ಕರಾವಳಿ ನ್ಯೂಸ್
* ಕಾರ್ಕಳ:ಜೈಲಿನಲ್ಲಿದ್ದ ಮಗನ ಮಾತನಾಡಿಸಿ ಬಂದ ತಾಯಿ ಆತ್ಮಹತ್ಯೆ!
* ಕರ್ತವ್ಯಲೋಪ: 80 ಪೊಲೀಸ್ ಸಿಬ್ಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
* ಕುಂದಾಪುರ: ಮೀನುಗಾರಿಕೆ ವೇಳೆ ಆಯತಪ್ಪಿ ಸಮುದ್ರಕ್ಕೆ ಬಿದ್ದು ವ್ಯಕ್ತಿ ಮೃತ್ಯು
NAMMUR EXPRESS NEWS
ಕಾರ್ಕಳ: ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ಮಾತಾಡಿಸಿಕೊಂಡು ಬಂದ ತಾಯಿ ಅದೇ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ ಘಟನೆ ನಲ್ಲೂರು ಎಂಬಲ್ಲಿ ನಡೆದಿದೆ.
ನಲ್ಲೂರು ಗ್ರಾಮದ ಪ್ರೇಮಾ ಮೃತರು.
ಪುತ್ರ ಸುಮಂತ್ ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಒಂದೂವರೆ ತಿಂಗಳ ಹಿಂದೆ ವಾರಂಟ್ನಲ್ಲಿ ಬಂಧಿಸಿದ್ದರು. ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ತಾಯಿ ಪ್ರೇಮಾ
ಸೆ.11ರಂದು ಜೈಲಿಗೆ ತೆರಳಿ ಮಾತಾಡಿಸಿಕೊಂಡು ಬಂದಿದ್ದರು. ಬಳಿಕ ಚಿಂತೆಯಲ್ಲಿದ್ದ ಅವರು ರಾತ್ರಿ ಊಟ ಮಾಡಿ ಮಲಗಿದ್ದರು. ಮರುದಿನ ಬೆಳಗ್ಗೆ ಅವರು ಕಾಣದಿದ್ದಾಗ ಮನೆಯವರು ಹುಡುಕಾ ವೇಳೆ ಮನೆ ಪಕ್ಕದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಉಡುಪಿ: ಕರ್ತವ್ಯಲೋಪ: 80 ಪೊಲೀಸ್ ಸಿಬ್ಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
ಉಡುಪಿ: ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕಠಿನ ಕ್ರಮಕ್ಕೆ ಮುಂದಾಗಿದೆ. ಕರ್ತವ್ಯ ಲೋಪ ಆರೋಪದಲ್ಲಿ ಒಂದು ವರ್ಷದಲ್ಲಿ 4 ಮಂದಿ ಎಸ್ಐಗಳು ಸಹಿತ 80ಕ್ಕೂ ಅಧಿಕ ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಜಿಲ್ಲೆಯಲ್ಲಿ ಇಷ್ಟೊಂದು ಪೊಲೀಸರು ಅಮಾನತುಗೊಳ್ಳುತ್ತಿರುವುದು ಇದೇ ಮೊದಲು!
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿ 1 ವರ್ಷ ಪೂರೈಸಿರುವ ಡಾ| ಅರುಣ್ ಕೆ. ಅವರು ಪೊಲೀಸರ ಕರ್ತವ್ಯದ ಬಗ್ಗೆ ಗಮನಹರಿಸುತ್ತಿದ್ದು, ಒಂದು ವರ್ಷದಿಂದಲೂ ವಿವಿಧ ಕಾರಣಗಳಿಂದ ಕರ್ತವ್ಯಲೋಪ ಮಾಡಿದವರಿಗೆ ಅಮಾನತು, ವರ್ಗಾವಣೆ ಶಿಕ್ಷೆ ನೀಡಲಾಗಿದೆ.
* ಕುಂದಾಪುರ: ಮೀನುಗಾರಿಕೆ ವೇಳೆ ಆಯತಪ್ಪಿ ಸಮುದ್ರಕ್ಕೆ ಬಿದ್ದು ವ್ಯಕ್ತಿ ಮೃತ್ಯು
ಕುಂದಾಪುರ: ಸಮುದ್ರದಲ್ಲಿ ಮೀನುಗಾರಿಕೆ ಮಾಡುತಿದ್ದ ವೇಳೆ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದು, ಮೀನುಗಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.ಮೃತರನ್ನು ಶೇಷು (61) ಎಂದು ಗುರುತಿಸಲಾಗಿದೆ.
ಶೇಷು ಅವರು ಕೋಡಿಯ ಪ್ರದೀಪ್ ಅವರ ಫಿಶಿಂಗ್ ಬೋಟ್ನಲ್ಲಿ ಮೀನುಗಾರಿಕೆ ಮಾಡುತಿದ್ದಾಗ 8.15ರ ಸುಮಾರಿಗೆ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದಿದ್ದರು. ತಕ್ಷಣ ಬೋಟಿನಲ್ಲಿದ್ದ ಇತರರು ಅವರನ್ನು ಎತ್ತಿ ಅಂಬುಲೆನ್ಸ್ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.