Categories
banking ಉದ್ಯೋಗ ಸುದ್ದಿ ಮಾಹಿತಿ ಮಾಹಿತಿ ಸುದ್ದಿ ವಿಶೇಷ ಸುದ್ದಿ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರೀ ನೇಮಕಾತಿ! – ಕರ್ನಾಟಕದಲ್ಲಿ 1414 ಹುದ್ದೆಗಳು ಭರ್ತಿ:

ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ನೀಡಿದೆ.
ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿನ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಒಟ್ಟು ಬಾಕಿ ಇರುವ 11.403 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 1414 ಹುದ್ದೆಗಳು ಭರ್ತಿಯಾಗಲಿವೆ ಎನ್ನುವ ಮಾಹಿತಿ ಲಭಿಸಿದೆ. ಕರ್ನಾಟಕದಲ್ಲಿ ಬ್ಯಾಂಕ್ ವಾರು ಪ್ರಕಾರ ಬ್ಯಾಂಕ್ ಆಫ್ ಬರೋಡಾದಲ್ಲಿ 180 ಹುದ್ದೆಗಳು, ಬ್ಯಾಂಕ್ ಆಫ್ ಇಂಡಿಯಾದಲ್ಲಿ 40 ಹುದ್ದೆಗಳು, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 17 ಹುದ್ದೆಗಳು, ಕೆನರಾ ಬ್ಯಾಂಕ್ ನಲ್ಲಿ 800 ಹುದ್ದೆಗಳು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 29 ಹುದ್ದೆಗಳು, ಇಂಡಿಯನ್ ಬ್ಯಾಂಕ್ ನಲ್ಲಿ 40 ಹುದ್ದೆಗಳು, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 61 ಹುದ್ದೆಗಳು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 234 ಹುದ್ದೆಗಳು ಮತ್ತು ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ ನಲ್ಲಿ 5 ಹುದ್ದೆಗಳು ಬಾಕಿ ಉಳಿದಿವೆ. ಈ ಹುದ್ದೆಗಳಿಗೆ ಅಕ್ಟೋಬರ್ ತಿಂಗಳ 10 ಮತ್ತು 11ರಂದು ಪೂರ್ವಭಾವಿ ಪರೀಕ್ಷೆಗಳು ನಡೆಯಲಿದ್ದು, ಡಿಸೆಂಬರ್ 27ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಮಾರ್ಚ್ 2027ರಂದು ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
ಎಸ್ ಸಿ/ಎಸ್ ಟಿ/ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 175 ಹಾಗೂ ಸಾಮಾನ್ಯ ಮತ್ತು ಇತರ ವರ್ಗಗಳ ಅಭ್ಯರ್ಥಿಗಳು 850 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 21 ಆಗಸ್ಟ್ 2026.

Categories
ರಾಜ್ಯ ರಾಷ್ಟ್ರೀಯ ವಾರ್ತೆ ವಿಶೇಷ ಸುದ್ದಿ

ಭಾರತದಲ್ಲಿ ಈಗ ಎಲೆಕ್ಟ್ರಿಕಲ್ ವಾಹನ ಹವಾ!

ಭಾರತದಲ್ಲಿ ಈಗ ಎಲೆಕ್ಟ್ರಿಕಲ್ ವಾಹನ ಹವಾ!
– ಕಾರು, ಬೈಕ್, ಆಟೋ, ಬಸ್, ಗೂಡ್ಸ್ ವಾಹನವೂ ಇವಿ
– ಪೆಟ್ರೋಲ್, ಡೀಸೆಲ್ ನಂಬೋದು ಕಷ್ಟ: ಇವಿ ಇಷ್ಟ..!

ಭಾರತದಲ್ಲಿ ಈಗ ಇವಿ ವಾಹನಗಳ ಹವಾ ಶುರುವಾಗಿದೆ. 2026ರ ಹೊತ್ತಿಗೆ ಭಾರತೀಯ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಪ್ರಮುಖ ಬ್ರ್ಯಾಂಡ್‌ಗಳು ತಮ್ಮ ಹೊಸ ಮಾದರಿಗಳನ್ನು ಬಿಡುಗಡೆ ಮಾಡಿವೆ. ಭಾರತೀಯರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿದ್ಯುತ್ ಚಾಲಿತ ವಾಹನಗಳು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಅದಕ್ಕೆ ಅನುಗುಣವಾಗಿ ಕೆಲವು ಕಿಲೋಮೀಟರ್ ವರೆಗೂ ಪ್ರಯಾಣಿಸುವ ಅವಕಾಶವಿದೆ. ಅಂದರೆ ವಾಹನಗಳ ಬೆಲೆಗೆ ತಕ್ಕಂತೆ ಚಾರ್ಜ್ ಮತ್ತು ಚಲಾಯಿಸುವ ಅಂತರ ಹೆಚ್ಚು ಕಡಿಮೆಯಾಗುತ್ತದೆ. ಕೆಲವೊಮ್ಮೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳಲ್ಲೂ ಚಾರ್ಜ್ ಮಾಡಿಕೊಂಡು ಮುಂದೆ ಪ್ರಯಾಣಿಸುವ ಅವಕಾಶ ಕೂಡ ಇದೆ.

ಎಲೆಕ್ಟ್ರಿಕ್ ಕಾರಿಗೆ ಡಿಮ್ಯಾಂಡ್ ಡಿಮ್ಯಾಂಡ್!

ಎಲೆಕ್ಟ್ರಿಕ್ ಕಾರುಗಳ ಬೆಲೆ 6.31 ಲಕ್ಷದಿಂದ 89.99 ಲಕ್ಷದವರೆಗೆ ಲಭ್ಯವಿದೆ. ಪರಿಸರ ಸ್ನೇಹಿಯಾಗಿರುವ ಇದನ್ನು ಈಗಾಗಲೇ ಭಾರತದಲ್ಲಿ ಸಾಕಷ್ಟು ಜನರು ಬಳಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಗಗನ ಕುಸುಮವಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳು ಬಳಕೆಗೆ ಬರಲಿದೆ ಎಂದು ಅಂದಾಜಿಸಲಾಗುತ್ತಿದೆ. ಭಾರತದಲ್ಲಿಯೂ ಕೂಡ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, 2024 ರಲ್ಲೇ ಸುಮಾರು ಎರಡು ದಶಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಮಾರಾಟ ಕಂಡಿದೆ. ಅದರಲ್ಲೂ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳ ವಿಭಾಗದಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದ್ದು, ಆಟೋಮೊಬೈಲ್ ಮಾರಾಟದಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಶೇಕಡ ಏಳರಿಂದ ಎಂಟರಷ್ಟಿದೆ.

ಸರ್ಕಾರದಿಂದಲೂ ಇವಿಗೆ ಬೆಂಬಲ!

ಫೇಮ್, ಇಎಂಪಿಎಸ್ ನಂತಹ ಸಬ್ಸಿಡಿಗಳು ಮತ್ತು ಚಾರ್ಜಿಂಗ್ ಸ್ಟೇಷನ್ ಗಳ ಹೆಚ್ಚಳ ಹಾಗೂ ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಎಲೆಕ್ಟ್ರಾನಿಕ್ ವಾಹನಗಳ ಅಳವಡಿಕೆಯ ದರ ಕೂಡ ಹೆಚ್ಚಳವಾಗುತ್ತಿದೆ. ಈಗಾಗಲೇ ಸರ್ಕಾರವೂ ಕೂಡ 2030ರ ಒಳಗಾಗಿ ಮಾರಾಟವಾಗುವ ವಾಹನಗಳಲ್ಲಿ ಶೇಕಡ 30ರಷ್ಟು ಎಲೆಕ್ಟ್ರಾನಿಕ್ ವಾಹನಗಳು ಇರಬೇಕೆಂಬ ಗುರಿಯನ್ನು ಹೊಂದಿದೆ. ಕೇವಲ 2025 ಜುಲೈ ತಿಂಗಳೊಂದರಲ್ಲೇ 29.೦೦೦ಕ್ಕೂ ಹೆಚ್ಚಿನ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿರುವುದು ಎಲೆಕ್ಟ್ರಿಕ್ ವಾಹನಗಳಿಗಿರುವ ಬೇಡಿಕೆಗೆ ಸಾಕ್ಷಿಯಾಗಿದೆ.

ಕರ್ನಾಟಕ ಮುಂಚೂಣಿಯಲ್ಲಿದೆ…!

ಕರ್ನಾಟಕ, ತಮಿಳುನಾಡು ದೆಹಲಿ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಎಲೆಕ್ಟ್ರಾನಿಕ್ ವಾಹನಗಳ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ನ ಪೂರೈಕೆಯಲ್ಲಿನ ವ್ಯತ್ಯಯ, ಬೆಲೆ ಏರಿಕೆಯಿಂದಾಗಿ ಇನ್ನು ಹೆಚ್ಚಿನ ಜನರು ಎಲೆಕ್ಟ್ರಾನಿಕ್ ವಾಹನಗಳನ್ನು ಖರೀದಿಸಿ ಬಳಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯವನ್ನು ಕೂಡ ತಡೆಗಟ್ಟುವ ಒಂದು ಉತ್ತಮ ಕಾರ್ಯವನ್ನು ಕೂಡ ನಿರ್ವಹಿಸಿದಂತಾಗುತ್ತದೆ.

ಯಾವ ಯಾವ ಬ್ರಾಂಡ್ ಇವಿ ಇದೆ?

ದೇಶದ ಪ್ರತಿಷ್ಠಿತ ಕಾರು ಬ್ರಾಂಡ್ ಗಳಾದ ಟಾಟಾ, ಮಾರುತಿ, ಹೋಂಡಾಯಿ, ಕಿಯಾ, ಟೊಯೋಟಾ, ವೊಲ್ಸ್ ವಾಗನ್, ಎಂ ಜಿ, ಮಹೇಂದ್ರ, ರೇನಾಲ್ಟ್, ಬೆಂಜ್ ಸೇರಿ ಎಲ್ಲಾ ಕಂಪನಿಗಳು ಇವಿ ಕಾರು ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡುತ್ತಿವೆ. ಇವಿಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಪಾಲು ಅತಿ ಹೆಚ್ಚಿದೆ. ​ದ್ವಿಚಕ್ರ ವಾಹನಗಳು (e-2W) ಇವಿಗಳಲ್ಲಿ ಸುಮಾರು 55-60% ರಷ್ಟು ಪಾಲನ್ನು ಹೊಂದಿವೆ., ಓಲಾ, ಟಿವಿಎಸ್ ಮತ್ತು ಬಜಾಜ್ ಕಂಪನಿಗಳು ಇಲ್ಲಿ ಮುಂಚೂಣಿಯಲ್ಲಿವೆ. ​ತ್ರಿಚಕ್ರ ವಾಹನಗಳ ಸುಮಾರು 30-35% ಪಾಲು ಹೊಂದಿದ್ದು, ಸರಕು ಸಾಗಣೆ ಮತ್ತು ಆಟೋ ರಿಕ್ಷಾಗಳಲ್ಲಿ ಇವು ಅತಿ ಹೆಚ್ಚು ಬಳಕೆಯಲ್ಲಿವೆ. ಇವಿ ​ನಾಲ್ಕು ಚಕ್ರದ ವಾಹನಗಳು ಮಾರುಕಟ್ಟೆಯಲ್ಲಿ ಸುಮಾರು 5% ರಷ್ಟು ಪಾಲನ್ನು ಹೊಂದಿವೆ. ಟಾಟಾ ಮೋಟಾರ್ಸ್ ಈ ವಿಭಾಗದಲ್ಲಿ 43% ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿದೆ. ಎಲೆಕ್ಟ್ರಿಕ್ ಬಸ್‌ಗಳು ಕೂಡ ಭಾರತದಲ್ಲಿವೆ. ಸಾರ್ವಜನಿಕ ಸಾರಿಗೆಯಲ್ಲಿ ಇವುಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ಈಗ ಸಾವಿರಾರು ಸಂಖ್ಯೆಯಲ್ಲಿವೆ. ಸಾಗಾಣಿಕೆ ವಾಹನ ಕೂಡ ಎಲೆಕ್ಟ್ರಿಕ್ ಬರುತ್ತಿದೆ.

