ಭಾರತ ಒಲಂಪಿಕ್ ಸಾಧನೆ ಸಾಕಾಗಲಿಲ್ಲ!
– ಅಮೇರಿಕ 94, ಚೀನಾ 65, ಆಸ್ಟ್ರೇಲಿಯಾ 42 ಪದಕಗಳೊಂದಿಗೆ ಟಾಪರ್
– ಭಾರತ 3 ಪದಕದೊಂದಿಗೆ ಪಟ್ಟಿಯಲ್ಲಿ 67ನೇ ಸ್ಥಾನ
– ಭರವಸೆ ಮೂಡಿಸಿದ ಕ್ರೀಡಾಪಟುಗಳು ಯಾರು ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ಜುಲೈ 26ರಂದು ಆರಂಭವಾಗಿ ಆಗಸ್ಟ್ 11ರ ತನಕ ನಡೆಯುತ್ತಿರುವ ಐತಿಹಾಸಿಕ ಪ್ಯಾರಿಸ್ ಒಲಂಪಿಕ್ಸ್ ರೋಮಾಂಚನಕಾರಿ ಹಂತ ತಲುಪಿದ್ದು, ಒಂದಾದ ಮೇಲೆ ಒಂದರಂತೆ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವ ಭರವಸೆ ಮೂಡಿಸುತ್ತಿದ್ದಾರೆ.
ಪ್ರಸ್ತುತ ಒಲಂಪಿಕ್ಸ್ ನಲ್ಲಿ ಭಾರತದಿಂದ ಒಟ್ಟು 117 ಅಥ್ಲೆಟ್ ಗಳು ಭಾಗವಹಿಸಿದ್ದು, ಇಬ್ಬರು ಕ್ರೀಡಾಪಟುಗಳು ಶೂಟಿಂಗ್ ವಿಭಾಗದಲ್ಲಿ ಮೂರು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಭರವಸೆ ಮೂಡಿಸಿದ ಚೋಪ್ರಾ, ಅವಿನಾಶ್ ಸಾಬ್ಲೆ
ಟೋಕಿಯಾ ಒಲಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿನ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಪ್ರಸಕ್ತ ಸಾಲಿನಲ್ಲಿಯೂ ಫೈನಲ್ ತಲುಪುವ ಮೂಲಕ ಭಾರತಾಂಬೆಗೆ ಚಿನ್ನದ ಪದಕದ ಮಾಲೆಯನ್ನು ಮುಡಿಗೇರಿಸುವ ವಿಶ್ವಾಸ ಮೂಡಿಸಿದ್ದಾರೆ. ಜೊತೆಗೆ ಪುರುಷರ 3000 ಮೀ ಸ್ಟೀಪಲ್ಚೇಸ್ನ ಫೈನಲ್ಗೆ ಅರ್ಹತೆ ಪಡೆಯುವ ಮೂಲಕ ಅವಿನಾಶ್ ಸಾಬ್ಲೆ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದು,ಅರ್ಹತಾ ಸುತ್ತಿನಲ್ಲಿ ಅದ್ಭುತ ಓಟ ಪ್ರದರ್ಶಿಸಿ, 3 ಸಾವಿರ ಮೀಟರ್ (3 ಕಿ.ಮೀ.) ದೂರದ ಸ್ಟೀಪಲ್ ಚೇಸ್ ಓಟವನ್ನು 8:15.43 ನಿಮಿಷಗಳಲ್ಲಿ ಪೂರೈಸಿದರು. ಈ ಮೂಲಕ ಈಟ್ಸ್ನಲ್ಲಿ 5ನೇ ಸ್ಥಾನಿಯಾಗಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಆಗಸ್ಟ್ 8ರಂದು ಪುರುಷರ 3 ಸಾವಿರ ಮೀ. ಸ್ಟೀಪಲ್ ಚೇಸ್ ಓಟದ ಫೈನಲ್ ಆಯೋಜನೆ ಆಗಲಿದ್ದು, ಅಗ್ರ 3ರ ಒಳಗೆ ಅವಿನಾಶ್ ಕಾಣಿಸಿಕೊಂಡರೆ ಭಾರತಕ್ಕೆ ಮತ್ತೊಂದು ಪದಕವು ಅದರ ಜೊತೆಗೆ ಭಾರತದ ಕ್ರೀಡಾ ಜಗತ್ತಿನಲ್ಲಿ ನೂತನ ಇತಿಹಾಸವೊಂದು ರಚನೆಯಾಗಲಿದೆ.
