ನೆನಪಿನ ಪುಟ ಸೇರಿದ ತೀರ್ಥಹಳ್ಳಿ ಅಳಿಯ ಎಸ್.ಎಂ.ಕೃಷ್ಣ!
– ಕುಡುಮಲ್ಲಿಗೆಯಲ್ಲಿ ನೀರವ ಮೌನ: ತೀರ್ಥಹಳ್ಳಿಗೆ ಅನೇಕ ರೀತಿಯಲ್ಲಿ ಸೇವೆ
– ಕಂಬನಿ ಮಿಡಿದ ತೀರ್ಥಹಳ್ಳಿ ರಾಜಕೀಯ ನಾಯಕರು
NAMMUR EXPRESS NEWS
ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಇಡೀ ರಾಜ್ಯ ಕಂಬನಿ ಮಿಡಿಯುತ್ತಿದೆ. ನಾಡು ಕಂಡ ಅಪರೂಪದ ರಾಜಕಾರಣಿ ಕೃಷ್ಣ ಅವರು ತೀರ್ಥಹಳ್ಳಿ ಅಳಿಯ. ಹಾಗಾಗಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದಲ್ಲಿ ಅವರ ಮಾವನ ಮನೆ ಸೇರಿ ಪರಿಚಯಸ್ಥರು ಕಂಬನಿ ಮಿಡಿದಿದ್ದಾರೆ. ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮದವರು. ಪ್ರಮುಖ ಅಡಿಕೆ ಬೆಳೆಗಾರ ಚಿನ್ನಪ್ಪಗೌಡ ಮತ್ತು ಕಮಲಾಕ್ಷಮ್ಮ ದಂಪತಿಯ ಪುತ್ರಿ. ಶಿವಮೊಗ್ಗ- ತೀರ್ಥಹಳ್ಳಿ ರಸ್ತೆಯಲ್ಲಿ ಕುಡುಮಲ್ಲಿಗೆ ರಸ್ತೆ ಬದಿಯಲ್ಲೇ ಪ್ರೇಮಾ ಅವರ ಮನೆ ಇದೆ. 1966ರಲ್ಲಿ ಪ್ರೇಮಾ ಅವರು ಎಸ್.ಎಂ.ಕೃಷ್ಣ ಅವರೊಂದಿಗೆ ವಿವಾಹವಾಗಿದ್ದರು. ಆ ಹೊತ್ತಿಗಾಗಲೆ ಎಸ್.ಎಂ.ಕೃಷ್ಣ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಶಾಸಕರಾಗಿದ್ದರು. ಎಸ್.ಎಂ.ಕೃಷ್ಣ ಮತ್ತು ಪ್ರೇಮಾ ಅವರ ಕುಟುಂಬಗಳನ್ನು ಒಂದುಗೂಡಿಸಿದ್ದು ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಎಂದು ಎಸ್.ಎಂ.ಕೃಷ್ಣ ಅವರೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಕಡಿದಾಳು ಮಂಜಪ್ಪ ಅವರು ಎಸ್.ಎಂ.ಕೃಷ್ಣ ಅವರಿಗೂ ಸಂಬಂಧಿ. ಇತ್ತ ಮಂಜಪ್ಪ ಅವರ ಪತ್ನಿ ಲಕ್ಷ್ಮೀದೇವಿ ಅವರ ಸಹೋದರ, ಪ್ರೇಮಾ ಅವರ ಸಹೋದರಿಯನ್ನು ವಿವಾಹವಾಗಿದ್ದರು. ಹಾಗಾಗಿ ಪ್ರೇಮಾ ಅವರಿಗೂ ಕಡಿದಾಳು ಮಂಜಪ್ಪ ಸಂಬಂಧಿಯಾಗಿದ್ದರು. ಎಸ್.ಎಂ.ಕೃಷ್ಣ ಅವರಿಗೆ ಹೆಣ್ಣು ಹುಡುಕುತ್ತಿರುವ ವಿಚಾರ ತಿಳಿದು ಮಂಜಪ್ಪ ಅವರೆ ಪ್ರೇಮಾ ಅವರ ವಿಷಯ ತಿಳಿಸಿದ್ದರು.ಹೆಣ್ಣು ನೋಡುವ ಶಾಸ್ತ್ರ ಕುಡುಮಲ್ಲಿಗೆಯಲ್ಲಿ ನೆರವೇರಿತು. ಎಸ್.ಎಂ.ಕೃಷ್ಣ ಅವರು ಕುಟುಂಬದೊಂದಿಗೆ ಬೆಂಗಳೂರಿನಿಂದ ಕುಡುಮಲ್ಲಿಗೆಗೆ ಬಂದಿದ್ದರು. ರಾಜಕೀಯದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದಾಗಲು ಎಸ್.ಎಂ.ಕೃಷ್ಣ ಅವರು ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಕೆಲವು ವರ್ಷದ ಹಿಂದೆಯು ಅವರು ತೀರ್ಥಹಳ್ಳಿಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ತೀರ್ಥಹಳ್ಳಿಯ ನಾಯಕರ ಜತೆ ಅತ್ಯಂತ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ತೀರ್ಥಹಳ್ಳಿಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ಜತೆ ಆಗಿದ್ದರು.
ತೀರ್ಥಹಳ್ಳಿ ರಾಜಕೀಯ ನಾಯಕರ ಸಂತಾಪ
ತೀರ್ಥಹಳ್ಳಿ ನಾಯಕರಾದ ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ, ಮಂಜುನಾಥ ಗೌಡ, ಆರ್ ಮದನ್ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.