ಟಾಪ್ 5 ನ್ಯೂಸ್ ಕರ್ನಾಟಕ
ಹಾವೇರಿ: ಧಗಧಗಿಸಿದ ಬೆಂಕಿ ಸುಟ್ಟು ಭಸ್ಮವಾಯ್ತು 5 ಅಂಗಡಿ
– ಬೆಳಗಾವಿ: ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
– ಮೈಸೂರಿನ ಗುಜರಿ ಗೋಡೌನ್ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ
– ಗದಗ : ವಾಟ್ಸ್ಆ್ಯಪ್ ಗ್ರೂಪ್ ಮೆಸೇಜ್ ಓಪನ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ
– ಧಾರವಾಡ: ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ
NAMMUR EXPRESS NEWS
ಹಾವೇರಿ: ಹಾವೇರಿ ಜಿಲ್ಲೆಯ ಚಿಕ್ಕೇರೂರು ಗ್ರಾಮದಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು, ಐದಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಸುಮಾರು 30 ಲಕ್ಷ ರೂ.ಗಿಂತ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದಟ್ಟ ಹೊಗೆ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಎಲೆಕ್ಟ್ರಿಕಲ್ ಅಂಗಡಿ, ಬೇಕರಿ, ಗೊಂಬಿ ಅಂಗಡಿ, ಫುಟವೇರ್ ಅಂಗಡಿ, ಹೊಟೇಲ್ ಭಸ್ಮ.ವಾಗಿದೆ. ಸ್ಥಳಕ್ಕೆ ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
– ಬೆಳಗಾವಿ: ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಬೆಳಗಾವಿ: ಜಿಲ್ಲೆಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಖನಗಾಂವ ಗ್ರಾಮದ ಕೆ.ಎಚ್.ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕೆಸ್ಆರ್ಟಿಸಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ಈ ಅವಘಡ ನಡೆದಿದೆ. ಮೃತರನ್ನು ಸುಳೇಬಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ (29) ಎಂದು ಗುರುತಿಸಲಾಗಿದೆ. ಬೆಳಗಾವಿ ಕಡೆಗೆ ಬರುತ್ತಿದ್ದ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ವಿಠ್ಠಲ ದತ್ತಾ ಲೋಕರೆ 30 ಅಡಿ ದೂರದ ಹೊಲಕ್ಕೆ ಹಾರಿ ಬಿದ್ದಿದ್ದರು. ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಕೂಡ ಪಲ್ಟಿ ಹೊಡೆದಿದ್ದು, ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
– ಮೈಸೂರಿನ ಗುಜರಿ ಗೋಡೌನ್ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ
ಮೈಸೂರು: ಗುಜರಿಯ ಗೋಡೌನ್ನಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ 30 ಮಂದಿ ಅಸ್ವಸ್ಥಗೊಂಡ ಘಟನೆ ಮೈಸೂರಿನಲ್ಲಿ ಸಂಭವಿಸಿದೆ. ಮೈಸೂರಿನ ಹಳೆ ಕೆಸರೆಯ ಗುಜರಿ ಅಂಗಡಿಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಆರಂಭದಲ್ಲಿ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಐವರು ಅಸ್ವಸ್ಥಗೊಂಡರೆ ಬಳಿಕ ಸುತ್ತಲಿನ ಗ್ರಾಮಸ್ಥರೂ ಆರೋಗ್ಯ ಸಮಸ್ಯೆ ಎದುರಿಸಿ ಆಸ್ಪತ್ರೆ ಸೇರಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ ವಿಷಾನಿಲ ಸೋರಿಕೆಯಾಗಿತ್ತು. ಮೊದಲು ಗುಜರಿ ಗೋಡೌನ್ನಲ್ಲಿ ಕೆಲಸ ಮಾಡುತ್ತಿದ್ದವರು