ಕರಾವಳಿಯಲ್ಲಿ ಕಳ್ಳರ ಕಾಟ!
– ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ಮನೆ ಕಳವು ಪ್ರಕರಣ
– ಹಲವು ಕಡೆ ಮನೆಗೆ ಕನ್ನ ಹಾಕಿ ಚಿನ್ನಾಭರಣ ಲೂಟಿ
– ಚಿನ್ನಾಭರಣ, ನಗದು ಮನೆಯಲ್ಲಿಟ್ಟು ಹೊರ ಹೋಗುವವರು ಹುಷಾರ್!
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿರುವುದು ಜನರನ್ನು ಆತಂಕ್ಕೆ ದೂಡಿದೆ. ಕಳೆದ ಒಂದು ವಾರದಲ್ಲಿ ಹಲವು ಕಡೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭವನ್ನು ನೋಡಿಕೊಂಡು ಒಂಟಿ ಮನೆಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಕೇವಲ 12 ದಿನಗಳ ಅಂತರದಲ್ಲಿ ಮೂರು ಒಂದೇ ಮಾದರಿಯ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಕಳ್ಳರು ಮನೆ ಮಂದಿ ಬೀಗ ಹಾಕಿ ಹೊರಗೆ ಹೋಗುತ್ತಿರುವುದನ್ನೇ ಕಾದು ಕುಳಿತು ನಂತರ ಮನೆಯೊಳಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದಾರೆ. ಒಂದು ಕಳ್ಳತನ ಪ್ರಕರಣಕ್ಕೆ ಮತ್ತೊಂದು ಪ್ರಕರಣ ಮ್ಯಾಚ್ ಆಗುತ್ತಿರುವುದು ಪೊಲೀಸರಲ್ಲಿ ಒಂದೇ ಕಳ್ಳರ ಗ್ಯಾಂಗ್ ಈ ಕೃತ್ಯ ಎಸಗುತ್ತಿರುವುದು ಅನುಮಾನ ಮೂಡಿಸಿದೆ.
ಯಕ್ಷಗಾನ ನೋಡಿ ಬರುವಷ್ಟರಲ್ಲಿ ಮನೆ ದೋಚಿದ ಕಳ್ಳರು
ಮಂಗಳೂರಿನ ಮನೆಯೊಂದರ ನಿವಾಸಿಗಳು ಮೇ 5ರಂದು ಪ್ರವಾಸಕ್ಕೆ ಹೋಗಿದ್ದು, ವಾಪಾಸ್ ಬಂದು ನೋಡಿದರೆ ಮನೆಯಲ್ಲಿದ್ದ 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಇನ್ನೊಂದು ಘಟನೆಯಲ್ಲಿ ಮೇ 10ರಂದು ಮನೆ ಮಂದಿಯು ರಾತ್ರಿವೇಳೆ ಯಕ್ಷಗಾನ ನೋಡುವುದಕ್ಕೆ ಹೋಗಿದ್ದು, ವಾಪಾಸ್ ಬರುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನದ ಬಳೆ, ಲ್ಯಾಪ್ಟಾಪ್ ಹಾಗೂ ನಗದು ಇರಲಿಲ್ಲ.
ಅದೇರೀತಿ ಬೆಳ್ತಂಗಡಿಯ ತೆಂಕಕಾರಂದೂರಿನಲ್ಲಿ ಮನೆಯೊಳಗೆ ಮಲಗಿದ್ದಾಗಲೇ ಹಿಂಬಾಗಿಲು ಮುರಿದು ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ್ದಾರೆ. ಇದೇ ತಾಲೂಕಿನ ಅದೇ ಗ್ರಾಮದಲ್ಲಿ ಮೇ 22ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಗೋದ್ರೇಜ್ನಲ್ಲಿ ಇಟ್ಟಿದ್ದ 14.5 ಗ್ರಾಂ ಚಿನ್ನಾಭರವನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳರ ಪತ್ತೆ ಪೊಲೀಸರಿಗೆ ದೊಡ್ಡ ಸವಾಲು!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಕಳ್ಳತನ ಪ್ರಕರಣ ಜಾಸ್ತಿಯಾಗಿರುವುದು ಸಹಜವಾಗಿಯೇ ಜನರ ನಿದ್ದೆಗೆಡಿಸಿರುವ ಜತೆಗೆ ಪೊಲೀಸರಿಗೂ ಕಳ್ಳರ ಜಾಡು ಹಿಡಿಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ಒಂಟಿ ಮನೆಯಲ್ಲಿ ವಾಸವಾಗಿರುವವರು ಹಾಗೂ ಮನೆಗೆ ಬೀಗ ಹಾಕಿ ಹೋಗುವ ವೇಳೆ ಚಿನ್ನಾಭರಣ ಅಥವಾ ಮನೆಯಲ್ಲಿ ಇಟ್ಟಿರುವ ನಗದು ಬಗ್ಗೆ ಹೆಚ್ಚಿನ ಮುಂಜಾಗ್ರತೆ ಮಾಡುವಂತೆ ಪೊಲೀಸರು ಕೂಡ ಮನವಿ ಮಾಡುತ್ತಿದ್ದಾರೆ. ಒಂದುವೇಳೆ, ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುವುದು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಮನವಿ ಮಾಡಲಾಗಿದೆ.