ದತ್ತ ಜಯಂತಿ: ಖಾಕಿ ಬಿಗಿ ಬಂದೋಬಸ್ತ್!
– ದತ್ತ ಜಯಂತಿ ಭದ್ರತೆಗೆ 4 ಸಾವಿರ ಪೊಲೀಸರ ನಿಯೋಜನೆ
– 28 ಚೆಕ್ ಪೋಸ್ಟ್: ಜಿಲ್ಲೆಯಲ್ಲಿ ಎಲ್ಲೆಡೆ ಅಲರ್ಟ್
NAMMUR EXPRESS NEWS
ಚಿಕ್ಕಮಗಳೂರು: ಡಿ.12 ರಿಂದ 14 ರವರೆಗೆ ನಡೆಯಲಿರುವ ದತ್ತ ಜಯಂತಿ ಉತ್ಸವಕ್ಕೆ ಪೋಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಉತ್ಸವದ ಅಂಗವಾಗಿ 7 ಜನ ಎಸ್ಪಿ ದರ್ಜೆ ಅಧಿಕಾರಿಗಳು, 27 ಜನ ಡಿವೈಎಸ್ಪಿ, 65 ಇನ್ಸ್ಪೆಕ್ಟರ್, 300 ಪಿಎಸ್ಐ, 500 ಹೋಮ್ ಗಾರ್ಡ್ಸ್, 20 ಕೆಎಸ್ಆರ್ಪಿ ತುಕಡಿ, 28 ಡಿಆರ್ ತುಕಡಿ ಜತೆ ಇನ್ನಿತರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ರಾಪಿಡ್ ಆ್ಯಕ್ಷನ್ ಪೋರ್ಸ್ ನಿಯೋಜಿಸಲಾಗಿದೆ. ಇದರ ಜತೆಗೆ ನಗರವೂ ಸೇರಿದಂತೆ ವಿವಿಧೆಡೆ 400 ಸಿಸಿ ಕ್ಯಾಮೆರಾ ಹಾಗೂ ಡ್ರೋನ್ ಕಣ್ಣ್ಗಾವಲು ಸಹ ಇರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಮಾಹಿತಿ ನೀಡಿದರು.
ಗಡಿ ಭಾಗ ಸೇರಿದಂತೆ ಹಲವು ಕಡೆಗಳಲ್ಲಿ 28 ಚೆಕ್ ಪೋಸ್ಟ್
ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹಾಸನ, ಉಡುಪಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮಂಗಳೂರು ಜಿಲ್ಲೆಗಳ ಗಡಿಭಾಗ ಸೇರಿದಂತೆ ಜಿಲ್ಲೆಯ ಒಳಗೂ ಸೇರಿ ಸುಮಾರು 28 ಚೆಕ್ ಪೋಸ್ಟ್ ನಿರ್ಮಾಣ ಮಾಡುವಂತೆ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಜತೆಗೆ ಭಕ್ತರಿಗೆ ಗಿರಿಭಾಗದಲ್ಲಿ ಹೇಗಿರಬೇಕು ಎಂಬ ಮಾಹಿತಿಯನ್ನು ಒಳಗೊಂಡ ಕರಪತ್ರವನ್ನೂ ಸಹ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.