ಕರಾವಳಿ ಟಾಪ್ ನ್ಯೂಸ್
– ಮುರುಡೇಶ್ವರದಲ್ಲಿ 4 ವಿದ್ಯಾರ್ಥಿನಿಯರುನೀರುಪಾಲು: 7 ಶಿಕ್ಷಕರ ಅರೆಸ್ಟ್!?
– ಉಪ್ಪಿನಂಗಡಿ: ಕೂಲಿ ಕಾರ್ಮಿಕನ ಮರ್ಡರ್: ಆರೋಪಿ ಸೆರೆ
– ಕದ್ರಿ: ಚಿನ್ನಾಭರಣ ಎಗರಿಸಿದ್ದ ಕಳ್ಳ ಅರೆಸ್ಟ್!
– ಹೆಬ್ರಿ: ಕಾಲೇಜು ಬಸ್ ಚಾಲಕ ಕುಸಿದು ಬಿದ್ದು ಸಾವು
– ಪಡುಬಿದ್ರಿ:ಚರಂಡಿ ಒತ್ತುವರಿ: ಗ್ರಾಮ ಪಂಚಾಯತಿಯಿಂದ ಕ್ಲಾಸ್!
– ಉಡುಪಿ: ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ
– ಕಾರ್ಕಳ: ಬೈಕ್ ಡಿವೈಡರ್ಗೆ ಡಿಕ್ಕಿ: ಜಾರ್ಕಳದ ಯುವಕ ಸಾವು
– ಕಾರ್ಕಳ: 39ಕ್ಕೂ ಅಧಿಕ ಕೇಸ್: ಕುಖ್ಯಾತ ಸರಗಳ್ಳರು ಅರೆಸ್ಟ್!
NAMMUR EXPRESS NEWS
ಕಾರವಾರ: ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಆಟ ಆಡಲು hogi ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರದಿಂದ ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದವರ ಪೈಕಿ ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲಾದ ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಒಂದೆಡೆ ಮುರುಡೇಶ್ವರ ಕಡಲ ತೀರದಲ್ಲಿ ನಿರ್ಬಂಧ ಹೇರಲಾಗಿದ್ದು, ಇನ್ನೊಂದೆಡೆ ಮುಖ್ಯ ಶಿಕ್ಷಕಿ ಸೇರಿ ಒಟ್ಟು 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಶಿಕ್ಷಕರ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ನಾಲ್ಕು ವಿದ್ಯಾರ್ಥಿನಿಯರ ಸಾವಿಗೆ ಕಾರಣ, ನಿರ್ಲಕ್ಷ್ಯ ಕುರಿತು ತನಿಖೆ ಕೈಗೊಂಡಿದ್ದಾರೆ. ಕೋಲಾರದ ಮುಳಬಾಗಿಲು ತಾಲೂಕಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಮುರುಡೇಶ್ವರ ಕಡಲ ತೀರದಲ್ಲಿ ಆಟ ಆಡುವಾಗ ಶಾಲೆಯ 7 ವಿದ್ಯಾರ್ಥಿನಿಯರು ನೀರು ಪಾಲಾಗಿದ್ದರು. 7 ವಿದ್ಯಾರ್ಥಿನಿಯರ ಪೈಕಿ 4 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು.
ಉಪ್ಪಿನಂಗಡಿ: ಕೂಲಿ ಕಾರ್ಮಿಕನ ಮರ್ಡರ್: ಆರೋಪಿ ಸೆರೆ
ಮಂಗಳೂರು: ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯ ಗ್ರಾ.ಪಂ. ಸ್ವಾಮ್ಯದ ನಿರ್ಮಾಣ ಹಂತದಲ್ಲಿರುವ ಗ್ರಂಥಾಲಯ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ದೀಪಕ್ ಬೆಂಗರ (34) ಅವರನ್ನು ಕೊಲೆಗೈದ ಪ್ರಕರಣದ ಆರೋಪಿ ಬಾಬು ಯಾನೆ ರುದ್ರ (68) ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಕೆಲವು ಸಮಯ ಹಿಂದೆ ಸ್ಥಳೀಯ ಬಾರ್ನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದರು. ಅಸ್ಸಾಂನ ತಿಮ್ಮತಿ ಬೆಂಗರ ಅವರ ಮಗ ದೀಪಕ್ ಬೆಂಗರ ಕೊಲೆಗೀಡಾದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದರು. ದೀಪಕ್ ನಿರ್ಗತಿಕನಂತೆ ಬೀದಿ ಬದಿ, ಜನವಸತಿ ಇಲ್ಲದ ಕಟ್ಟಡದಲ್ಲಿ ಮಲಗುತ್ತಿದ್ದರಿಂದ ಆತನ ಒಡನಾಡಿಗಳ ಬಗ್ಗೆ ತಿಳಿಯದೆ ಹಂತಕನನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಕಗ್ಗಂಟಾಗಿತ್ತು. ಪೊಲೀಸರು ಬಸ್ ನಿಲ್ದಾಣ ಪರಿಸರದಲ್ಲಿನ ಸಿಸಿ ಕೆಮರಾಗಳ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಶಂಕಿತ ಆರೋಪಿಯ ಚಲನವಲನಗಳು ಪತ್ತೆಯಾಗಿದ್ದವು. ಈ ಕಾರಣದಿಂದ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಕುಂಬ್ರಂಗೆ ಮನೆ ನಿವಾಸಿ ಬಾಬು ಯಾನೆ ರುದ್ರನನ್ನು ಉಳ್ಳಾಲ ತಾಲೂಕಿನ ದೇರಳಕಟ್ಟೆಯಲ್ಲಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್., ಎಸ್ಐ ಅವಿನಾಶ್ ಎಚ್., ಸಿಬಂದಿಗಳಾದ ಶಿವರಾಮ್, ಹಿತೋಷ್, ಗಿರೀಶ್, ರಾಮಣ್ಣ ಗೌಡ, ಹೇಮರಾಜ್, ಮಹದೇವ, ನಾಗರಾಜ್, ಪ್ರವೀಣ್ ರೈ, ಹರೀ ಶ್ಚಂದ್ರ, ತಾಂತ್ರಿಕ ವಿಭಾಗದ ದಿವಾಕರ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
* ಚಿನ್ನಾಭರಣ ಎಗರಿಸಿದ್ದ ಕಳ್ಳ, ಆರೋಪಿ ಹೆಡೆಮುರಿ ಕಟ್ಟಿದ ಕದ್ರಿ ಪೊಲೀಸರು!
ಮಂಗಳೂರು: ಕಂಕನಾಡಿ ಮಾರುಕಟ್ಟೆ ಬಳಿಯಲ್ಲಿ ನಿಲ್ಲಿಸಿದ್ದ ಕ್ರೆಟಾ ಕಾರಿನಿಂದ ಗ್ಲಾಸ್ ಒಡೆದು ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗನ್ನು ಕಳವು ಮಾಡಿದ್ದ ಪ್ರಕರಣವನ್ನು ಕದ್ರಿ ಪೊಲೀಸರು 24 ಗಂಟೆಯಲ್ಲಿ ಭೇದಿಸಿದ್ದಾರೆ. ಡಿ.8ರ ರಾತ್ರಿ 10.30ರ ವೇಳೆಗೆ ಘಟನೆ ನಡೆದಿತ್ತು. ನಗರದ ಕಂಕನಾಡಿ ಮಾರುಕಟ್ಟೆ ಹತ್ತಿರ ಪಾರ್ಕ್ ಮಾಡಿ ಹೋಗಿದ್ದ ಕ್ರೆಟಾ ಕಾರಿನಲ್ಲಿದ್ದ ವ್ಯಾನಿಟಿ ಬ್ಯಾಗನ್ನು ಕಳ್ಳರು ಗ್ಲಾಸ್ ಒಡೆದು ಕಳವು ಮಾಡಿದ್ದರು. ಬ್ಯಾಗ್ ನಲ್ಲಿ 6.80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಲ್ಯಾಪ್ ಟಾಪ್ ಇತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಎಸ್ಐ ಉಮೇಶ್ ನೇತೃತ್ವದ ಪೊಲೀಸರು ಪರಿಸರದ ಸಿಸಿಟಿವಿಗಳನ್ನು ಆಧರಿಸಿ ತನಿಖೆ ನಡೆಸಿದ್ದರು. ಆರೋಪಿಯನ್ನು ಗುರುತಿಸಿ, ಆತನ ಹಿಂದೆ ಬಿದ್ದಿದ್ದರು.ಡಿ.9 10.30ರ ವೇಳೆಗೆ ಕಂಕನಾಡಿ ಪರಿಸರದ ಮೆಡಿಕಲ್ ಒಂದಕ್ಕೆ ಇನ್ನೊಬ್ಬ ಯುವಕನ ಜೊತೆಗೆ ಬಂದಿದ್ದ. ಅದೇ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಅಡ್ಯಾರ್ ಪದವು ನಿವಾಸಿ ಅಬ್ದುಲ್ ಅಕ್ರಮ್ (33) ಎಂದು ಗುರುತಿಸಲಾಗಿದೆ.
* ಹೆಬ್ರಿ: ಕಾಲೇಜು ಬಸ್ ಚಾಲಕ ಕುಸಿದು ಬಿದ್ದು ಮೃತ್ಯು
ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಕಾಲೇಜು ಬಸ್ ಚಾಲಕ ಕುಸಿದು ಬಿದ್ದು ಮೃತಪಟ್ಟ ಘಟನೆ ಹೆಬ್ರಿಯಲ್ಲಿ ಸಂಭವಿಸಿದೆ. ಬಡಗಮಿಜಾರು ಗ್ರಾಮದ ಕಾಲೇಜಿನಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದ ಶೀನ(63) ಎಂಬವರು ಪ್ರತಿದಿನ ಬಸ್ಸನ್ನು ಹೆಬ್ರಿಯಲ್ಲಿ ನಿಲ್ಲಿಸಿ ಅಲ್ಲೇ ಉಳಿದುಕೊಳ್ಳುತ್ತಿದ್ದರು. ಸೆ.07 ರಂದು ಎಂದಿನಂತೆ ಬಸ್ಸನ್ನು ಹೆಬ್ರಿ ತಾಣ ದೇವಸ್ಥಾನದ ಬಳಿ ನಿಲ್ಲಿಸಿ ಬೆಳಗ್ಗೆ ಅವರ ಮನೆಗೆ ಬಂದಿದ್ದು ಮರುದಿನ ಸೆ.8 ಸಂಜೆ ಹೆಬ್ರಿಗೆ ಬಂದಿದ್ದು ತಾಣ ದೇವಸ್ಥಾನದ ಬಳಿ ರಸ್ತೆಯಲ್ಲಿ ಶೀನ ರವರು ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
* ಉಡುಪಿ: ಚರಂಡಿ ಒತ್ತುವರಿ: , ಗ್ರಾಮ ಪಂಚಾಯತಿಯಿಂದ ಕ್ಲಾಸ್!
ಉಡುಪಿ: ಗ್ರಾ.ಪಂ. ಎಚ್ಚರಿಕೆಯ ಹೊರತಾಗಿಯೂ ಡ್ರೈನೇಜ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರಿಗೆ ಪಡುಬಿದ್ರಿ ಗ್ರಾ.ಪಂ.ಬಿಸಿ ಮುಟ್ಟಿಸಿದೆ. ವ್ಯಾಪಾರಸ್ಥರನ್ನು ತೆರವುಗೊಳಿಸಿ ಮುಂದೆ ತಪ್ಪು ಪುನರಾವರ್ತನೆ ಆದಲ್ಲಿ ದಂಡ ನೀಡಬೇಕಾದೀತು ಎಂದು ಗ್ರಾ.ಪಂ. ಪಿಡಿಒ ಮಂಜುನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಹಲವರು ಮಳೆನೀರು ಹರಿದು ಹೋಗುವ ಡ್ರೈನೇಜ್ ಮೇಲ್ಭಾಗದಲ್ಲಿ ಸಾಮಾಗ್ರಿಗಳನ್ನಿಟ್ಟು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಈ ಬಗ್ಗೆ ತಿಂಗಳ ಹಿಂದೆಯೇ ವ್ಯಾಪಾರಿಗಳಿಗೆ ಗ್ರಾ.ಪಂ. ಎಚ್ಚರಿಕೆ ನೀಡಿತ್ತು.ಎಚ್ಚರಿಕೆಗೆ ಕ್ಯಾರೇ ಎನ್ನದ ಕೆಲ ವ್ಯಾಪಾರಿಗಳು ಡ್ರೈನೇಜ್ ದಾಟಿ ರಸ್ತೆಗಂಟಿಕೊಂಡೇ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಗ್ರಾ.ಪಂ ಅಧ್ಯಕ್ಷರು ದಿಢೀರ್ ಸಿಬ್ಬಂದಿಗಳೊಂದಿಗೆ ತೆರಳಿ ವ್ಯಾಪಾರ ಸಾಮಾಗ್ರಿಗಳನ್ನು ತೆರವುಗೊಳಿಸಿದರು. ಇದೇ ಚಾಳಿ ಮುಂದುವರೆಸಿದರೆ ಅಂತಹ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪಿಡಿಓ ಮಂಜುನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
* ಉಡುಪಿ: ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ
