-ಧೂಮಪಾನಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಸರ್ಕಾರ
-ನಿಯಮ ಉಲ್ಲಂಘಿದಿದ್ರೆ ಕಠಿಣ ಕ್ರಮ
ನವದೆಹಲಿ: ಯುವ ಧೂಮಪಾನಿಗಳಿಗೆ ಇದು ಶಾಕಿಂಗ್ ಸುದ್ದಿ ಎಂದರೆ ತಪ್ಪಾಗಲಾರದು. ಏಕೆಂದರೆ ಕೇಂದ್ರ ಸರ್ಕಾರದ ಈ ಹೊಸ ನಿರ್ಧಾರ ಯುವ ಧೂಮಪಾನಿಗಳನ್ನು ಪ್ರಮುಖ ಗುರಿ ಆಗಿಸಿಕೊಂಡಿದೆ. ಅಂದರೆ ಧೂಮಪಾನ ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನನ್ನು ಸಿದ್ಧಪಡಿಸಿದೆ.
ಧೂಮಪಾನಿಗಳಿಗೆ ಚುರುಕು ಮುಟ್ಟಿಸಲು ಮುಂದಾಗಿರುವ ಸರ್ಕಾರ, ಅದರ ಸಲುವಾಗಿ ಹೊಸ ಮಸೂದೆಯೊಂದನ್ನು ಸಿದ್ಧಪಡಿಸಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ತಡೆ ಮತ್ತು ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಸರಬರಾಜು ಹಾಗೂ ವಿತರಣೆ ನಿಯಂತ್ರಣ) ತಿದ್ದುಪಡಿ ಕಾಯ್ದೆ, 2020ರ ಮೂಲಕ ಈ ಕ್ರಮಕ್ಕೆ ಮುನ್ನುಡಿ ಹಾಕಿದೆ.
ಹೊಸ ಕಾನೂನಿನ ಪ್ರಕಾರ ಸಿಗರೇಟ್ ಸೇವನೆ ಮತ್ತು ಮಾರಾಟಗಳ ನಡುವೆ ಇರುವ ವಯಸ್ಸಿನ ಮಿತಿ ಹೆಚ್ಚಾಗಲಿದ್ದು, ಈ ಹಿಂದೆ 18 ವರ್ಷದ ಒಳಗಿನವರಿಗೆ ಸಿಗರೇಟ್ ಮಾರಾಟ ಮಾಡುವುದು ಹಾಗೂ ಧೂಮಪಾನ ಮಾಡುವುದಕ್ಕೆ ನಿರ್ಬಂಧ ಹೇರಿತ್ತು. ಆದರೆ ಈಗ ಸರ್ಕಾರದ ನಿಲುವು ಬದಲಾಗಿದ್ದು, ವಯೋಮಿತಿಯು 21 ವರ್ಷಕ್ಕೆ ಹೆಚ್ಚಳವಾಗಲಿದೆ ಮತ್ತು 21 ವರ್ಷದ ಒಳಗಿನವರಿಗೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಅದನ್ನು ಸೇವಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಉಲ್ಲಂಘಿಸಿದಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದ್ದು, ಎರಡನೇ ಸಲ ಉಲ್ಲಂಘಿಸಿದರೆ ಐದು ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು.
ನಿರ್ಬಂಧಿತ ಪ್ರದೇಶದಲ್ಲಿ ಧೂಮಪಾನ ಮಾಡಿದರೆ ಸದ್ಯ 200 ರೂ. ದಂಡವಿದ್ದು, ಅದನ್ನು 2,000 ರೂಪಾಯಿಗೆ ಹೆಚ್ಚಿಸಲು ಕೂಡ ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.