ಚಿಕ್ಕಮಗಳೂರು ಒಕ್ಕಲಿಗ ಸಂಘದ ಬೆಳ್ಳಿ ಭವನ ಉದ್ಘಾಟನೆ
– ರಾಜ್ಯದಲ್ಲೇ ಮಾದರಿ ಆಯ್ತು ಚಿಕ್ಕಮಗಳೂರು ಒಕ್ಕಲಿಗರ ಸಂಘ
– ಆದಿಚುಂಚನಗಿರಿ ಶ್ರೀ, ಸಚಿವ ಜಾರ್ಜ್, ಸಿಟಿ ರವಿ ಸೇರಿ ಅನೇಕ ಗಣ್ಯರ ಉಪಸ್ಥಿತಿ
– ಸಂಘದ 25ನೇ ವರ್ಷದ ಸವಿ ನೆನಪಿಗೆ ವಾಣಿಜ್ಯ ಸಂಕಿರ್ಣ ನಿರ್ಮಾಣ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಒಕ್ಕಲಿಗರ ಸಂಘ ನಿರ್ಮಿಸಿರುವ ಪ್ರತಿಷ್ಠಿತ ‘ಬೆಳ್ಳಿ ಭವನ’ದ ಉದ್ಘಾಟನಾ ಸಮಾರಂಭ ಸಾವಿರಾರು ಒಕ್ಕಲಿಗರ ಹೆಮ್ಮೆಗೆ ಕಾರಣವಾಗಿದ್ದಲ್ಲದೆ ರಾಜ್ಯದಲ್ಲೇ ಈ ಮೂಲಕ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗ ಸಂಘ ಮಾದರಿಯಾಯಿತು. ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ನಲ್ಲಿ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ಬೆಳ್ಳಿ ಮಹೋತ್ಸವ ಮತ್ತು ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಬೆಳ್ಳಿ ಭವನವನ್ನು ಒಕ್ಕಲಿಗರ ಸಂಘಕ್ಕೆ 25 ವರ್ಷ ತುಂಬಿರುವ ನೆನಪಿನಾರ್ಥ ಬೆಳ್ಳಿ ಭವನ ನಿರ್ಮಿಸಲಾಗಿದೆ. ಮಳಿಗೆ ಬೆಳ್ಳಿ ಭವನವನ್ನು ಉದ್ಘಾಟಿಸಿ ಮಾತನಾಡಿದ ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಒಕ್ಕಲಿಗರ ಸಂಸ್ಕೃತಿ, ಸಂಸ್ಕಾರವನ್ನು ಯುವ ಪೀಳಿಗೆಗೂ ಕಲಿಸಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದರು.
ಸಮುದಾಯದ ಘಟಾನುಘಟಿಗಳು ತಮ್ಮ ಬದುಕಿನ ಕ್ಷಣಗಳನ್ನು ಮರೆತು, ತಮ್ಮ ಮನೆಯ ಹಣ ತಂದು ಬಿಕ್ಷೆ ಬೇಡಿ ಇಷ್ಟು ದೊಡ್ಡ ಜಾಗ ಮಾಡಿ ದೊಡ್ಡ ಸಂಘವನ್ನು ಕಟ್ಟಿದ್ದಾರೆ. ಕೆ.ಎಚ್.ರಾಮಯ್ಯ ಸೇರಿದಂತೆ ನಮ್ಮ ಹಿರಿಯರು ಸಮುದಾಯಕ್ಕೆ ಸಂಘಟನೆ ಶಕ್ತಿ ನೀಡಿದ್ದಾರೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಸಂಘದ ಸರ್ವ ಸದಸ್ಯರ ಸಹಕಾರದಿಂದ ಬೆಳ್ಳಿ ಭವನ ಕಟ್ಟಡ ಅತಿ ಕಡಿಮೆ ಅವಧಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ ಒಕ್ಕಲಿಗರ ಸಂಘದಲ್ಲಿ ಪ್ರಸ್ತುತ 10 ಸಾವಿರ ಸದಸ್ಯರನ್ನು ಹೊಂದಿದ್ದು, ಜಿವಿಎಸ್ ಶಾಲೆಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಕಲಿಸಲು ಹೆಚ್ಚು ಆದ್ಯತೆ ನೀಡಲಾಗಿದ್ದು, ಶಾಲೆಯ 2 ಹಳೇಯ ಬಸ್ಸಿನ ಜೊತೆಗೆ ಪ್ರಸ್ತುತ 2 ಹೊಸ ಬಸ್ಸುಗಳನ್ನು ಖರೀದಿಸಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಬೆಳ್ಳಿ ಬಾಗಿನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ ಚಿಕ್ಕಮಗಳೂರಿಗೆ ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲಿ ಪ್ರವಾಸೋದ್ಯಮ ಬೆಳೆಸುವಲ್ಲಿ ಸಂಘಸಂಸ್ಥೆ ಸಾರ್ವಜನಿಕ ಅಭಿಪ್ರಾಯ ಪಡೆಯುತ್ತಿದ್ದೇವೆ. ಸ್ವಾಮೀಜಿಗಳು ತಮ್ಮ ಮಾರ್ಗದರ್ಶನ, ಸಲಹೆ ನೀಡಬೇಕು ಎಂದರು.
ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶಾಸಕ ಟಿ.ಡಿ ರಾಜೇಗೌಡ, ಎಸ್.ಎಲ್.ಬೋಜೇಗೌಡ, ಮಾಜಿ ಸಚಿವರಾದ ಬಿ.ಎನ್.ಜೀವರಾಜ್, ಶಿವಮೊಗ್ಗ ಭದ್ರಾಕಾಡ ಅಧ್ಯಕ್ಷರಾದ ಡಾ. ಅಂಶುಮಂತ್, ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಕೆ ದಿನೇಶ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣ್ ಗೌಡ( ರವಿ), ಗೌರವ ಕಾರ್ಯದರ್ಶಿ ಎಂ.ಸಿ ಪ್ರಕಾಶ್, ಮಹಿಳಾ ಸಂಘದ ಅಧ್ಯಕ್ಷೆ ರೀನಾಸುಜೇಂದ್ರ, ಸುಜಿತ್, ಮೇಘನಾ ಸಂಘದ ನಿರ್ದೇಶಕರು, ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಯುಪಿಎಸ್ಸಿ ಬ್ಯಾಂಕ್ ಬಂದಿರುವ ಮೇಘನಾ ಅವರನ್ನು ಸನ್ಮಾನಿಸಲಾಯಿತು.