ಭಾರತೀಯರ ಹೃದಯ ಗೆದ್ದ ವಿನೇಶ್ ಫೋಗಟ್
ಇನ್ನೊಂದೆಡೆ ಕುಸ್ತಿಯಲ್ಲಿನ 50 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಯುಯಿ ಸುಸಾಕಿ ವಿರುದ್ಧ ಗೆದ್ದು, ಫೈನಲ್ ತಲುಪುವ ಮೂಲಕ ಭಾರತಕ್ಕೆ ಮತ್ತೊಂದು ಭರವಸೆ ಮೂಡಿಸಿದ್ದ ವಿನೇಶ್ ಫೋಗಟ್ ಅವರು ಫೈನಲ್ ಪಂದ್ಯದಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಳದ ಕಾರಣದಿಂದ ಅನರ್ಹಗೊಂಡು ಪದಕ ವಂಚಿತರಾಗಿದ್ದರೂ ಕೂಡ ಭಾರತೀಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ಕ್ರಶ್ ಮನು ಬಾಕರ್, ಸರಬ್ಜೋತ್ ಸಿಂಗ್
ಒಲಂಪಿಕ್ ಶೂಟಿಂಗ್ ವಿಭಾಗದಲ್ಲಿ ಭಾರತ ತನ್ನ ಮೂರು ಕಂಚಿನ ಪದಕಗಳನ್ನು ಪಡೆದಿದ್ದರೆ ಅದರಲ್ಲಿ ಮನುಬಾಕರ್ ಅವರೇ 10 ಮೀಟರ್ ಪಿಸ್ತೂಲ್ ಮಹಿಳೆಯರು ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪದಕ ಗೆದ್ದಿದ್ದಾರೆ. ಇವರೊಂದಿಗೆ ಮಿಶ್ರ ಶೂಟಿಂಗ್ ವಿಭಾಗದಲ್ಲಿ ಸರಬ್ಜೋತ್ ಸಿಂಗ್ ಅವರು ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ 2024ರ ಐತಿಹಾಸಿಕ ಪ್ಯಾರಿಸ್ ಒಲಂಪಿಕ್ ನಲ್ಲಿ 11ನೇ ದಿನದಂದು ಭಾರತ ಮೂರು ಕಂಚಿನ ಪದಕಗಳೊಂದಿಗೆ ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿ ಮುಂದುವರೆದಿದೆ.
ಅಮೇರಿಕಾ ಟಾಪ್: ಟಾಪ್ 5 ದೇಶಗಳು ಯಾವುದು?
ಒಲಂಪಿಕ್ಸ್ ಅಲ್ಲಿ ಅಮೇರಿಕಾದ ಕ್ರಮವಾಗಿ 27 ಚಿನ್ನ, 35 ಬೆಳ್ಳಿ, 32 ಕಂಚು ಪದಕದೊಂದಿಗೆ 94 ಪದಕ ಗೆದ್ದು ಮೊದಲ ಸ್ಥಾನದಲ್ಲಿದೆ.
25, 23,17 ಒಟ್ಟು 65 ಪದಕಗಳೊಂದಿಗೆ ಚೀನಾ ಎರಡನೇ ಸ್ಥಾನ, 18, 13,11 ಒಟ್ಟು 42 ಪದಕಗಳೊಂದಿಗೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಬಳಿಕ 51 ಪದಕ ಪಡೆದ ಫ್ರಾನ್ಸ್, 49 ಪದಕ ಪಡೆದ ಬ್ರಿಟನ್ ನಂತರದ ಸ್ಥಾನದಲ್ಲಿವೆ.