ಲೋಕಸಭೆಗೆ ಕೋಟಾ: ವಿಧಾನ ಪರಿಷತ್ ಸ್ಥಾನಕ್ಕೆ ಯಾರು?
– ಕರಾವಳಿಯಲ್ಲಿ ಮತ್ತೊಂದು ಚುನಾವಣೆ
– ಕಟೀಲ್ ಅವರಿಗೆ ಸಿಗುತ್ತಾ ಟಿಕೆಟ್?
NAMMUR EXPRES NEWS
ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್ಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಇದೀಗ ವಿಧಾನ ಪರಿಷತ್ನ ಅವರ ಸ್ಥಾನ ತೆರವಾಗಲಿದೆ. ಹೀಗಾಗಿ, ಇದೀಗ ಮತ್ತೊಂದು ಚುನಾವಣೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯು ಸಜ್ಜಾಗಬೇಕಿದೆ.
ಕೋಟ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಒಳಗೊಂಡಿರುವ ವಿಧಾನ ಪರಿಷತ್ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರಕ್ಕೆ 2021ರ ಡಿಸೆಂಬರ್ನಲ್ಲಿ ಚುನಾವಣೆ ನಡೆದಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯು ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬ ಅಭ್ಯರ್ಥಿಯನ್ನಷ್ಟೇ ಕಣಕ್ಕೆ ಇಳಿಸಿ ಎರಡೂ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಪರಿಷತ್ನಲ್ಲಿ ಈ ಕ್ಷೇತ್ರದಿಂದ ಭದ್ರಪಡಿಸಿಕೊಂಡಿತ್ತು. ಅದರಂತೆ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರು ಆಯ್ಕೆಯಾಗಿದ್ದರೆ, ಕಾಂಗ್ರೆಸ್ನಿಂದ ಮಂಜುನಾಥ ಭಂಡಾರಿ ಅವರು ಆಯ್ಕೆಯಾಗಿದ್ದರು. ಎಲ್ಲ ಕ್ಷೇತ್ರಗಳಂತೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಪರಿಷತ್ ಸದಸ್ಯರ ಅವಧಿಯು 6 ವರ್ಷಗಳಾಗಿವೆ. ಹೀಗಿರುವಾಗ, ಶ್ರೀನಿವಾಸ ಪೂಜಾರಿ ಅವರ ಪರಿಷತ್ ಅವಧಿ ಇನ್ನು ಕೂಡ ಮೂರುವರೆ ವರ್ಷ ಬಾಕಿಯಿದೆ.
ಸ್ಥಳೀಯ ಸಂಸ್ಥೆಗಳ ಪರಿಷತ್ನ ಈ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸದಸ್ಯರು ಈ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರು. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಇನ್ನೂ ನಡೆಯದೆ ಬಾಕಿಯಿದೆ. ಶೀಘ್ರದಲ್ಲೇ ಪಂಚಾಯತ್ ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ.
ವಿಧಾನ ಪರಿಷತ್ ಉಪ ಚುನಾವಣೆಗೂ ಮೊದಲೇ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ಗಳಿಗೆ ಚುನಾವಣೆ ನಡೆದರೆ ಮತದಾರರ ಸಂಖ್ಯೆ ಹೆಚ್ಚಲಿದೆ. ಇಲ್ಲದಿದ್ದರೆ ಈಗಿರುವ ಇತರೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹತೆ ಪಡೆಯಲಿದ್ದಾರೆ.
ಒಂದುವೇಳೆ, ಕೋಟ ಅವರಿಂದ ತೆರವಾಗುವ ಪರಿಷತ್ ಸ್ಥಾನಕ್ಕೆ ಚುನಾವಣೆ ಘೋಷಣೆಯಾದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇನ್ನು ಬಿಜೆಪಿಯಲ್ಲಿ ಈ ಕ್ಷೇತ್ರದ ಮೇಲೆ ಘಟಾನುಘಟಿ ನಾಯಕರೇ ಕಣ್ಣಿಟ್ಟಿದ್ದಾರೆ. ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು ಅವರು ಈ ಕ್ಷೇತ್ರದಿಂದ ಟಿಕೆಟ್ ಪಡೆಯುವ ಮೂಲಕ ಪರಿಷತ್ ಪ್ರವೇಶಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅದೇರೀತಿ, ಕಳೆದ ವಿಧಾನಸಭೆ ಹಾಗೂ ವಿಧಾನ ಪರಿಷತ್ನ ಇತ್ತೀಚಿನ ಚುನಾವಣೆಗಳಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿಯ ಅನೇಕ ನಾಯಕರು ಕೂಡ ಟಿಕೆಟ್ಗಾಗಿ ತೆರೆಮರೆಯಲ್ಲಿ ಈಗಾಗಲೇ ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸದ್ಯ ಬಿಜೆಪಿ ವಶದಲ್ಲಿರುವ ಈ ಕರಾವಳಿ ಭಾಗದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಮುಂದಿನ ದಿನಗಳಲ್ಲಿ ಯಾರು ಚಿಂತಕರ ಚಾವಡಿಯಾಗಿರುವ ವಿಧಾನ ಪರಿಷತ್ ಪ್ರವೇಶಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.