ಭ್ರಷ್ಟಾಚಾರ ತಡೆ ಬಗ್ಗೆ ಮಕ್ಕಳಿಗೆ ಸಂತೋಷ್ ಹೆಗಡೆ ಪಾಠ
– ದುರಾಸೆಯೇ ಭ್ರಷ್ಟಾಚಾರದ ಮೂಲ, ತೃಪ್ತಿ ಇದ್ದರೆ ಭ್ರಷ್ಟಾಚಾರ ಆಗಲ್ಲ
– ಭ್ರಷ್ಟಾಚಾರ ಎಲ್ಲಾ ಕ್ಷೇತ್ರದಲ್ಲೂ ಇದೆ, ಯುವ ಜನರಿಂದ ಮಾತ್ರ ಬದಲಾವಣೆ ಸಾಧ್ಯ
– ನ್ಯಾ.ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಮನದ ಮಾತು
NAMMUR EXPRESS NEWS
ಹಾಸನ: ಲೋಕಾಯುಕ್ತಕ್ಕೆ ಬರುವವರೆಗೆ ನಾನು ಕೂಪ ಮಂಡೂಕನಾಗಿದ್ದೆ. ಅಲ್ಲಿಗೆ ಬಂದ ಬಳಿಕ ಬಹಳಷ್ಟು ಅನ್ಯಾಯ ಕಂಡೆ. ಭ್ರಷ್ಟಾಚಾರ ಹೆಚ್ಚುತ್ತಿರುವುದಕ್ಕೆ ವ್ಯಕ್ತಿ. ತಪ್ಪಲ್ಲ, ಸಮಾಜದ ತಪ್ಪು ಎಂದು ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಹೇಳಿದ್ದಾರೆ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್.ಕೆ.ಎಸ್ ಪಿ ಯು ಕಾಲೇಜು, ಹಾಸನ ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮಾತು ವಿಶೇಷ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ದೃಷ್ಟಿಯಿಂದ 1834ನೇ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಭ್ರಷ್ಟಾಚಾರ ವಿರುದ್ಧ ದನಿಯಾಗಲು ಕರೆ ನೀಡಿದ್ದೇನೆ. ಇಂದಿನ ಸಮಾಜ ಶ್ರೀಮಂತಿಕೆ, ಅಧಿಕಾರ ಇದ್ದವರಿಗೆ ಬೆಲೆ ಕೊಡುತ್ತಿದೆ. ಸಮಾಜದಲ್ಲಿ ಶ್ರೀಮಂತನಾಗುವುದಕ್ಕೆ ಪೈಪೋಟಿ. ಯಾವ ದಾರಿಯಲ್ಲಿ ಹೋಗುತ್ತೀರಿ ಎಂಬುದು ತುಂಬಾ ಮುಖ್ಯ. ಇನ್ನೊಬ್ಬನ ಜೇಬಿಗೆ ಕೈ ಹಾಕಿ, ಇನ್ನೊಬ್ಬನ ಹೊಟ್ಟೆ ಹೊಡೆದು ಶ್ರೀಮಂತರಾಗುವುದು ಬೇಕಾ ಎಂದು ಪ್ರಶ್ನಿಸಿದರು.
2024ರಲ್ಲಿದ್ದೇವೆ. ದುರಾಸೆ ಕಮ್ಮಿ ಆಗಿಲ್ಲ. ಕಾಂಟ್ರಾಕ್ಟರ್, ಅಧಿಕಾರಿಗಳು, ಭ್ರಷ್ಟರು ಸೇರಿ ನಿಮ್ಮ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಯಾರಿಗೆ ಶಿಕ್ಷೆ ಕೊಡೋದು?. ಕ್ಯಾನ್ಸರ್, ಕೋವಿಡ್ ರೋಗಕ್ಕೆ ಮದ್ದಿದೆ. ಆದರೆ ದುರಾಸೆಗೆ ಮದ್ದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿಗೆ ಸಂಸದನ ಮನೆ ದಾಳಿ ಮಾಡಿದಾಗ 200 ಕೋಟಿ ರೂ.