್ದಾಗ ಇವರು ಕುಟುಂಬ ಇಟಲಿಯ ಚಿವಸ್ಸೋ ವಿನ ಪಬ್ಲಿಕ್ ಹೌಸಿಂಗ್ ಕಾಂಪ್ಲೆಕ್ಸ್ಗೆ ವಲಸೆಹೋದರು. ಇವರ ಡ್ಯೂಯ್ಟ್ ಮತ್ತು ಸ್ವಿಚ್ ಪ್ರಖ್ಯಾತ ಟಿಕ್ ಟಾಕ್ ವಿಡಿಯೋಗಳು. ಏಪ್ರಿಲ್ 2021ರಲ್ಲಿ ಇಟಲಿಯ ಅತಿ ಹೆಚ್ಚು ಟಿಕ್ ಟಾಕ್ ಫಲೋವರ್ ಹೊಂದಿರುವ ಗಿಯನ್ಲುಕ ವಚ್ಚಿ ಅವರಿಗಿಂತ ಹೆಚ್ಚಿನ ಫಲೋವರ್ ಹೊಂದುತ್ತಾರೆ. ವಿಶ್ವದ ಯುವ ಸುಂದರಿಯರಾದ ಅಡಿಸಂನ್ ರೇ ಅವರನ್ನು ಜುಲ್ಯೆ 2021ರಲ್ಲಿ , ಬೆಲ್ಲ ಪೋರ್ಚ್ ಅವರನ್ನು ಹಾಗೂ ಜಗತ್ತಿನಲ್ಲಿ ಅತಿ ಹೆಚ್ಚು ಫಲೋವರ್ ಹೊಂದಿರುವ ಚಾರ್ಲಿ ಡಿ ಮೇಲಿಯೋ ಅವರನ್ನು ಜೂನ್ 2022ರಲ್ಲಿ ಹಿಂದಿಕ್ಕಿ ಜಗತ್ತಿನಲ್ಲಿ ಅತಿ ಹೆಚ್ಚು ಟಿಕ್ ಟಾಕ್ ಫಲೋವರ್ ಹೊಂದಿರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಪ್ರಸ್ತುತ ಟಿಕ್ ಟಾಕ್ನಲ್ಲಿ 161 ಮಿಲಿಯನ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ 78.5 ಮಿಲಿಯನ್ ಫಾಲೋವರ್ ಹೊಂದಿದ್ದಾರೆ. ಇವರು ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ಮಾತ್ರವಲ್ಲದೆ ಪ್ರಮೋಷನ್ ಮತ್ತು ಜಾಹೀರಾತು ಮಾಡುವುದರ ಮೂಲಕ ಹಣವನ್ನು ಗಳಿಸಿಸುತ್ತಾರೆ.
ಪ್ರಸ್ತುತ ನೂರಾರು ಕೋಟಿ ರೂಪಾಯಿ ಹಣ ಗಳಿಸಿದ್ದಾರೆ.
ವಿಶ್ವದ ಖ್ಯಾತ ಫಾರ್ಚುನ್ ಹಾಗೂ ಫೋಬ್ಸ್ ಪಟ್ಟಿಯಲ್ಲೂ ಸ್ಥಾನ ಪಡೆಯುತ್ತಾರೆ. ಪ್ರತಿಷ್ಠಿತ ಕಂಪನಿಯ ಕಾರುಗಳನ್ನು ಹೊಂದಿದ್ದಾರೆ. ಕೊನೆಗೆ ಇವರು ಎಷ್ಟು ಪ್ರಖ್ಯಾತಿ ಹೊಂದಿದ್ದಾರೆ ಎಂದರೆ ಇವರ ವಿಶಿಷ್ಟವಾದ ಮ್ಯಾನರಿಸಮ್ನ ಇಮೋಜಿಗಳು ಲಭ್ಯವಿದೆ. ಇಂಟರ್ನೆಟ್ ಉಪಯೋಗಿಸವವರು ಇವರನ್ನು ಒಮ್ಮೆಯಾದರೂ ನೋಡಿರುತ್ತಾರೆ. ಇವರ ಇಷ್ಟು ಬೆಳವಣಿಗೆಗಳು ನಡೆದಿದ್ದು ಕರೋನಾ ನಂತರದ 2 ವರ್ಷಗಳಲ್ಲಿ..!
“ಆಗಿದ್ದೆಲ್ಲಾ ಒಳ್ಳೆಯದಕ್ಕೆ” ಎಂಬ ನಾಣ್ಣುಡಿಯಂತೆ ಅವರನ್ನು ಕೆಲಸದಿಂದ ವಜಾ ಮಾಡಿದ್ದೆ ಅವರ ಈ ಸಾಧನೆಗೆ ಕಾರಣವಾಯಿತೇ?. ಹೌದು. ಸಾಧನೆಗೆ ಕೆಲ ಒಮ್ಮೆ ಕಾರ್ಯ ವಿಧಾನ ;ಇನ್ನೂ ಕೆಲ ಒಮ್ಮೆ ಕಾರ್ಯ ಕ್ಷೇತ್ರವನ್ನೆ ಬದಲಿಸಬೇಕಾಗುತ್ತದೆ!. ಆದರೆ ಆಯ್ಕೆ ಮಾತ್ರ ನಿಮ್ಮದೇ? ಒಟ್ಟಿನಲ್ಲಿ ಹೇಳುವುದಾದರೆ ಕಥೆ ಮುಗಿಯಿತೆಂದು ಮುಚ್ಚಿದ ಬಾಗಿಲನ್ನೇ ನೋಡುತ್ತಾ ಕೂರುವ ಬದಲು, ಬೇರೆ ಬೇರೆ ಅವಕಾಶಗಳನ್ನು ಹುಡುಕಿ ಸಾಧಿಸುವುದು ಒಳ್ಳೆಯದು. ಎಲ್ಲರಿಗೂ 24 ಗಂಟೆಯೇ ಒಂದು ದಿನ. ಸೂರ್ಯ, ಚಂದ್ರ, ಗಾಳಿ, ಬೆಳಕು ಎಲ್ಲವೂ ಒಂದೇ. ಅವಕಾಶ ನೂರಾರು. ಒಮ್ಮೆ ಯೋಚಿಸಿ ಧೈರ್ಯದಿಂದ ಹೆಜ್ಜೆಯಿಡಿ. ಗುಡ್ ಲಕ್..!
ವಿಶೇಷ ಲೇಖನ: ಸೌಳಿ ನಾಗರಾಜ್