- ಇಬ್ಬರು ವಿದ್ಯಾರ್ಥಿಗಳಿಗೆ ಗಾಯ
ಮಾತಿನ ಭರದಲ್ಲಿ ಡಿಕೆಶಿ ಯಡವಟ್ಟು! - ಸಚಿವೆ ಜೊಲ್ಲೆ ಧ್ವಜಾರೋಹಣ ವಿರೋಧಿಸಿ ಧರಣಿ
NAMMUR EXPRESS
ತುಮಕೂರು: ಕೋರ ಹೋಬಳಿ ಕರೀಕೆರೆ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನದಂದು ಧ್ವಜಕಂಬ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಮೃತಪಟ್ಟಿದ್ದು, ಮತ್ತಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಚಂದನ್ (16) ಮೃತಪಟ್ಟ ವಿದ್ಯಾರ್ಥಿ. ಚಿಕ್ಕತೊಟ್ಲುಕೆರೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ರೇಣುಕ ವಿದ್ಯಾಪೀಠದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪವನ್, ಟ್ರಾಕ್ಟರ್ ಷೋರೂಂನಲ್ಲಿ ಕೆಲಸ ಮಾಡುತ್ತಿರುವ ಶಶಾಂಕ್ ಗಾಯಗೊಂಡಿದ್ದಾರೆ. ಪವನ್ ಹಾಗೂ ಶಶಾಂಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೂವರು ಕರೀಕೆರೆ ಗ್ರಾಮದ ವಾಸಿಗಳಾಗಿದ್ದು ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರಧ್ವಜ ಅಳವಡಿಸಲು ಧ್ವಜಕಂಬವನ್ನು ಕೆಳಗಿಳಿಸುವ ಸಮಯದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ಗೆ ಸ್ಪರ್ಶಿಸಿ ಈ ಅವಘಡ ಸಂಭವಿಸಿದೆ.
ಹುತಾತ್ಮ ಸೋನಿಯಾ ಗಾಂಧಿ ಎಂದ ಡಿಕೆಶಿ!:
ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಡವಟ್ಟು ಮಾಡಿಕೊಂಡಿದ್ದಾರೆ.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಹುತಾತ್ಮರಾದ ಇಂದಿರಾ ಗಾಂಧಿ ಎಂದು ಹೇಳುವ ಬದಲು, ಹುತಾತ್ಮರಾದ ಸೋನಿಯಾ ಗಾಂಧಿ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ. ತಕ್ಷಣ ಅರಿವಾಗಿ ಕ್ಷಮಿಸಿ ಇಂದಿರಾ ಗಾಂಧಿ.. ಎಂದು ತಪ್ಪನ್ನು ತಿದ್ದಿಕೊಂಡಿದ್ದಾರೆ. ಎಲ್ಲಾ ಸವಾಲುಗಳನ್ನು ಎದುರಿಸಿ ನಿಂತು ಹಲವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶ ಕಟ್ಟಿದ್ದಾರೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಲಾಗುತ್ತಿದೆ. ಇದರ ವಿರುದ್ಧ ನಾವು ಹೋರಾಡಬೇಕಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣಕ್ಕೆ ವಿರೋಧ:
ವಿಜಯಪುರ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆಗೆ ಧ್ವಜಾರೋಹಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣಕ್ಕೆ ಆಗಮಿಸುತ್ತಿದ್ದಂತೆ ನೂರಾರು ಮಹಿಳೆಯರು ಸಚಿವೆ ಜೊಲ್ಲೆಗೆ ಮುತ್ತಿಗೆ ಹಾಕಿ ಧ್ವಜಾರೋಹಣಕ್ಕೆ ಅಡ್ಡಿಪಡಿಸಿದರು. ಸ್ಥಳದಲ್ಲೇ ಧರಣಿ ಕುಳಿತು ಭ್ರಷ್ಟರಿಗೆ ಬಸವನಾಡಿನಲ್ಲಿ ಧ್ವಜಾರೋಹಣಕ್ಕೆ ಬಿಡುವುದಿಲ್ಲ. ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ಮಾಡುವಂತಿಲ್ಲ ಎಂದು ಧಿಕ್ಕಾರ ಕೂಗಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಪ್ರತಿಭಟನಾ ನಿರತ ಮಹಿಳೆಯರನ್ನು ವಶಕ್ಕೆ ಪಡೆದರು. ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು.