ಮತ್ತೆ ಸಿಟಿ ರವಿ ಪರ್ವ ಶುರು!
– ವಿಧಾನ ಪರಿಷತ್ ಸದಸ್ಯರಾಗಿ ಸಿ. ಟಿ. ರವಿ ಆಯ್ಕೆ
– ಕರ್ನಾಟಕ ಬಿಜೆಪಿಗೆ ಹೊಸ ಚೈತನ್ಯ: ಅಭಿಮಾನಿಗಳ ಸಂತಸ
NAMMUR EXPRESS NEWS
ಚಿಕ್ಕಮಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದ ಇಂದು ಅಂತಿಮ ಕಣದಲ್ಲಿ ಡಾ. ಸಿ. ಟಿ. ರವಿ ಸೇರಿದಂತೆ ಉಳಿದಿದ್ದ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಬೆಂಗಳೂರಿನಲ್ಲಿ ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಮಲೆನಾಡ ನಾಯಕನಿಗೆ ಮಹತ್ವದ ಹುದ್ದೆ ಸಿಕ್ಕಿದೆ.
ಮೂರು ದಶಕಗಳ ಕಾಲ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ನಿರಂತರ ತೊಡಗಿಸಿಕೊಂಡಿದ್ದ ಡಾ. ಸಿ. ಟಿ. ರವಿ ಮತಗಟ್ಟೆ ಮಟ್ಟದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಷಾ ಜೊತೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಲೋಕಸಭಾ ಚುನಾವಣೆಯಲ್ಲಿ ನಿರಂತರ ಪಾದರಸದಂತೆ ಕರ್ನಾಟಕವಲ್ಲದೆ ದೇಶದ ನಾನಾ ರಾಜ್ಯಗಳಲ್ಲಿ ಬಿಜೆಪಿ ಮತ್ತು ಎನ್ ಡಿ ಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
ಎಬಿವಿಪಿ, ಯುವ ಮೋರ್ಚಾ, ಬಿಜೆಪಿಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ದಕ್ಷತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ. ಅವರ ಸಂಘಟನಾ ಚಾತುರ್ಯವನ್ನು ಮನಗಂಡಿದ್ದ ಪಕ್ಷವು ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಉನ್ನತ ಹುದ್ದೆಗೆ ನೇಮಕ ಮಾಡಿತ್ತು. ಅಲ್ಲಿಯೂ ದೇಶದ ತುಂಬಾ ಪಕ್ಷ ಸಂಘಟಿಸುವ ಮೂಲಕ ಪಕ್ಷದ ಗಮನ ಸೆಳೆದಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಪರಾಭಾವಗೊಂಡಿದ್ದ ಅವರು ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಸಂಘಟನಾ ಸಾಮರ್ಥ್ಯಕ್ಕೆ ಪಕ್ಷ ಮನ್ನಣೆ ನೀಡುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ಬಂದಂತಾಗಿದೆ.