ಟಾಪ್ 3 ನ್ಯೂಸ್
– ಅತಿಥಿ ಶಿಕ್ಷಕರಿಗೆ ಗುಡ್ನ್ಯೂಸ್: ಮಾಸಿಕ ಗೌರವಧನ ಹೆಚ್ಚಳ?!
– ಶೀಘ್ರದಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ನೀಡಲು ಸಿದ್ಧತೆ
– ಉಚಿತ ಅಕ್ಕಿ ಕೊಡುತ್ತೀರಿ? ಉದ್ಯೋಗ ಕೊಡಿ: ಸುಪ್ರೀಂ ಕೋರ್ಟ್
NAMMUR EXPRESS NEWS
ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವಧನ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಹೆಚ್ಚಳ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಾ.ಧನಂಜಯ ಸರ್ಜಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ ನೇಮಕ ಮಾಡುವ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆಯನ್ನು ಅನುಕ್ರಮವಾಗಿ 15000/- ಹಾಗೂ ರೂ.16000/- ಪರಿಷ್ಕರಿಸಲು ಆರ್ಥಿಕ ಇಲಾಖೆಗೆ ಪಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವಧನ ಮೊತ್ತವನ್ನು ಆರ್ಥಿಕ ಇಲಾಖೆಯು ದಿನಾಂಕ.13.6.2022 ರಲ್ಲಿ ಪರಿಷ್ಕರಿಸಲು ಸಹಮತಿ ನೀಡಿರುವುದರಿಂದ ಗೌರವ ಸಂಭಾವನೆ ಯನ್ನು ಪರಿಷ್ಕರಿಸಲು ಸಾಧ್ಯವಿಲ್ಲವೆಂದು ದಿನಾಂಕ.25.3.2024 ರಂದು ಹಿಂಬರಹ ನೀಡಿದೆ. ಆದರೆ ಮತ್ತೊಮ್ಮೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಗೌರವ ಸಂಭಾವನೆಯನ್ನು ಹೆಚ್ಚಳ ಮಾಡಲಾಗುವುದು ಎಂದರು. ಅತಿಥಿ ಶಿಕ್ಷಕರು /ಉಪನ್ಯಾಸಕರ ಬದಲಾಗಿ ಅರೆಕಾಲಿಕ ಶಿಕ್ಷಕರ ನೇಮಕ ಮಾಡುವ ಪ್ರಸ್ತಾವನೆ ಇರುವುದಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದರು.
ರಾಜ್ಯದಲ್ಲಿ 7000 ಬಾಲಕರಿಂದ ಬಗರ್ಹುಕುಂ ಅರ್ಜಿ ಸಲ್ಲಿಕೆ!
ವಿಧಾನಸಭೆ: ಬಗರ್ ಹುಕುಂ ಸಾಗುವಳಿಗೆ ಸಂಬಂಧಿಸಿದಂತೆ ನಾನಾ ಕಾರಣಗಳಿಂದಾಗಿ ಎರಡು ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸೋಮವಾರ ಪ್ರಶೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಧೀರಜ್ ಮುನಿರಾಜು ಪ್ರಶ್ನೆಗೆ ಉತ್ತರಿಸಿದ ಅವರು, ಬಗರ್ಹುಕುಂ ಅಡಿ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷವಾಗಿರಬೇಕು. ಆದರೆ, 7000 ಅರ್ಜಿದಾರರಿಗೆ 18 ವರ್ಷ ಆಗಿಯೇ ಇಲ್ಲ. 3273 ಜನ ಅರ್ಜಿದಾರರು ಕೃಷಿಕರೇ ಅಲ್ಲ. ಸ್ಮಶಾನ, ರಸ್ತೆ, ಕೆರೆ, ಗುಂಡುತೋಪು ಮಂಜೂರಾತಿ ಕೋರಿ 27,452 ಜನ ಅರ್ಜಿ ಸಲ್ಲಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ 33,000 ಜನ ಅರ್ಜಿ ಸಲ್ಲಿಸಿದ್ದರೆ, 12,283 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಕುಟುಂಬದಲ್ಲಿ 5 ಎಕರೆ ಜಮೀನು ಇದ್ದರೂ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಸಾಗುವಳಿ ಚೀಟಿ ನೀಡಲು ಬಾಕಿ ಇರುವ ಪ್ರಕರಣಗಳಲ್ಲಿ ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ ರೈತರ ಸ್ವಾಧೀನ ಕುರಿತು ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು. ಗೋಮಾಳ ಜಮೀನಿನ ಮಂಜೂರಾತಿಗೆ ಸಂಬಂಧಿಸಿದಂತೆ ಹಿಂದಿನಿಂದಲೂ ಅನುಸರಿಸುತ್ತಾ ಬಂದಿರುವ ಕಾನೂನನ್ನೇ ಈಗಲೂ ಅನುಸರಿಸಲಾಗುತ್ತಿದೆ. ಅಲ್ಲದೆ, ಈ ಬಗ್ಗೆ ಸ್ವತಃ ಸುಪ್ರೀಂ ಕೋರ್ಟ್ ತೀರ್ಪನ್ನು ಮೀರಲಾಗುವುದಿಲ್ಲ. ಆದರೂ, ರಾಜ್ಯದ ಕಾನೂನಿಗೆ ಬದ್ದನಾಗಿ ಹೆಚ್ಚುವರಿ ಗೋಮಾಳ ಜಮೀನನ್ನು ಬಗರ್ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಉಚಿತ ಅಕ್ಕಿ ಕೊಡುತ್ತೀರಿ? ಉದ್ಯೋಗ ಕೊಡಿ: ಸುಪ್ರೀಂ ಕೋರ್ಟ್
ಹೊಸದೆಹಲಿ: ಈ ಉಚಿತಗಳನ್ನು ಎಷ್ಟು ಸಮಯದವರೆಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಡಿ. 9 ರಂದು ಕೇಂದ್ರ ಸರ್ಕಾರವನ್ನು ಕೇಳಿದೆ. ಕೋವಿಡ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ವಲಸೆ ಕಾರ್ಮಿಕರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ, ಇದರ ಬದಲಾಗಿ ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಮತ್ತು ಅವರ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದರು. 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 81 ಕೋಟಿ ಜನರಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಪಡಿತರ ನೀಡಲಾಗುತ್ತಿದೆ ಎಂದು ಕೇಂದ್ರ ನೀಡಿರುವ ಮಾಹಿತಿಗೆ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠ ಅಚ್ಚರಿ ವ್ಯಕ್ತಪಡಿಸಿದೆ. ಇದರ ಪ್ರಕಾರ ತೆರಿಗೆ ಪಾವತಿದಾರರು ಮಾತ್ರ ಉಳಿದಿದ್ದಾರೆ ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ ಪೀಠವು ಅಭಿಪ್ರಾಯಪಟ್ಟಿದೆ.