ಹಾಸನ ಟಾಪ್ ನ್ಯೂಸ್
– ಸಾಲ ಬಾಧೆ: ದಂಪತಿ ಆತ್ಮಹತ್ಯೆ!
– ಪತ್ನಿ ಇನ್ನಿಲ್ಲ ಎಂಬ ಸುದ್ದಿ ತಿಳಿದು ತಾನೂ ಬಾವಿಗೆ ಹಾರಿದ ಪತಿ
– 15 ಸಾವಿರ ಮಾಸಿಕ ಗೌರವಧನ ನೀಡಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ
NAMMUR EXPRESS NEWS
ಆಲೂರು: ಸಾಲಬಾಧೆ ತಾಳಲಾರದೇ ರೈತ ದಂಪತಿ ತಮ್ಮದೇ ಜಮೀನಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ತಾಲೂಕಿನ ಪಾಳ್ಯ ಬಳಿಯ ಕಟ್ಟೆಗದ್ದೆ ಗ್ರಾಮದಲ್ಲಿ ನಡೆದಿದೆ. ನಟೇಶ್ (55) ಚಿನ್ನಮ್ಮ (45) ಆತ್ಮಹತ್ಯೆ ಮಾಡಿಕೊಂಡ ರೈತ ದಂಪತಿ. ಈ ದಂಪತಿ ಬ್ಯಾಂಕ್ ಮತ್ತು ಕೈಸಾಲವಾಗಿ ಲಕ್ಷ ಲಕ್ಷ ರೂ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ತಾವು ಬೆಳೆದಿದ್ದ ಬೆಳೆ ಕೈಕೊಟ್ಟಿತ್ತು. ಹೀಗಾಗಿ ನಿರೀಕ್ಷಿತ ಪ್ರಮಾಣದ ಆದಾಯದ ಆಸೆ ಕನಸಿನ ಮಾತಾಗಿತ್ತು. ಹೀಗಾಗಿ ಸಾಲ ತೀರಿಸಲು ಪರದಾಡುತ್ತಿದ್ದರು. ಈ ನಡುವೆ ಸಾಲ ಕೊಟ್ಟವರು ವಾಪಸ್ ಕೊಡಿ ಎಂದು ನಿತ್ಯವೂ ಒತ್ತಾಯ ಮಾಡುತ್ತಿದ್ದರು. ಒಂದೆಡೆ ಸಾಲಗಾರರ ಕಾಟ, ಮತ್ತೊಂದೆಡೆ ಬ್ಯಾಂಕ್ ಸಾಲ ತೀರಿಸುವುದು ಹೇಗೆ ಎಂದು ದಂಪತಿ ಚಿಂತೆಗೆ ಬಿದ್ದಿದ್ದರು. ಇದರಿಂದ ಚಿಂತಾ ಕ್ರಾಂತರಾದ ಚಿನ್ನಮ್ಮ, ನಿನ್ನೆ ತಡರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗ್ಗೆ ಎದ್ದಾಗ ಪತ್ನಿ ಮನೆಯಲ್ಲಿ ಇಲ್ಲದೇ ಇದ್ದುದನ್ನು ಕಂಡ ನಟೇಶ್ ಆತಂಕಗೊಂಡು, ಹುಡುಕಾಟ ನಡೆಸಿದ್ದರು. ಕಡೆಗೆ ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ತಿಳಿದ ಕೂಡಲೇ ಪತಿಯೂ ಸಾವಿನ ಹಾದಿ ತುಳಿದಿದ್ದಾರೆ. ಅದೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಎರಡೂ ಮೃತದೇಹಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ. ಸಾಲದ ಶೂಲಕ್ಕೆ ಅಂಜಿ ದಂಪತಿ ಸಾವಿಗೆ ಶರಣಾಗಿರುವ ಘಟನೆ ಬಹುತೇಕರಲ್ಲಿ ಕಣ್ಣೀರು ತರಿಸಿದೆ.
15 ಸಾವಿರ ಮಾಸಿಕ ಗೌರವಧನ ನೀಡಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಹಾಸನ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಮತ್ತು ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವಧನ ಹಾಗೂ ಚುನಾವಣೆ ಪ್ರಣಾಳಿಕೆಯ ಭರವಸೆ ಮೊತ್ತ ಒಟ್ಟುಗೂಡಿಸಿ ೧೫,೦೦೦ ಮಾಸಿಕ ಗೌರವಧನ ನೀಡಬೇಕು. ಬಹುದಿನಗಳ ಈ ಬೇಡಿಕೆಯೂ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆ ಈಡೇರಿಕೆ ಸಂಬಂಧ ಹಾಲಿ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಘೋಷಣೆ ಹೊರಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಫೆಬ್ರವರಿಯಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಅನಿರ್ದಿಷ್ಟ ಹೋರಾಟ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆಗ ಕೆಲವೇ ದಿನಗಳಲ್ಲಿ ತಮ್ಮ ಬೇಡಿಕೆ ಈಡೇರಿಸುವುದಾಗಿ ಡಿಸಿಎಂ ಅವರು ಭರವಸೆ ನೀಡಿದ್ದರು. ಯಾವುದೇ ಈಡೇರಿಲ್ಲ ಎಂದು ಅಳಲು ತೋಡಿಕೊಂಡರು.
ಕಳೆದ ೯ ತಿಂಗಳಿಂದ ಸರ್ಕಾರ ಮತ್ತು ಇಲಾಖೆ ಜೊತೆಯಲ್ಲಿ ಒಟ್ಟು ೧೫ ರಾಜ್ಯ ಮಟ್ಟದ ಸಭೆ ನಡೆದರೂ, ನಮ್ಮ ಪ್ರಮುಖ ಬೇಡಿಕೆ ಈಡೇರಿಲ್ಲ. ಇದೇ ಕಾರಣಕ್ಕೆ ಮತ್ತೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು. ಒಟ್ಟಾರೆ ೧೫ ಸಾವಿರ ಮಾಸಿಕ ಗೌರವಧನ, ನಗರ ಮಟ್ಟದ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ೨ ಸಾವಿರ ಹೆಚ್ಚಿಸಬೇಕು, ಮೊಬೈಲ್ ಕೆಲಸ ಒತ್ತಾಯಪೂರ್ವಕವಾಗಿ ಮಾಡಿಸುವುದನ್ನು ನಿಲ್ಲಿಸಿ, ಪರ್ಯಾಯ ವ್ಯವಸ್ಥೆ ಮಾಡಿ. ೬೦ ವಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳದಂತೆ ೩ ಲಕ್ಷ ಪಿಂಚಿನಿ ಕೊಡಬೇಕು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೂ, ಪ್ರೋತ್ಸಾಹಧನ ಕೊಡಬೇಕು, ಪ್ರತಿ ವರ್ಷ ಆರೋಗ್ಯ ತಪಾಸಣೆ, ಉಚಿತ ಚಿಕಿತ್ಸೆ ನೀಡಬೇಕು. ಗ್ರಾಚ್ಯುಟಿ, ಪಿಎಫ್-ಇಎಸ್ಐ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿ. ಹನುಮೇಶ್, ಮಮತಾ, ಪುಷ್ಪಲತಾ, ಮೇಘನಾ ಮೊದಲಾದವರಿದ್ದರು.