ಟಾಪ್ 5 ನ್ಯೂಸ್ ಮಲ್ನಾಡ್
– ಹಣಗೆರೆಕಟ್ಟೆ ಲಾಡ್ಜಲ್ಲಿ ಯುವತಿ ಕೊಲೆ: ಸಿನಿಮಾ ಸ್ಟೈಲಲ್ಲಿ ಹಂತಕನ ಹಿಡಿದ ಪೊಲೀಸರು!
– ರಿಪ್ಪನ್‌ಪೇಟೆ: ಗರ್ತಿಕೆರೆಯ ಕೆರೆಯಲ್ಲಿ ಮಹಿಳೆಯ ಶವ ಪತ್ತೆ
– ಶಿವಮೊಗ್ಗ : ಕೆಟಿಎಂ ಬೈಕ್ – ಬಸ್ ಡಿಕ್ಕಿ: ಇಬ್ಬರು ಯುವಕರು ಸಾವು
– ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ
– ಎನ್. ಆರ್. ಪುರ: ಅಡಿಕೆ ಕಳ್ಳತನ: ಆರೋಪಿಗಳ ಬಂಧನ
NAMMUR EXPRESS NEWS
ಶಿವಮೊಗ್ಗ : ಇಲ್ಲಿನ ಹಣಗೆರೆಕಟ್ಟೆಯ ಲಾಡ್ಜ್‌ವೊಂದರಲ್ಲಿ ಎಂಟು ತಿಂಗಳ ಹಿಂದೆ ನಡೆದಿದ್ದ ಯುವತಿಯ ಕೊಲೆ ಪ್ರಕರಣದ ಆರೋಪಿಯನ್ನು ಮಾಳೂರು ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿರುವ ಪೊಲೀಸರು ಮಾಳೂರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಇದೀಗ ಮುಂದಿನ ಕಾನೂನು ಪ್ರಕ್ರಿಯೆಗಳನ್ನ ನಡೆಸುತ್ತಿದ್ದಾರೆ. 2024 ರ ಏಪ್ರಿಲ್ 4 ರಂದು ಹಣಗೆರೆ ಕಟ್ಟೆಯ ಲಾಡ್ಜ್ ವೊಂದರಲ್ಲಿ ಯುವತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಧಾರ್ಮಿಕ ಕ್ಷೇತ್ರದ ಸನ್ನಿದಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಈ ಪ್ರದೇಶದಲ್ಲಿ ಕಾನೂನು ಬಾಹಿರ ಚುಟವಟಿಕೆ ನಡೆಯುತ್ತಿದೆಯೆ ಎಂಬ ಅನುಮಾನಕ್ಕೂ ಕಾರಣವಾಗಿತ್ತು. ಅಲ್ಲದೆ ಪ್ರಕರಣದಲ್ಲಿ ಯಾವೊಂದು ಸುಳಿವು ಸಹ ಸಿಕ್ಕಿರಲಿಲ್ಲ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೆಲ್ಲಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಆನಂತರ ಕೆಲವು ದಿನಗಳ ತನಿಖೆಯ ಬಳಿಕ ಲಾಡ್ಜ್ ನಲ್ಲಿ ಕೊಲೆಯಾದ ಯುವತಿ ಶಿವಮೊಗ್ಗದ ಬಾಪೂಜಿ ನಗರದ ನಿವಾಸಿ ಉಮಾ ಎಂದು ಗೊತ್ತಾಗಿತ್ತು. ಪೊಲೀಸರಿಗೆ ಕೊಲೆಯಾದ ಯುವತಿಯ ಬಗ್ಗೆ ಮಾಹಿತಿ ಲಭ್ಯವಾಗಿದ ಬಳಿಕವೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಏಕೆಂದರೆ ಪ್ರಕರಣದ ಆರೋಪಿ ಪತ್ತೆಯಾಗಿರಲಿಲ್ಲ. ಇದೀಗ ಆರೋಪಿ ಪತ್ತೆಯಾಗಿದ್ದು, ದಿನ ಪೊಲೀಸರ ಕೈಗೆ ಸಿಗದೇ ತಲೆಮೆರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಹಿಡಿದು ತಂದಿರುವ ಬಗ್ಗೆ ಮಾಹಿತಿ ಇದೆ. ಆದಾಗ್ಯು ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಸಿಗಬೇಕಿದೆ.
