ಹ್ಯಾಪಿ ಅಣ್ಣ್ ತಮ್ಮಂದಿರ ದಿನ..!
– ರಾಷ್ಟ್ರೀಯ ಸಹೋದರರ ದಿನ
– ಅಣ್ಣ ತಮ್ಮಂದಿರ ಪ್ರೀತಿ, ವಾತ್ಸಲ್ಯಕ್ಕೆ ಸಲಾಂ
NAMMUR EXPRESS NEWS
ಜೀವನದಲ್ಲಿ ನಾವು ಯಾರೊಂದಿಗಾದ್ರೂ ಹೆಚ್ಚು ಕೀಟಲೆ ಮಾಡ್ತೀವಿ, ತೊಂದರೆ ಕೊಡ್ತೀವಿ… ಅತೀ ಹೆಚ್ಚು ನಂಬುತ್ತೇವೆ ಎಂದರೆ ಬಹುಶಃ ಅದು ನಮ್ಮ ಅಣ್ಣ-ತಮ್ಮಂದಿರೊಂದಿಗೆ ಮಾತ್ರ. ಸದಾ ಜಗಳವಾಡುತ್ತಾ, ಬೈದಾಡಿಕೊಳ್ಳುತ್ತಾ ಇರುವ ಈ ಸಂಬಂಧದಲ್ಲಿ ವಿವರಿಸಲಾಗದಷ್ಟು ಪ್ರೀತಿಯೂ ಇರುತ್ತದೆ. ಅಣ್ಣ-ತಮ್ಮಂದಿರು ನಮ್ಮ ಬದುಕಿನ ಸೈನಿಕರಂತೆ ಎಂದರೂ ತಪ್ಪಾಗಕ್ಕಿಲ್ಲ. ನಾವಷ್ಟೇ ಜಗಳ ಮಾಡಿದರೂ ಬೇರೆಯವರ ಎದುರು ನಮ್ಮನ್ನು ಬಿಟ್ಟುಕೊಡದ ನಿಸ್ವಾರ್ಥ ಪ್ರೀತಿ ಅವರದ್ದು. ಇಂತಹ ಪರಿಶುದ್ಧ ಪ್ರೀತಿ ನೀಡುವ ಸಹೋದರರ ಬಾಂಧವ್ಯವನ್ನು ಗೌರವಿಸುವ ದಿನವನ್ನು ರಾಷ್ಟ್ರೀಯ ಸಹೋದರರ ದಿನ ಎಂದು ವಿಶೇಷವಾಗಿ ಆಚರಿಸಲಾಗುತ್ತದೆ.
ಸಹೋದರರು ನಮ್ಮ ಪಾಲಿಗೆ ದೇವರು ನೀಡಿದ ಆಶೀರ್ವಾದ ಎಂದರೂ ತಪ್ಪಾಗಲಿಕ್ಕಿಲ್ಲ. ನಮ್ಮ ಅಪರಾಧದಲ್ಲಿ ಭಾಗಿಯಾಗಿ, ನಮ್ಮ ತಪ್ಪನ್ನೆಲ್ಲಾ ತನ್ನ ತಲೆ ಮೇಲೆ ಹಾಕಿಕೊಂಡು ನಮ್ಮನ್ನು ರಕ್ಷಿಸುವ, ಸದಾ ನಮಗೆ ಬೆಂಬಲ ನೀಡುತ್ತಾ, ನೋವಿಗೆ ಹೆಗಲಾಗುವ ಸಹೋದರರ ಪ್ರೀತಿ ಅವ್ಯಕ್ತ ರೂಪದಲ್ಲಿ ಇರುವುದು ಸುಳ್ಳಲ್ಲ. ಸಹೋದರರ ಜೊತೆ ಕಳೆದ ಕ್ಷಣಗಳು ನಿಮಗೆ ಅದೆಷ್ಟೋ ದಿನಗಳು ಕಳೆದರು ಮಾಸುವುದಿಲ್ಲ. 8 ವರ್ಷದವರಿದ್ದಾಗ ಸಹೋದರರ ಜೊತೆ ಕಳೆದ ನೆನಪುಗಳು 80 ವರ್ಷ ಕಳೆದರೂ ಹಸಿರಾಗಿಯೇ ಇರುತ್ತದೆ.
ರಾಷ್ಟ್ರೀಯ ಸಹೋದರರ ದಿನ ಯಾವಾಗ, ಈ ದಿನದ ಇತಿಹಾಸವೇನು?
ಪ್ರತಿ ವರ್ಷ ಮೇ ತಿಂಗಳ 24ನೇ ತಾರೀಕಿನಂದು ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಸಹೋದರರ ದಿನ ಶುಕ್ರವಾರ ಬಂದಿದೆ. ಸಹೋದರರ ದಿನದ ಆಚರಣೆ 2005ರಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ. ಈ ದಿನದ ಬಗ್ಗೆ ಇರುವ ಸ್ವಲ್ಪವೇ ಮಾಹಿತಿಯ ಪ್ರಕಾರ ಅಲಬಾಮಾದ ಸಿ. ಡೇನಿಯಲ್ ರೋಡ್ಸ್ ಅವರು ಸಹೋದರರ ದಿನವನ್ನು ಆಚರಿಸಲು ಕರೆ ನೀಡಿದರು ಎನ್ನಲಾಗುತ್ತದೆ.
ರಾಷ್ಟ್ರೀಯ ಸಹೋದರರ ದಿನದ ಮಹತ್ವ:
ಬಾಲ್ಯದಿಂದಲೂ ನಮೆಲ್ಲಾ ಅಪರಾಧ ಕೃತ್ಯಗಳಲ್ಲಿ ಭಾಗಿ, ನಮಗೆ ಬೆಂಬಲದ ಮೂಲವಾಗಿ ಯಾರೂ ನಮ್ಮನ್ನು ಅರ್ಥ ಮಾಡಿಕೊಳ್ಳದೇ ಇದ್ದಾಗ ಅರ್ಥ ಮಾಡಿಕೊಂಡು ಪ್ರೀತಿಸುವ ಸಹೋದರರ ಸಂಬಂಧ ಎಲ್ಲಕ್ಕಿಂತ ಮಿಗಿಲಾದುದು ಎಂದರೆ ತಪ್ಪಲ್ಲ. ಈ ವಿಶೇಷ ದಿನವು ಸಹೋದರರ ಪ್ರೀತಿಯನ್ನು ಗುರುತಿಸುವ ದಿನವಾಗಿದೆ. ಇದು ಕುಟುಂಬ ಸಂಬಂಧಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ, ಬಿಕ್ಕಟ್ಟು ಮತ್ತು ಒಂಟಿತನದ ಸಮಯದಲ್ಲಿ ಸಹೋದರರು ಒದಗಿಸುವ ಸೌಕರ್ಯ ಮತ್ತು ಪರಿಹಾರವನ್ನು ನಮಗೆ ನೆನಪಿಸುತ್ತದೆ.