- ಮನೆಯಿಂದ ಹೊರ ಬರಲು ಬಿಡುತ್ತಿಲ್ಲ ಮಳೆ
- ಸೆ.15ರವರೆಗೆ ಭಾರೀ ಮಳೆ: ಎಚ್ಚರ ಎಚ್ಚರ
- ಅಡಿಕೆ, ಕಾಫಿ, ಕಾಳು ಮೆಣಸು ನಷ್ಟದ ಭೀತಿ..!
NAMMUR EXPRESS
ಶಿವಮೊಗ್ಗ/ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬಹುತೇಕ ತಾಲೂಕಲ್ಲಿ ಭಾರಿ ಮಳೆಯಾಗಿದೆ.ಧಾರಾಕಾರ ಮಳೆಯಿಂದಾಗಿ ಮಲೆನಾಡು ಭಾಗದ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಸದ್ಯ ಸುರಿಯುತ್ತಿರುವ ಮಳೆ ರೈತರ ಮುಖದಲ್ಲಿ ಆತಂಕದ ಛಾಯೆಗೆ ಕಾರಣವಾಗಿದ್ದು, ಕಾಫಿ, ಅಡಿಕೆ, ಕಾಳು ಮೆಣಸು ಬೆಳೆಗಾರರು ಬೆಳೆ ನಷ್ಟದ ಭೀತಿಗೊಳಗಾಗಿದ್ದಾರೆ. ಹೀಗೆ ಮಳೆ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗಲಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ, ಹೊಸನಗರ, ಸಾಗರ, ಭದ್ರಾವತಿ, ಸೇರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ವರ್ಷಧಾರೆಯಾಗಿದೆ. ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಕಾಫಿ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೈಕ್ಲೋನ್ ಪರಿಣಾಮ ಉತ್ತಮ ಮಳೆಯಾಗುತ್ತಿದ್ದು, ಕಳೆದ ಬುಧವಾರದಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುತ್ತಿದೆ. ಧಾರಾಕಾರ ಮಳೆ ಮುಂದುವರಿದಲ್ಲಿ ನದಿ ಪಾತ್ರದಲ್ಲಿ ನೆರೆ, ಪ್ರವಾಹ ಸಂಭವಿಸಲಿದೆ ಎಂಬುದು ಜನರ ಭೀತಿಯಾಗಿದೆ.
ಅಡಿಕೆ, ಭತ್ತ, ಕಾಳು ಮೆಣಸು ಹಾನಿ!
ಮಳೆಯಿಂದಾಗಿ ಭತ್ತ ಗದ್ದೆಗಳು ಸೇರಿದಂತೆ ಕಾಫಿ, ಅಡಿಕೆ, ಮೆಣಸಿನ ಕಾಳು ನಷ್ಟದ ಭೀತಿ ಎದುರಾಗಿದೆ. ಗದ್ದೆಗಳ ನಾಟಿ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಕಾಫಿ, ಅಡಿಕೆ ತೋಟಗಳಲ್ಲಿ ಕಳೆ, ಚಿಗುರು ತೆಗೆಯುವ ಕೆಲಸ ಪೂರ್ಣಗೊಂಡಿದ್ದು, ಗೊಬ್ಬರ, ಔಷಧ ಸಿಂಪಡಣೆಯ ಕೆಲಸ ನಡೆಯುತ್ತಿದೆ. ಧಾರಾಕಾರ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಹಾಗೂ ಭತ್ತದ ತೆನೆ ಉದುರುತ್ತಿರುವುದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಕೃಷಿಕರು ಆತಂಕಕ್ಕೊಳಗಾಗುವಂತೆ ಮಾಡಿದೆ. ಅಡಿಕೆ ಕಾಯಿ ಉದುರುವ ಸಾಧ್ಯತೆ ಇದೆ.