ಅಸ್ವಸ್ಥಗೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ ಗ್ರಾಮಸ್ಥರಿಗೆ ಕೆಮ್ಮು, ವಾಂತಿ ಶುರುವಾಗಿದೆ. ಅಸ್ವಸ್ಥಗೊಂಡಿರುವ 30 ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೈಸೂರಿನ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ಗುಜರಿ ಗೋಡೌನ್ನಲ್ಲಿ ಘಟನೆ ಸಂಭವಿಸಿದೆ. ಅನಿಲ ಗೋಡೌನ್ನಿಂದ ಹೊರಕ್ಕೆ ಬಂದು ಕೆಸರೆ ಗ್ರಾಮದಲ್ಲಿ ಹರಡಿದಿಎ. ಕೆಸರೆ ಗ್ರಾಮಸ್ಥರಲ್ಲೂ ಉಸಿರಾಟದ ತೊಂದರೆ, ಕೆಮ್ಮು ಕಾಣಿಸಿಕೊಂಡು ಪರದಾಡಿದ್ದಾರೆ. ಎನ್.ಆರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದೆ. ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
– ಗದಗ : ವಾಟ್ಸ್ಆ್ಯಪ್ ಗ್ರೂಪ್ ಮೆಸೇಜ್ ಓಪನ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ
ಗದಗ: ವಾಟ್ಸ್ಆ್ಯಪ್ ಗ್ರೂಪ್ಗೆ ಬಂದಿದ್ದ ಮೆಸೇಜ್ವೊಂದನ್ನು ತೆರೆದು ನೋಡಿದ ವ್ಯಾಪಾರಿಯೊಬ್ಬರು ತಮ್ಮ ಖಾತೆಯಲ್ಲಿದ್ದ ಮೂರೂವರೆ ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಸೈಬರ್ ವಂಚಕರು ಹಣ ಲಪಟಾಯಿಸಿದ್ದಾರೆ. ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅನಿಲ್ ಮಲ್ಲಪ್ಪ ಚಿನ್ನಾಪುರ ಎಂಬುವವರೇ ಸೈಬರ್ ವಂಚನೆಗೆ ಒಳಗಾದ ವ್ಯಕ್ತಿ. ನಗರದ ಜಿ.ಎಸ್. ಪಾಟೀಲ್ ಲೇಔಟ್ನಲ್ಲಿ ವಾಸವಾಗಿರುವ ಇವರು, ಮೊದಲು ಜಿ.ಎಸ್. ಪಾಟೀಲ್ ಲೇಔಟ್ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಯುನಿಯನ್ ಬ್ಯಾಂಕ್ನ ಎಪಿಕೆ ಹೆಸರಿನಲ್ಲಿ ಬಂದಿದ್ದ ಲಿಂಕ್ ಮೆಸೇಜ್ ಅನ್ನು ತೆರದು ನೋಡಿದ್ದಾರೆ. ಇದಾದ ಬಳಿಕ ಮರುದಿನ ಫೋನ್ ಕರೆಯೊಂದು ಬಂದಿದೆ. ಯೂನಿಯನ್ ಬ್ಯಾಂಕ್ ಮುಖ್ಯಸ್ಥ ಎಂದು ಕರೆ ಮಾಡಿದ ವ್ಯಕ್ತಿಯು, ನಿಮ್ಮ ಬ್ಯಾಂಕ್ ಖಾತೆ ಡಿಆಕ್ಟಿವೇಟ್ ಆಗಿದೆ ಎಂದು ಕೆಲವು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದಾದ ಅರ್ಧಗಂಟೆಯಲ್ಲೇ ಅನಿಲ್ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ಮೊದಲ ಹಂತದಲ್ಲಿ 50 ಸಾವಿರ ರೂ, 2ನೇ ಹಂತದಲ್ಲಿ 2,25,000 ರೂ. ಹೀಗೆ ಒಟ್ಟು 3,74,998 ರೂಗಳನ್ನು ಸೈಬರ್ ವಂಚಕರು ಎಗರಿಸಿದ್ದಾರೆ. ಸೈಬರ್ ವಂಚನೆಗೆ ಒಳಗಾದ ಅನಿಲ್ ನಗರದ ರಾಜೀವ್ ಗಾಂಧಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಖಾತೆಯಿಂದ ಎಗರಿಸಿದ ಹಣವು ತಮಿಳುನಾಡು ಹಾಗೂ ಬಾಂಗ್ಲಾದೇಶದ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ.
– ಧಾರವಾಡ: ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ
ಧಾರವಾಡ: ಹಿರಿಯ ಜೀವಿಯೊಬ್ಬರು ಮಳೆ ಬರುವಾಗಲೇ ತಪಸ್ಸಿಗೆ ಕುಳಿತ ಘಟನೆ ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರು ನಡೆದಿದೆ. ಜೋರಾಗಿ ಬರುತ್ತಿದ್ದ ಮಳೆಯಲ್ಲಿ ನಡು ರಸ್ತೆಯಲ್ಲಿಯೇ ಕಣ್ಣು ಮುಚ್ಚಿ ಕುಳಿತ ವೃದ್ಧ, ಒಂಚೂರು ಅಲುಗಾಡದೆ ತಪಸ್ಸು ಮಾಡಿದ್ದಾರೆ. ಇನ್ನೂ ಈ ದೃಶ್ಯವನ್ನು ಓರ್ವ ಯುವಕನ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