Categories
ತುಮಕೂರು ರಾಜ್ಯ ವಿಶೇಷ ಸುದ್ದಿ

ನಡೆದಾಡುವ ದೇವರು ದಿ.ಡಾ.ಶಿವಕುಮಾರ ಶ್ರೀಗಳ ಜನ್ಮ ದಿನ..!

ನಡೆದಾಡುವ ದೇವರು ದಿ.ಡಾ.ಶಿವಕುಮಾರ ಶ್ರೀಗಳ ಜನ್ಮ ದಿನ..!
– 111 ವರ್ಷ ಮನುಕುಲದ ಸೇವೆಗೆ ಜೀವನ ಮುಡಿಪು
– ಲಕ್ಷ ಲಕ್ಷ ಜನರಿಗೆ ಅನ್ನ, ವಿದ್ಯೆ, ಆಶ್ರಯ ನೀಡಿದ ಪರಮಾತ್ಮ

ಮತ್ತೆ ಹುಟ್ಟಿ ಬನ್ನಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ

ಕಣ್ಣಿಗೆ ಕಾಣುವ ದೇವರಾಗಿದ್ದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ತ್ರಿವಿಧ ದಾಸೋಹ ಮೂಲಕ ರಾಜ್ಯದಲ್ಲಿ ಲಕ್ಷ ಲಕ್ಷ ಜನರಿಗೆ ಅನ್ನ, ವಿದ್ಯೆ, ಆಸರೆ ನೀಡಿದವರು. ಅವರು ನಮ್ಮ ಮುಂದೆ ಇಲ್ಲವಾದರೂ ಅವರ ಸೇವೆ ಮನುಕುಲಕ್ಕೆ ಮಾದರಿ. ಮಾಗಡಿ ತಾಲ್ಲೂಕಿನ ವೀರಾಪುರ ಎನ್ನುವ ಗ್ರಾಮದಲ್ಲಿ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮ ಅವರ ಮಗನಾಗಿ 1908ರ ಏಪ್ರಿಲ್ 1ರಂದು ಜನಿಸಿದರು.

ಬಾಲ್ಯದಲ್ಲಿ ಶಿವಣ್ಣ ಎಂದು ಮನೆಯವರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಶ್ರೀಗಳು ತಮ್ಮ ಪ್ರಾಥಮಿಕ ಶಾಲಾ ಸಂದರ್ಭದಲ್ಲಿಯೇ ತಾಯಿಯನ್ನು ಕಳೆದುಕೊಂಡು ಅಕ್ಕನ ಆಸರೆಯಲ್ಲಿ ಬೆಳೆದರು. ನಂತರ ಧರ್ಮಛತ್ರದಲ್ಲಿ ಉಳಿದುಕೊಂಡು ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಆಗಾಗ ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠಕ್ಕೆ ಅವರು ತೆರಳುತ್ತಿದ್ದರು. ಅಂತಹ ಸಂದರ್ಭದಲ್ಲಿ ಮಠಾಧಿಪತಿಗಳಾಗಿದ್ದ ಶ್ರೀ ಶ್ರೀ ಶ್ರೀಉದ್ದಾನ ಶಿವಯೋಗಿ ಸ್ವಾಮೀಜಿಗಳು ಮತ್ತು ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗವು ಶಿವಣ್ಣನವರಿಗೆ ಒಂದು ರೀತಿಯ ಹಿತಾನುಭವ ನೀಡುತ್ತಿತ್ತು.

1930ರಲ್ಲಿ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದ ಸಂದರ್ಭದಲ್ಲಿ, ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ತೆರಳಿದ್ದ ಶಿವಣ್ಣ ಅವರನ್ನು ಹಿರಿಯ ಸ್ವಾಮಿಗಳಾದ ಶ್ರೀಉದ್ದಾನ ಸ್ವಾಮೀಜಿಗಳು ಮಠದ ಉತ್ತರಾಧಿಕಾರಿಯಾಗಿ ಘೋಷಿಸಿದರು. ಶಿವಣ್ಣ ಆಗಿದ್ದವರು ಮಠದ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಸ್ವೀಕರಿಸಿ, ಕಾವಿ ರುದ್ರಾಕ್ಷಿಗಳನ್ನು ಧರಿಸಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಎಂದು ಕರೆಸಿಕೊಂಡಿದ್ದು ಇತಿಹಾಸ.

ಧರ್ಮ, ಜಾತಿ, ಅಂತಸ್ತು ಮೀರಿದ ಮಾನವೀಯ ಸೇವೆ!

ಜಾತಿ ಧರ್ಮಗಳನ್ನು ಮೀರಿ ವಿದ್ಯಾರ್ಥಿಗಳಿಗೆ ಜ್ಞಾನ, ಆಸರೆ ಮತ್ತು ಅನ್ನ ನೀಡುವ ಮೂಲಕ ತ್ರಿವಿಧ ದಾಸೋಹಿ ಎನಿಸಿಕೊಂಡರು, ಬೆಳಗಿನ ಜಾವ ನಾಲ್ಕು ಗಂಟೆಗೆ ಏಳುವುದು, ಯೋಗ, ತಣ್ಣೀರಿನ ಸ್ನಾನದ ಬಳಿಕ ಇಷ್ಟಲಿಂಗ ಪೂಜೆ, ಪೂಜಾಕೋಣೆಯಲ್ಲಿ ಗಂಟೆಗಳ ಕಾಲ ಧ್ಯಾನ, ಮಿತ ಆಹಾರ, ಮಲಗುವ ಮೊದಲು ಪುಸ್ತಕ ಓದುವುದು ಇವರ ಆರೋಗ್ಯದ ಗುಟ್ಟು. ಪರಿಣಾಮವಾಗಿ ಶತಾಯುಷಿಗಳಾಗಿ ನಮ್ಮ ನಡುವೆ ಇದ್ದು ನಡೆದಾಡುವ ದೇವರು ಎನಿಸಿಕೊಂಡರು.

111ನೇ ವಯಸ್ಸಿನಲ್ಲಿ ವಿಧಿ ವಶ!