ಹಣ ಸಿಕ್ಕಿತು. ದಾಳಿ ಮಾಡಿದಾಗೆಲ್ಲ ಕೋಟಿ ಕೋಟಿ ಹಣ ಸಿಗುತ್ತಿದೆ. ಸಂಪತ್ತು ಇದ್ದವರಿಗೆ ನಿದ್ದೆ ಬರಲ್ಲ. ಅಧಿಕಾರಿಗಳು, ದರೋಡೆಕೋರರು ಮನೆಗೆ ಬರ್ತಾರೆ ಎಂಬ ಭಯ ಇದ್ದಿದ್ದೇ. ತೃಪ್ತಿ ಇರಬೇಕು. ತೃಪ್ತಿ ಇದ್ದರೆ ದುರಾಸೆ ಬರಲ್ಲ. ಆಕಾಂಕ್ಷೆ ಇರಬೇಕು. ದೊಡ್ಡ ಕನಸು ಇರಬೇಕು. ಒಳ್ಳೆ ದಾರಿಯಲ್ಲಿ ಹಣ ಗಳಿಸಿ, ಯಾರದೋ ಕಷ್ಟದಲ್ಲಿಟ್ಟು ಹಣ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ಹಗರಣ, ಭ್ರಷ್ಟಾಚಾರದಿಂದ ಯುವ ಜನರ ಭವಿಷ್ಯ ಕತ್ತಲು
ದೇಶದಲ್ಲಿ ಕಾಮನ್ ವೇಲ್ತ್, 2ಜಿ, ಜೀಪ್, ಬೋಪೋರ್ಸ್, ಕೊಲ್ಗೆಟ್ ದೊಡ್ಡ ಹಗರಣ ಬಿಟ್ಟು ಲಕ್ಷ ಲಕ್ಷ ಕೋಟಿ ಜನರ ಹಣ ವ್ಯರ್ಥ ಆಗುತ್ತಿದೆ. ಯುವ ಜನತೆ ಭ್ರಷ್ಟರಾಗಬಾರದು. ಹಣ ಕೊಟ್ಟು, ಖರ್ಚು ಮಾಡಿ ಹುದ್ದೆ ಪಡೆದವನು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಸರ್ಕಾರಿ ಉದ್ಯೋಗ ಪಡೆಯಲು ಹಣ ಕೊಡಬೇಕು ಎಂಬ ಸ್ಥಿತಿ ದುರಂತ. ಜನಪ್ರತಿನಿಧಿ ಹಣ ಕೊಟ್ಟು ಗೆಲ್ಲಬೇಕು, ಆಮೇಲೆ ದುಡ್ಡು ಮಾಡಬೇಕು ಅನ್ನುವ ಸ್ಥಿತಿ ದೇಶದಲ್ಲಿದೆ. 40% ಸರ್ಕಾರ ಅಥವಾ ಅಧಿಕಾರಿಗಳಿಗೆ ಲಂಚ, 40% ಗುತ್ತಿಗೆದಾರರಿಗೆ 20% ಕೆಲಸ ಆದರೆ ಯಾವ ಅಭಿವೃದ್ಧಿ ಆಗುತ್ತಿದೆ. ಇದು ನಿಮ್ಮ ಭವಿಷ್ಯ. ನಿಮ್ಮ ಮತ್ತು ನಿಮ್ಮ ಜೀವನ ಗಟ್ಟಿಯಾಗಿರಲ್ಲ.. ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನು ಗಳಿಸಿರಿ ಎಂದು ಸಲಹೆ ನೀಡಿದರು.
ಪ್ರಾಮಾಣಿಕವಾಗಿದ್ದೇನೆ, ಹಾಗಾಗಿ ಭಯ ಇಲ್ಲ…
ನನಗೆ ಪ್ರಶಸ್ತಿ ಜತೆ ಹಣ ಕೊಟ್ಟ ಹಣ ಎಲ್ಲಾ ಯೋಧರಿಗೆ, ಅಸಾಹಯಕರಿಗೆ, ಸಮಾಜಕ್ಕೆ ನೀಡಿದ್ದೇನೆ. 3 ಮಂದಿ ಮಾಜಿ ಸಿಎಂ ಸಿಎಂ, ಸಚಿವರು, ಶಾಸಕರು, ನೂರಾರು ಮಂದಿ ಅಧಿಕಾರಿಗಳ ವಿರುದ್ಧ ತನಿಖೆ ಮಾಡಿಸಿದ್ದೇನೆ. ಆದ್ರೂ ನಾನು ಪ್ರಾಮಾಣಿಕವಾಗಿದ್ದೇನೆ. ಹಾಗಾಗಿ ಭಯ ಇಲ್ಲ. ನನ್ನಲ್ಲಿ ಕೊಂಚ ನೂನ್ಯತೆ ಇದ್ದರೆ ಇಷ್ಟ್ರಲ್ಲಿ ಬಟ್ಟೆ ಬಿಚ್ಚಿಡುತ್ತಿದ್ದರು. ನನ್ನ ಬಳಿ ಒಂದೇ ಮನೆ, ಒಂದೇ ಹೆಂಡ್ತಿ ಯಾರೂ ಏನೂ ಮಾಡಲು ಸಾಧ್ಯ ಇಲ್ಲ. ನನಗೆ ಮಕ್ಕಳಿಲ್ಲ, ಸಮಾಜಕ್ಕಾಗಿ,ಮಕ್ಕಳ ಭವಿಷ್ಯಕ್ಕಾಗಿ ಎಲ್ಲೆಡೆ ಕಾರ್ಯಕ್ರಮ ತಿರುಗಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದೇನೆ ಎಂದರು.
