ಟಾಪ್ 5 ನ್ಯೂಸ್ ಮಲ್ನಾಡ್
ಸಾಗರ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
– ಓರ್ವ ಸ್ಥಳದಲ್ಲಿಯೇ ಸಾವು ಇಬ್ಬರು ಗಂಭೀರ
ತೀರ್ಥಹಳ್ಳಿ : ಯೋಗಿಮಳಲಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಮನೆಯಲ್ಲಿ ಕಳ್ಳತನ.!
– ಮನೆಯಲ್ಲಿದ್ದ ನಗದು ಮತ್ತು ಬಂಗಾರ ಕಳ್ಳತನ
ಶಿವಮೊಗ್ಗ : ಊಟಕ್ಕೆ ಬಂದ ಗ್ರಾಹಕನ 4 ಲಕ್ಷ ರೂ ಇದ್ದ ಬ್ಯಾಗ್ ಎಗರಿಸಿ ಓಡಿದ ಸಪ್ಲೆಯರ್
– ಬೈಟ್ ಹೊಟೇಲ್ ನಲ್ಲಿ ನಡೆದಿದ್ದೇನು..?
ಭದ್ರಾವತಿ: ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ
ಶಿವಮೊಗ್ಗ : ಕದ್ದ ಚಿನ್ನದ ಆಭರಣವನ್ನ ತನ್ನದು ಎಂದು ನಂಬಿಸಿ ಅಡವಿಟ್ಟು ಹಣ ಪಡೆದಿದ್ದ ಮಹಿಳೆ
– ಮಣಪ್ಪುರಂ ಫೈನಾನ್ಸ್ ಸಂಸ್ಥೆಗೆ ಕಾದಿತ್ತು ಶಾಕ್
NAMMUR EXPRESS NEWS
ಸಾಗರ : ಆನಂದಪುರ ಹೆದ್ದಾರಿಯಲ್ಲಿ ಮಾರುತಿ ಓಮ್ಮಿ ಹಾಗೂ ಟಾಟಾ ಇಂಡಿಕಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಭದ್ರಾವತಿ ಗ್ರಾಮದ ಅಜಯ್ (21) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಧೈವಿಯಾಗಿದ್ದಾರೆ.
ಉಳ್ಳೂರು ಸಮೀಪದ ಮಂಚಾಲೆ ಗ್ರಾಮದ ಸಮೀಪದಲ್ಲಿ ಈ ದುರ್ಘಟನೆ ನಡೆದಿದ್ದು ಸಾಗರದ ಟೌನ್ ನಿವಾಸಿ ಸೈಯದ್ ನೂರುಲ್ಲಾ ಎಂಬುವವನು ಉಳ್ಳೂರು ಗ್ರಾಮದ ಕಡೆಯಿಂದ ಸಾಗರ ಕಡೆಗೆ ತೆರಳುತಿದ್ದ ವೇಳೆ ಮಂಚಾಳೆ ಸಮೀಪದಲ್ಲಿ ಓಮಿನಿ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಮಾರುತಿ ಓಮಿನಿಯಲ್ಲಿದ್ದ ಭದ್ರಾವತಿ ನಿವಾಸಿ ಅಜಯ್ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಉಲ್ಲಾಸ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಇಂಡಿಕಾ ಕಾರ್ ನಲ್ಲಿದ್ದ ಸೈಯದ್ ನೂರುಲ್ಲಾ ರವರಿಗೂ ತೀವ್ರ ಪೆಟ್ಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನಂದಪುರ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ತನಿಖೆ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯೋಗಿಮಳಲಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಮನೆಯಲ್ಲಿ ಕಳ್ಳತನ.!
– ಮನೆಯಲ್ಲಿದ್ದ ನಗದು ಮತ್ತು ಬಂಗಾರ ಕಳ್ಳತನ
ಕೋಣಂದೂರು: ತೀರ್ಥಹಳ್ಳಿ ತಾಲೂಕಿನ ಯೋಗಿಮಳಲಿ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಕಾರ್ತಿಕ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಯೋಗಿಮಳಲಿಯ ಸಿ.ಕೆ ಸರ್ಕಲ್ ಹತ್ತಿರ ಮನೆಯಲ್ಲಿ ವಾಸವಾಗಿದ್ದು, ಜೂ.6ರ ರಾತ್ರಿ ಮನೆಯಲ್ಲಿದ್ದ ನಗದು ಮತ್ತು ಬಂಗಾರ ಕಳ್ಳತನವಾಗಿದೆ. ಹಾಗೂ ಇದೇ ದಿನ ರಾತ್ರಿ ಕೋಣಂದೂರು ಸಿ.ಕೆ ಸರ್ಕಲ್ನಲ್ಲಿ ಬೈಕ್ ಸಹ ಕಳ್ಳತನವಾಗಿದೆ.