ಶ್ವಾಸಕೋಶದ ಸೋಂಕಿನಿಂದ ಬಳಲಿದ ಶ್ರೀಗಳು 2019ರ ಜನವರಿ 21ರಂದು ತಮ್ಮ 111ನೇ ವಯಸ್ಸಿನಲ್ಲಿ ಸಿದ್ಧಗಂಗಾದ ಹಳೆಯ ಮಠದಲ್ಲಿ ಶಿವೈಕ್ಯರಾದರು. ಇಂತಹ ದೈವಂಶ ಸಂಭೂತರು ನಮ್ಮ ನಡುವೆ ಇದ್ದರು ಎನ್ನುವುದೇ ನಮ್ಮ ಪುಣ್ಯ. ಇವರ ಮಾರ್ಗವನ್ನು ಅನುಸರಿಸಿ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ. ಅವರಿಗೆ ನಮನ ಸಲ್ಲಿಸೋಣ.

Categories
ತೀರ್ಥಹಳ್ಳಿ ಮಲ್ನಾಡ್ ವಿಶೇಷ ಸುದ್ದಿ

ತೀರ್ಥಹಳ್ಳಿಯಲ್ಲಿ ರಕ್ತದಾನದ ಮೂಲಕ ಪುನೀತ್ ನಮನ!

ತೀರ್ಥಹಳ್ಳಿಯಲ್ಲಿ ರಕ್ತದಾನದ ಮೂಲಕ ಪುನೀತ್ ನಮನ!
– ರಾಮಕೃಷ್ಣಪುರದ ಸಮರ್ಪಣಾ ತಂಡ, ರೋಟರಿ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ
– ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ನಾಡಿನಾದ್ಯಂತ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಅವರ ಅಭಿಮಾನಿಗಳು ಆಚರಿಸುತ್ತಿದ್ದು, ತೀರ್ಥಹಳ್ಳಿಯಲ್ಲೂ ಕೂಡ ಇದರ ಸಂಭ್ರಮಾಚರಣೆ ನಡೆಯುತ್ತಿದೆ. ಇಲ್ಲಿನ ರೋಟರಿ ಬ್ಲಡ್ ಬ್ಯಾಂಕ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಮಕೃಷ್ಣಪುರದ ಸಮರ್ಪಣಾ ತಂಡದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು, ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಈ ಕಾರ್ಯಕ್ರಮದ ಮೂಲಕ ಸುಮಾರು 25 ಜನ ದಾನಿಗಳು ತಮ್ಮ ರಕ್ತವನ್ನು ನೀಡಿದ್ದಾರೆ.

ಮುತ್ತುವಳ್ಳಿಯ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮರ್ಪಣಾ ತಂಡದಿಂದ ಮೂರನೇ ವರ್ಷದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ವಿಭಾಗದಲ್ಲಿ ರಕ್ತದ ಅವಶ್ಯಕತೆ ಇದ್ದ ಅದೆಷ್ಟೋ ಜನರಿಗೆ ತಮ್ಮ ಸಂಸ್ಥೆಯ ಮೂಲಕ ರಕ್ತವನ್ನು ದೊರಕಿಸುವ ಕಾರ್ಯವನ್ನು ಕೈಗೊಂಡು, ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದೆ. ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರಾದ ಡಾ/ಸಿ.ಎನ್. ಮಂಜುನಾಥ್ ಅವರಿಂದ ಅಭಿನಂದನಾ ಪತ್ರ ದೊರೆತಿರುವುದು ಈ ಸಂಸ್ಥೆಯ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ತೀರ್ಥಹಳ್ಳಿಯ ಪುನೀತ್ ಬ್ರಿಗೇಡ್ ಸಂಸ್ಥೆಯು ಪುನೀತ್ ರಾಜಕುಮಾರ್ ಅವರ ಸಮಾಜ ಸೇವೆಯನ್ನು ಸ್ಮರಿಸುವ ಮತ್ತು ಅವರ ಹೆಸರಿನಲ್ಲಿ ಪ್ರೇರಣೆ ನೀಡುವಂತಹ ಕಾರ್ಯಗಳನ್ನು ನಡೆಸುತ್ತಿದೆ. ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಕಚೇರಿಯಲ್ಲಿ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಸಂಜೆ ಪುನೀತ್ ಬ್ರಿಗೇಡ್ ಸಂಸ್ಥೆಯಿಂದ ‘ಪುನೀತ್ ನಮನ’ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಸಂಸ್ಥೆಯ ಸದಸ್ಯರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

Categories
ಮಾಹಿತಿ ಸುದ್ದಿ ರಾಜ್ಯ ವಿಶೇಷ ಸುದ್ದಿ

16 ವರ್ಷದ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್!

16 ವರ್ಷದ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್!
– ಬಜೆಟ್ ಅಲ್ಲಿ ಏನೇನು? ಯಾವುದು ವಿಶೇಷ..?
– ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಸಾಲ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ರಾಜ್ಯದ 2026-27 ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ ಮಂಡನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17 ನೇ ಬಾರಿಗೆ 4.48 ಲಕ್ಷ ಕೋಟಿ ಗಾತ್ರದ ಆಯವ್ಯಯ ಮಂಡಿಸಿದ್ದಾರೆ.

ರಾಜ್ಯ ಬಜೆಟ್‌ ಮುಖ್ಯಾಂಶಗಳು:

