ಮಹಿಳೆಯರಿಗೆ ಹಣ ಬರುತ್ತೆ!
– ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಜಮೆ
– ಇಂದು ಅಥವಾ ನಾಳೆ ಹಣ ವರ್ಗಾವಣೆ?
NAMMUR EXPRESS NEWS
ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯ ಹಣ ಯಜಮಾನಿಯ ಖಾತೆಗೆ ಇಂದು ಅಥವಾ ನಾಳೆ ಜಮೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ʼʼಮೇ, ಜೂನ್ ತಿಂಗಳ ಹಣ ಹಾಕಿದ್ದೇವೆ. ಇಂದು ಅಥವಾ ನಾಳೆ ಜಮೆ ಆಗಲಿದೆʼʼ ಎಂದು ವಿವರಿಸಿದ್ದಾರೆ.
– ಯೋಜನೆಯನ್ನು ಎಂದು ನಿಲ್ಲಿಸುವುದಿಲ್ಲ
ಗೃಹ ಲಕ್ಷ್ಮೀ ಸೇರಿದಂತೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎನ್ನುವ ವದಂತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ ಅವರು, ʼʼರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ನಿಲ್ಲುವುದಿಲ್ಲ. ಐದು ವರ್ಷಗಳವರೆಗೂ ಇದು ಮುಂದುವರಿಯಲಿದೆ. ಬಿಜೆಪಿಯವರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆʼʼ ಎಂದು ಹೇಳಿದ್ದಾರೆ.
ಆಧಾರ್ ಸೀಡಿಂಗ್ ಕಡ್ಡಾಯ
ಇನ್ನೂ ಸಾಕಷ್ಟು ಫಲಾನುಭವಿಗಳು ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರು ಕೂಡ ಆಧಾರ್ ಸೀಡಿಂಗ್ ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್ಗಳಲ್ಲಿ ಪರಿಹರಿಸಿಕೊಳ್ಳಬೇಕು. ಬಳಿಕ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ, ಇ-ಕೆವೈಸಿ ಅಪ್ಡೇಟ್ ಮಾಡಿಸಿ, ದೃಢೀಕರಣ ಪಡೆದು ಅವುಗಳನ್ನು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಒದಗಿಸಿದರೆ, ಸಹಾಯಧನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.