– ರಿಪ್ಪನ್‌ಪೇಟೆ: ಗರ್ತಿಕೆರೆಯ ಕೆರೆಯಲ್ಲಿ ಮಹಿಳೆಯ ಶವ ಪತ್ತೆ
ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಅವುಕ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ತೋಟದಲ್ಲಿರುವ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಕಮ್ಮಚ್ಚಿ ನಿವಾಸಿ ರೇಖಾ(36) ಎಂಬುವವರ ಮೃತದೇಹ ಪತ್ತೆಯಾಗಿದೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ರೇಖಾ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ , ಸಂಬಂಧಿಕರು ಹಾಗೂ ಸ್ನೇಹಿತರೆಲ್ಲಾ ವಿಚಾರಿಸಿದ್ದರು ಆದರೆ ಮಹಿಳೆಯ ಮೃತದೇಹ ಅವುಕ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಹಲವಾರು ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದ ರೇಖಾ ತೀವ್ರ ಮದ್ಯವಸನಿಯಾಗಿದ್ದರು ಎನ್ನಲಾಗುತಿದ್ದು ಮಾನಸಿಕವಾಗಿ ಜರ್ಜರಿತರಾಗಿದ್ದರು. ಸ್ಥಳಕ್ಕೆ ಗರ್ತಿಕೆರೆ ಗ್ರಾಪಂ ಅಧ್ಯಕ್ಷ ಸಚಿನ್ ಗೌಡ ,ಸದಸ್ಯ ಲಿಂಗರಾಜ್ ಭೇಟಿ ನೀಡಿದ್ದಾರೆ. ರಿಪ್ಪನ್‌ಪೇಟೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
– ಶಿವಮೊಗ್ಗ : ಕೆಟಿಎಂ ಬೈಕ್ ಗೆ ಖಾಸಗಿ ಬಸ್ ಗೆ ಡಿಕ್ಕಿಯಿಂದ ಇಬ್ಬರು ಯುವಕರು ಸಾವು
ಶಿವಮೊಗ್ಗ: ಶಿವಮೊಗ್ಗದ ಹೆಲಿಪ್ಯಾಡ್ ಬಳಿಯಿರುವ ಈಡಿಗರ ಭವನಕ್ಕೆ ತಿರುಗುವ ತಿರುವಿನಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಸಾಗರ ರಸ್ತೆಯಲ್ಲಿ ಈಡಿಗರ ಭವನಕ್ಕೆ ತಿರುಗುತ್ತಿದ್ದ ವೇಳೆ ಎಡಭಾಗದಿಂದ ಓವರ್ ಟೇಕ್ ಮಾಡಲು ಯತ್ನಿಸಿದ ಪರಿಣಾಮ ಕೆಟಿಎಂ ಬೈಕು ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಇಬ್ಬರು ಯುವಕರನ್ನ ಮೆಗ್ಗಾನ್ ಗೆ ಸಾಗಿಸಲಾಗಿದೆ. ಇಬ್ಬರು ಯುವಕರನ್ನ ತಪಾಸಣೆ ನಡೆಸಿದ ವೈದ್ಯರು ಇಬ್ಬರ ಸಾವನ್ನ ಖಚಿತಪಡಿಸಿರುವುದಾಗಿ ತಿಳಿದುಬಂದಿದೆ. ಇಬ್ಬರು ಯುವಕರನ್ನ ಅಪರಿಚಿತ ಮೃತದೇಹಗಳೆಂದು ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಯುವಕರು ಸಾಗರ ಕಡೆ ಹೊರಟಿದ್ದರು ಎನ್ನಲಾಗಿದೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
– ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ತೆರಳುತ್ತಿದ್ದ ಪ್ರವಾಸಿಗರು ಜಾವಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಎನ್. ಆರ್. ಪುರ: ಅಡಿಕೆ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ
ಎನ್. ಆರ್. ಪುರ: ಅಡಿಕೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನಲ್ಲಿ ನಡೆದಿದೆ. ಕಡೂರು ಮೂಲದ ಮಹಮ್ಮದ್ ಸಾಧಿಕ್ (39) ಹಾಗೂ ಶಿವಮೊಗ್ಗದ ಲಕ್ಕಿನಕೊಪ್ಪ ವಾಸಿ ಸಲ್ಮಾ(39) ಬಂಧಿತ ಆರೋಪಿಗಳು. ಎನ್. ಆರ್. ಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪ 65 ರಿಂದ 70 ಅಡಿಕೆ ಮರಗಳಲ್ಲಿನ ಕೊನೆಗಳನ್ನು ಉದುರು ಮಾಡಿ ಹಸಿ ಅಡಿಕೆಯನ್ನು ಕಳ್ಳತನ ಮಾಡಿದ್ದು, ಆರೋಪಿಗಳನ್ನು ಬಂಧಿಸಿ ಸುಮಾರು 202.87 ಕೆ.ಜಿ ಒಣ ಅಡಿಕೆ ಹಾಗೂ ಒಂದು ಕಾರು ವಶಪಡಿಸಿಕೊಂಡಿದ್ದಾರೆ. ಎನ್. ಆರ್. ಪುರ ಅಲ್ಲದೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಡಿಕೆ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.