1. 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್‌
2. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಇನ್ನು ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆ
3. ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಮೀಸಲು
4. ಕಾಲೇಜು ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಪುನರಾರಂಭ
5. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಸಾಲ
6. ರಾಜ್ಯದ 5 ಕಡೆ ರೇಷ್ಮೆ ಪಾರ್ಕ್
7. ಬೆಂಗಳೂರು ಮೆಟ್ರೋ ವಿಸ್ತರಣೆ
8. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2 ಸಾವಿರ ಹುದ್ದೆ ಭರ್ತಿ
9. ಶಾಲಾ ಕಾಲೇಜುಗಳಿಗೆ 15 ಸಾವಿರ ಶಿಕ್ಷಕರ ನೇಮಕಾತಿ
10. ಕಾರವಾರದಲ್ಲಿ 198 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
11. ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನ ಮಾತೃತ್ವ ರಜೆ
12. ಅಲ್ಪಸಂಖ್ಯಾತ, SC-ST ನಿಗಮಗಳ ಸಾಲಗಳಿಗೆ ಬಡ್ಡಿ ಮನ್ನಾ
13. ಮಾನವ ವನ್ಯ ಜೀವಿಗಳ ಸಂಘರ್ಷ ತಡೆಗೆ 1445 ಕೋಟಿ ಮೀಸಲು
14. ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಯಲ್ಲಿ ಬಿಸಿಯೂಟ
15. ರಾಜ್ಯದ 11 ಜಿಲ್ಲೆಗಳಲ್ಲಿ 12 ಪೋಲಿಸ್ ಠಾಣೆ ಸ್ಥಾಪನೆ
16. ಕುಕ್ಕೆ ಕೊಲ್ಲೂರು ದೇಗುಲ ಅಭಿವೃದ್ಧಿ
17. ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮವಸ್ತ್ರವಿತರಣೆ
18. ಉದ್ಯೋಗಸ್ಥ SC-ST ಮಹಿಳೆಯರಿಗೆ ಹೊಸ ಹಾಸ್ಟೆಲ್‌ ಘೋಷಣೆ
19. ಈ ವರ್ಷ 1.32 ಲಕ್ಷ ಕೋಟಿ ಸಾಲ ಮಾಡಿದ ಸರ್ಕಾರ
20. ಕರ್ನಾಟಕ ರಾಜ್ಯದ ಒಟ್ಟಾರೆ ಸಾಲ 8.24 ಲಕ್ಷ ಕೋಟಿ
21. ಬೆಂಗಳೂರಿನಲ್ಲಿ AI ಕೇಂದ್ರ
22. ಒಟ್ಟು 56,432 ಹುದ್ದೆಗಳಿಗೆ ನೇಮಕಾತಿ
23. ಮದ್ಯ ದರ ಹಂತ ಹಂತವಾಗಿ ಏರಿಕೆ
24. ಸವಿತಾ ಸಮಾಜದವರಿಗೆ ಸಲೂನ್ ತೆರೆಯಲು ಶೇ 4 ಬಡ್ಡಿ ದರದಲ್ಲಿ 10 ಲಕ್ಷ ಸಾಲ
25. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಜೊತೆಗೆ 300 ಹಾಸಿಗೆಯ ಆಸ್ಪತ್ರೆ
26. ಮಹಿಳಾ ವೃದ್ಧಾಶ್ರಮ ಸ್ಥಾಪನೆ
27. ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ
28. ಅಲ್ಪಸಂಖ್ಯಾತ ಮಹಿಳಾ ಸಹಕಾರಿ ಸಂಘ ಸ್ಥಾಪನೆ ಘೋಷಣೆ
29. ಮಲೆನಾಡು ಕರಾವಳಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಅನುದಾನ
30. ಮೀನುಗಾರರಿಗೆ ಪ್ರೋತ್ಸಾಹ ಧನ 20 ಸಾವಿರಕ್ಕೆ ಏರಿಕೆ
31. ಗ್ರಾಮ ಪಂಚಾಯತ್ ವಿದ್ಯುತ್ ಬಿಲ್ ಹೊರೆ ತಪ್ಪಿಸಲು ಸೋಲಾ‌ರ್ ಗ್ರಿಡ್ ಸ್ಥಾಪನೆ

800 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ

1.3900 ಕೋಟಿ ರೂಗಳ ವೆಚ್ಚದಲ್ಲಿ ಎಡಿಬಿ, ಕೆಕೆಆರ್‌ಡಿಬಿ ಮತ್ತು ಕೆಎಂಇಆರ್‌ಸಿ ನೆರವಿನೊಂದಿಗೆ 800 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ
2. ವಿಶ್ವವಿದ್ಯಾನಿಲಯಗಳಲ್ಲಿ 1,000 ಬೋಧಕ ಹುದ್ದೆಗಳ ಭರ್ತಿ
3. 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಪದವಿ ಕಾಲೇಜುಗಳ ಉನ್ನತಿಕರಣ
4. 500 ಕೋಟಿ ರೂಪಾಯಿ ವೆಚ್ಚದಲ್ಲಿ ಐಐಟಿ ಮಾದರಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ವಿಶ್ವವಿದ್ಯಾಲಯದ ಅಭಿವೃದ್ಧಿ
5. ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿನ ಮಹಿಳಾ ಅಧಿಕ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ
6. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಧಾರವಾಡ ಮತ್ತು ಬೆಂಗಳೂರಿನಲ್ಲಿ ಡಿಜಿಟಲ್ ಲೈಬ್ರರಿ ಹಾಗು ಅಧ್ಯಯನ ಕೇಂದ್ರ ಸ್ಥಾಪನೆ
7. NCC ಕೆಡಿತ್ ಕಾರ್ಯ ಬಲ ಹೆಚ್ಚಳ
8. ಬಸವಕಲ್ಯಾಣದಲ್ಲಿ ಖಾಸಗಿ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ 25 ಎಕರೆ ಜಮೀನು

Categories
ಬೆಂಗಳೂರು ರಾಜ್ಯ ವಿಶೇಷ ಸುದ್ದಿ

ಬೀದಿ ನಾಯಿ ಕಡಿತದಿಂದ ವ್ಯಕ್ತಿ ಸತ್ತರೆ 5 ಲಕ್ಷ ಪರಿಹಾರ!

ಬೀದಿ ನಾಯಿ ಕಡಿತದಿಂದ ವ್ಯಕ್ತಿ ಸತ್ತರೆ 5 ಲಕ್ಷ ಪರಿಹಾರ!
– ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ: ಏನಿದು ಆದೇಶ
– 2025ರ 7 ತಿಂಗಳಲ್ಲಿ ಒಟ್ಟು 23 ಮಂದಿ ನಾಯಿಗಳಿಗೆ ಬಲಿ!

