ರಾಜ್ಯಕ್ಕೆ ಮತ್ತೆ ಚಂಡಮಾರುತದ ಅಬ್ಬರ
– 2 ದಿನ ಭಾರಿ ಮಳೆಯಾಗುವ ನಿರೀಕ್ಷೆ
– ಈ 12 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್!
NAMMUR EXPRESS NEWS
ಬೆಂಗಳೂರು: ಬಂಗಾಳಕೊಲ್ಲಿ, ಹಿಂದೂ ಮಹಾಸಾಗರದಲ್ಲಿ ಫೆಂಗಲ್ ಬಳಿಕ ಮತ್ತೊಂದು ಚಂಡಮಾರುತ ಉಂಟಾಗಿದೆ. ಇದರ ಪರಿಣಾಮ ಕರ್ನಾಟಕದಲ್ಲಿ ಡಿಸೆಂಬರ್ 12 ಹಾಗೂ 13 ರಂದು ಅಲ್ಲಿಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. 12 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ನೀಡಿದೆ. ಕಳೆದ ವಾರ ಫೆಂಗಲ್ ಸೈಕ್ಲೋನ್ ಅಬ್ಬರಕ್ಕೆ ತಮಿಳುನಾಡು, ಕರ್ನಾಟಕದಲ್ಲಿ ಅಪಾರ ಮಳೆಯಾಗಿತ್ತು. ಅದರಿಂದ ಸುಧಾರಿಸಿಕೊಳ್ಳುವ ಬೆನ್ನೆಲ್ಲೆ ಮತ್ತೆ ಸೈಕ್ಲೋನ್ ಅಪ್ಪಳಿಸಲಿದೆ. ಪ್ರಮುಖವಾಗಿ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನ ಮಳೆಯಾಗಲಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದ್ದು, ” ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪೂರ್ವ ಹಿಂದೂ ಮಹಾಸಾಗರ ವಲಯಗಳಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಕರಾವಳಿ & ಮಳೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಹಾಗೂ ಡಿಸೆಂಬರ್ 12 ಮತ್ತು 13 ರಂದು ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ” ಎಂದು ತಿಳಿಸಿದೆ.
ಎಲ್ಲೆಲ್ಲಿ ಯಾವಾಗ ಮಳೆ?
* ಡಿಸೆಂಬರ್ 12 (ಗುರುವಾರ) ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ
* ಡಿಸೆಂಬರ್ 13 (ಶುಕ್ರವಾರ) ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.
* ಡಿಸೆಂಬರ್ 14 (ಶನಿವಾರ) ರಂದು ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.
ಡಿಸೆಂಬರ್ 17 ವರೆಗೂ ಮಳೆ :-
ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪೂರ್ವ ಹಿಂದೂ ಮಹಾಸಾಗರ ವಲಯಗಳಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಚಂಡಮಾರುತದ ಪರಿಚಲನೆಗಳು ಕಂಡುಬಂದಿದೆ. ಹೀಗಾಗಿ, ಕರ್ನಾಟಕದ ಹಲವೆಡೆ ಡಿಸೆಂಬರ್ 17 ವರೆಗೂ ಮಳೆ ಇರಲಿದೆ. ಚಂಡಮಾರುತವು ತೀವ್ರಗೊಂಡು ಪಶ್ಚಿಮ-ವಾಯವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.