- ಮೇ ಮಧ್ಯದ ಬಳಿಕ ಮುಂಗಾರು ಪ್ರವೇಶ
- ರಾಜ್ಯದಲ್ಲಿ 3 ದಿನ ಮಳೆ ಅಬ್ಬರ..?!
- ಬೆಂಗಳೂರಲ್ಲಿ ಮಳೆಗೆ ಓರ್ವ ಬಲಿ
NAMMUR EXPRESS NEWS
ಬೆಂಗಳೂರು: ಮೇ 15ರ ಬಳಿಕ ಮುಂಗಾರು ಸೆಟ್ ಆಗಲಿದೆ ಎಂಬ ಮಾಹಿತಿ ನಡುವೆ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಅಬ್ಬರಿಸಲಿದೆ ಎಂದುರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೂ 3 ದಿನ ಗುಡುಗು ಸಹಿತ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಳೆಯಾಗಲಿದೆ.
ಭಾನುವಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆ ಇದೆ. ಕೆಲವು ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಲೆನಾಡು, ಉತ್ತರ ಒಳನಾಡಿನಲ್ಲಿ ಇಂದಿನಿಂದ 3 ದಿನ ಮಳೆ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.
ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ವಿದ್ಯುತ್ ಪ್ರವಹಿಸಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಶನಿವಾರ ಭಾರೀ ಮಳೆ ಶುರುವಾದಾಗ ನಾಲ್ವರು ವ್ಯಕ್ತಿಗಳು ಬಸ್ ಶೆಲ್ಟರ್ನಲ್ಲಿ ಕುಳಿತಿದ್ದರು. ಈ ವೇಳೆ ಕರೆಂಟ್ ಶಾಕ್ ಹೊಡೆದ ಅನುಭವವಾಗಿದೆ. ಆಗ ಮೂವರು ಎದ್ದು, ಆ ಸ್ಥಳದಿಂದ ಹೊರಕ್ಕೆ ಓಡಿದ್ದಾರೆ. ಆದರೆ 35 ವರ್ಷದ ವ್ಯಕ್ತಿಯೊಬ್ಬ ಏಳುವಾಗ ಪಕ್ಕದ ಬೋರ್ಡ್ ಟಚ್ ಆಗಿದೆ. ಆಗ ವಿದ್ಯುತ್ ಶಾಕ್ ಹೊಡೆದು ಆತ ಮೃತಪಟ್ಟಿದ್ದಾನೆ.
2 ವಾರ ಮೊದಲೇ ಮುಂಗಾರು ಶುರು
ನೈರುತ್ಯ ಮುಂಗಾರು ಮಾರುತ ಈವರ್ಷ ಅವಧಿಗೆ ಮೊದಲೇ ಆಗಮಿಸಲಿದೆ, ಮೇ 15ರ ವೇಳೆಗೆ ಅಂಡಮಾನ್ ದ್ವೀಪವು ವರ್ಷದ ಮೊದಲ ಮುಂಗಾರುಮಳೆಯ ಸಿಂಚನಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಪ್ರಸ್ತುತ ಅಸಾನಿ ಚಂಡಮಾರುತದ ಪ್ರಭಾವದಿಂದ ದಕ್ಷಿಣ ಕರಾವಳಿ, ಕರ್ನಾಟಕ ಹಾಗೂ ಆಂಧ್ರದ ಒಳನಾಡಿನಲ್ಲಿ ಮಳೆಯಾಗುತ್ತಿದೆ, ನೈರುತ್ಯ ಮುಂಗಾರು ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಗೆ ಮೇ 15 ರ ವೇಳೆಗೆ ಪ್ರವೇಶಿಸಲಿದೆ. ಅಂಡಮಾನ್ ದ್ವೀಪದಲ್ಲಿ ಮುಂದಿನ ಐದು ದಿನ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ. ಸಾಮಾನ್ಯವಾಗಿ ಪ್ರತಿವರ್ಷ ವಾಡಿಕೆಯಂತೆ ಜೂನ್ 1 ರಂದು ಮುಂಗಾರು ಕೇರಳ ತೀರಕ್ಕೆ ಪ್ರವೇಶಿಸುತ್ತದೆ.
ಈ ವರ್ಷ ವಾಡಿಕೆ ಎಷ್ಟೇ ಮುಂಗಾರು ಮಳೆಯಾಗಲಿದೆ ಎಂದು ಈಗಾಗಲೇ ಇಲಾಖೆ ಭವಿಷ್ಯ ನುಡಿದಿದೆ. ಇದರೊಂದಿಗೆ ಸತತ 4ನೇ ವರ್ಷವೂ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿದೆ, ಈ ಮಧ್ಯೆ ಉತ್ತರ ಭಾರತದ ಹಲವು ಭಾಗಗಳು ಉಷ್ಣ ಮಾರುತ ಮುಂದುವರಿದಿದೆ.