NAMMUR EXPRESS NEWS
ಬೆಂಗಳೂರು : ಬೀದಿ ನಾಯಿ ಕಡಿತದಿಂದ ವ್ಯಕ್ತಿ ಮೃತಪಟ್ಟರೆ 5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಮಹತ್ವದ ಆದೇಶ ಹೊರಡಿಸಿದೆ.ಈ ಹಿಂದೆ ಇದ್ದ ಆದೇಶವನ್ನ ನಗರಾಭಿವೃದ್ಧಿ ಇಲಾಖೆ ತಿದ್ದುಪಡಿ ಮಾಡಿದೆ.
ಬೀದಿ ನಾಯಿ ದಾಳಿಗೆ ಒಳಗಾದ ಸಂತ್ರಸ್ತರಿಗೆ ಮಾತ್ರ ಜಿಬಿಎ ಪರಿಹಾರ ನೀಡಲಿದೆ. ನಿರ್ದಿಷ್ಟ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜಿಬಿಎ ಪಶುಪಾಲನಾ ವಿಭಾಗಕ್ಕೆ ಸಲ್ಲಿಸಬೇಕು. ಅರ್ಜಿಯಲ್ಲಿ ಹೆಸರು, ವಯಸ್ಸು, ಫೋಟೋ, ವಿಳಾಸ, ನಾಯಿ ದಾಳಿ ನಡೆದ ಸ್ಥಳ, ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ದಾಖಲೆಗಳ ವಿವರವನ್ನು ನಿಗದಿತ ಅವಧಿಯಲ್ಲಿ ನೀಡಬೇಕು. ಬಳಿಕ ಪಶುಪಾಲನಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ. ಅರ್ಜಿಯು ಜಿಬಿಎ ವೆಬ್‌ಸೈಟ್‌ನಲ್ಲಿ ಸಿಗುತ್ತದೆ.

ಯಾವ್ಯಾವ ವರ್ಷ ಎಷ್ಟು ಪರಿಹಾರ?

2016-1780 170,430, 2017-1880 3,60,645, 2018-19 8,42,963, 2019-2080 2,07,292, 2020-21 2,22,540, 2021-2280 4,85,431, 2022-23ರ ಮಾರ್ಚ್ ತನಕ 1,26,100 ಪರಿಹಾರ ನೀಡಲಾಗಿತ್ತು.

ಆಗಸ್ಟ್‌ನ ಮೊದಲ ವಾರ, 10 ಸಾವಿರಕ್ಕೂ ಅಧಿಕ ನಾಯಿ ಕಡಿತ

ಬೆಂಗಳೂರು ಮಾತ್ರವಲ್ಲದೆ ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ಮಿತಿಮೀರಿವೆ. ಆಗಸ್ಟ್ ತಿಂಗಳ ಮೊದಲ ಒಂದೇ ವಾರದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. 2025ರ 7 ತಿಂಗಳಲ್ಲಿ ಒಟ್ಟು 23 ಮಂದಿ ನಾಯಿಗಳ ಡೆಡ್ಲಿ ಅಟ್ಯಾಕ್‌ಗೆ ಉಸಿರು ಚೆಲ್ಲಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ 2 ಲಕ್ಷ 60 ಸಾವಿರ ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ..

ಬೀದಿ ನಾಯಿಗಳ ಭಯ!

2023ರ ಜನವರಿಯಿಂದ 2025ರ ಜುಲೈ 30 ರ ತನಕ 1,69,672 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. 2024 ಜನವರಿಯಿಂದ ಜೂನ್ 31ರ ತನಕ 2 ಲಕ್ಷದ 32 ಸಾವಿರ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ ಎನ್ನುತ್ತದೆ ವರದಿ

 

Categories
Uncategorized ಚಿಕ್ಕಮಗಳೂರು ವಿಶೇಷ ಸುದ್ದಿ

ಟಿಎಸ್‌ಡಿ ರಾಷ್ಟ್ರ ಮಟ್ಟದ ರ್ಯಾಲಿಯಲ್ಲಿ ಕಾಫಿನಾಡ ಕುವರರ ಸಾಧನೆ

ಟಿಎಸ್‌ಡಿ ರಾಷ್ಟ್ರ ಮಟ್ಟದ ರ್ಯಾಲಿಯಲ್ಲಿ ಕಾಫಿನಾಡ ಕುವರರ ಸಾಧನೆ

* ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ರ್ಯಾಲಿ
* ಮಹೀಂದ್ರಾ ಥಾರ್ ಕೆಟಗರಿಯಲ್ಲಿ ಮೊದಲನೇ ಸ್ಥಾನ,ಇತರೆ ವಿಭಾಗದಲ್ಲಿ ಪ್ರಶಸ್ತಿ

NAMMMUR EXPRESS NEWS
ಚಿಕ್ಕಮಗಳೂರು: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ರಾಷ್ಟ್ರಮಟ್ಟದ 7000kms ನಾಲ್ಕು ಚಕ್ರದ ಟೈಮ್ ಸ್ಪೀಡ್ ಡಿಸ್ಟೆನ್ಸ್ ರ್ಯಾಲಿ(TDS – rally)ಯಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಮನು ಗೌಡ ಎ.ಕೆ ಹಾಗೂ ಸಮೃದ್ಧ್ ಪೈ ಜೋಡಿ ಭಾಗವಹಿಸಿ ಮಹೀಂದ್ರಾ ಥಾರ್ ಕ್ಯಾಟಗರಿಯಲ್ಲಿ ಮೊದಲ ಸ್ಥಾನ ಗೆದ್ದು ಪ್ರಶಸ್ತಿ ಪಡೆದುಕೊಂಡಿದ್ದು, ಇಂಡಿಯನ್ ನ್ಯಾಷನಲ್ ಟೈಮ್ ಸ್ಪೀಡ್ ಡಿಸ್ಟೆನ್ಸ್ -2 ಕ್ಯಾಟಗರಿಯಲ್ಲಿ (INTSDRC-2) ಎರಡನೇ ಸ್ಥಾನ ಹಾಗೂ Highland Extreme pro expert ಕ್ಯಾಟಗರಿಯಲ್ಲಿ ಮೂರನೇ ಸ್ಥಾನ ಪಡೆದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಹಲವು ರ್ಯಾಲಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡ ತಂಡವು ಈಗ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ.

