ಮೂಡಿಗೆರೆ: ಕೆನರಾ ಬ್ಯಾಂಕ್ ಕಟ್ಟಡಕ್ಕೆ ಬೆಂಕಿ!
– ಶ್ರೀರಾಮ್ ಫೈನಾನ್ಸ್ ಕಛೇರಿ ಬಹುತೇಕ ಭಸ್ಮ
– ಶಾರ್ಟ್ಸರ್ಕ್ಯೂಟ್, ಯುಪಿಎಸ್ ಹೀಟ್ ಆಗಿ ಬೆಂಕಿ ತಗುಲಿರುವ ಶಂಕೆ
NAMMUR EXPRESS NEWS
ಮೂಡಿಗೆರೆ: ಪಟ್ಟಣದ ಮೇಗಲಪೇಟೆ ಕೆನರಾ ಬ್ಯಾಂಕ್ ಇರುವ ಪಾರ್ವತಿ ಹೈಟ್ಸ್ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ, ಕಟ್ಟಡದಲ್ಲಿದ್ದ ಕೆನರಾ ಬ್ಯಾಂಕ್ ಮೇಲಂತಸ್ತಿನಲ್ಲಿರುವ ಶ್ರೀರಾಮ್ ಫೈನಾನ್ಸ್ ಕಛೇರಿ ಬಹುತೇಕ ಸುಟ್ಟು ಭಸ್ಮವಾಗಿದೆ. ಮಂಗಳವಾರ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು ರಾತ್ರಿ ಸಮಯದಲ್ಲಿ ಕಟ್ಟಡದಿಂದ ಶಬ್ದ ಮತ್ತು ಹೊಗೆ ಬರುತ್ತಿರುವುದನ್ನು ಕಂಡ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಕಟ್ಟಡದ ಮಾಲೀಕರು ಮತ್ತು ಅಗ್ನಿಶಾಮಕ ಕಛೇರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ವಾಹನ ಬರುವ ಹೊತ್ತಿಗಾಗಲೇ ಶ್ರೀರಾಮ್ ಫೈನಾನ್ಸ್ ಕಛೇರಿ ಬಹುತೇಕ ಸುಟ್ಟು ಕರಕಲಾಗಿದೆ. ಮೂಡಿಗೆರೆ ಅಗ್ನಿಶಾಮಕ ವಾಹನವಲ್ಲದೇ ಚಿಕ್ಕಮಗಳೂರಿನಿಂದಲೂ ಹೆಚ್ಚುವರಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಆಗಮಿಸಿ ಬೆಂಕಿನಂದಿಸುವ ಕಾರ್ಯದಲ್ಲಿ ನಿರತರಾದರು. ಅಂತಿಮವಾಗಿ ರಾತ್ರಿ ಸುಮಾರು 3 ಗಂಟೆಯ ಸಮಯಕ್ಕೆ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮುಂಜಾಗೃತ ಕ್ರಮವಾಗಿ ಮೂಡಿಗೆರೆ ಪಟ್ಟಣದಾದ್ಯಂತ ವಿದ್ಯುತ್ ನಿಲುಗಡೆ ಮಾಡಲಾಗಿತ್ತು.
ಶ್ರೀರಾಮ್ ಫೈನಾನ್ಸ್ ಕಛೇರಿ ಕಡತಗಳು ಮತ್ತು ಪರಿಕರಗಳು ಸಂಪೂರ್ಣ ಭಸ್ಮವಾಗಿದ್ದು,ಲಾಕರ್ನಲ್ಲಿದ್ದ ಹಣ ಮತ್ತು ಚಿನ್ನವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.
ಇದೇ ಕಟ್ಟಡದಲ್ಲಿ ಪಟ್ಟಣದ ಪ್ರಮುಖ ಬ್ಯಾಂಕ್ ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಕಛೇರಿಗಳು, ಮನೆಗಳು ಇದ್ದವು. ಬೆಂಕಿ ಕೆನರಾ ಬ್ಯಾಂಕ್ ಸೇರಿದಂತೆ ಇಡೀ ಕಟ್ಟಡಕ್ಕೆ ವ್ಯಾಪಿಸುವ ಅಪಾಯ ಎದುರಾಗಿತ್ತು. ಕಟ್ಟಡದಲ್ಲಿದ್ದ ವಾಸವಾಗಿದ್ದ ಮನೆಗಳ ನಿವಾಸಿಗಳು ಮುಂಜಾಗೃತ ಕ್ರಮವಾಗಿ ಪ್ರಮುಖ ವಸ್ತುಗಳೊಂದಿಗೆ ಮನೆಯಿಂದ ಹೊರಗೆ ಬಂದಿದ್ದರು. ಬೆಂಕಿ ತಗುಲಿದ್ದ ಕಛೇರಿಯ ಮೇಲ್ಬಾಗದ ಮನೆಯಲ್ಲಿ ವೈದ್ಯರೊಬ್ಬರು ಬಾಡಿಗೆಯಿದ್ದರು. ಅವರ ಕುಟುಂಬವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಕಟ್ಟಡದಲ್ಲಿ ಇರುವ ಮನೆಗಳ ನೆಲ ಮತ್ತು ಗೋಡೆಗಳು ಶಾಖದಿಂದ ಬಿಸಿಯಾಗಿದೆ.
ಬ್ಯಾಂಕ್ ಕಛೇರಿಗೆ ಬೆಂಕಿ ತಗುಲಿದ್ದರೆ ಅಪಾರ ನಷ್ಟ!
ಕೆನರಾ ಬ್ಯಾಂಕ್ ಕಛೇರಿಗೆ ಬೆಂಕಿ ತಗುಲಿದ್ದರೆ ಅಪಾರ ಪ್ರಮಾಣದ ನಷ್ಟ, ದಾಖಲೆ ನಷ್ಟ ಸಂಭವಿಸುತ್ತಿತ್ತು. ಸದರಿ ಕಟ್ಟಡವು ಪಟ್ಟಣದ ಶಿವಪ್ರಕಾಶ್ ಎಂಬುವರಿಗೆ ಸೇರಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಥವಾ ಯು.ಪಿ.ಎಸ್. ಹೀಟ್ ಆಗಿ ಬೆಂಕಿ ತಲುಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳೀಯ ನಿವಾಸಿಗಳ ಸಮಯಪ್ರಜ್ಞೆ ಮತ್ತು ಅಗ್ನಿಶಾಮಕ ಸಿಬ್ಬಂದಿಯ ಸಕಾಲಿಕ ಕಾರ್ಯದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.