ಎಲ್ಲೆಡೆ ಮಹಾಲಯ ಅಮಾವಾಸ್ಯೆ ಶುರು
– ಪಿತೃ ಪಕ್ಷದಲ್ಲಿ ಪೂರ್ವಜರ ತೃಪ್ತಿಪಡಿಸುವ ಪೂರ್ವಕಾಲ
– ಅ.2ವರೆಗೆ ಮಹಾಲಯ ಅಮಾವಾಸ್ಯೆ
NAMMUR EXPRESS NEWS
ಮನುಷ್ಯ ಈ ಭೂಮಿಗೆ ಬರಲು ಭಗವಂತ ಕಾರಣನಾದರೂ, ಲೌಕಿಕವಾಗಿ ಅವರವರ ಮಾತಾ ಪಿತೃಗಳು ಕಾರಣ. ಆದ್ದರಿಂದ ಅವರ ಋಣವನ್ನು ಜನ್ಮದಾರಭ್ಯ ಪೂಜಿಸಿದರೂ ತೀರಿಸುವುದು ಅಸಾಧ್ಯ. ದೇವರನ್ನು ನಿತ್ಯವೂ ಪೂಜಿಸುವಂತೆ ಅಗಲಿರುವ ತಂದೆ-ತಾಯಿಯರನ್ನು ನಿತ್ಯವೂ ಪೂಜಿಸುವುದು ಎಲ್ಲರಿಗೂ ಸಾಧ್ಯವಾಗದಿರಬಹುದೆಂಬ ಕಾರಣಕ್ಕೆ ನಮ್ಮ ಹಿರಿಯರು, ವರ್ಷ ಋತುವಿನ ಬಾದ್ರಪದ ಮಾಸದ ಪಾಡ್ಯದಿಂದ ಮಹಾಲಯ ಅಮಾವಾಸ್ಯೆವರೆಗೆ ಪಿತೃಗಳನ್ನು ಪೂಜಿಸಲು ಸಮಯ ನಿಗದಿ ಮಾಡಿದ್ದಾರೆ. ಈ 15 ದಿನಗಳ ಕಾಲವೂ ಪಿತೃಪೂಜೆಗೆ ಶ್ರೇಷ್ಠವಾಗಿದ್ದು, ಕೊನೇ ಪಕ್ಷ ಈ ಅವಧಿಯ ಒಂದು ದಿನವಾದರೂ ಪಿತೃಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಭಗವಂತನ ಸಾನ್ನಿಧ್ಯದಲ್ಲಿ ಶಾಶ್ವತ ಸ್ಥಾನವನ್ನು ಒದಗಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕೆಂಬ ನಿಯಮವಿದೆ. ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮ ಶಾಿಾಿ ಶ್ರಾದ್ಧ ಆಚರಣೆಗಳನ್ನು ಮಾಡಲಾಗುತ್ತದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ.ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ತಿಥಿಯಿಂದ ಪ್ರಾರಂಭವಾಗುತ್ತದೆ. ಪಿತೃಪಕ್ಷದ ನಿಜವಾದ ಅರ್ಥವೆಂದರೆ ಪಿತೃಗಳಿಗೆ ಪಿಂಡವನ್ನು ಅರ್ಪಿಸುವ ಮೂಲಕ ಪೂರ್ವಜರಿಗೆ ಗೌರವ ಸಲ್ಲಿಸುವ ಸಮಯ ಎಂದಾಗಿದೆ.
ಅ.2ಕ್ಕೆ ಮಹಾಲಯ ಅಮಾವಾಸ್ಯೆ: ಈ ಬಾರಿ ಬಾದ್ರಪದ ಪೌರ್ಣಿಮೆಯ (ಸೆ.18) ದಿವಸವೇ ಪಾಡ್ಯ ಆರಂಭವಾಗಿದ್ದು, ಇದು ಪಿತೃಪೂಜೆಗೆ ಬಹಳ ಶ್ರೇಷ್ಠ. ಸೆ.19ರಿಂದ ಆರಂಭವಾಗಿ ಅ.2ರ ವರೆಗೆ ಪಿತೃಪಕ್ಷವಿದೆ. ಅಮಾವಾಸ್ಯೆ ಬುಧವಾರ ಬಂದಿದ್ದು, ಕೆಲವರ ಮನೆಯಲ್ಲಿ ಬುಧವಾರ ಹಿರಿಯರಿಗೆ ಎಡೆ ಹಾಕುವುದಿಲ್ಲ ಎಂಬ ಮಾತಿದೆ. ಶಾಸ್ತ್ರದ ಪ್ರಕಾರ ಬುಧವಾರ ಎಡೆ ಹಾಕುವುದಕ್ಕೆ ನಿಷೇಧವಿಲ್ಲ. ಆದರೂ ನಿಮಗೆ ಗೊಂದಲವಿದ್ದರೆ ಪಿತೃಪಕ್ಷದ 15 ದಿವಸಗಳಲ್ಲಿ ನಿಮ್ಮ ಹಿರಿಯರು ನಿಧನರಾದ ವಾರ ಅಥವಾ ತಿಥಿಗನುಗುಣವಾಗಿ ಯಾವತ್ತಾದರೂ ಪಿತೃಪೂಜೆ ಮಾಡಬಹುದು. ಕೆಲವು ಮನೆಗಳಲ್ಲಿ ಪಿತೃಪೂಜೆಗೆ ಮಾಂಸಾಹಾರವನ್ನು ಮಾಡುವ ಪದ್ದತಿಯಿದ್ದು, ಗಾಂಧಿ ಜಯಂತಿಯಂದು ಮಹಾಲಯ ಅಮಾವಾಸ್ಯೆ ಬಂದಿರುವುದರಿಂದ ಮಧ್ಯ-ಮಾಂಸ ಮಾರಾಟಕ್ಕೆ ನಿಷೇಧ ಇರುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು.