ಮೋದಿ ಪಟ್ಟಾಭಿಷೇಕಕ್ಕೆ ಶುಭ ಮೂಹೂರ್ತ!
– ಜೂ. 8ರಂದು ಪ್ರಧಾನಿಯಾಗಿ ಪ್ರಮಾಣ ವಚನ?
– ದೆಹಲಿಯಲ್ಲಿ ಇಂದು ಮಹತ್ವದ ಸಭೆ
– ನಿತೀಶ್, ಚಂದ್ರಬಾಬು ಬೆಂಬಲ ಘೋಷಣೆ
NAMMUR EXPRESS NEWS
ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಎನ್ಡಿಎ ಸರಳ ಬಹುಮತ ಪಡೆದುಕೊಂಡಿದೆ. ಇದೀಗ ಎನ್ಡಿಎ ಸರ್ಕಾರ ರಚನೆಯ ಕಸರತ್ತು ಆರಂಭಿಸಿದೆ. ಅದರ ಭಾಗವಾಗಿ ಇಂದು (ಜೂನ್ 5) ದೆಹಲಿಯಲ್ಲಿ ಮಹತ್ವದ ಸಭೆ ನಡೆದಿದೆ. ಈ ಮಧ್ಯೆ ನರೇಂದ್ರ ಮೋದಿ ಪ್ರಧಾನಿಯಾಗಿ ಜೂನ್ 8ರಂದು ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಎನ್ಡಿಎ ಒಟ್ಟು 291 ಸ್ಥಾನ ಗೆದ್ದಿದ್ದು, ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಲಿದೆ. ಈಗಾಗಲೇ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಮತ್ತಿತರ ಮಿತ್ರ ಪಕ್ಷಗಳ ನಾಯಕರು ಎನ್ಡಿಎ ಸರ್ಕಾರ ರಚನೆಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಮೋದಿ ಜೂ. 8ರಂದು ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
– ರಾಜ್ಯದಿಂದ 4 ಮಂದಿಗೆ ಸಚಿವ ಸ್ಥಾನ ಫಿಕ್ಸ್?
ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್ಡಿಎ ಬಯಸಿದೆ ಎನ್ನಲಾಗಿದೆ. ಪ್ರಹ್ಲಾದ ಜೋಶಿ ಅವರು ಎನ್ಡಿಎ ಮೂರನೆಯ ಅವಧಿಯಲ್ಲೂ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ನಿರರ್ಗಳತೆ ಹೊಂದಿರುವ ಪ್ರಹ್ಲಾದ್ ಜೋಶಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ನಾಲ್ಕನೇ ಬಾರಿಗೆ ಹುಬ್ಬಳ್ಳಿ- ಧಾರವಾಡದ ಸಂಸದರಾಗಿ ಆಯ್ಕೆಯಾಗಿರುವ ಜೋಶಿ, ಬ್ರಾಹ್ಮಣ ಕೋಟಾವನ್ನು ತುಂಬಲಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಮಾಜಿ ಸಿಎಂ ಆಗಿ ಅನುಭವ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತುಗಾರಿಕೆ, ಆರ್ಥಿಕತೆಯ ವಿಚಾರಗಳಲ್ಲಿ ವಿಶೇಷ ಜ್ಞಾನ ಹೊಂದಿರುವಿಕೆಯ ಜೊತೆಗೆ ಲಿಂಗಾಯತ ಕೋಟಾ ಕೂಡ ಬೊಮ್ಮಾಯಿ ಅವರಿಗೆ ನೆರವಾಗಲಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಸಿ.ಎನ್ ಮಂಜುನಾಥ್ ಅವರೂ ಸಚಿವ ಸ್ಥಾನ ಪಡೆಯಬಲ್ಲವರ ಯಾದಿಯಲ್ಲಿ ಇದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ, ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮೈತ್ರಿ ಖೋಟಾದಲ್ಲಿ ಸಚಿವ ಸ್ಥಾನ ಫಿಕ್ಸ್ ಆಗಿದೆ ಎನ್ನಲಾಗಿದೆ.