ಮಾಜಿ ಉಪ ಪ್ರಧಾನಿ ಆಡ್ವಾಣಿ ಅಸ್ವಸ್ಥ
– ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲು
– ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ
NAMMUR EXPRESS NEWS
ಹೊಸದಿಲ್ಲಿ: ಮಾಜಿ ಉಪ ಪ್ರಧಾನಿ , ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಆಡ್ವಾಣಿ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ AIIMS ಗೆ ದಾಖಲಿಸಲಾಗಿದೆ. ಇದನ್ನು ಆಸ್ಪತ್ರೆಯ ಹೇಳಿಕೆ ದೃಢಪಡಿಸಿದೆ. “ಎಲ್.ಕೆ ಅಡ್ವಾಣಿ ಅವರು ನವದೆಹಲಿಯ ಏಮ್ಸ್ಗೆ ದಾಖಲಾಗಿದ್ದಾರೆ. ಅವರು ಸ್ಥಿರವಾಗಿದ್ದಾರೆ ಮತ್ತು ವೀಕ್ಷಣೆಯಲ್ಲಿದ್ದಾರೆ” ಎಂದು ಏಮ್ಸ್ ಹೇಳಿಕೆ ನೀಡಿದೆ. ಹಿರಿಯ ನಾಯಕನ ದೈಹಿಕ ಸ್ಥಿತಿಗತಿಯ ಬಗ್ಗೆ ಆಸ್ಪತ್ರೆಯು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆಡ್ವಾಣಿ ಅವರಿಗೆ ಈಗ 96 ವರ್ಷ. ಬುಧವಾರ ತಡರಾತ್ರಿ ಆಸ್ಪತ್ರೆಗೆ ದಾಖಲಿಸುವಾಗ ಅವರು ಪ್ರಜ್ಞಾವಸ್ಥೆಯಲ್ಲಿದ್ದರು ಹಾಗೂ ಮಾತನಾಡುತ್ತಿದ್ದರು. ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ವಿಭಾಗದ ತಜ್ಞರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಸರ್ಕಾರ ರಚನೆಗೆ ಹಕ್ಕು ಸಾಧಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಆಡ್ವಾಣಿಯವರನ್ನು ಭೇಟಿ ಮಾಡಿದ್ದರು. ಗಾಂಧಿನಗರದ ಮಾಜಿ ಸಂಸದನಾದ ಆಡ್ವಾಣಿ, ಮೋದಿಯವರ ರಾಜಕೀಯ ಮಾರ್ಗದರ್ಶಕರಾಗಿದ್ದಾರೆ. ಆಡ್ವಾಣಿ ಅವರಿಗೆ ಈ ವರ್ಷದ ಮಾರ್ಚ್ನಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರ ನಿವಾಸದಲ್ಲಿಯೇ ಈ ಅತ್ಯುನ್ನತ ನಾಗರಿಕ ಗೌರವವನ್ನು ಸಲ್ಲಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಇದನ್ನು ಕೊಡಮಾಡಿದ್ದರು. ಔಪಚಾರಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧಂಖರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ ಕೆ ಅಡ್ವಾಣಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಎಲ್ಕೆ ಆಡ್ವಾಣಿ ಅವರು ಜೂನ್ 2002ರಿಂದ ಮೇ 2004 ರವರೆಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿ, ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005 ರವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದರು.