ಸರಕಾರಿ ಆರೋಗ್ಯ ಸೇವೆ ಹಲವೆಡೆ ಅಸ್ತವ್ಯಸ್ತ!
– ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಅಲಭ್ಯ?
– ರೋಗಿಗಳಿಗೆ ಸಂಕಷ್ಟ: ಕೇಳೋರು ಯಾರು ಸ್ವಾಮಿ?
– ಇದು ಈ ಸರ್ಕಾರದ ಕಥೆಯಲ್ಲ, ಎಲ್ಲರೂ ಮಾಡಿದ್ದು ಇದೇ..!
NAMMUR EXPRESS NEWS
ಬೆಂಗಳೂರು: ಸರಕಾರಿ ಆಸ್ಪತ್ರೆಯಲ್ಲಿ ಬ್ರಾಂಡೆಡ್ ಹೆಸರಲ್ಲಿ ಖಾಸಗಿ ಔಷಧ ಮಾರಾಟದ ಅಂಗಡಿಗೆ ವೈದ್ಯರು ರೋಗಿಗೆ ಔಷಧ ಚೀಟಿ ಬರೆದು ಕೊಡುವಂತಿಲ್ಲ. ಈ ಕುರಿತಂತೆ ಸರಕಾರ ಸ್ಪಷ್ಟ ಆದೇಶ ಪ್ರಕಟಿಸಿದೆ. ಆದರೆ, ಸರಕಾರಿ ಆಸ್ಪತ್ರೆಗಳ ವೈದ್ಯರಿಗೆ ಇದು ಅನಿವಾರವಾಗಿದೆ. ಹಲವು ತಿಂಗಳಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಘಟಕಕ್ಕೆ ಸಾಮಾನ್ಯ ರೋಗಗಳ ನಿಯಂತ್ರಣ ಔಷಧ ಕೂಡ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಇದರಿಂದ ಸಾಮಾನ್ಯ ರೋಗ ನಿಯಂತ್ರಣಕ್ಕೂ ಖಾಸಗಿ ಔಷಧ ಮಾರಾಟ ಅಂಗಡಿಗೆ ಔಷಧ ಚೀಟಿ ಬರೆಯುತ್ತಿದ್ದಾರೆ. ಔಷಧ ಪೂರೈಸುವಂತಹ ಸಾಮಾನ್ಯ ಜವಾಬ್ದಾರಿ ನಿರ್ವಹಿಸುವಲ್ಲಿ ಸರಕಾರ ವಿಫಲವಾಗಿರುವುದು ಇದಕ್ಕೆ ಕಾರಣ. ಬಿಪಿ, ಶುಗರ್, ಸಾಮಾನ್ಯ ಜ್ವರ, ಗಾಯ, ನೋವು ನಿವಾರಕ ಔಷಧಗಳು ಗ್ರಾಮೀಣ ಆಸ್ಪತ್ರೆಗಳಲ್ಲಿ ಇಲ್ಲ ಎಂಬ ದೂರು ಕೇಳಿ ಬಂದಿದೆ. ಔಷಧ ಇಲ್ಲ ಎಂದು ಸೂಚನಾ ಫಲಕದಲ್ಲಿ ಅಧಿಕೃತ ಮಾಹಿತಿಯನ್ನು ಆಸ್ಪತ್ರೆ ಆಡಳಿತ ಪ್ರಕಟಿಸಿಲ್ಲ. ವೈದ್ಯರು, ಸಿಬ್ಬಂದಿ ಮಾತು ನಂಬಿ ಔಷಧ ಇಲ್ಲ ಎಂದು ರೋಗಿಗಳು ವಾಪಸಾಗುವಂತಹ ಸನ್ನಿವೇಶ ಉದ್ಭವಿಸಿದೆ. ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಆರೋಗ್ಯ ಸೇವೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಂಜೆ 4 ಗಂಟೆ ನಂತರ ಹಲವು ವೈದ್ಯರು, ಸಿಬ್ಬಂದಿ ಸರಕಾರಿ ಆಸ್ಪತ್ರೆಯಲ್ಲಿ ಇರುವುದೇ ಇಲ್ಲ. ಕೆಲವೊಮ್ಮೆ ಹಗಲು ಹೊತ್ತು ಇಂತಹ ಅನುಭವ ರೋಗಿಗಳಿಗೆ ಸಿಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಸೇವೆ ಸುಧಾರಣೆಗೆ ಸರಕಾರ ಹಲವು ಯೋಜನೆ, ಕಾಠ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಜನರಿಗೆ ನೇರವಾಗಿ ತಲುಪದಂತಿದೆ. ವೈದ್ಯರು, ಸಿಬ್ಬಂದಿ ಕೊರತೆ ವಿಪರೀತ ಇದ್ದು ಸರಕಾರಿ ಆರೋಗ್ಯ ಸೇವೆ ಎಂಬುದು ಗ್ರಾಮೀಣ ಜನರ ಪಾಲಿಗೆ ಕನ್ನಡಿಗಂಟಿನಂತಿದೆ. ಇನ್ನು ಕೆಲ ವೈದ್ಯರು ಖಾಸಗಿ ಸೇವೆ ಸಲ್ಲಿಸುವುದು ಕೂಡ ಬಡ ರೋಗಿಗಳಿಗೆ ತೊಂದರೆಯಲ್ಲಿ ಸಿಲುಕಿಸಿದೆ. ಆರೋಗ್ಯ ಕೇಂದ್ರದಲ್ಲಿ ಲಭ್ಯವಿರದ ಔಷಧಗಳನ್ನು ಬ್ರಾಂಡೆಡ್ ಹೆಸರಲ್ಲಿ ಖಾಸಗಿ ಔಷಧ ಅಂಗಡಿಯಲ್ಲಿ ಖರೀದಿಗೆ ಚೀಟಿ ಬರೆದು ಕೊಡುವ ವೈದ್ಯರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾಯದರ್ಶಿ 2016 ಅಕ್ಟೋಬರ್ 1ರಂದು ಆದೇಶ ಹೊರಡಿಸಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಜನೌಷಧ ಮಾರಾಟ ಅಂಗಡಿಯೇ ಇಲ್ಲ. ಇದರಿಂದಾಗಿ ರೋಗಿಗಳಿಗೆ ವೈದ್ಯರು ಬ್ರಾಂಡೆಡ್ ಹೆಸರಿನ ಔಷಧ ಖರೀದಿಗೆ ಚೀಟಿ ಬರೆಯುವುದು ಅನಿವಾರ್ಯ ಎಂಬಂತಿದೆ. ಸರ್ಕಾರಿ ಆಸ್ಪತ್ರೆಗಳ ಆಧುನಿಕ ಯಂತ್ರಗಳು ನಿರ್ವಹಣೆ ಇಲ್ಲ. ಆಂಬುಲೆನ್ಸ್ 108 ಸಿಬ್ಬಂದಿಗೆ ಸಂಬಳ ಬರುತ್ತಿಲ್ಲ. ಇದೆಲ್ಲ ಆಸ್ಪತ್ರೆ ಅವ್ಯವಸ್ಥೆಗೆ ಕಾರಣವಾಗಿದೆ. ಸರ್ಕಾರ ಸಾವಿರಾರು ಕೋಟಿ ಯೋಜನೆ ಬದಲು ತಾಲೂಕಿಗೆ ಒಂದು ಎಲ್ಲಾ ವ್ಯವಸ್ಥೆ ಇರುವ ಹೈಟೆಕ್ ಆಸ್ಪತ್ರೆ, 24 ಗಂಟೆ ಸಿಬ್ಬಂದಿ, ಚಿಕಿತ್ಸೆ ನೀಡುವುದು ಉತ್ತಮ. ಈ ಬಗ್ಗೆ ಯೋಚಿಸಬೇಕಿದೆ. ರಾಜ್ಯದ ಎಲ್ಲಾ ಶಾಸಕರು ಈ ಬಗ್ಗೆ ದನಿ ಎತ್ತಬೇಕಿದೆ.