Categories
ಕೊಪ್ಪ ಮಲ್ನಾಡ್ ವಿಶೇಷ ಸುದ್ದಿ

ಹಿರಿಯ ಸಹಕಾರಿ ಮಹಾಬಲ ಜಿ ಎಸ್ ರವರಿಗೆ ಸಹಕಾರ ರತ್ನ ಪ್ರಶಸ್ತಿ

ಹಿರಿಯ ಸಹಕಾರಿ ಮಹಾಬಲ ಜಿ ಎಸ್ ರವರಿಗೆ ಸಹಕಾರ ರತ್ನ ಪ್ರಶಸ್ತಿ

* ನ.14 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
* ಕೇಂದ್ರೀಯ ಕಾಫಿ ಮಂಡಳಿಯ ಉಪಾಧ್ಯಕ್ಷರಾಗಿದ್ದ ಮಹಾಬಲ ಜಿ ಎಸ್

NAMMMUR EXPRESS NEWS
ಕೊಪ್ಪ: ಕರ್ನಾಟಕ ರಾಜ್ಯ ಸಹಾಕಾರ ಮಹಾಮಂಡಳ ನಿ. ವತಿಯಿಂದ ಕೊಡಮಾಡುವ ‘ಸಹಕಾರ ರತ್ನ’ ಪ್ರಶಸ್ತಿಯನ್ನು ಹಿರಿಯ ಸಹಕಾರಿಗಳು, ಕೇಂದ್ರೀಯ ಕಾಫಿ ಮಂಡಳಿಯ ಉಪಾಧ್ಯಕ್ಷರಾದ ಮಹಾಬಲ ಜಿ ಎಸ್ ಇವರಿಗೆ ದೊರತಿದೆ.
ಮಹಾಮಂಡಳಿಯು ರಾಜ್ಯ ಸಹಕಾರ ಚಳುವಳಿಯ ಬೆಳವಣಿಗೆಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಗೌರವವನ್ನು ಪ್ರತಿ ವರ್ಷ ನೀಡುತ್ತಿದೆ.
ಈ ಬಾರಿ ಜಿ ಎಸ್ ಮಹಾಬಲ ರವರಿಗೆ ಪ್ರಶಸ್ತಿ ಲಭಿಸಿರುವುದು ಅವರ ಆಪ್ತ ವಲಯದಲ್ಲಿ ಸಂತೋಷವನ್ನುಂಟು ಮಾಡಿದ್ದು, ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.
ಸಹಕಾರಿ ರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಹಿರಿಯ ಸಹಕಾರಿಗಳಾದ ಜಿ ಎಸ್ ಮಹಾಬಲ ರವರಿಗೆ ನಮ್ಮೂರ್ ಎಕ್ಸ್‌ಪ್ರೆಸ್ ವತಿಯಿಂದ ಅಭಿನಂದನೆಗಳು.

Categories
ತೀರ್ಥಹಳ್ಳಿ ಮಲ್ನಾಡ್ ವಿಶೇಷ ಸುದ್ದಿ

ಕೋಣಂದೂರಲ್ಲಿ ಪಟ್ಲ ಯಕ್ಷಗಾನ ಸೂಪರ್!

ಕೋಣಂದೂರಲ್ಲಿ ಪಟ್ಲ ಯಕ್ಷಗಾನ ಸೂಪರ್!
– ಸುಮಾರು 4000 ಜನರ ವೀಕ್ಷಣೆ: ಸಹಕಾರ ನಾಯಕ ಮಂಜುನಾಥ ಗೌಡ ನೇತೃತ್ವದಲ್ಲಿ ಸಾಂಸ್ಕೃತಿಕ ಸಂಭ್ರಮ
– ಪಟ್ಲ ಸತೀಶ್ ಶೆಟ್ಟಿ ಅವರಿಗೆ ಕೋಣಂದೂರು ನಾಗರೀಕ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಾಂಸ್ಕೃತಿಕ ಸಮಿತಿ ಹಾಗೂ ಕೋಣಂದೂರು ಸೊಸೈಟಿ ನೇತೃತ್ವದಲ್ಲಿ ಖ್ಯಾತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಕೋಣಂದೂರಲ್ಲಿ ಮಂಗಳವಾರ ನಡೆದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನಕ್ಕೆ ಸುಮಾರು 4 ಸಾವಿರಕ್ಕೂ ಹೆಚ್ಚು ಯಕ್ಷ ಪ್ರಿಯರು ವೀಕ್ಷಣೆ ಮಾಡಿದ್ದಾರೆ.
ವೇದಿಕೆಯಲ್ಲಿ ಯಕ್ಷ ಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಸತೀಶ್ ಶೆಟ್ಟಿ ಪಟ್ಲ ಅವರನ್ನು ಸನ್ಮಾನಿಸಲಾಯಿತು. ಕೊಡಚಾದ್ರಿ ಟ್ರಸ್ಟ್ ಸ್ಥಾಪಕರು, ತೀರ್ಥಹಳ್ಳಿ ನಾಯಕರು ಆದ ಡಾ. ಆರ್.ಎಂ. ಮಂಜುನಾಥ ಗೌಡ, ಶಾಸಕ ಆರಗ ಜ್ಞಾನೇಂದ್ರ, ಎನ್. ಇ. ಎಸ್ ಸಂಸ್ಥೆ ಅಧ್ಯಕ್ಷರಾದ ನಾರಾಯಣ ರಾವ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮರಿಯಪ್ಪ, ಕೋಣಂದೂರು ಸೊಸೈಟಿ ಅಧ್ಯಕ್ಷ ಕಂಪದಗದ್ದೆ ಸುರೇಶ, ಕಾಂಗ್ರೆಸ್ ನಾಯಕ ಶ್ರೀಕಾಂತ್, ಶಿಮೂಲ್ ಅಧ್ಯಕ್ಷ ವಿದ್ಯಾಧರ್, ಕೊಡಚಾದ್ರಿ ಸಾಂಸ್ಕೃತಿಕ ಸಮಿತಿ ಪ್ರಮುಖರಾದ ಮಧುಸೂಧನ್ ನಾವುಡ, ಸಹಕಾರ ನಾಯಕ ನಾಗರಾಜ್ ಶೆಟ್ಟಿ, ಯುವ ಮುಖಂಡರಾದ ರಾಘವೇಂದ್ರ ಶೆಟ್ಟಿ, ಕೊಲ್ಲೂರಯ್ಯ, ಲಕ್ಷ್ಮಣ್, ಲೋಕೇಶ್ ಸೇರಿ ಅನೇಕರು ಇದ್ದರು.
ಕೋಣಂದೂರು ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದಲ್ಲಿ ನಡೆದ ಕಾಲ ಮಿತಿ ಯಕ್ಷಗಾನದಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರೂ ಕೂಡ ಕೊನೆ ತನಕ ಇದ್ದರು. ಪಟಾಕಿ ಚಿತ್ತಾರ ಗಮನ ಸೆಳೆಯಿತು. ಎಲ್ಲರಿಗೂ ಕಾಫಿ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಯಕ್ಷಗಾನ ಒಂದಕ್ಕೆ ಅತೀ ಹೆಚ್ಚು ಜನ ಈ ಭಾಗದಲ್ಲಿ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ರೈತ ಮುಲ್ಕೆವಿ ನಾಗರಾಜ್ ಎಂಬ ರೈತನನ್ನು ಸನ್ಮಾನಿಸಲಾಯಿತು.
ಪಟ್ಲ ಸತೀಶ್ ಶೆಟ್ಟಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಸಹಕಾರ ನಾಯಕ ಮಂಜುನಾಥ ಗೌಡ ಅವರಿಗೆ ದೇವರು ಇನ್ನಷ್ಟು ಜನ ಸೇವೆ ಮಾಡುವ ಶಕ್ತಿ ನೀಡಲಿ. ತೀರ್ಥಹಳ್ಳಿ ನನಗೆ ಪ್ರೀತಿಯ ಊರು. ನಮ್ಮ ಟ್ರಸ್ಟ್ ಸೇವೆಯಲ್ಲಿ ತೊಡಗಿದೆ ಎಂದರು.

ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆ: ಗಮನ ಸೆಳೆದ ಪಾತ್ರಗಳು!

ಯಕ್ಷಗಾನದ ಅಲಂಕಾರ, ನಟನೆ, ಭಾಗವತಿಕೆ, ಮಹಿಷಾಸುರ ಸೇರಿ ಎಲ್ಲಾ ಪಾತ್ರಗಳು ಗಮನ ಸೆಳೆದವು. ಯಕ್ಷಗಾನದಲ್ಲಿ ಚಿನ್ನದ ಕಿರೀಟ ಧಾರಣೆಯೊಂದಿಗೆ, ಎಂಟು ಆಯುಧಗಳನ್ನು ಹಿಡಿದಿರುವ ಶ್ರೀದೇವಿಯ ಪ್ರವೇಶ, ಬೆಂಕಿಯ ಜ್ವಾಲೆಯೊಂದಿಗೆ, ಅಬ್ಬರಿಸುತ್ತಾ ಚಂಡ ಮುಂಡರ ಪ್ರವೇಶ, ಎಪ್ಪತ್ತು ಕೆಜಿ ತೂಕವುಳ್ಳ ಬೆಳ್ಳಿಯ ಉಯ್ಯಾಲೆಯಲ್ಲಿ ಶ್ರೀದೇವಿ ಆಸೀನಳಾಗಿ ತೂಗುವುದು, ರಕ್ತೇಶ್ವರಿ ಕೆನ್ನಾಲಿಗೆಯೊಂದಿಗೆ ರಾಕ್ಷಸರ ವಧೆ ಜನರ ಗಮನ ಸೆಳೆಯಿತು.

Categories
death ಮಲ್ನಾಡ್ ವಿಶೇಷ ಸುದ್ದಿ

ಎಣ್ಣೆ ಕುಡಿದ 13 ವರ್ಷದ ಹುಡುಗ ಆತ್ಮಹತ್ಯೆ!

ಎಣ್ಣೆ ಕುಡಿದ 13 ವರ್ಷದ ಹುಡುಗ ಆತ್ಮಹತ್ಯೆ!
* ಅಪ್ಪ ಬೈತಾರೆಂದು ಆತ್ಮಹತ್ಯೆಗೆ ಶರಣಾದ ಬಾಲಕ
* ಮದುವೆ ಮನೆಯಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದ ಬಾಲಕ
* ಬಾಳೆಹೊನ್ನೂರು ಠಾಣಾ ವ್ಯಾಪ್ತಿ ಘಟನೆ: ಪ್ರಕರಣ ದಾಖಲು

NAMMMUR EXPRESS NEWS
ಎನ್ ಆರ್ ಪುರ:: ಸ್ನೇಹಿತರ ಜೊತೆ ಮದ್ಯ ಸೇವಿಸಿ ಅಪ್ಪನಿಗೆ ವಿಷಯ ತಿಳಿದರೆ ಬೈಯುತ್ತಾರೆ ಅಂತ 13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಗ್ರಾಮದ ಗಂಗೋಜಿ ಎಂಬಲ್ಲಿ ನಡೆದಿದೆ.
ಮೃತ ಬಾಲಕ ಮೇಲ್ಪಾಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಮೇಲ್ಪಾಲ್ ಗ್ರಾಮದಲ್ಲಿ ಅದೇ ಗ್ರಾಮಸ್ಥರೊಬ್ಬರ ಮದುವೆ ಕಾರ್ಯಕ್ರಮವಿತ್ತು. ಮದುವೆಗೆ ಶರಣ್ ಸೇರಿ ಪೋಷಕರು ಹೋಗಿದ್ದರು.
ಮದುವೆ ಮನೆಯಲ್ಲಿ ಸ್ನೇಹಿತರ ಜೊತೆ ಸೇರಿ ಬಾಲಕ ಮದ್ಯ ಸೇವಿಸಿದ್ದಾನೆ. ಮದ್ಯ ಸೇವಿಸಿದ ಬಳಿಕ ಕುಡಿದಿರುವುದು ಅಪ್ಪನಿಗೆ ಗೊತ್ತಾದರೆ ಬೈಯುತ್ತಾರೆ ಎಂದು ಮನೆ ಬಳಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನ ಗಮನಿಸಿದ ಪೋಷಕರು ಕೂಡಲೇ ಆತನನ್ನ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲೇ ಬಾಲಕ ಸಾವನ್ನಪ್ಪಿದ್ದಾನೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.