ಜಾತಿ, ಧರ್ಮದ ಆಧಾರದ ಮೇಲೆ ಕ್ರಾಂತಿ ಸರಿ ಅಲ್ಲ
ಜಾತಿ, ಧರ್ಮದ ಆಧಾರದ ಮೇಲೆ ಕ್ರಾಂತಿ ಆದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ. ತಪ್ಪು ಮಾಡಿದವರಿಗೆ ಏನು ಆಗಲ್ಲ, ಎಲ್ಲರೂ ಬದಲಾಗಬೇಕು. ಪ್ರಾಮಾಣಿಕತೆ, ತೃಪ್ತಿ ಇದ್ದರೆ ಈ ದೇಶ ಅಭಿವೃದ್ಧಿ ಸಾಧ್ಯ. ಇಂದಿನ ಶಿಕ್ಷಣ ನೈತಿಕ ಮೌಲ್ಯ ಕಳೆದುಕೊಳ್ಳುತ್ತಿದೆ. ಮೊಬೈಲ್ ಮಕ್ಕಳಿಗಗೆ ಕೊಡಬಾರದು. ವಿಧ್ಯೆ ಇದ್ದವರಿಗೆ ಸಮಾಜ ಕಟ್ಟುವವರಾ?
ಸದನದಲ್ಲಿ ಭಾಗಿಯಾಗ್ದೇ ಹಣ ತೆಗೆದುಕೊಳ್ಳುತ್ತಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಲ್ಲಾ ವಿಭಾಗದಲ್ಲೂ ಮೌಲ್ಯಗಳು ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಏನಾದರೂ ಆಗು ಮೊದಲು ಮಾನವನಾಗು
ಮಾನವೀಯತೆ ದೊಡ್ಡ ಶಕ್ತಿ. ಹಿರಿಯರು ಕಟ್ಟಿದ ಮೌಲ್ಯ. ಏನೇ ಆಗು ಆದರೆ ಮಾನವನಾಗು. ಮಾನವನಾಗಿ ಹುಟ್ಟಿ ಸಾಯುವಾಗ ಮಾನವನಾಗಿ ಮೃತಪಟ್ಟರೆ ಅದರಷ್ಟು ದೊಡ್ಡ ಸಾಧನೆ ಇಲ್ಲ. ಶವ ಪರೀಕ್ಷೆ ಮಾಡಲು ಹಣ ಪಡೆಯುವ ಸ್ಥಿತಿ ಇದೆ. ಬಡವನ ಕಣ್ಣೀರು ಕಷ್ಟಕ್ಕೆ ಬೆಲೆ ಇಲ್ಲ ಎಂದರು.
ಯುವ ಜನರೇ, ಬೀ ಕೂಲ್…!
ಜೀವನದಲ್ಲಿ ಜಿಗುಪ್ಸೆ ಮಾಮೂಲಿ. ಡಿಪ್ರೆಷನ್ ಹೋಗಬೇಡಿ. ನಮಗಿಂತ ಕಷ್ಟದಲ್ಲಿರುವವರು ಕೋಟಿ ಕೋಟಿ ಜನರಿದ್ದಾರೆ. ಅವರನ್ನು ನೋಡಿ ಸಮಾಧಾನಪಟ್ಟು ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ಲಂಚ ಕೊಡುವುದು ಅಪರಾಧ. ಲಂಚ ಪಡೆಯುವುದು ಎರಡೂ ಅಪರಾಧ. ಲಂಚ, ಆಸೆಗೆ ಮಿತಿ ಇಲ್ಲ. ನಮಗೆ ಜೀವನ ತೃಪ್ತಿ ಇರಬೇಕು ಎಂದರು.
ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ಥ್ ಎಸ್. ಎಲ್ ಅವರು “ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಸಾಮಾಜಿಕ ಮೌಲ್ಯಗಳನ್ನು ಬೆಳೆಸುವಂತದ್ದು” ಎಂದು ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಹಾಸನ ಹೆಚ್. ಕೆ. ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಹೆಚ್.ಎಸ್. ಪ್ರಶಾಂತ್ ಗೌಡ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ವಿಮಲ್ ರಾಜ್ ಜಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಪ್ರವೀಣ್ ಎ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಕೃತ ಉಪನ್ಯಾಸಕರಾದ ರವಿಶಂಕರ್ ಹೆಗಡೆ ಅವರು ನಿರೂಪಿಸಿ, ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕರಾದ ಶಿಲ್ಪ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳನ್ನು ಕನ್ನಡ ಉಪನ್ಯಾಸಕರಾದ ರಮೇಶ್ ಎಂ ಅವರು ಪರಿಚಯಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.