ಊಟಕ್ಕೆ ಬಂದ ಗ್ರಾಹಕನ 4 ಲಕ್ಷ ರೂ ಇದ್ದ ಬ್ಯಾಗ್ ಎಗರಿಸಿ ಓಡಿದ ಸಪ್ಲೆಯರ್
– ಬೈಟ್ ಹೊಟೇಲ್ ನಲ್ಲಿ ನಡೆದಿದ್ದೇನು..?
ಶಿವಮೊಗ್ಗ : ನಗರದ ಬೈಟ್ ಹೊಟೆಲಿನಲ್ಲಿ ಗ್ರಾಹಕ ಬಿಟ್ಟು ಹೋದ 4 ಲಕ್ಷ ರೂ. ಇದ್ದ ಹಣದ ಚೀಲವನ್ನು ಅಲ್ಲಿನ ಸರ್ವರ್ ಎತ್ತಿಕೊಂಡು ಹೋದ ಘಟನೆ ಸಂಭವಿಸಿದ್ದು, ಆತನನ್ನು ಬಂಧಿಸಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕು ಜಂಬಾನಿ ಗ್ರಾಮದ ವಾಸಿ ಲೋಕೇಶ್ ಎನ್ನುವವರು ತನ್ನ ಸ್ನೇಹಿತನೊಂದಿಗೆ ಹೋಟೇಲ್ ನಲ್ಲಿ ಊಟ ಮಾಡುತ್ತಿದ್ದಾಗ 4 ಲಕ್ಷ ರೂ.ಇದ್ದ ಚೀಲವನ್ನು ಟೇಬಲ್ ಮೇಲೆ ಇಟ್ಟಿದ್ದರು. ಅವಸರದಲ್ಲಿ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯದ ನಂತರ ಕಾರಿನಲ್ಲಿ ಬ್ಯಾಗ್ ಇಲ್ಲದೇ ಇರುವುದು ಕಂಡುಬಂದಿದ್ದು, ವಾಪಾಸ್ ಹೋಟೇಲ್ ಗೆ ಬಂದು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಹೋಟೇಲ್ ನಲ್ಲಿ ಸರ್ವರ್ ಕೆಲಸ ಮಾಡುವ ಹೇಮಂತ್ ಕುಮಾರ್ ಎಂಬುವವನು ಬ್ಯಾಗ್ ನ್ನು ತೆಗೆದು ನೋಡಿ ಸ್ಟೋರ್ ರೂಮಿನಲ್ಲಿ ಇಡುವ ದೃಶ್ಯಾವಳಿ ಕಂಡುಬಂದಿತು. ಪೋನ್ ಮಾಡಿ ಆತನಿಗೆ ಹಣದ ಬ್ಯಾಗ್ ನ ಬಗ್ಗೆ ವಿಚಾರ ಮಾಡಿದಾಗ ಯಾವುದೇ ಬ್ಯಾಗ್, ನಗದು ಹಣ ನಾನು ತೆಗೆದುಕೊಂಡಿಲ್ಲವೆಂದು ಹೇಳಿ ಫೋನ್ ಕಟ್ ಮಾಡಿದ್ದನು. ಅಲ್ಲದೆ ಬೆಳಿಗ್ಗೆ ಹೊಟೇಲ್ ನ ಕೆಲಸಕ್ಕೂ ಕೂಡ ಬಂದಿಲಯರಲಿಲ್ಲ. ಆದ್ದರಿಂದ ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಹೇಮಂತ್ ಕುಮಾರ್ ಈತನ ಮೇಲೆ ಪ್ರಕರಣ ದಾಖಲಿಸಿದ್ದರು. ಶಿವಮೊಗ್ಗ ಪೊಲೀಸರ ತಂಡವು ಪ್ರಕರಣದ ಆರೋಪಿತ ಹೇಮಂತ್ ಕುಮಾರ್ ಅಲಿಯಾಸ್ ಹೇಮಂತ್ (40) ಈತ ವಾಸವಿರುವ ಅಶೋಕನಗರ ದ ಮನೆಗೆ ತೆರಳಿ ದಸ್ತಗಿರಿ ಮಾಡಿ, ಆತನಿಂದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
– ಭದ್ರಾವತಿ: ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ
ಭದ್ರಾವತಿ : ಮಾಲೀಕ ಹೊರ ಹೋಗಿದ್ದ ಸಂದರ್ಭ ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ನೌಕರರು ಪರಾರಿಯಾಗಿದ್ದಾರೆ. ಚಿದಾನಂದ ಎಂಬುವವರು ಭದ್ರಾವತಿ ತಾಲೂಕು ಗೌಡರಹಳ್ಳಿಯ ತೋಟವೊಂದರಲ್ಲಿ ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿ ನಡೆಸುತ್ತಿದ್ದಾರೆ. ನೇಪಾಳ ದೇಶದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ 40 ಸಾವಿರ ರೂ. ಹಣ ನೀಡುವಂತೆ ಕಾರ್ಮಿಕರು ಚಿದಾನಂದ ಬಳಿ ಕೇಳಿದ್ದರು. ಹಣಕಾಸು ಸಮಸ್ಯೆಯಿಂದ ಚಿದಾನಂದ ಹಣ ನೀಡಿರಲಿಲ್ಲ. ಇನ್ನೊಂದೆಡೆ ಕರೆಂಟ್ ಬಿಲ್ ಪಾವತಿಸದ ಹಿನ್ನೆಲೆ ಜೂ.5ರಂದು ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿದ್ದರು. ಕರೆಂಟ್ ಬಿಲ್ ಪಾವತಿಸಲು ಹಣ ಹೊಂದಿಸಿಕೊಂಡು ಜೂ.5ರ ರಾತ್ರಿ 10 ಗಂಟೆಗೆ ಹಿಂತಿರುಗಿದಾಗ, ಯಾವುದೋ ವಾಹನ ಫ್ಯಾಕ್ಟರಿ ಬಳಿ ಬಂದು ಹೋಗಿರುವುದು ಚಿದಾನಂದಗೆ ಗೊತ್ತಾಗಿದೆ. ಫ್ಯಾಕರಿಗೆ ತೆರಳಿ ಮೊಬೈಲ್ ಟಾರ್ಚ್ನಲ್ಲಿ ಪರಿಶೀಲಿಸಿದಾಗ ಒಂದು ಲ್ಯಾಪ್ಟಾಪ್, 10 ಬ್ಯಾಗ್ ಅಡಿಕೆ ತಟ್ಟೆ, ಅಡಿಕೆ ಹಾಳೆ ತಯಾರಿಸುವ 12 ಅಚ್ಚುಗಳು ನಾಪತ್ತೆಯಾಗಿದ್ದವು. ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ದಿನೇಶ, ಆತನ ಪತ್ನಿ ನಿರ್ಮಲಾ, ಪ್ರಕಾಶ್, ಆತನ ಪತ್ನಿ ಮನ್ಸೂರ ಕಾಣೆಯಾಗಿದ್ದರು. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಕದ್ದ ಚಿನ್ನದ ಆಭರಣವನ್ನ ತನ್ನದು ಎಂದು ನಂಬಿಸಿ ಅಡವಿಟ್ಟು ಹಣ ಪಡೆದಿದ್ದ ಮಹಿಳೆ
– ಮಣಪ್ಪುರಂ ಫೈನಾನ್ಸ್ ಸಂಸ್ಥೆಗೆ ಕಾದಿತ್ತು ಶಾಕ್
ಶಿವಮೊಗ್ಗ : ಕದ್ದ ಚಿನ್ನದ ಆಭರಣವನ್ನ ತನ್ನದು ಎಂದು ನಂಬಿಸಿ ಅಡವಿಟ್ಟು ಹಣ ಪಡೆದಿದ್ದ ಮಹಿಳೆ ವಿರುದ್ಧ ಮಣಪ್ಪುರಂ ಫೈನಾನ್ಸ್ ಸಂಸ್ಥೆ ದೂರು ನೀಡಿದೆ. ಪೂಜಾ ಎಂಬಾಕೆ 2022ರಲ್ಲಿ 25.6 ಗ್ರಾಂ ಚಿನ್ನದ ಆಭರಣವನ್ನು ಮಣಪ್ಪುರಂ ಫೈನಾನ್ಸ್ ಸಂಸ್ಥೆಯಲ್ಲಿ ಅಡವಿಟ್ಟಿದ್ದಳು. 84 ಸಾವಿರ ರೂ. ಸಾಲದ ಹಣ ಪಡೆದಿದ್ದಳು ಎಂದು ಆರೋಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಠಾಣೆ ಪೊಲೀಸರು, ಪೂಜಾ ಅಡವಿಟ್ಟ ಚಿನ್ನ ಕಳ್ಳತನದ್ದು ಎಂದು ಆರೋಪಿಸಿ ವಶಕ್ಕೆ ಪಡೆದಿದ್ದರು. ಕಳ್ಳತನದ ಚಿನ್ನವನ್ನು ತನ್ನದೆಂದು ನಂಬಿಸಿ ತಮ್ಮ ಸಂಸ್ಥೆಗೆ ಮೋಸ ಮಾಡಿದ್ದಾಳೆ ಎಂದು ಆರೋಪಿಸಿ, ಆಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಣಪ್ಪುರಂ ಫೈನಾನ್ಸ್ ಸಂಸ್ಥೆ ಶಿವಮೊಗ್ಗ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.