ಕರಾವಳಿ ಟಾಪ್ ನ್ಯೂಸ್
ಬೈಂದೂರು: ನೀರಿಗೆ ಇಬ್ಬರು ಬಲಿ!
– ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು
– ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ
– ಕಾರ್ಕಳ: ಏಟಿಎಂ ಕಾರ್ಡ್ ಬದಲಾಯಿಸಿ ಹಣ ವಂಚನೆ
– ಮಂಗಳೂರು: ಸರ್ಜರಿ ಮಾಡಿಸಿಕೊಂಡ ಯುವಕ ಸಾವು
NAMMUR EXPRESS NEWS
ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಸೆ.24ರಂದು ಉಡುಪಿಯ ಎಂಟಿಆರ್ ಹೊಟೇಲ್ ಎದುರು ನಡೆದಿದೆ.
ಬ್ರಹ್ಮಗಿರಿಯ ಹಿರಿಯ ನಾಗರಿಕರೊಬ್ಬರು ತಮ್ಮ ಹಳೆಯ ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಕೂಡಲೇ ಅವರು ಕಾರನ್ನು ನಿಲ್ಲಿಸಿ ಹೊರಗೆ ಬಂದಿದ್ದಾರೆ.
ಈ ವೇಳೆ ಕಾರಿನ ಎದುರು ಭಾಗಕ್ಕೆ ಸಂಪೂರ್ಣ ಬೆಂಕಿ ಆವರಿಸಿ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು
ಉಡುಪಿ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿನ ಯಡ್ತರೆಯ ಸೇನೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ಬೈಂದೂರು ಯೋಜನಾ ನಗರದ ನಿವಾಸಿ ಕೃಷ್ಣ ಅವರ ಪುತ್ರ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ಶಾನು ಶಾಲಿಯಾನ್ ಅವರ ಪುತ್ರ ಮೊಹಮದ್ ಶಫಾನ್ (13) ಎಂದು ಗುರುತಿಸಲಾಗಿದೆ. ಸರಿಯಾಗಿ ಈಜು ಬಾರದ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಿದ ಬಳಿಕ ಕೆರೆ ಸಮೀಪ ಸೈಕಲ್ ಹಾಗೂ ಚಪ್ಪಲಿ ಇದ್ದುದರಿಂದ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಏಟಿಎಂ ಕಾರ್ಡ್ ಬದಲಾಯಿಸಿ ಹಣ ವಂಚನೆ
ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಎಟಿಎಂ ಬದಲಾಯಿಸಿ ಸಾವಿರಾರು ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಕುಕ್ಕುಂದೂರು ಗ್ರಾಮದ ರಫೀಕ್ ಆಹ್ಮದ್ ಎಂಬವರ ಪತ್ನಿ ಸಮೀನಾ ಬೇಗಂ ಸೆ.16ರಂದು ಎಟಿಎಂನಿಂದ ಹಣ ಪಡೆಯಲು ಕುಕ್ಕುಂದೂರು ಜೋಡುರಸ್ತೆ ಎಂಬಲ್ಲಿಯ ಎಂಟಿಎಂ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿ ಹಣ ತೆಗೆಯಲು ಹೋದಾಗ ಎರಡು ಜನ ಅಪರಿಚಿತ ವ್ಯಕ್ತಿಗಳಿದ್ದು, ಅವರು ಸಮೀನಾ ಅವರ ಗಮನವನ್ನು ಬೇರೆ ಕಡೆ ಸೆಳೆದು ಅವರ ಗಮನಕ್ಕೆ ಬಾರದಂತೆ ಎಟಿಎಂ ಕಾರ್ಡ್ ಬದಲಾವಣೆ ಮಾಡಿದರೆನ್ನಲಾಗಿದೆ.
ನಂತರ ಕಳ್ಳರು, ಸಮೀನಾ ಅವರ ಸೇರಿದ ಎಟಿಎಂ ಕಾರ್ಡನ್ನು ಬಳಸಿಕೊಂಡು ಕಾರ್ಕಳ ಬಂಡಿಮಠ ಎಂಬಲ್ಲಿರುವ ಎಂಟಿಎಂನಿಂದ 70,000 ರೂ. ಡ್ರಾ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಕಾಸ್ಕೆಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ ಸಾವು!
ಮಂಗಳೂರು: ಮಂಗಳೂರಿನ ಕಂಕನಾಡಿಯ ಬೆಂದೂರ್ವೆಲ್ನಲ್ಲಿ ಕಾಸ್ಕೆಟಿಕ್ ಸರ್ಜರಿ ಮಾಡಿಸಿಕೊಂಡ ಯುವಕನೊಬ್ಬ ವೈದ್ಯರ ಎಡವಟ್ಟಿನಿಂದ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮೃತ ಯುವಕನನ್ನು ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮೊಹ್ಮದ್ ಮಾಝಿನ್ (32) ಎಂದು ಗುರುತಿಸಲಾಗಿದೆ.
ಮೊಹ್ಮದ್ ಮಾಝಿನ್ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಬೆಂದೂರ್ವೆಲ್ನಲ್ಲಿರುವ ಫ್ಲೋಂಟ್ ಕಾಸ್ಕೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ಪರೆಂಟ್ ಕ್ಲಿನಿಕ್ಗೆ ಹೋಗಿದ್ದರು. ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಆದರೆ ಹೆಚ್ಚು ಸಮಯ ಕಳೆದರೂ ಶಸ್ತ್ರಚಿಕಿತ್ಸೆ ಮುಗಿಯದ ಕಾರಣ ಸಂಶಯಗೊಂಡ ಪೋಷಕರು ಈ ಬಗ್ಗೆ ವಿಚಾರಿಸಿದಾಗ ಆರೋಗ್ಯದಲ್ಲಿ ಏರುಪೇರು ಆಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಕೂಡಲೇ ಮಾಝೀನ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿದ ಎಡವಟ್ಟಿನಿಂದ ಮಾಝಿನ್ ಸಾವಿಗೀಡಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದದಾರೆ. ಈ ಕುರಿತು ಕದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.