ಸೈಕ್ಲೋನ್ ಎಫೆಕ್ಟ್: ಮೂರು ದಿನ ಮಳೆ!
– ಫೆಂಗಲ್ ಚಂಡಮಾರುತದ ಹಿನ್ನೆಲೆ ನಿರಂತರ ಮಳೆ
– ಮೈಸೂರು,ಚಾಮರಾಜನಗರ, ಚಿಕ್ಕಬಳ್ಳಾಪುರದಲ್ಲಿ ಶಾಲೆಗಳಿಗೆ ರಜೆ ಘೋಷಣೆ
– ರಾಜಧಾನಿ ಸೇರಿ ಹಲವೆಡೆ ವಿಪರೀತ ಚಳಿ ವಾತಾವರಣ
NAMMUR EXPRESS NEWS
ಬೆಂಗಳೂರು: ನೈಋುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕಕ್ಕೂ ತಟ್ಟಿದ್ದು, ಮುಂದಿನ ಮೂರು ದಿನ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿ. 2ರಂದು ಶಾಲಾ-ಕಾಲೇಜಿಗೆ ರಜೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಇಂದು(ಡಿ.2) ಜಿಲ್ಲಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ. ಕಳೆದ 2 ದಿನಗಳಿಂದ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ಡಿ.2ರಂದು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಜಿಲ್ಲಾದ್ಯಂತ ಡಿ.2 ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ರಜಾ ದಿನದ ಕಲಿಕಾ ಪ್ರಕ್ರಿಯೆಗಳನ್ನ ಮುಂದಿನ ಸರಕಾರಿ ರಜೆ ದಿನಗಳಲ್ಲಿ ಸರಿದೂಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*:ಚಾಮರಾಜನಗರದಲ್ಲೂ ಶಾಲಾ ಕಾಲೇಜುಗಳಿಗೆ ರಜೆ
ಫೆಂಗಲ್ ಚಂಡಮಾರುತದ ಹಿನ್ನೆಲೆ ನಿರಂತರ ಮಳೆಯಿಂದಾಗಿ ಡಿ. 2 ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪರೀಕ್ಷೆ ನಡೆಯುತ್ತಿರುವ ಪದವಿ ಕಾಲೇಜುಗಳಿಗೆ ಹೊರತು ಪಡಿಸಿ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ. ಇಂದಿನ ರಜೆ ಅವಧಿಯನ್ನು ಭಾನುವಾರ ತರಗತಿ ನಡೆಸಿ ಸರಿದೂಗಿಸಲಾಗುವುದೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.
* ಯಾವ್ಯಾವ ಜಿಲ್ಲೆಗಳಿಗೆ ಹೆಚ್ಚು ಮಳೆ
ಚಂಡಮಾರುತದ ಹಿನ್ನೆಲೆಯಲ್ಲಿ ಡಿ. 2 ಮತ್ತು 3 ರಂದು 35 ರಿಂದ 85 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ. ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿಯಲ್ಲೂ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
* ಜೊತೆಗೆ ವಿಪರೀತ ಚಳಿ ವಾತಾವರಣ
”ಕಳೆದ ನಾಲ್ಕೈದು ದಿನದಿಂದ ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದೆ. ಹಗಲಿನಲ್ಲಿ ಸೂರ್ಯನ ತಾಪ ಕಡಿಮೆ ಇರಲಿದೆ. ಇದರಿಂದ ದಕ್ಷಿಣ ಒಳನಾಡಿನಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕೋಲಾರ, ಚಾಮರಾಜನಗರದಲ್ಲಿ ತಲಾ 1 ಸೆ.ಮೀ ಮಳೆ ಬಿದ್ದಿದೆ,” ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ (ಬೆಂಗಳೂರು) ಮತ್ತು ವಿಜ್ಞಾನಿ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.