ಉಡುಪಿ : ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯಲ್ಲಿರುವ ಪೋಸ್ಟಲ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ ಲಕ್ಷ್ಮವ್ವ ಕುಮಾರ ಮಾಳವತ್ತರ (30) ಎಂಬ ಮಹಿಳೆಯು ತನ್ನ ಮೂವರು ಮಕ್ಕಳಾದ ಅಪೂರ್ವ (7), ಶ್ರೇಯಾ (5) ಹಾಗೂ ಮನೋಜ್ (2) ನೊಂದಿಗೆ ಡಿ.4 ರಂದು ಮನೆಯಿಂದ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಲಕ್ಷ್ಮವ್ವ ಕುಮಾರ ಮಾಳವತ್ತರ ಅವರು 5 ಅಡಿ 1 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ಲಮಾಣಿ ಭಾಷೆ ಮಾತನಾಡುತ್ತಾರೆ. ಅಪೂರ್ವ 3 ಅಡಿ 1 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ, ಶ್ರೇಯಾ 3 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಲಮಾಣಿ ಭಾಷೆ ಮತ್ತು ಮನೋಜ್ 2 ಅಡಿ 8 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
* ಕಾರ್ಕಳ: ಸರಗಳ್ಳತನ ಕೃತ್ಯ: ಕುಖ್ಯಾತ ಕಳ್ಳರು ಅರೆಸ್ಟ್!
ಮಂಗಳೂರು: ಕಾರ್ಕಳದಲ್ಲಿ ಕಳೆದ ಡಿ.9ರಂದು ನಡೆದ ಸರಗಳ್ಳತನ ಕೃತ್ಯದ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡ ಪರಾರಿಯಾದ ಪ್ರಕರಣಗಳ ಆರೋಪಿಗಳು ಇವರು ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ. ಕೃತ್ಯ ನಡೆದ 24 ಗಂಟೆ ಒಳಗಡೆ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು,ಬೈಕನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಮಂಗಳೂರು ಸುರತ್ಕಲ್ ಕೃಷ್ಣಾಪುರ ನಿವಾಸಿ ಹಬೀಬ್ ಹಸನ್ ಯಾನೆ ಚೊಂಬುಗುಡ್ಡೆ ಹಬೀಬ್ ಯಾನೆ ಅಬ್ಬಿ(43) ಮತ್ತು ಬಂಟ್ವಾಳ ತಾಲೂಕಿನ ಅದ್ದೆಡ್ಡಿ ಹೌಸ್ ಬಿ.ಮೂಡ ಪರ್ಲಿಯಾ ಕ್ರಾಸ್ ರೋಡ್ ನಿವಾಸಿ ಉಮ್ಮರ್ ಶಿಯಾಫ್(29) ಬಂಧಿತ ಆರೋಪಿಗಳು. ಕಾರ್ಕಳದ ಸರಕಳ್ಳತನ ಕೃತ್ಯದಲ್ಲಿ ಓರ್ವ ಮಹಿಳೆಯೂ ಭಾಗಿಯಾಗಿದ್ದು, ಈಕೆಯನ್ನು ಪೊಲೀಸರು ಹುಡುಕುತ್ತಿದ್ದಾರೆ.ಬೈಕ್ ಸವಾರನು ವಸಂತಿಯವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಆರೋಪಿ ಹಬೀಬ್ ಹಸನ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ನಗರದ ಬರ್ಕೆ, ಮೂಡಬಿದ್ರಿ, ಸುರತ್ಕಲ್, ಉಳ್ಳಾಲ, ಕೊಣಾಜೆ, ಬಜೈ ವಿಟ್ಲ, ಬಂಟ್ವಾಳ ನಗರ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 39 ಕಳವು, ಜಾನುವಾರು ಕಳವು, ಸರಕಳ್ಳತನ ಪ್ರಕರಣಗಳು ದಾಖಲಾಗಿವೆ. ಆರೋಪಿ ಉಮ್ಮರ್ ಶಿಯಾಫ್ ಎಂಬಾತನು ಈ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಹಾಗೂ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ 2 ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
ಎಲ್ಲಾ ಕರಾವಳಿಯ ಪ್ರಮುಖ ಸುದ್ದಿಗಳಿಗಾಗಿ ನಮ್ಮೂರ್ ಎಕ್ಸ್ ಪ್ರೆಸ್ ವೀಕ್ಷಿಸಿ